More

    ಎಸ್ಸೆಸ್ಸೆಲ್ಸಿ ಭವಿಷ್ಯ ನಿರ್ಧರಿಸುವ ಘಟ್ಟ

    ಹನೂರು: ಎಸ್ಸೆಸ್ಸೆಲ್ಸಿಯಲ್ಲಿ ಗಳಿಸುವ ಅಂಕ ಮುಂದಿನ ಶಿಕ್ಷಣಕ್ಕೆ ಸಹಕಾರಿಯಾಗಿದೆ. ಆದ್ದರಿಂದ ಪ್ರತಿಯೊಬ್ಬರೂ ಪರೀಕ್ಷಾ ಅಭ್ಯಾಸದ ಕಡೆ ಹೆಚ್ಚಿನ ಗಮನ ನೀಡಬೇಕು ಎಂದು ಶಾಸಕ ಎಂ.ಆರ್ ಮಂಜುನಾಥ್ ಸಲಹೆ ನೀಡಿದರು.

    ತಾಲೂಕಿನ ಮಾರ್ಟಳ್ಳಿಯ ಸಂತ ಮೇರಿಸ್ ಪ್ರೌಢಶಾಲೆಯಲ್ಲಿ ಬುಧವಾರ ಶಿಕ್ಷಣ ಇಲಾಖೆ ವತಿಯಿಂದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಸಿದ್ಧತಾ ಸಂಬಂಧ ಆಯೋಜಿಸಿದ್ದ ಭರವಸೆ ತುಂಬುದ ವಿಶೇಷ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

    ವಿದ್ಯಾರ್ಥಿ ಜೀವನದಲ್ಲಿ ಎಸ್ಸೆಸ್ಸೆಲ್ಸಿ ಪ್ರಮುಖ ಘಟ್ಟ. ಈ ವೇಳೆ ಕೈಗೊಳ್ಳುವ ನಿರ್ಧಾರಗಳು ಭವಿಷ್ಯವನ್ನು ನಿರ್ಧರಿಸುತ್ತವೆ. ಹಾಗಾಗಿ ಪ್ರತಿಯೊಬ್ಬರೂ ನಿರ್ದಿಷ್ಟ ಗುರಿ ಹೊಂದಲು ಸಂಕಲ್ಪ ಮಾಡಬೇಕಿದೆ. ಈ ದಿಸೆಯಲ್ಲಿ ಗುರುಗಳ ಹಾಗೂ ಪಾಲಕರ ಮಾರ್ಗದರ್ಶನ ಅತೀ ಮುಖ್ಯ. ಜತೆಗೆ ಶಿಕ್ಷಣ, ಸಾಹಿತ್ಯ, ವೈದ್ಯಕೀಯ, ವಿಜ್ಞಾನ, ತಂತ್ರಜ್ಞಾನ ಹಾಗೂ ಇನ್ನಿತರೆ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮೇರು ವ್ಯಕ್ತಿಗಳಿದ್ದಾರೆ. ಇವರ ಸಾಧನೆಯ ಹಿಂದೆ ಅಪಾರ ಶ್ರಮವಿದೆ. ಹಾಗಾಗಿ ಸಾಧನೆ ಮಾಡಲು ಇವರು ಸ್ಫೂರ್ತಿಯಾಗಿದ್ದಾರೆ. ಇದರಿಂದ ಸಾಧನೆಗೆ ಪ್ರೇರಣೆ ಸಿಕ್ಕಿ ಯಶಸ್ಸು ಲಭಿಸುತ್ತದೆ ಎಂದರು.

    ಈಗಾಗಲೇ ಎಸ್ಸೆಸ್ಸೆಲ್ಸಿ ಪರೀಕ್ಷಾ ವೇಳಾಪಟ್ಟಿ ಬಿಡುಗಡೆಯಾಗಿದೆ. ಆದ್ದರಿಂದ ಇದರನ್ವಯ ಪ್ರತಿಯೊಬ್ಬರೂ ಸಮಯ ವ್ಯರ್ಥ ಮಾಡದೇ ಸ್ವಯಂ ವೇಳಾಪಟ್ಟಿ ತಯಾರಿಸಿಕೊಂಡು ವಿಷಯವಾರು ಪರೀಕ್ಷೆಗೆ ಸಜ್ಜಾಗಬೇಕು. ಉತ್ತಮ ಅಂಕ ಗಳಿಸುವುದರ ಮೂಲಕ ಶಾಲೆಗೆ, ಪೋಷಕರಿಗೆ ಹಾಗೂ ತಾಲೂಕಿಗೆ ಕೀರ್ತಿ ತೆರಬೇಕು. ಈ ದಿಸೆಯಲ್ಲಿ ಹನೂರು ಶೈಕ್ಷಣಿಕ ವಲಯ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಜಿಲ್ಲೆಯಲ್ಲೇ ಪ್ರಥಮ ಸ್ಥಾನ ಗಳಿಸಬೇಕು ಎಂದು ಶಾಸಕರು ತಿಳಿಸಿದರು.

    ರಾಜ್ಯದಲ್ಲೇ ವಿಶೇಷ ಕಾರ್ಯಕ್ರಮ: ಶಿಕ್ಷಣ ಇಲಾಖೆ ಉಪ ನಿರ್ದೇಶಕ ರಾಮಚಂದ್ರರಾಜೇ ಅರಸ್ ಮಾತನಾಡಿ, ಎಸ್ಸೆಸ್ಸೆಲ್ಸಿ ಫಲಿತಾಂಶವನ್ನು ಉತ್ತಮ ಪಡಿಸುವ ಸಂಬಂಧ ಹನೂರು ಶೈಕ್ಷಣಿಕ ವಲಯದಲ್ಲಿ ಮಕ್ಕಳಿಗೆ ಆಯೋಜಿಸಿರುವ ಭರವಸೆ ತುಂಬುವ ವಿಶೇಷ ಕಾರ್ಯಕ್ರಮ ರಾಜ್ಯದಲ್ಲಿಯೇ ಪ್ರಥಮ ಎನಿಸಿದೆ. ಆದ್ದರಿಂದ ಪ್ರತಿಯೊಬ್ಬರೂ ಪ್ರಯೋಜನ ಪಡೆದುಕೊಂಡು ಪರೀಕ್ಷೆಗೆ ಸಜ್ಞಾಗಬೇಕು. ಜತೆಗೆ ಫೆ.18 ಅಥವಾ 19ರಂದು ರಾಜ್ಯ ಮಟ್ಟದ ಪೂರ್ವ ಸಿದ್ಧತೆ ನಡೆಯಲಿದ್ದು, ಇದಕ್ಕೆ ಅಗತ್ಯ ತಯಾರಿ ನಡೆಸಬೇಕು. ಅಲ್ಲದೆ ಇಲಾಖೆಯ ವತಿಯಿಂದ ಬಿಡುಗಡೆಗೊಳಿಸಿರುವ ಮಾದರಿ ಪ್ರಶ್ನೆಪತ್ರಿಕೆಯನ್ನು ಅಭ್ಯಾಸ ಮಾಡಬೇಕು. ಈ ಬಗ್ಗೆ ಶಿಕ್ಷಕರು ಮಕ್ಕಳಿಗೆ ಅಗತ್ಯ ಮಾರ್ಗದರ್ಶನ ನೀಡಬೇಕು ಎಂದು ತಿಳಿಸಿದರು.

    ಇದೇ ವೇಳೆ ಸಂಪನ್ಮೂಲ ಶಿಕ್ಷಕರಿಂದ ಆಯಾ ಭಾಷೆಯ ಪರೀಕ್ಷಾ ಕ್ರಮ, ಸ್ವ ಮೌಲ್ಯಮಾಪನ, ಹೆಚ್ಚು ಅಂಕ ಗಳಿಸುವ ರೀತಿ, ಓದುವ ಕ್ರಮ ಹಾಗೂ ಎಸ್ಸೆಸ್ಸೆಲ್ಸಿ ಪರೀಕ್ಷೆ ತಯಾರಿ ಸಂಬಂಧ ಮಕ್ಕಳಿಗೆ ತಿಳಿಸಿಕೊಡಲಾಯಿತು. ಬಳಿಕ ಹೂಗ್ಯಂ ಮುರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆಯಲ್ಲೂ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಭರವಸೆ ತುಂಬುವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಫಾದರ್ ಟೆನ್ನಿಕುರಿಯನ್, ಬಿಇಒ ಶಿವರಾಜು, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಮಹದೇವ, ಶಿಕ್ಷಣ ಸಂಯೋಜಕರಾದ ಕಿರಣ್‌ಕುಮಾರ್, ಕಂದವೇಲು, ಸಿಆರ್‌ಪಿ, ಬಿಆರ್‌ಪಿಗಳು, ವಿವಿಧ ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts