More

    ಎಸ್.ಎಸ್.ಎಲ್.ಸಿ. ಪರೀಕ್ಷೆ, ವ್ಯವಸ್ಥಿತವಾಗಿ ಹಾಗೂ ಅಚ್ಚುಕಟ್ಟಾಗಿ ಜರುಗಿಸಲು ಕ್ರಮ ವಹಿಸಿ

    ಗದಗ: ಜಿಲ್ಲೆಯಲ್ಲಿ  ಮಾರ್ಚ 25 ರಿಂದ ಎಪ್ರಿಲ್ 6 ರವರೆಗೆ  ಎಸ್.ಎಸ್.ಎಲ್.ಸಿ. ಪರೀಕ್ಷೆಗಳು ಜರುಗುತ್ತಿದ್ದು, ಪರೀಕ್ಷೆಗಳನ್ನು ವ್ಯವಸ್ಥಿತವಾಗಿ ಹಾಗೂ ಅಚ್ಚುಕಟ್ಟಾಗಿ ಜರುಗಿಸಲು ಕ್ರಮ ವಹಿಸಬೇಕೆಂದು  ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ತಿಳಿಸಿದರು.

    ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮಂಗಳವಾರದಂದು ಎಸ್‍ಎಸ್‍ಎಲ್‍ಸಿ ಪರೀಕ್ಷೆ ಕುರಿತು ಜರುಗಿದ  ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

    ಎಸ್.ಎಸ್.ಎಲ್.ಸಿ. ಪರೀಕ್ಷೆಗಳನ್ನು ಪಾರದರ್ಶಕವಾಗಿ ನಡೆಸಬೇಕು. ಪರೀಕ್ಷೆಗಳಲ್ಲಿ  ಯಾವುದೇ ಅಕ್ರಮಗಳು ನಡೆಯದಂತೆ ಹಾಗೂ ಲೋಪದೋಷಗಳಾಗದಂತೆ ಕ್ರಮ ವಹಿಸಬೇಕು. ಸಮಯ ಪರಿಪಾಲನೆಯು ಅತ್ಯವಶ್ಯವಾಗಿದ್ದು ಪ್ರತಿಯೊಂದು ಪರೀಕ್ಷಾ ಕೇಂದ್ರಗಳಿಗೆ ಗೋಡೆ ಗಡಿಯಾರ ಸುಸ್ಥಿತಿಯಲ್ಲಿರುವಂತೆ ನೋಡಿಕೊಳ್ಳಬೇಕು. ಪರೀಕ್ಷಾರ್ಥಿಗಳಿಗೆ ಸೂಕ್ತ ಆಸನದ ವ್ಯವಸ್ಥೆ ಇರುವಂತೆ ನೋಡಿಕೊಳ್ಳಬೇಕು.  ಪರಿಣಾಮಕಾರಿ ವಿಚಕ್ಷಣ ಜಾಗೃತ ದಳಗಳನ್ನು ನೇಮಿಸಿ ಪರೀಕ್ಷಾ ಕಾರ್ಯ ಯಶಸ್ವಿಯಾಗಿ ನಡೆಯುವಂತೆ ಹಾಗೂ ಅವ್ಯವಹಾರಗಳು ನಡೆಯದಂತೆ ಕ್ರಮ ವಹಿಸಬೇಕೆಂದರು. ಪರೀಕ್ಷಾ ಕೇಂದ್ರಗಳ 200 ಮೀಟರ್ ಸುತ್ತಲೂ ನಿಷೇಧಾಜ್ಞೆ ಜಾರಿಗೊಳಿಸಲಾಗುವುದು.   ಒಟ್ಟಾರೆಯಾಗಿ ಪರೀಕ್ಷೆಗಳು  ಯಶಸ್ವಿಯಾಗಿ ಜರುಗುವಂತೆ ಕ್ರಮ ವಹಿಸಬೇಕೆಂದು ಸೂಚಿಸಿದರು.

    ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭರತ್ ಎಸ್ ಅವರು ಮಾತನಾಡಿ  ಸಮಯಕ್ಕೆ ಸರಿಯಾಗಿ ಪರೀಕ್ಷಾ ಕೇಂದ್ರಗಳಿಗೆ  ತೆರಳಲು ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಅಗತ್ಯ ಬಸ್ ವ್ಯವಸ್ಥೆಯನ್ನು ಕಲ್ಪಿಸಬೇಕು.  ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಹಾಗೂ ಪರೀಕ್ಷಾ ಕಾರ್ಯಕ್ಕೆ ನಿಯೋಜನೆಗೊಂಡ ಅಧಿಕಾರಿ ಸಿಬ್ಬಂದಿಗಳನ್ನು ಹೊರತುಪಡಿಸಿ ಇನ್ನುಳಿದವರಿಗೆ ಪರೀಕ್ಷಾ ಕೇಂದ್ರಗಳಿಗೆ ಅವಕಾಶ ನೀಡಬಾರದು. ಪರೀಕ್ಷೆಗಳು ಶಾಂತಿಯುತವಾಗಿ ಹಾಗೂ ಸುಗಮವಾಗಿ ನಡೆಸುವುದಕ್ಕೆ ಸರ್ಕಾರದ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಸೂಚಿಸಿದರು.

    ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಎಂ.ಎ. ರಡ್ಡೇರ ಅವರು ಮಾತನಾಡಿ ಜಿಲ್ಲೆಯಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆಗಳು  ಮಾರ್ಚ 25 ರಿಂದ ಎಪ್ರಿಲ್ 6 ರವರೆಗೆ  ಜರುಗಲಿವೆ.  ಜಿಲ್ಲೆಯಲ್ಲಿ ಒಟ್ಟು 60 ಪರೀಕ್ಷಾ ಕೇಂದ್ರಗಳಿದ್ದು   16325 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಪರೀಕ್ಷೆಗಳನ್ನು  ಶಾಂತಿಯುತವಾಗಿ ಹಾಗೂ ಸುವ್ಯವಸ್ಥಿತವಾಗಿ ಜರುಗಿಸಲು  ಅಗತ್ಯ ಕ್ರಮ ವಹಿಸಲಾಗಿದೆ ಎಂದು ಸಭೆಗೆ ವಿವರಿಸಿದರು.

    ಸಭೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಪರೀಕ್ಷಾ ಕೇಂದ್ರಗಳ ಮುಖ್ಯ ಅಧೀಕ್ಷಕರು, ಮಾರ್ಗಾಧಿಕಾರಿಗಳು. ಪೊಲೀಸ ಇಲಾಖೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು  ಹಾಜರಿದ್ದರು.  

    ಮಾರ್ಚ/ ಎಪ್ರಿಲ್ 2024 ರ ಎಸ್ ಎಸ್ ಎಲ್.ಸಿ ಪರೀಕ್ಷೆ ವೇಳಾಪಟ್ಟಿ.  
    ಮಾರ್ಚ 25 ರಂದು ಬೆಳಿಗ್ಗೆ 10-15 ರಿಂದ ಮಧ್ಯಾಹ್ನ 1-30 ರವರೆಗೆ ಪ್ರಥಮ ಭಾಷೆ ; ಮಾರ್ಚ 27 ರಂದು ಬೆಳಿಗ್ಗೆ 10-15 ರಿಂದ 1-30 ರವರೆಗೆ  ಸಮಾಜ ವಿಜ್ಞಾನ ; ಮಾರ್ಚ 30 ರಂದು ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 1.30 ರವರೆಗೆ ವಿಜ್ಞಾನ ;  ಎಪ್ರಿಲ್ 2 ರಂದು ಬೆ 10.30 ರಿಂದ ಮ 1.30 ರವರೆಗೆ ಗಣಿತ;  ಎಪ್ರಿಲ್ 3 ರಂದು ಬೆ 10.15 ರಿಂದ ಮ 1.30 ರವರೆಗೆ ಅರ್ಥಶಾಸ್ತ್ರ ; ಎಪ್ರಿಲ್ 4 ರಂದು ಬೆಳಿಗ್ಗೆ 10.30 ರಿಂದ ಮ 1.30 ರವರೆಗೆ ತೃತೀಯ ಭಾಷೆ ; ಎಪ್ರಿಲ್ 6 ರಂದು ಬೆಳಿಗ್ಗೆ 10.15 ರಿಂದ ಮಧ್ಯಾಹ್ನ 1.15 ರವರೆಗೆ ದ್ವಿತೀಯ ಭಾಷೆ ಪರೀಕ್ಷೆಗಳು ಜರುಗಲಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts