More

    ಪರೀಕ್ಷೆ ಮೊದಲ ದಿನ ನಿರ್ವಿಘ್ನ

    ಮಂಗಳೂರು: ಕರೊನಾ ಆತಂಕದ ನಡುವೆಯೂ ಕರಾವಳಿಯಲ್ಲಿ ಈ ಬಾರಿಯ ಮೊದಲ ದಿನದ ಎಸ್ಸೆಸ್ಸೆಲ್ಸಿ ಪರೀಕ್ಷೆ ಯಾವುದೇ ಗೊಂದಲ, ವಿಘ್ನ ಗಳಿಲ್ಲದೆ ಜರುಗಿತು. ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿಯೂ ಕರೊನಾ ನಿಯಮಾವಳಿಯಂತೆ ಪರೀಕ್ಷೆ ನಡೆಸಲಾಯಿತು.
    ದ.ಕ. ಜಿಲ್ಲೆಯ 95 ಕೇಂದ್ರಗಳಲ್ಲಿ ನಡೆದ ದ್ವಿತೀಯ ಭಾಷೆ ಕನ್ನಡ ಮತ್ತು ಇಂಗ್ಲಿಷ್ ಪರೀಕ್ಷೆಗೆ 29,032 ವಿದ್ಯಾರ್ಥಿಗಳು ನೋಂದಣಿ ಮಾಡಿಸಿದ್ದು, 27,374 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. 1,658 ವಿದ್ಯಾರ್ಥಿಗಳು ಗೈರಾಗಿದ್ದಾರೆ. ಖಾಸಗಿಯಾಗಿ ಕುಳಿತ 150 ಮಂದಿಯೂ ಇದರಲ್ಲಿ ಸೇರಿದ್ದಾರೆ.

    ಪರೀಕ್ಷಾ ಅವಧಿಗೆ ಎರಡು ಗಂಟೆ ಮೊದಲೇ ಪರೀಕ್ಷಾ ಕೇಂದ್ರಗಳಿಗೆ ವಿದ್ಯಾರ್ಥಿಗಳು ಹಾಜರಾಗಿದ್ದರು. ಶಾಲಾ ಆವರಣಕ್ಕೆ ಪ್ರವೇಶಿಸುವಾಗಲೇ ವಿದ್ಯಾರ್ಥಿಗಳನ್ನು ಥರ್ಮಲ್ ಸ್ಕಾೃನಿಂಗ್‌ಗೆ ಒಳಪಡಿಸಿ ಬಳಿಕ, ಕೈಗಳನ್ನು ಸ್ಯಾನಿಟೈಸ್ ಮಾಡಿ, ಮಾಸ್ಕ್ ವಿತರಿಸಲಾಯಿತು. ಕೆಲವು ಶಾಲೆಗಳಲ್ಲಿ ಆಡಿಟೋರಿಯಂಗಳಲ್ಲಿ ಪರಸ್ಪರ ಅಂತರ ಕಾಯ್ದುಕೊಂಡು ಮಕ್ಕಳಿಗೆ ಓದಲು ವ್ಯವಸ್ಥೆ ಮಾಡಲಾಗಿತ್ತು. ಎಲ್ಲ ಪರೀಕ್ಷಾ ಕೇಂದ್ರಗಳಲ್ಲೂ ಆಯಾ ವ್ಯಾಪ್ತಿಯ ಪೊಲೀಸ್ ಠಾಣಾ ಸಿಬ್ಬಂದಿ ಉಪಸ್ಥಿತರಿದ್ದು, ಗೊಂದಲ ಉಂಟಾಗದಂತೆ ನೋಡಿಕೊಂಡರು. ಜತೆಗೆ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳೂ ಸಹಕರಿಸಿದರು. ಪರೀಕ್ಷೆ ಬಳಿಕವೂ ವಿದ್ಯಾರ್ಥಿಗಳನ್ನು ಅಂತರ ಕಾಯ್ದುಕೊಂಡೇ ಹೊರಗೆ ಕಳುಹಿಸಲಾಯಿತು.
    ಮಂಗಳೂರು ನಗರದ ವಿವಿಧ ಪರೀಕ್ಷಾ ಕೇಂದ್ರಗಳಿಗೆ ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ಭೇಟಿ ನೀಡಿ ಪರೀಕ್ಷೆ ನಡೆಸಲು ಕೈಗೊಳ್ಳಲಾದ ವ್ಯವಸ್ಥೆಗಳನ್ನು ಪರಿಶೀಲಿಸಿದರು. ಪುತ್ತೂರು ಹಾಗೂ ಮಂಗಳೂರು ವಿಭಾಗದಿಂದ ಎಲ್ಲ ರೂಟ್‌ಗಳಲ್ಲಿ ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಕಲ್ಪಿಸಲಾಗಿದ್ದು, ವಿದ್ಯಾರ್ಥಿಗಳ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಲಾಗಿತ್ತು. ದ.ಕ ಜಿಲ್ಲೆಗೆ ಹೊಂದಿಕೊಂಡ ಕಾಸರಗೋಡು ಜಿಲ್ಲೆಯ 28 ಗಡಿಭಾಗದಿಂದ ವಿದ್ಯಾರ್ಥಿಗಳನ್ನು ಕರೆತರಲು ಜಿಲ್ಲಾಡಳಿತ 59 ಬಸ್‌ಗಳನ್ನು ವ್ಯವಸ್ಥೆ ಮಾಡಿತ್ತು. ಜತೆಗೆ ಖಾಸಗಿ ಶಾಲೆಗಳೂ ತಮ್ಮ ಶಾಲಾ ಬಸ್‌ಗಳನ್ನು ಗಡಿಭಾಗಕ್ಕೆ ಕಳುಹಿಸಿ ವಿದ್ಯಾರ್ಥಿಗಳನ್ನು ಕರೆದುಕೊಂಡು ಬಂದು ವಾಪಸ್ ಕಳುಹಿಸಿಕೊಟ್ಟಿದೆ.

    ಉಡುಪಿಯಲ್ಲಿ 762 ಮಂದಿ ಗೈರು
    ಉಡುಪಿ: ಸುರಕ್ಷತಾ ಕ್ರಮ ಅಳವಡಿಸಿಕೊಂಡು ಜಿಲ್ಲೆಯ 51 ಕೇಂದ್ರಗಳಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ನಿರಾತಂಕವಾಗಿ ನಡೆಯಿತು. ಜಿಲ್ಲೆಯಲ್ಲಿ ಒಟ್ಟು 13,526 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ನೋಂದಣಿ ಮಾಡಿದ್ದು, 762 ಮಂದಿ ಗೈರಾದರು.
    ಅನ್ಯ ಜಿಲ್ಲೆಯ 82 ವಲಸೆ ವಿದ್ಯಾರ್ಥಿಗಳು ಜಿಲ್ಲೆಯಲ್ಲಿ ಪರೀಕ್ಷೆ ಬರೆದರು. ಆನಾರೋಗ್ಯ ಮತ್ತು ಕಂಟೇನ್ಮೆಂಟ್ ರೆನ್‌ನಿಂದ ಬಂದ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಬರೆಸಲಾಗಿದೆ. ಕೇಂದ್ರದಲ್ಲಿ ವಿದ್ಯಾರ್ಥಿಗಳ ಸುರಕ್ಷತೆಗಾಗಿ ಕೋವಿಡ್-19 ನಿಯಮಾವಳಿ ಪಾಲನೆ ಕುರಿತು ಖುದ್ದು ಜಿಲ್ಲಾಧಿಕಾರಿ ಜಿ.ಜಗದೀಶ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರೀತಿ ಗೆಹ್ಲೋಟ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

    ನಾಲ್ವರಿಗೆ ಅನಾರೋಗ್ಯ
    ಕಂಟೇನ್ಮೆಂಟ್ ಜೋನ್‌ನಿಂದ ಆಗಮಿಸಿದ ಆರು ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಪ್ರತ್ಯೇಕ ಕೋಣೆ ವ್ಯವಸ್ಥೆ ಮಾಡಲಾಗಿತ್ತು. ಜಿಲ್ಲೆಯ ಬೇರೆ ಬೇರೆ ಕೇಂದ್ರಗಳಲ್ಲಿ ಶೀತ, ಗಂಟಲು ನೋವಿಗೆ ಸಂಬಂಧಿಸಿ ನಾಲ್ವರನ್ನು ಪ್ರತ್ಯೇಕ ಕೊಠಡಿಯಲ್ಲಿ ಕೂರಿಸಿ ಪರೀಕ್ಷೆ ಬರೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು. ಪರೀಕ್ಷಾ ಕೇಂದ್ರಗಳಿಗೆ ಸರತಿ ಸಾಲಿನಲ್ಲಿದ ದೈಹಿಕ ಅಂತರ ಕಾಯ್ದುಕೊಂಡು ವಿದ್ಯಾರ್ಥಿಗಳು ಆಗಮಿಸಿದರು. ಎಲ್ಲರೂ ಮಾಸ್ಕ್ ಧರಿಸಿದ್ದರು. ವಿದ್ಯಾರ್ಥಿಗಳನ್ನು ಕಡ್ಡಾಯ ಥರ್ಮಲ್ ಸ್ಕ್ರೀನಿಂಗ್‌ಗೆ ಒಳಪಡಿಸಿ ಕೇಂದ್ರದ ಒಳಗೆ ಬಿಡಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts