More

    ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರಗಳ ಹೆಚ್ಚಳ

    ಮಂಗಳೂರು: ಕರೊನಾ ಆತಂಕ ಹಿನ್ನೆಲೆಯಲ್ಲಿ ಮುಂದಿನ ತಿಂಗಳು ನಡೆಯಲಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಈ ಬಾರಿ ಕಳೆದ ವರ್ಷಕ್ಕಿಂತ ಒಟ್ಟು 111 ಹೆಚ್ಚುವರಿ ಪರೀಕ್ಷಾ ಕೇಂದ್ರಗಳನ್ನು ಸಿದ್ಧಪಡಿಸಲಾಗುತ್ತಿದೆ.

    ಶಿಕ್ಷಣ ಇಲಾಖೆ ನಿರ್ದೇಶನ ಪ್ರಕಾರ ಸುರಕ್ಷಿತ ಅಂತರ ಪಾಲನೆ ಹಾಗೂ ವಿದ್ಯಾರ್ಥಿಗಳ ಮನೆ ಸಮೀಪವೇ ಪರೀಕ್ಷಾ ಕೇಂದ್ರಗಳು ಲಭ್ಯವಾಗಬೇಕು ಎಂಬ ಉದ್ದೇಶದಿಂದ ಪರೀಕ್ಷಾ ಕೇಂದ್ರಗಳ ಸಂಖ್ಯೆ ವಿಸ್ತರಿಸಲಾಗಿದೆ. ಕಳೆದ ವರ್ಷ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿಗೆ ಒಟ್ಟು 94 ಪರೀಕ್ಷಾ ಕೇಂದ್ರಗಳಿದ್ದು, ಈ ಬಾರಿ ಸಂಖ್ಯೆ 179ಕ್ಕೆ ಏರಿಕೆಯಾಗಿದೆ. ಉಡುಪಿ ಜಿಲ್ಲೆಯಲ್ಲಿ ಕಳೆದ ಬಾರಿ 51 ಕೇಂದ್ರಗಳಿದ್ದು, ಈ ಬಾರಿ 77ಕ್ಕೆ ವಿಸ್ತರಣೆಯಾಗಿದೆ.
    ಕಳೆದ ಬಾರಿ ಕರೊನಾ ನಡುವೆಯೂ ಒಂದು ಕೊಠಡಿಯಲ್ಲಿ 20 ಮಕ್ಕಳಿಗೆ ಅವಕಾಶವಿದ್ದರೆ ಈ ಬಾರಿ ಒಂದು ಕೋಣೆಯಲ್ಲಿ 12 ಮಕ್ಕಳಿಗೆ ಮಾತ್ರ ಅವಕಾಶ.

    1 ಕೋಣೆ 12 ಮಕ್ಕಳು: ಕೇಂದ್ರದಲ್ಲಿ ಹಿಂದೆ ಕನಿಷ್ಠ 250(ಗರಿಷ್ಠ 850)ವಿದ್ಯಾರ್ಥಿಗಳಿದ್ದರೆ, ಈ ಬಾರಿ ಗರಿಷ್ಠ 250 ವಿದ್ಯಾರ್ಥಿಗಳಿಗೆ ಮಾತ್ರ ಪರೀಕ್ಷೆ ಬರೆಯಲು ಅವಕಾಶ ದೊರೆಯಲಿದೆ. ದಕ್ಷಿಣ ಕನ್ನಡ ಗಡಿ ಪ್ರದೇಶದಲ್ಲಿ ಪರೀಕ್ಷೆ ಬರೆಯಲಿರುವ ಕೇರಳ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಅನುಕೂಲವಾಗುವಂತೆ ಕಳೆದ ವರ್ಷದಂತೆ ಈ ಬಾರಿಯೂ ತಲಪಾಡಿ ಗಡಿಯ ಬಳಿಕ ದ.ಕ ಶಿಕ್ಷಣ ಇಲಾಖೆಯ ವಾಹನದ ಮೂಲಕ ಪರೀಕ್ಷಾ ಕೇಂದ್ರಗಳಿಗೆ ಕರೆತರಲು ತೀರ್ಮಾನಿಸಲಾಗಿದೆ. ಕಳೆದ ಬಾರಿ ಕೇರಳದ 169ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ದಕ್ಷಿಣ ಕನ್ನಡದಲ್ಲಿ ಪರೀಕ್ಷೆ ಬರೆದಿದ್ದರು. ಈ ವರ್ಷದ ಅಂಕಿ ಅಂಶವನ್ನು ಕ್ಷೇತ್ರ ಶಿಕ್ಷಣ ಅಧಿಕಾರಿ ಸಂಗ್ರಹಿಸುತ್ತಿದ್ದಾರೆ.

    47 ಸಾವಿರ ವಿದ್ಯಾರ್ಥಿಗಳು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 29351 ರೆಗ್ಯುಲರ್, 694 ಖಾಸಗಿ, 2050 ಶಾಲಾ ಪುನರಾವರ್ತಿತ ಅಭ್ಯರ್ಥಿಗಳು, 538 ಖಾಸಗಿ ಪುನರಾವರ್ತಿತ ಸೇರಿದಂತೆ ಒಟ್ಟು 32636 ವಿದ್ಯಾರ್ಥಿಗಳು ಹಾಗೂ ಉಡುಪಿ ಜಿಲ್ಲೆಯಲ್ಲಿ 13336 ರೆಗ್ಯುಲರ್, 204 ಖಾಸಗಿ, 657 ರೆಗ್ಯುಲರ್ ರಿಪಿಟರ್, 183 ಖಾಸಗಿ ರಿಪಿಟರ್ ಸೇರಿದಂತೆ ಒಟ್ಟು 14380 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.

    ಎಸೆಸೆಲ್ಸಿ ಪರೀಕ್ಷೆ ಸಿದ್ದತೆ ಅಂತಿಮ ಹಂತದಲ್ಲಿದೆ. ಮಾದರಿ ಪ್ರಶ್ನೆಪತ್ರಿಕೆಗಳನ್ನು ವೆಬ್‌ಸೈಟ್‌ಗಳಲ್ಲಿ ಹಾಕಲಾಗಿದ್ದು, ಅದರ ಪ್ರತಿಗಳನ್ನು ವಿದ್ಯಾರ್ಥಿಗಳಿಗೆ ತಲುಪಿಸಲು ಶಿಕ್ಷಕರು ಪ್ರಯತ್ನಿಸುತ್ತಿದ್ದಾರೆ. ದಿನಾಂಕ ನಿಗದಿಯಷ್ಟೇ ಬಾಕಿ ಇದೆ. ಪರೀಕ್ಷೆಯನ್ನು ಪ್ರಸ್ತುತ ಸಾಲಿಗೆ ಸರಳೀಕರಿಸಿ ನಡೆಸಲಾಗುತ್ತದೆ. ಎಲ್ಲ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಪರೀಕ್ಷೆ ನಡೆಯಲಿದೆ. ವಿದ್ಯಾರ್ಥಿಗಳ ಸುರಕ್ಷತೆ ಉದ್ದೇಶದಿಂದ ಪರೀಕ್ಷಾ ಕೇಂದ್ರಗಳನ್ನು ಹೆಚ್ಚಿಸಲಾಗಿದೆ.
    ಮಲ್ಲೇಸ್ವಾಮಿ ಡಿಡಿಪಿಐ ದ.ಕ

    ಪರೀಕ್ಷಾ ಕೇಂದ್ರಗಳು
    ದಕ್ಷಿಣ ಕನ್ನಡ
    ಬಂಟ್ವಾಳ: 29 (ಹಿಂದಿನ ಕೇಂದ್ರ 17)
    ಬೆಳ್ತಂಗಡಿ 30 (13)
    ಮಂಗಳೂರು ಉತ್ತರ: 34 (20)
    ಮಂಗಳೂರು ದಕ್ಷಿಣ: 38 (21)
    ಮೂಡುಬಿದಿರೆ: 10 (05)
    ಪುತ್ತೂರು: 25 (12)
    ಸುಳ್ಯ: 13 (06)
    ಒಟ್ಟು: 179 (94)

    ಉಡುಪಿ
    ಬ್ರಹ್ಮಾವರ: 14 (ಹಿಂದಿನ ಕೇಂದ್ರ 11)
    ಬೈಂದೂರು: 13 (8)
    ಕಾರ್ಕಳ: 15 (9)
    ಕುಂದಾಪುರ: 13 (8)
    ಉಡುಪಿ: 22 (15)
    ಒಟ್ಟು: 77 (51)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts