More

    ಶ್ರೀರಂಗಪಟ್ಟಣ ಕ್ಷೇತ್ರದಲ್ಲಿ ಹಣದ ಹೊಳೆ: ಪಕ್ಷೇತರ ಅಭ್ಯರ್ಥಿ ತಗ್ಗಹಳ್ಳಿ ವೆಂಕಟೇಶ್ ಆರೋಪ

    ಮಂಡ್ಯ: ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ಅಭ್ಯರ್ಥಿಗಳು ಹಣದ ಹೊಳೆಯನ್ನು ಹರಿಸುತ್ತಿದ್ದಾರೆ. ಆದ್ದರಿಂದ ಚುನಾವಣಾಧಿಕಾರಿಗಳು ಗಮನಹರಿಸಬೇಕೆಂದು ಪಕ್ಷೇತರ ಅಭ್ಯರ್ಥಿ ತಗ್ಗಹಳ್ಳಿ ವೆಂಕಟೇಶ್ ಮನವಿ ಮಾಡಿದರು.
    ಮೂವರು ಅಭ್ಯರ್ಥಿಗಳು ಬೇನಾಮಿ ಹಣ ಹಂಚಿ ಚುನಾವಣೆಯಲ್ಲಿ ಜಯಗಳಿಸಲು ಪೈಪೋಟಿಗಿಳಿದಿದ್ದಾರೆ. ಇವರ ವಿರುದ್ಧ ಪಕ್ಷೇತರನಾಗಿ ಸ್ಪರ್ಧಿಸಿರುವ ನಾನು ಹಣ ಬಲವೋ ಜನ ಬಲವೋ ಎಂಬ ಘೋಷ ವಾಕ್ಯದಂತೆ ’ವೋಟು ನೀಡಿ – ನೋಟು ಕೊಡಿ’ ಎಂದು ಮತದಾರನ ಮನೆಯಂಗಳಕ್ಕೆ ತೆರಳುತ್ತಿದ್ದೇನೆ. ಮತದಾರರು ನನ್ನನ್ನು ಬೆಂಬಲಿಸುವ ವಿಶ್ವಾಸವಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
    ಕ್ಷೇತ್ರದ ಹಾಲಿ ಮತ್ತು ಮಾಜಿ ಶಾಸಕರ ಬೆಂಬಲಿಗರು ನನ್ನ ಚುನಾವಣಾ ಸ್ಪರ್ಧೆ ಬಗ್ಗೆ ನಿರಂತರ ಅಪಪ್ರಚಾರ ಮಾಡುತ್ತಿದ್ದರೂ ನಾನು ಕಣದಲ್ಲುಳಿಯುವ ಮೂಲಕ ಅಪಪ್ರಚಾರಕ್ಕೆ ತಕ್ಕ ಉತ್ತರ ನೀಡಿದ್ದೇನೆ ಎಂದ ಅವರು, ಕ್ಷೇತ್ರದ ಮತದಾರರು ವಿಶ್ವಾಸವಿಟ್ಟು ಶಾಸಕನಾಗಿ ಆಯ್ಕೆ ಮಾಡಿದ ವಿಶ್ವಾಸಕ್ಕೆ ದ್ರೋಹ ಬಗೆದು ಚುನಾಯಿತ ಪಕ್ಷಕ್ಕೆ ಅನ್ಯಾಯವೆಸಗಿ ಹಣಕ್ಕೆ ಮತವನ್ನು ಮಾರಿಕೊಂಡರು. ಜತೆಗೆ ಕ್ಷೇತ್ರಕ್ಕೆ ಕಳಂಕ ತಂದ ಮಾಜಿ ಶಾಸಕ ರಮೇಶ ಬಂಡಿಸಿದ್ದೇಗೌಡ ಪ್ರಜಾಪ್ರಭುತ್ವಕ್ಕೆ ಮಾರಕವಾದ ವ್ಯಕ್ತಿ. ಮೊಸಳೆ ಕಣ್ಣೀರು ಸುರಿಸಿ, ಮತಯಾಚಿಸುತ್ತಿರುವ ರಮೇಶ ವಿರುದ್ಧ ಸಿಬಿಐ ಪ್ರಕರಣದ ವಿಚಾರಣೆ ಮುಕ್ತಾಯದ ಹಂತದಲ್ಲಿದೆ. ಸಧ್ಯದಲ್ಲೇ ತೀರ್ಪು ಹೊರಬೀಳಲಿದೆ. ಇಂತಹವರಿಗೆ ಮತ ನೀಡಬೇಕೇ ಎಂಬ ಚರ್ಚೆಗಳು ಕ್ಷೇತ್ರದಲ್ಲಿ ಸಾಗುತ್ತಿವೆ ಎಂದು ತಿಳಿಸಿದರು.
    ಶಾಸಕ ರವೀಂದ್ರ ಶ್ರೀಕಂಠಯ್ಯ ಅವರು ಅವಕಾಶವಾದಿ ರಾಜಕಾರಣಿ. ಅಂಬರೀಷ್ ಅವರು ಕ್ಷೇತ್ರದಲ್ಲಿ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದಾಗ ಯಾರೊಂದಿಗೆ ರವೀಂದ್ರ ಸಖ್ಯ ಬೆಳೆಸಿದ್ದರು ಎಂಬುದು ಕ್ಷೇತ್ರದ ಜನರಿಗೆ ತಿಳಿದಿದೆ. ಹಾಲಿ ಮತ್ತು ಮಾಜಿ ಶಾಸಕರು ಭ್ರಷ್ಟಾಚಾರಿಗಳಾಗಿದ್ದು, ಇವರನ್ನು ದೂರವಿಟ್ಟು ಅನ್ಯರನ್ನು ಬೆಂಬಲಿಸುವ ಮನಸ್ಸನ್ನು ಕ್ಷೇತ್ರದ ಜನರು ಮಾಡಿದ್ದಾರೆ ಎಂದು ಹೇಳಿದರು.
    ಮುಖಂಡರಾದ ಅರಕೆರೆ ಸಿದ್ದರಾಜು, ಪಾಲಹಳ್ಳಿ ಯೋಗೇಶ್, ಪುಟ್ಟೇಗೌಡ, ಚೀರನಹಳ್ಳಿ ಉಮೇಶ್, ಮಂಗಲ ಲಂಕೇಶ್, ನಗುವಿನಹಳ್ಳಿ ಹಿತೇತ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts