More

    ತೇವಾಂಶ ಹೆಚ್ಚಾಗಿ ಅಡಕೆಗೆ ಎಲೆ ಚುಕ್ಕಿ ರೋಗ; ವಿಜ್ಞಾನಿ ಡಾ. ಗಿರೀಶ್

    ಶೃಂಗೇರಿ: ಬಹುತೇಕ ಎಲ್ಲ ತಿಂಗಳು ಮಳೆ ಆಗುತ್ತಿರುವುದು, ವಾತಾವರಣದಲ್ಲಿ ಉಂಟಾದ ಬದಲಾವಣೆಯಿಂದ ಅಡಕೆಗೆ ಎಲೆ ಚುಕ್ಕಿ ರೋಗ ಬಾಧಿಸುತ್ತಿದೆ ಎಂದು ಮೂಡಿಗೆರೆ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ. ಗಿರೀಶ್ ಹೇಳಿದರು.
    ಮೆಣಸೆ ಸರ್ಕಾರಿ ಶಾಲೆಯಲ್ಲಿ ತೋಟಗಾರಿಕೆ ಇಲಾಖೆ, ಲಯನ್ಸ್ ಕ್ಲಬ್ ಮತ್ತು ಕೆರೆಮನೆ ಆದರ್ಶ ರೈತ ಮಿತ್ರ ಕೂಟದಿಂದ ಗುರುವಾರ ಆಯೋಜಿಸಿದ್ದ ಎಲೆ ಚುಕ್ಕಿ ರೋಗ ನಿರ್ವಹಣೆ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
    ಮುಂಗಾರು ಮಳೆ ಆರಂಭವಾಗುವ ಮುನ್ನ ಬೋರ್ಡೋ ದ್ರಾವಣ ಸಿಂಪಡಣೆ ಮಾಡುವುದು ಸೂಕ್ತ. ರೋಗ ಬಾಧಿತ ಸೋಗೆಯನ್ನು ತೆಗೆದು ನಾಶಪಡಿಸಬೇಕು. ತೋಟದಲ್ಲಿ ಕಾಡು ಮರವಿದ್ದರೆ ಅವುಗಳ ರೆಂಬೆ ಕತ್ತರಿಸಿ, ಗಾಳಿ, ಬೆಳಕು ಚೆನ್ನಾಗಿರುವಂತೆ ಮಾಡಬೇಕು ಎಂದು ತಿಳಿಸಿದರು.
    ಅಡಕೆ ಮರ ಆರೋಗ್ಯವಾಗಿರಲು ಸಾವಯವ ಗೊಬ್ಬರ ನೀಡಬೇಕು. ಶಿಫಾರಸು ಮಾಡಿದ ಸಾರಜನಕ, ರಂಜಕ, ಪ್ರೋಟಾನ್ ಗೊಬ್ಬರ ನೀಡಬೇಕು. ರೋಗ ಆರಂಭವಾದ ಲಕ್ಷಣ ಕಂಡುಬಂದರೆ ಶಿಲೀಂಧ್ರ ನಾಶಕ ಸಿಂಪಡಿಸಬೇಕು. ಅಂತರ ಬೆಳೆಯಾದ ಕಾಳುಮೆಣಸಿಗೂ ಸಿಂಪಡಿಸಬೇಕು. ರೋಗ ಕಾಣಿಸಿಕೊಂಡ ನಂತರ ಶಿಲೀಂಧ್ರ ನಾಶಕ ಸಿಂಪಡಿಸಿದರೂ ರೋಗ ಬಾಧಿತ ಗರಿಗಳು ಅದೇ ರೀತಿ ಇರುತ್ತದೆ. ಆದರೆ ಹೊಸ ಸುಳಿ ಹಸಿರಾಗಿ ಬರುತ್ತದೆ ಎಂದರು.
    ಪ್ರಗತಿಪರ ಕೃಷಿಕ ಆಗುಂಬೆ ಸಾವಿತ್ರಿಮನೆಯ ಗಿರೀಶ್ ಮಾತನಾಡಿ, ಕಳೆದ ವರ್ಷ ನನ್ನ ತೋಟದಲ್ಲಿ ಎಲೆ ಚುಕ್ಕಿ ರೋಗ ಕಾಣಿಸಿಕೊಂಡಿತ್ತು. ಸಕಾಲಕ್ಕೆ ಶಿಲೀಂಧ್ರ ನಾಶಕ ಸಿಂಪಡಿಸಿದ್ದರಿಂದ ಶೇ.80ರಷ್ಟು ನಿಯಂತ್ರಣ ಸಾಧ್ಯವಾಗಿದೆ. ನಮ್ಮ ಅಕ್ಕಪಕ್ಕದ ರೈತರು ಒಟ್ಟಾಗಿ ಸಿಂಪಡಣೆ ಮಾಡಿದ್ದರಿಂದ ರೋಗ ಹರಡುವುದು ನಿಯಂತ್ರಣಕ್ಕೆ ಬಂದಿದೆ ಎಂದು ಹೇಳಿದರು.
    ಲಯನ್ಸ್ ಕ್ಲಬ್ ಅಧ್ಯಕ್ಷ ಕೀರ್ತಿಕುಮಾರ್ ಕಾರ್ಯಕ್ರಮ ಉದ್ಘಾಟಿಸಿದರು. ಮೆಣಸೆ ಗ್ರಾಪಂ ಸದಸ್ಯ ತ್ರಿಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಮೆಣಸೆ ಗ್ರಾಪಂ ಸದಸ್ಯರಾದ ಸುಷ್ಮಾ ಸುರೇಂದ್ರ, ಸಂಧ್ಯಾ, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಶ್ರೀಕೃಷ್ಣ, ಆದರ್ಶ ರೈತಕೂಟದ ಗೋಪಾಲಕೃಷ್ಣ, ಸುಷ್ಮಾ ಉಪಸ್ಥಿತರಿದ್ದರು.

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts