More

    ವಿಜೃಂಭಣೆಯ ಶ್ರೀ ವೆಂಕಟರಮಣಸ್ವಾಮಿ ಬ್ರಹ್ಮರಥೋತ್ಸವ

    ಶ್ರೀರಂಗಪಟ್ಟಣ: ಪುರಾಣ ಪ್ರಸಿದ್ಧ, ಕರಿಘಟ್ಟದ ಕ್ಷೇತ್ರಪಾಲಕ ಶ್ರೀ ವೆಂಕಟರಮಣಸ್ವಾಮಿ ದೇವರ ಬ್ರಹ್ಮರಥೋತ್ಸವ ವಿಜೃಂಭಣೆಯಿಂದ ಸಾವಿರಾರು ಭಕ್ತರ ಸಮ್ಮುಖದಲ್ಲಿ ಜರುಗಿತು.


    ತಾಲೂಕಿನ ಶ್ರೀನಿವಾಸ ಅಗ್ರಹಾರ ಸಮೀಪದ ಬೆಟ್ಟದಲ್ಲಿ ಸೋಮವಾರ ಮುಂಜಾನೆ ದೇವಾಲಯದ ವೈದಿಕರು ಹಾಗೂ ಮೆಟ್ಟಿಲೋತ್ಸವ ಸಮಿತಿ ಸದಸ್ಯರ ಸಮ್ಮುಖದಲ್ಲಿ ಭಗವಂತನಿಗೆ ಏಕಾರತಿ, ದಟ್ಟಾರತಿ, ನಿತ್ಯ ಕೈಂಕರ್ಯ ಪೂಜೆ, ನಿತ್ಯ ಆರಾಧನೆ ಸೇವೆ, ಅಷ್ಟಾವಧನ ಸೇವೆ ಸೇರಿದಂತೆ ವಿಶೇಷ ಪೂಜೆ, ಅಭಿಷೇಕ ಮಹಾಮಂಗಳಾರತಿ ಅರ್ಪಿಸಿ ಹೋಮದ ಮೂಲಕ ಯಾತ್ರದಾನ ನೆರವೇರಿಸಿಲಾಯಿತು.


    ಬಳಿಕ ಲಕ್ಷ್ಮೀದೇವಿ, ಅಲುಮೇಲು ಮಂಗಮ್ಮ ಸಮೇತ ಶ್ರೀನಿವಾಸ ದೇವರ ಪಂಚಲೋಹದ ಉತ್ಸವಮೂರ್ತಿಯನ್ನು ವಿಶೇಷ ಹೂವುಗಳಿಂದ ಸರ್ವಾಲಾಂಕೃತ ಬ್ರಹ್ಮರಥದಲ್ಲಿ ಅರ್ಚಕ ಅಭಿಷೇಕ್ ನೇತೃತ್ವದಲ್ಲಿ ಪ್ರತಿಷ್ಠಾಪಿಸಿ ನಿತ್ಯ ಕೈಕಂರ್ಯ ಆಚಾರವಾಗಿ ಕೈಗೊಂಡು ಮೆಟ್ಟಿಲೋತ್ಸವ ಸೇವೆ, ಅವ್ಯಾರ್ಚನ ಸೇವೆಯೊಂದಿಗೆ ಮಧ್ಯಾಹ್ನ 2ರ ಶುಭಲಗ್ನದಲ್ಲಿ ಬ್ರಹ್ಮರಥಕ್ಕೆ ತಹಸೀಲ್ದಾರ್ ಪರಶುರಾಮ್ ಸತ್ತಿಗೇರಿ, ಕೆ.ಶೆಟ್ಟಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುವರ್ಣ ಹಾಗೂ ಸಮಾಜ ಸೇವಕಿ ಮೀರಾ ಶಿವಲಿಂಗಯ್ಯ ಅವರು ಚಾಲನೆ ನೀಡಿದರು. ಬೆಟ್ಟದ ಮೇಲಿನ ದೇಗುಲದ ಸುತ್ತಲು ಹಲವು ಗ್ರಾಮಗಳ ಸಾವಿರಾರು ಗ್ರಾಮಸ್ಥರು ತೇರನ್ನು ಭಕ್ತಿಭಾವದಿಂದ ಎಳೆದರು.


    ಬೆಟ್ಟದ ಮೇಲಿನ ದೇವಾಲಯಕ್ಕೆ ಸುಡುವ ಬಿಸಿನಲ್ಲೂ ಸಾವಿರ ಮೆಟ್ಟಿಲು ಏರಿ ಆಗಮಿಸುತ್ತಿದ್ದ ಹಾಗೂ ಆವರಣದಲ್ಲಿ ಜಮಾಯಿಸಿದ್ದ ಭಕ್ತರಿಗೆ ಮಜ್ಜಿಗೆ, ಪಾನಕ, ಕೋಸಂಬರಿ, ಕಲ್ಲಂಗಡಿ ಹಾಗೂ ಪ್ರಸಾದವನ್ನು ಅಲ್ಲಲ್ಲಿ ವಿನಿಯೋಗಿಸಲಾಗುತ್ತಿದ್ದದ್ದು ಕಂಡುಬಂದಿತು. ಶ್ರೀನಿವಾಸನ ಆರಾಧಿಸುವ ಬೆಟ್ಟದ ಸುತ್ತಮುತ್ತಲ ಗ್ರಾಮಗಳಾದ ಶ್ರೀನಿವಾಸ ಅಗ್ರಹಾರ, ಕೆ.ಶೆಟ್ಟಹಳ್ಳಿ, ಗೌರಿಪುರ, ಚಿನ್ನನಾಯಕಹಳ್ಳಿ, ಮರಳಗಾಲ, ಬಾಬುರಾಯನಕೊಪ್ಪಲು, ಕಿರಂಗೂರು ಗ್ರಾಮಗಳು ಸೇರಿದಂತೆ ಶ್ರೀರಂಗಪಟ್ಟಣ, ಮೈಸೂರು, ಮಂಡ್ಯ ಹಾಗೂ ಬೆಂಗಳೂರಿನಿಂದಲೂ ಭಕ್ತರು ಆಗಮಿಸಿದ್ದರು. ಜಾತ್ರೆಯಲ್ಲಿ ದೇವಾಲಯದ ಸುತ್ತಮುತ್ತ ಡೇರೆ ಹಾಕಿದ್ದ ಅಂಗಡಿಮುಂಗಟ್ಟುಗಳಲ್ಲಿ ಮಹಿಳೆಯರು, ಮಕ್ಕಳು ಭರ್ಜರಿ ಖರೀದಿಯಲ್ಲಿ ತೊಡಗಿದ್ದರು. ದೇಗುಲದಲ್ಲಿ ನೂತನ ಕಲ್ಯಾಣ ಮಂಟಪ, ಕೊಠಡಿ ನಿರ್ಮಾತೃ ದಾನಿಗಳಾದ ವಿಶ್ವನಾಥ್ ಹಾಗೂ ದೇಗುಲಕ್ಕೆ ಸಂಪೂರ್ಣ ಹೂವಿನ ಅಲಂಕಾರ ಮಾಡಿಸಿದ್ದ ಲೋಕೇಶ್ ಕುಟುಂಬಸ್ಥರು ಉಪಸ್ಥಿತರಿದ್ದರು.

    ಅಧಿಕಾರಿಗಳ ವಿರುದ್ಧ ಗ್ರಾಮಸ್ಥರ ಅಸಮಾಧಾನ: ಕರಿಘಟ್ಟದ ಶ್ರೀನಿವಾಸಸ್ವಾಮಿ ರಥೋತ್ಸವ ಹಿನ್ನೆಲೆ ರಥಕ್ಕೆ ಹಳೆಯ ಹಾಗೂ ಹರಿದು ಹೋಗಿರುವ ವಸ್ತ್ರಗಳನ್ನು ಅಲಂಕಾರಕ್ಕೆ ಬಳಸಿದ್ದ ಹಿನ್ನೆಲೆ ಶ್ರೀನಿವಾಸ ಅಗ್ರಹಾರ ಗ್ರಾಮಸ್ಥರು ಮತ್ತು ಮುಖಂಡರು ತಾಲೂಕು ಆಡಳಿತ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ರಥ ಎಳೆಯಲು ನಾವು ಅವಕಾಶ ನೀಡುವುದಿಲ್ಲ ಎಂದು ತರಾಟೆ ತೆಗೆದುಕೊಂಡರು. ಜಾತ್ರೋತ್ಸವಕ್ಕೆ ನಡೆದ 15 ದಿನ ಮುಂಚೆಯೇ ಈ ವಿಚಾರ ಪ್ರಸ್ತಾಪಿಸಿ ವಸ್ತ್ರಗಳನ್ನು ಬದಲಿಸಲು ಸೂಚಿಸಿದ್ದರೂ ಸಹ ಉತ್ಸವ ದಿನದಂದು ಕಡೆಗಣಿಸಲಾಗಿದೆ. ಜತೆಗೆ ಹೂವಿನ ಅಲಂಕಾರಕ್ಕೂ ಸರಿಯಾದ ವ್ಯವಸ್ಥೆ ಮಾಡದೆ ನಿರ್ಲಕ್ಷೃ ವಹಿಸಲಾಗಿದೆ ಎಂದು ಆರೋಪಿಸಿದ್ದು, ಇದರಿಂದ ಕೆಲಕಾಲ ಗೊಂದಲವೇರ್ಪಟ್ಟಿತ್ತು. ಬಳಿಕ ಗ್ರಾಮಸ್ಥರನ್ನು ಸಮಾಧಾನಪಡಿಸಿದ ಅಧಿಕಾರಿಗಳು, ಮುಂದೆ ತಪ್ಪಾಗದಂತೆ ಎಚ್ಚರವಹಿಸುವ ಭರವಸೆ ನೀಡಿ ನಂತರ ಹರಿದ ವಸ್ತ್ರಗಳ ಸ್ಥಳದಲ್ಲಿ ಸೀರೆ ಸುತ್ತಿ ಜಾತ್ರೆಗೆ ಅವಕಾಶ ಮಾಡಿಕೊಟ್ಟರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts