More

    ಶ್ರೀರಾಮ ಸೇನೆ ನಿಷೇಧಿಸಿದಾಗ ಸುಮ್ಮನಿದ್ದಿದ್ದೇಕೆ?

    ಬೆಳಗಾವಿ: ನಾವೂ ಆಂಜನೇಯನ ಭಕ್ತರೇ. ಇದೇ ಬಿಜೆಪಿಯ ಮನೋಹರ್ ಪರಿಕ್ಕರ್ ಮುಖ್ಯಮಂತ್ರಿಯಾಗಿದ್ದಾಗ ಗೋವಾ ಸರ್ಕಾರ 2014ರಲ್ಲಿ ಶ್ರೀರಾಮ ಸೇನೆಯನ್ನು ನಿಷೇಧಿಸಿತ್ತು. ಆಗ ಚಕಾರ ಎತ್ತದೆ ಸುಮ್ಮನೆ ಇದ್ದಿದ್ದೇಕೆ ಎಂದು ರಾಜ್ಯಸಭಾ ಸದಸ್ಯ ಜೈರಾಮ ರಮೇಶ ಪ್ರಶ್ನಿಸಿದರು.

    ನಗರದಲ್ಲಿನ ಕಾಂಗ್ರೆಸ್ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಜರಂಗಬಲಿಯೇ ಬೇರೆ, ಬಜರಂಗ ದಳವೇ ಬೇರೆ. ಅದು ಬಿಜೆಪಿಗೂ ಗೊತ್ತಿದೆ. ಹೀಗಾಗಿಯೆ, ಪಕ್ಕದ ಗೋವಾ ರಾಜ್ಯದಲ್ಲಿ ಬಿಜೆಪಿ ಸರ್ಕಾರವೇ ಶ್ರೀರಾಮಸೇನೆಯನ್ನೇ ನಿಷೇಧಿಸಿದರೂ ರಾಮ ಜಪ ಮಾಡುವ ಪ್ರಧಾನಿ ನರೇಂದ್ರ ಮೋದಿಯೂ ವಿರೋಧಿಸಿಲಿಲ್ಲ ಎಂದು ಬಜರಂಗದಳ ನಿಷೇಧವನ್ನು ಪರೋಕ್ಷವಾಗಿ ಸಮರ್ಥಿಸಿಕೊಂಡರು. ಸೋಲಿನ ಸಮೀಕ್ಷೆಗಳಿಂದ ಹತಾಶರಾಗಿ ಬಿಜೆಪಿಗರು ಈ ಮೂಲಕ ಜನರ ಭಾವನೆಯೊಂದಿಗೆ ಆಟವಾಡುತ್ತಿದ್ದಾರೆ ಎಂದರು.

    ಬಿಜೆಪಿಗರು ರಾಜ್ಯದಲ್ಲಿ ರಾಜಕೀಯ ದುರುದ್ದೇಶದಿಂದಲೇ ಬಜರಂಗ ದಳ ನಿಷೇಧಕ್ಕೆ ಭಾವನಾತ್ಮಕ ರೂಪಕೊಟ್ಟು ಜನರನ್ನು ದಿಕ್ಕುತಪ್ಪಿಸುತ್ತಿದ್ದಾರೆ. ಇಂದಿರಾಗಾಂಧಿ ಚಿಕ್ಕಮಗಳೂರಿನಿಂದ ಲೋಕಸಭೆಗೆ ಸ್ಪರ್ಧಿಸಿದಾಗ ರಾಜ್ಯದ ಕಾಂಗ್ರೆಸ್ ಹುಮ್ಮಸ್ಸು ಇಮ್ಮಡಿಗೊಂಡಿತ್ತು. ಇದೀಗ ರಾಹುಲ್ ಗಾಂಧಿಯ ‘ಭಾರತ ಜೋಡೋ ಯಾತ್ರೆ’ಯಿಂ ರಾಜ್ಯ ಕಾಂಗ್ರೆಸ್‌ಗೆ ಸಂಜೀವಿನಿ ಸಿಕ್ಕು, ಮತ್ತಷ್ಟು ಆತ್ಮವಿಶ್ವಾಸ ಬಂದಿದೆ. ಅಲ್ಲದೆ, ಜನರ ಒಲವು ಕಾಂಗ್ರೆಸ್ ಮೇಲಿದೆ. ಹೀಗಾಗಿಯೇ ಬಿಜೆಪಿ ಸರ್ಕಾರದಲ್ಲಿದ್ದ ಸಿಎಂ ಹಾಗೂ ಡಿಸಿಎಂಗಳೂ ಕಾಂಗ್ರೆಸ್ ಸೇರಿದ್ದಾರೆ. ಈ ಭಾಗದ ರೈತರ ಕಲ್ಯಾಣಕ್ಕಾಗಿ ಮಹದಾಯಿ ನೀರಾವರಿ ನಿಗಮ ಸ್ಥಾಪಿಸಲಾಗುವುದು. ಈ ಬಾರಿ ರಾಜ್ಯದಲ್ಲಿ ಸ್ಪಷ್ಟ ಬಹುಮತ ಪಡೆದು ಕಾಂಗ್ರೆಸ್ ಸರ್ಕಾರ ಬರುವುದು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ‘ರಾಜ್ಯದಲ್ಲಿ ಕಾಂಗ್ರೆಸ್ ಪರ ಅಲೆ ಬೀಸುತ್ತಿದ್ದು, ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಏರಲಿವೆ. ಭ್ರಷ್ಟಾಚಾರದಲ್ಲಿ ಮುಳುಗೆದ್ದ 40 ಪರ್ಸೆಂಟ್ ಸರ್ಕಾರಕ್ಕೆ ಮುಕ್ತಿ ಕಾಣಿಸಬೇಕಿದೆ. ಡಬಲ್ ಇಂಜಿನ್ ಸರ್ಕಾರ ಎಂದರೆ ಎರಡೂ ಸರ್ಕಾರಗಳು ಅಭಿವೃದ್ಧಿಯತ್ತ ಸಾಗುತ್ತಿರಬೇಕು ಎಂಬರ್ಥವಲ್ಲ. ನಾನು ದೆಹಲಿಯಲ್ಲಿ ಪ್ರಧಾನಿ ಇದ್ದೇನೆ. ಕರ್ನಾಟಕದ ಮುಖ್ಯಮಂತ್ರಿ ನನ್ನ ಕೈಗೊಂಬೆ ಎಂಬುವುದು ಅವರ ಭಾವನೆ. ದೇಶದಲ್ಲಿ ಜೂಟ್ (ಸುಳ್ಳು ಆಶ್ವಾಸನೆ) ಸರ್ಕಾರ ಅಧಿಕಾರದಲ್ಲಿದ್ದರೆ, ರಾಜ್ಯದಲ್ಲಿ ಲೂಟ್ (ಲೂಟಿಕೋರ) ಸರ್ಕಾರ ಅಧಿಕಾರದಲ್ಲಿದೆ. ಇವೆರಡು ಡಬಲ್ ಬೋಗಸ್ ಸರ್ಕಾರ ಎಂದು ವಾಗ್ದಾಳಿ ನಡೆಸಿದರು.

    ಚುನಾವಣೆ ಲೋಕಸಭೆಗಲ್ಲ ವಿಧಾನಸಭೆಗೆ!: ಪ್ರಧಾನಮಂತ್ರಿ ಹಾಗೂ ಕೇಂದ್ರ ಗೃಹಮಂತ್ರಿ ಕರ್ನಾಟಕ ರಾಜ್ಯದಲ್ಲಿಯೇ ಠಿಕಾಣಿ ಹೂಡಿದಂತೆ ಪ್ರಚಾರ ನಡೆಸುತ್ತಿದ್ದಾರೆ. ಇದು ದೆಹಲಿ ಇಂಜಿನ್ ಸರ್ಕಾರಕ್ಕೆ ನಡೆಯುವ ಲೋಕಸಭೆ ಚುನಾವಣೆಯಲ್ಲ. ಬೆಂಗಳೂರು ಇಂಜಿನ್ ಸರ್ಕಾರಕ್ಕಾಗಿ ನಡೆದಿರುವ ವಿಧಾನಸಭೆ ಚುನಾವಣೆ. ಇವುಗಳ ವ್ಯತ್ಯಾಸ ಬಿಜೆಪಿ ನಾಯಕರಿಗೆ ಅರಿವಿಲ್ಲದಿರಬಹುದು. ಆದರೆ, ರಾಜ್ಯದ ಜನತೆ ಪ್ರಜ್ಞಾವಂತರು. ರಾಜ್ಯ ಸರ್ಕಾರಕ್ಕಾಗಿ ನಡೆಯುವ ಚುನಾವಣೆಗೆ ದೆಹಲಿ ಆಡಳಿತಗಾರರ ಮಾತು ಒಪ್ಪುವುದಿಲ್ಲ. ಸಹಕಾರಿ ವಲಯಕ್ಕೂ ಪ್ರತ್ಯೇಕ ಸಚಿವಾಲಯ ಮಾಡಿಕೊಂಡು ರಾಜ್ಯಗಳಲ್ಲಿನ ಸಹಕಾರಿ ರಂಗವನ್ನೂ ಕೇಂದ್ರವೇ ನಿಯಂತ್ರಿಸಲು ಮುಂದಾಗಿರುವ ಬಿಜೆಪಿಯನ್ನೂ ಜನ ವಿರೋಧಿಸುತ್ತಿದ್ದಾರೆ ಎಂದರು.

    1984ರ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಅತಿ ಹೆಚ್ಚು ಕ್ಷೇತ್ರದಲ್ಲಿ ಕಾಂಗ್ರೆಸ್ ಸಂಸದರು ಆಯ್ಕೆಯಾಗಿದ್ದರು. ಆದರೆ, ಅದಾದ ನಾಲ್ಕು ತಿಂಗಳಲ್ಲೇ ನಡೆದ ವಿಧಾನ ಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬಹುಮತ ಸಿಗದೆ, ರಾಮಕೃಷ್ಣ ಹೆಗಡೆ ನೇತೃತ್ವದ ಜನತಾಪಕ್ಷ 130ಕ್ಕೂ ಅಧಿಕ ಸೀಟ್ ಪಡೆದು ಬಹುಮತದ ಸರ್ಕಾರ ರಚಿಸಿತ್ತು. ಈ ಬಾರಿಯೂ ಹೀಗೆಯೇ ಆಗಲಿದೆ. ಭ್ರಷ್ಟಾಚಾರದಿಂದ ರೋಸಿ ಹೋಗಿರುವ ಜನತೆ ಕಾಂಗ್ರೆಸ್ ಪಕ್ಷದ ಗ್ಯಾರಂಟಿಗಳ ಮೇಲೆ ಭರವಸೆ ಇಟ್ಟು ಈ ಬಾರಿ ಸಿಂಗಲ್ ಇಂಜಿನ್ ಸರ್ಕಾರಕ್ಕೆ ಮಣೆ ಹಾಕಲಿದ್ದಾರೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಅಲೋಕ ಶರ್ಮಾ, ವಿನಯ ನಾವಲಗಟ್ಟಿ ಹಾಗೂ ರೋಹನ್ ಗ್ತುಾರ್ ಇದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts