More

    8ರಿಂದ11ರವರೆಗೆ ಶ್ರೀ ಓಂಕಾರೇಶ್ವರಸ್ವಾಮಿ ಜಾತ್ರೆ

    ನೇರಳಕುಪ್ಪೆ ಮಹದೇವ್ ಹನಗೋಡು
    ಶತಮಾನಗಳ ಇತಿಹಾಸಿವುಳ್ಳ ರಾಮೇನಹಳ್ಳಿ ಬೆಟ್ಟದ ಮೇಲಿನ ಚೋಳರ ಕಾಲದ ಶ್ರೀ ಓಂಕಾರೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವ ಮಾ.8ರಿಂದ 11ರವರೆಗೆ ವಿಜೃಂಭಣೆಯಿಂದ ಜರುಗಲಿದೆ.

    ಹನಗೋಡು-ಹುಣಸೂರು ಮುಖ್ಯರಸ್ತೆಯ ರಾಮೇನಹಳ್ಳಿ ಬಳಿ ಹರಿಯುವ ಲಕ್ಷ್ಮಣತೀರ್ಥ ನದಿ ದಂಡೆಯ ಬೆಟ್ಟದ ಮೇಲಿನ ದೇವಾಲಯದಲ್ಲಿ ಶಿವರಾತ್ರಿ ದಿನದಂದು ಜಾಗರಣೆ, ರಥೋತ್ಸವ, ಪಾರ್ವತೋತ್ಸವ, ಲಕ್ಷ್ಮಣತೀರ್ಥ ನದಿಯಲ್ಲಿ ತೆಪ್ಪೋತ್ಸವ ಹಾಗೂ ಗ್ರಾಮದಲ್ಲಿ ಉತ್ಸವ ಮೂರ್ತಿ ಮೆರವಣಿಗೆ ನಡೆಯಲಿದೆೆ.

    800 ವರ್ಷಗಳ ಇತಿಹಾಸವುಳ್ಳ ಶಿಥಿಲಗೊಂಡಿದ್ದ ದೇವಾಲಯವನ್ನು ರಾಮೇನಹಳ್ಳಿ ಗ್ರಾಮಸ್ಥರು ದಾನಿಗಳ ನೆರವಿನಿಂದ ಒಂದು ಕೋಟಿ ರೂ. ವೆಚ್ಚದಲ್ಲಿ ಮರುನಿರ್ಮಾಣ ಮಾಡಿದ್ದಾರೆ. ಭವ್ಯ ದೇವಾಲಯವನ್ನು 11 ವರ್ಷಗಳ ಹಿಂದೆಯೇ ಆಧುನಿಕ ಶೈಲಿಯಲ್ಲಿ ಅಭಿವೃದ್ಧಿಗೊಳಿಸಲಾಗಿದೆ. ದೇವಾಲಯಲ್ಲಿ ನೂತನ ರಸ್ತೆಯನ್ನು ಕೂಡ ನಿರ್ಮಿಸಲಾಗಿದೆ. ದೇವಾಲಯದ ಮುಂಭಾಗ ಕಲ್ಲಿನ ತಡೆಗೋಡೆ ನಿರ್ಮಿಸಿ ಆಕರ್ಷಣೀಯವಾಗಿ ಕಾಣುವಂತೆ ಮಾಡಲಾಗಿದೆ.
    ಭಕ್ತರ ಅನುಕೂಲಕ್ಕೆ ಕುಡಿಯುವ ನೀರು, ವಿದ್ಯುತ್ ದೀಪ, ದೇವಾಲಯದ ಸುತ್ತಲು ಸುರಕ್ಷತಾ ಬೇಲಿ ನಿರ್ಮಿಸಿ, ಮರಗಿಡಗಳನ್ನು ನೆಡಲಾಗಿದೆ. 426 ಎಕರೆ ವಿಸ್ತೀರ್ಣ ಹೊಂದಿರುವ ಬೆಟ್ಟವು ದೊಡ್ಡ ಬಂಡೆಕಲ್ಲುಗಳಿಂದ ಆವೃತವಾಗಿದ್ದು, ಹರಕೆ ಹೊತ್ತವರ ದಾನಿಗಳ ನೆರವಿನಿಂದ ಚಪ್ಪಡಿ ಕಲ್ಲು ಹಾಸಿನ ಮೆಟ್ಟಲು ನಿರ್ಮಿಸಲಾಗಿದೆ. ಬೆಟ್ಟದ ಮೇಲಿನ ಪ್ರಕೃತಿ ರಮಣೀಯ ದೃಶ್ಯ ಕಣ್ಮನ ಸೆಳೆಯುತ್ತಿದೆ.

    ಮಹಾರಾಜರ ಬಳುವಳಿ: ಮೈಸೂರು ರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಹುಲಿ ಬೇಟೆಯಾಡಲು ಈ ಭಾಗಕ್ಕೆ ಬಂದಿದ್ದು, ಆಗ ರಾಮೇನಹಳ್ಳಿ ಗ್ರಾಮಸ್ಥರು ಅವರಿಗೆ ರಾಗಿ ಅಂಬಲಿ ಹಾಗೂ ಹುರುಳಿ ಕಾಳು ಬೇಯಿಸಿಕೊಟ್ಟಿದ್ದಕ್ಕೆ ಅಂದು ಅವರು ಬಾಚಳ್ಳಿಗದ್ದೆ ಬಯಲಿನಲ್ಲಿ 6 ಎಕರೆ ಗದ್ದೆಯನ್ನು ಶ್ರೀ ಓಂಕಾರೇಶ್ವರ ದೇವಾಲಯಕ್ಕೆ ಬಳುವಳಿ ನೀಡಿದ್ದು, ಇಂದಿಗೂ ದೇವಾಲಯದ ಸಮಿತಿಯವರೆ ಈ ಗದ್ದೆಯನ್ನು ಉಸ್ತುವಾರಿ ನೋಡಿಕೊಳ್ಳುತ್ತಿರುವುದನ್ನು ಸ್ಮರಿಸಬಹುದು.

    ಪೂಜಾ ಕಾರ್ಯಕ್ರಮಗಳು: ಮಾರ್ಚ್ 8ರ ಶುಕ್ರವಾರ ಶಿವರಾತ್ರಿ ವಿಶೇಷವಾಗಿ ಬೆಟ್ಟದ ಮೇಲೆ ಬೆಳಗ್ಗೆ 8 ಗಂಟೆಗೆ ಕಳಸ ಪೂಜೆ, ಪಂಚಾಮೃತಾಭಿಷೇಕ, ರುದ್ರಾಭಿಷೇಕ, ರಾತ್ರಿ ಬೆಟ್ಟದ ತಪ್ಪಲಿನಲ್ಲಿ ಸುತ್ತಮುತ್ತಲಿನ ಗ್ರಾಮಸ್ಥರಿಂದ ವಿಶೇಷ ದೀಪಾಲಂಕಾರಗಳೊಂದಿಗೆ ಹರಿಕಥೆ, ಮನರಂಜನೆ ಜಾಗರಣೆ ಕಾರ್ಯಕ್ರಮಗಳು ನಡೆಯಲಿವೆ.

    ಮಾರ್ಚ್ 9ರ ಶನಿವಾರ ಬೆಳಗ್ಗೆ 9ಗಂಟೆಯಿಂದ 9.45 ಗಂಟೆಯೊಳಗೆೆ ಶುಭ ಮೀನ ಲಗ್ನದಲ್ಲಿ ರಥೋತ್ಸವ ಹಾಗೂ ಭಕ್ತರಿಂದ ಬಾಯಿ ಬೀಗ, ತಲೆಮುಡಿ ಸೇರಿದಂತೆ ಇತರ ಹರಕೆ ಕಾರ್ಯಗಳು ನಡೆಯಲಿವೆ. ಮಧ್ಯಾಹ್ನ 12 ಗಂಟೆಗೆ ಅನ್ನ ಪ್ರಸಾದ, ಧಾರ್ಮಿಕ ಸಭೆ ನಡೆಯಲಿದ್ದು, ಸಭೆಯಲ್ಲಿ ರಾಜಕೀಯ ಮುಖಂಡರು ಹಾಗೂ ಸ್ಥಳಿಯ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಸಂಜೆ 5 ಗಂಟೆಗೆ ರಥವನ್ನು ಸ್ವಸ್ಥಾನಕ್ಕೆ ತರಲಾಗುತ್ತದೆ.

    ಮಾರ್ಚ್10ರ ಭಾನುವಾರ ಮಹಾಪೂಜೆ, ಸಂಜೆ 4 ಗಂಟೆಗೆ ಪಾರ್ವತೋತ್ಸವ, ಮಾ.11ರಂದು ಸಂಜೆ 5 ಗಂಟೆಗೆ ಲಕ್ಷ್ಮಣತೀರ್ಥ ನದಿಯಲ್ಲಿ ತೆಪ್ಪೋತ್ಸವ ಹಾಗೂ ರಾತ್ರಿ ಗ್ರಾಮದಲ್ಲಿ ಉತ್ಸವಮೂರ್ತಿ ಮೆರವಣಿಗೆ ನೆರವೇರಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts