More

    ದತ್ತನ ಥೇರನೆಳೆದ ಭಕ್ತರು

    ದೇವಲಗಾಣಗಾಪುರ (ಕಲಬುರಗಿ): ಬ್ರಹ್ಮ, ವಿಷ್ಣು ಹಾಗೂ ಮಹೇಶ್ವರರು ನೆಲೆಸಿರುವ ಮಹಾನ್ ಶಕ್ತಿ ಪೀಠ ಅಫಜಲಪುರ ತಾಲೂಕಿನ ದೇವಲಗಾಣಗಾಪುರದಲ್ಲಿ ಅಸಂಖ್ಯಾತ ಭಕ್ತರ ಜೈಘೋಷದ ಮಧ್ಯೆ ಸಂಭ್ರಮದಿಂದ ಶ್ರೀ ದತ್ತ ಮಹಾರಾಜರ ರಥೋತ್ಸವ ಮಂಗಳವಾರ ಸಂಜೆ ನಡೆಯಿತು.

    ಉತ್ಸವ ಅರ್ಚಕರಾದ ಶ್ರೀಕಾಂತ ಭಟ್, ವಿನಾಯಕ ಭಟ್, ಅರುಣ ಭಟ್, ಪ್ರಸನ್ನ ಭಟ್ ನೇತೃತ್ವದಲ್ಲಿ ಮಂಗಳವಾರ ನಸುಕಿನ ಜಾವ ೨ ಗಂಟೆಗೆ ಶ್ರೀ ದತ್ತಾತ್ರೇಯರಿಗೆ ವಿಶೇಷ ಕಾಕಡಾರತಿ ನೆರವೇರಿತು. ಗುರುಗಳಿಗೆ ಮಾಡಿದ್ದ ಅಲಂಕಾರ ಸೇರಿ ಇನ್ನಿತರ ವಸ್ತುಗಳನ್ನು ವಿಸರ್ಜನೆ ಮಾಡಲಾಯಿತು. ಗರ್ಭಗುಡಿಯಲ್ಲಿ ಸಾಲಿಗ್ರಾಮ, ಶಿವಲಿಂಗ ಸೇರಿ ಇನ್ನಿತರ ದೇವರುಗಳಿಗೆ ಪೂಜೆ ಸಲ್ಲಿಸಲಾಯಿತು. ಬಳಿಕ ಪಂಚಾಮೃತ ಅಭಿಷೇಕ ಸೇರಿ ಹಲವು ಕಾರ್ಯಕ್ರಮ ನೆರವೇರಿದರು.

    ಬೆಳಗ್ಗೆ ೫ಕ್ಕೆ ನಿರ್ಗುಣ ಪಾದುಕೆಗೆ ಕೇಸರಿ, ಕಸ್ತೂರಿ ಲೇಪನ ಮಾಡಲಾಯಿತು. ಅರ್ಚಕರು ಪಾದುಕೆ ಹಾಡಿನೊಂದಿಗೆ ಆರತಿ ಮಾಡಿ, ತುಳಸಿ, ಫಲ-ಪುಷ್ಪ ಸಮರ್ಪಣೆ ಮಾಡಲಾಯಿತು. ನಂತರ ದತ್ತಾತ್ರೇಯರಿಗೆ ತ್ರಿಮೂರ್ತಿ ಅಲಂಕಾರ ಮಾಡಿ, ಮಹಾ ನೈವೇದ್ಯ ಸಮರ್ಪಣೆ ಮಾಡಲಾಯಿತು. ಅರ್ಚಕರು ಮಹಾ ಮಂಗಳಾರತಿ ನೆರವೇರಿಸಿ, ತೀರ್ಥ ವಿತರಣೆ ಮಾಡಿದರು. ಅಸಂಖ್ಯಾತ ಭಕ್ತರು ಸರದಿ ಸಾಲಿನಲ್ಲಿ ಬಂದು ಗುರುಗಳ ದರ್ಶನ ಪಡೆದರು.

    ಸಂಜೆ ೬ಗಂಟೆಗೆ ದೇವಸ್ಥಾನದಲ್ಲಿನ ಉತ್ಸವ ಮೂರ್ತಿಯನ್ನು ಅಲಂಕೃತ ರಥದಲ್ಲಿ ಪ್ರತಿಷ್ಠಾಪನೆ ಮಾಡಲಾಯಿತು. ಬಳಿಕ ಅರ್ಚಕರು ಹಾಗೂ ಟ್ರಸ್ಟ್ನ ಪ್ರಮುಖರು ಉತ್ಸವಕ್ಕೆ ಚಾಲನೆ ನೀಡಿದರು. ಅಸಂಖ್ಯಾತ ಭಕ್ತರು ದತ್ತ ಮಹಾರಾಜ್ ಕಿ ಜೈ.. ದಿಗಂಬರ.. ದಿಗಂಬರ, ಶ್ರೀಪಾದವಲ್ಲಭ ದಿಗಂಬರ.. ಜೈ ಗುರುದೇವ.. ಜೈ ಗುರುದತ್ತ ಸೇರಿ ಇನ್ನಿತರ ಘೋಷಣೆಗಳು ಕೂಗಿ ರಥವನ್ನೆಳೆದು ಕೃತಾರ್ಥರಾದರು. ದೇವಸ್ಥಾನದಿಂದ ಆರಂಭವಾದ ರಥೋತ್ಸವ ಶ್ರೀ ಹನುಮಾನ ಮಂದಿರದವರೆಗೂ ಸಾಗಿತು. ಜನರು ಬಾಳೆಹಣ್ಣು, ಉತ್ತತ್ತಿ, ನಾಣ್ಯವನ್ನು ಎಸೆದು ಹರಕೆ ತೀರಿಸಿದರು.

    ದೇವಸ್ಥಾನದ ಆಡಳಿತ ಅಧಿಕಾರಿ ಸದಾಶಿವ, ಕಾರ್ಯನಿರ್ವಾಹಕ ಅಧಿಕಾರಿ ನಾಮದೇವ, ಸಿಬ್ಬಂದಿ ದತ್ತು ಎಲ್. ಶಿಂದೆ, ಪ್ರಮುಖರಾದ ಮಹಾದೇವ ಗುತ್ತೇದಾರ್, ದತ್ತು ಡಾಂಗೆ, ಮಾರುತಿ ಮೂರನೆತ್ತಿ, ಸತೀಶ, ಆಶೀರ್ವಾದ ಭಟ್, ದೀನನಾಥ ಪೂಜಾರಿ, ಸಚಿನ್ ಭಟ್ ಪೂಜಾರಿ, ಪ್ರಿಯಾಂಕ್ ಭಟ್, ಪ್ರಖ್ಯಾತ ಭಟ್, ಗುರುರಾಜ ಕುಲಕರ್ಣಿ, ನರಸಿಂಹ ಭಟ್ ಪೂಜಾರಿ ಇತರರಿದ್ದರು.

    ಮಧುಕರಿ ಪ್ರಸಾದ ಸವಿದ ಭಕ್ತರು: ದೇವಲಗಾಣಗಾಪುರದ ಶ್ರೀ ದತ್ತಾತ್ರೇಯನ ದೇವಸ್ಥಾನದಲ್ಲಿ ಮಧುಕರಿ ಭಿಕ್ಷೆ ಎಂಬ ಪದ್ಧತಿ ಜಾರಿಯಲ್ಲಿದ್ದು, ನಿತ್ಯ ಮಧ್ಯಾಹ್ನ ೧೨ಕ್ಕೆ ದತ್ತ ಮಹಾರಾಜರಿಗೆ ಮಹಾಮಂಗಳಾರತಿ ನೆರವೇರಿಸಿದ ಬಳಿಕ ಭಕ್ತರು ಮಧುಕರಿ ಬೇಡಿ ಪ್ರಸಾದ ಸ್ವೀಕರಿಸುತ್ತಾರೆ. ಭಗವಾನ್ ದತ್ತಾತ್ರೇಯರು ಮಧ್ಯಾಹ್ನದ ವೇಳೆ ಮಾರುವೇಷದಲ್ಲಿ ಆಗಮಿಸಿ, ಪ್ರಸಾದ ಸ್ವೀಕರಿಸುತ್ತಾರೆ ಎಂದು ಹೇಳಲಾಗುತ್ತದೆ. ಹೀಗಾಗಿ ಮಧ್ಯಾಹ್ನದ ವೇಳೆ ಅಸಂಖ್ಯಾತ ಜನರು ಮಧುಕರಿ ಬೇಡಿ ಪ್ರಸಾದ ಸ್ವೀಕರಿಸುತ್ತಾರೆ. ಅಲ್ಲದೆ ಹಲವು ಭಕ್ತರು ಮನೆಯಿಂದ ಆಹಾರ ಸಿದ್ಧಪಡಿಸಿಕೊಂಡು ಜನರಿಗೆ ಭಿಕ್ಷೆ ನೀಡುತ್ತಾರೆ.

    ಗುರುಚರಿತ್ರೆ ಪಾರಾಯಣ: ಗುರು ಪರಂಪರೆಯಲ್ಲಿ ಶ್ರೀ ಗುರುಚರಿತ್ರೆ ಮಹಾನ್ ಗ್ರಂಥವಾಗಿದ್ದು, ಅಪಾರ ಭಕ್ತರು ನಿತ್ಯ ಪಠಿಸುವ ಮೂಲಕ ದತ್ತನ ಕೃಪಾಶೀರ್ವಾದಕ್ಕೆ ಪಾತ್ರರಾಗುತ್ತಾರೆ. ಅದರಲ್ಲೂ ಗಾಣಗಾಪುರದಲ್ಲಿ ಗುರು ಚರಿತ್ರೆ ಪಾರಾಯಣ ಮಾಡುವುದು ಇನ್ನೂ ವಿಶೇಷ. ದತ್ತ ಜಯಂತ್ಯುತ್ಸವದಲ್ಲಿ ಪಾಲ್ಗೊಳ್ಳಲು ಗಾಣಗಾಪುರಕ್ಕೆ ಆಗಮಿಸಿದ ಅಸಂಖ್ಯಾತ ಭಕ್ತರು ಸಂಗಮದಲ್ಲಿ ಪುಣ್ಯ ಸ್ನಾನ ನೆರವೇರಿಸಿ, ಔದುಂಬರ ಮರದ ಕೆಳಗೆ ೪೯ ಅಧ್ಯಾಯದ ಗುರುಚರಿತ್ರೆಯನ್ನು ಪಠಿಸಿದರು. ಬಳಿಕ ಶ್ರೀ ದತ್ತಾತ್ರೇಯನ ದರ್ಶನ ಪಡೆದರು.

    ಸಂಗಮದಲ್ಲಿ ಪುಣ್ಯ ಸ್ನಾನ: ಗಾಣಗಾಪುರದ ಭೀಮಾ- ಅಮರ್ಜಾ ನದಿಗಳ ಸಂಗಮದ ಪುಣ್ಯ ಕ್ಷೇತ್ರವಾಗಿದ್ದು, ಶ್ರೀ ದತ್ತ ಜಯಂತ್ಯುತ್ಸವ ನಿಮಿತ್ತ ಸೋಮವಾರ, ಮಂಗಳವಾರ ಅಸಂಖ್ಯಾತ ಭಕ್ತರು ಕ್ಷೇತ್ರಕ್ಕೆ ಬಂದಿದ್ದಾರೆ. ನಸುಕಿನ ಜಾವ ಭೀಮ- ಅಮರ್ಜಾ ನದಿಯಲ್ಲಿ ಮಿಂದೆದ್ದು, ಬಳಿಕ ಕಲ್ಲೇಶ್ವರ, ಔದುಂಬರ ಮರ ಹಾಗೂ ಶ್ರೀ ದತ್ತ ಮಹಾರಾಜರ ದರ್ಶನ ಪಡೆದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts