

Rohit Sharma: ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ನಡೆದ ಐದನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಸೋಲು ಅನುಭವಿಸುವ ಮೂಲಕ ಭಾರತ ತಂಡ ಪ್ರತಿಷ್ಠಿತ ಬಾರ್ಡರ್-ಗವಾಸ್ಕರ್ ಟ್ರೋಫಿಯನ್ನು 9 ವರ್ಷಗಳ ಬಳಿಕ ಮತ್ತೆ ಕಳೆದುಕೊಂಡಿತು. ಟೀಮ್ ಇಂಡಿಯಾ ಸೋಲಿಗಿಂತ ಕ್ಯಾಪ್ಟನ್ ಆಟ ತೋರದ ದಿಗ್ಗಜ ಬ್ಯಾಟರ್ ರೋಹಿತ್ ಶರ್ಮ ವಿರುದ್ಧ ಸದ್ಯ ಟೀಕೆ, ವ್ಯಂಗ್ಯಗಳ ಸುರಿಮಳೆಯೇ ಹೆಚ್ಚಾಗಿವೆ.
ಸರಣಿಯ ಮೊದಲ ಪಂದ್ಯದಿಂದ ಕೊನೆಯ ಪಂದ್ಯದವರೆಗೂ ತಂಡವನ್ನು ಗೆಲುವಿನೆಡೆಗೆ ಸಾಗಿಸುವಲ್ಲಿ ಎಡವಿದ ರೋಹಿತ್, ಸರಣಿಯುದ್ದಕ್ಕೂ ಅತ್ಯಂತ ಕಳಪೆ ಪ್ರದರ್ಶನ ತೋರಿದ್ದು ಭಾರತದ ಸೋಲಿಗೆ ಪ್ರಮುಖ ಕಾರಣವಾಯಿತು ಎಂಬುದು ಅನೇಕರ ಮಾತಾಗಿದೆ. ರೋಹಿತ್ ಕಳಪೆ ಫಾರ್ಮ್ ಬಗ್ಗೆ ಟೀಮ್ ಇಂಡಿಯಾದ ಮಾಜಿ ಆಟಗಾರರು ಸೇರಿದಂತೆ ಇತರೆ ದೇಶದ ಹಿರಿಯ ಕ್ರಿಕೆಟಿಗರು ತಮ್ಮ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಆದ್ರೆ, ಆಸಿಸ್ ಆಟಗಾರ ಮಾತ್ರ ರೋಹಿತ್ರನ್ನು ಕಟುವಾಗಿ ಟೀಕಿಸಿದ್ದಾರೆ.
"ಸರಣಿಯಲ್ಲಿ ರೋಹಿತ್ ಗಳಿಸಿದ ಸಂಖ್ಯೆಗಳೇ ಹೇಳುತ್ತೆ ಅವರ ಪ್ರದರ್ಶನ. ಇದೇ ಕಾರಣಕ್ಕೆ ಆತ ಸಿಡ್ನಿಯಲ್ಲಿ ನಡೆದ ಐದನೇ ಟೆಸ್ಟ್ನಿಂದ ಹಿಂದೆ ಸರಿದದ್ದು. ಸುದ್ದಿಗೋಷ್ಠಿಯಲ್ಲಿ ತಮ್ಮ ಮನದಾಳದಿಂದ ಮಾತನಾಡಿದ ರೋಹಿತ್ರನ್ನು ನೋಡಿದರೆ ಅವರಿಗೆ ಸ್ಟ್ಯಾಂಡ್-ಅಪ್ ಕಾಮಿಡಿಯಲ್ಲಿ ಭವಿಷ್ಯವಿದೆ. ಕ್ರಿಕೆಟ್‌ನಿಂದ ನಿವೃತ್ತಿ ಪಡೆದ ಬಳಿಕ ಶರ್ಮಗೆ ಸ್ಟ್ಯಾಂಡ್-ಅಪ್ ಕಾಮಿಡಿಯಲ್ಲಿ ಒಳ್ಳೆಯ ಭವಿಷ್ಯವಿದೆ. ಏಕೆಂದರೆ, ಅವರಲ್ಲಿ ಒಂದೊಳ್ಳೆ ಹಾಸ್ಯ ಪ್ರಜ್ಞೆಯಿದೆ" ಎಂದು ಸೈಮನ್ ಕ್ಯಾಟಿಚ್ ಲೇವಡಿ ಮಾಡಿದ್ದಾರೆ.
"ಇದಕ್ಕೂ ಮೀರಿ ತಾವು ಪ್ರದರ್ಶನ ನೀಡಬಹುದೇ ಎಂಬುದು ಅವರಿಗೆಯೇ ತಿಳಿದಿದೆ. 37ನೇ ವಯಸ್ಸಿನಲ್ಲಿ ಇಂಗ್ಲೆಂಡ್ ವಿರುದ್ಧದ ಸರಣಿ ಆಡುವುದು ಅಷ್ಟು ಸುಲಭವಲ್ಲ. ತಂಡದಲ್ಲಿ ಕೆಲವು ಉತ್ತಮ ವೇಗದ ಬೌಲರ್‌ಗಳೊಂದಿಗೆ ಇಂಗ್ಲೆಂಡ್ ಉತ್ತಮ ಪ್ರದರ್ಶನ ನೀಡುತ್ತಿದೆ. ಗಸ್ ಅಟ್ಕಿನ್ಸನ್ ಮತ್ತು ಬ್ರೈಡನ್ ಕಾರ್ಸ್ ಅದ್ಭುತವಾಗಿ ಕಾಣುತ್ತಿದ್ದಾರೆ. ಹೀಗಿರುವಾಗ ರೋಹಿತ್ ಇಂಗ್ಲೆಂಡ್ ವಿರುದ್ಧ ಆಡಲು ನಿರ್ಧರಿಸಿದರೆ ಮತ್ತು ಆಯ್ಕೆಗಾರರು ಅವರನ್ನು ಆಯ್ಕೆ ಮಾಡಿದರೆ ಖಂಡಿತ ಅದು ರೋಹಿತ್ಗೆ ಕಠಿಣವಾಗಲಿದೆ. ಓಪನರ್ ಆಗಿ ಆಡಲು ಶರ್ಮ ಅರ್ಹರಲ್ಲ" ಎಂದು ಕ್ಯಾಟಿಚ್ ಹೇಳಿದ್ದಾರೆ,(ಏಜೆನ್ಸೀಸ್).