

ನವದೆಹಲಿ: ಟೀಮ್ ಇಂಡಿಯಾ ಸ್ಟಾರ್ ಆಟಗಾರ ಸಂಜು ಸ್ಯಾಮ್ಸನ್ ( Sanju Samson ) ಉತ್ತಮ ಪ್ರದರ್ಶನ ನೀಡಿದರೆ ತಂಡ ಸೋಲುತ್ತದೆಯೇ? ಹಾಗಾದರೆ ಸಂಜು ದುರಾದೃಷ್ಟ ಆಟಗಾರನೇ? ಹೀಗೊಂದು ಚರ್ಚೆ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಜೋರಾಗಿ ನಡೆಯುತ್ತಿದೆ. ಅಷ್ಟಕ್ಕೂ ಟಿ20 ವಿಶ್ವಕಪ್ ಗೆಲ್ಲಿಸಿಕೊಟ್ಟ ಸ್ಟಾರ್ ಆಟಗಾರನ ಬಗ್ಗೆ ಇಂಥದ್ದೊಂದು ಚರ್ಚೆ ನಡೆಯುತ್ತಿರುವುದಾದ್ರೂ ಏಕೆ? ಈ ಪ್ರಶ್ನೆಗೆ ಉತ್ತರ ಇಲ್ಲಿದೆ.
ವೆಸ್ಟ್ ಇಂಡೀಸ್ ವಿರುದ್ಧದ ನಾಲ್ಕನೇ ಟಿ20 ಪಂದ್ಯದಲ್ಲಿ ಸಂಜು ಕೇವಲ 23 ಎಸೆತಗಳಲ್ಲಿ 6 ಎಂಟು ಬೌಂಡರಿ ಹಾಗೂ 4 ಭರ್ಜರಿ ಸಿಕ್ಸರ್ಗಳೊಂದಿಗೆ 56 ರನ್ ಸಿಡಿಸಿದರೂ ತಂಡ ಗೆಲುವು ಸಾಧಿಸಲು ಸಾಧ್ಯವಾಗಲಿಲ್ಲ. ಇದೇ ರೀತಿಯಾಗಿ ರಾಂಚಿಯಲ್ಲಿ ನಡೆದ ಎರಡನೇ ಟಿ20 ಪಂದ್ಯದಲ್ಲೂ ಸಂಜು 41 ಎಸೆತಗಳಲ್ಲಿ 82 ರನ್ಗಳ ಬಿರುಗಾಳಿಯ ಇನ್ನಿಂಗ್ಸ್ ಆಡಿದರೂ ಭಾರತ ತಂಡ ಸೋಲನ್ನು ಅನುಭವಿಸಿತ್ತು. ಈ ಹಿನ್ನೆಲೆಯಲ್ಲಿ ಸಂಜು ಅವರು ಅನ್ಲಕ್ಕಿ ಆಟಗಾರನೆಂಬ ಚರ್ಚೆ ಶುರುವಾಗಿದೆ.
ನಿನ್ನೆ ವೆಸ್ಟ್ ಇಂಡೀಸ್ ವಿರುದ್ಧ ನಡೆದ ನಾಲ್ಕನೇ ಟಿ20 ಪಂದ್ಯದಲ್ಲಿ 247 ರನ್ಗಳ ಬೃಹತ್ ಗುರಿ ಬೆನ್ನಟ್ಟಿದ ಭಾರತಕ್ಕೆ ಸಂಜು ಸ್ಯಾಮ್ಸನ್ ಅತ್ಯುತ್ತಮ ಆರಂಭ ಒದಗಿಸಿಕೊಟ್ಟಿದ್ದರು. ಕೇವಲ 23 ಎಸೆತಗಳಲ್ಲಿ 56 ರನ್ ಸಿಡಿಸಿ ಕೀಮೋ ಪಾಲ್ ಬೌಲಿಂಗ್ನಲ್ಲಿ ಔಟಾದ ಬಳಿಕ ಭಾರತದ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ವೈಫಲ್ಯಕಂಡಿತು. ಕೀಮೋ ಪಾಲ್ ಐದು ವಿಕೆಟ್ ಕಿತ್ತು ಭಾರತದ ರನ್ ವೇಗಕ್ಕೆ ಕಡಿವಾಣ ಹಾಕಿದರು. ಅಂತಿಮವಾಗಿ 223 ರನ್ಗಳಷ್ಟೇ ಗಳಿಸಲು ಶಕ್ತವಾದ ಭಾರತ ತಂಡ 24 ರನ್ಗಳಿಂದ ಸೋಲನ್ನು ಒಪ್ಪಿಕೊಳ್ಳಬೇಕಾಯಿತು. ಇನ್ನು ಎರಡನೇ ಟಿ20ಯಲ್ಲೂ 249 ರನ್ಗಳ ಬೃಹತ್ ಮೊತ್ತ ಕಲೆಹಾಕಿದರೂ, ವಿಂಡೀಸ್ ಪಡೆ ಅದನ್ನು ಸುಲಭವಾಗಿ ಮೈದಾನದಲ್ಲಿ ಬೆನ್ನಟ್ಟಿ ಗೆಲುವು ಸಾಧಿಸಿತ್ತು.
ಇನ್ನು ಸಂಜು ಸ್ಯಾಮ್ಸನ್ ಕಡಿಮೆ ರನ್ ಗಳಿಸಿದಾಗಲೂ ಭಾರತ ಗೆಲುವು ಕಂಡಿರುವ ನಿದರ್ಶನಗಳು ಸಾಕಷ್ಟಿವೆ. ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಸಂಜು ಕೇವಲ 3 ರನ್ಗಳಿಗೆ ಔಟಾಗಿದ್ದರು. ಆದರೆ ಆ ಪಂದ್ಯದಲ್ಲಿ 223 ರನ್ ಗಳಿಸಿದ್ದ ಭಾರತ, ಎದುರಾಳಿ ತಂಡವನ್ನು 209 ರನ್ಗಳಿಗೆ ಕಟ್ಟಿಹಾಕಿ 14 ರನ್ಗಳ ರೋಚಕ ಜಯ ದಾಖಲಿಸಿತ್ತು. ಅದೇ ರೀತಿ ಮೊದಲ ಪಂದ್ಯದಲ್ಲೂ ಸಂಜು 9 ಎಸೆತಗಳಲ್ಲಿ 11 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದರೂ, ನಾಯಕ ಶ್ರೇಯಸ್ ಐಯರ್ ಅವರ ಶತಕದ ಬಲದಿಂದ ಭಾರತ ತಂಡ ಸುಲಭವಾಗಿ ಗುರಿ ತಲುಪಿ ವಿಜಯಮಾಲೆ ಧರಿಸಿತ್ತು. ಹೀಗಾಗಿ, ಸಂಜು ಅನ್ಲಕ್ಕಿ ಎಂಬ ಹಣೆಪಟ್ಟಿ ಇದೀಗ ಎದುರಾಗಿದೆ.
ಸಂಜು ಆಡಿದರೂ ಭಾರತ ಸೋಲುತ್ತದೆ ಎಂಬ ವಾದಕ್ಕೆ ಪ್ರಮುಖ ತಡೆಗೋಡೆಯಾಗಿ ನಿಲ್ಲುವುದು 2026ರ ಟಿ20 ವಿಶ್ವಕಪ್ ಟೂರ್ನಿಯ ಮಹತ್ವದ ಪಂದ್ಯಗಳು. ಕೋಲ್ಕತ್ತದಲ್ಲಿ ನಡೆದ ನಿರ್ಣಾಯಕ ಸೂಪರ್-8 ಹಂತದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ 195 ರನ್ಗಳ ಬೃಹತ್ ಗುರಿ ನೀಡಿತ್ತು. ಆರಂಭಿಕ ವಿಕೆಟ್ಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ಆಸರೆಯಾದ ಸಂಜು ಸ್ಯಾಮ್ಸನ್, ಕೇವಲ 50 ಎಸೆತಗಳಲ್ಲಿ ಅಜೇಯ 97 ರನ್ಗಳ ಮಹತ್ವದ ಇನ್ನಿಂಗ್ಸ್ ಆಡಿದರು. ಈ ಜವಾಬ್ದಾರಿಯುತ ಆಟದ ಬಲದಿಂದ ಭಾರತ ತಂಡವು ಸೆಮಿಫೈನಲ್ ಪ್ರವೇಶಿಸಲು ಸಾಧ್ಯವಾಯಿತು.
ಅಷ್ಟೇ ಅಲ್ಲದೆ, 2026ರ ಟಿ20 ವಿಶ್ವಕಪ್ನ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧವೂ ಸಂಜು ತಮ್ಮ ಅಬ್ಬರ ಮುಂದುವರೆಸಿದರು. ಕೇವಲ 42 ಎಸೆತಗಳಲ್ಲಿ 89 ರನ್ ಸಿಡಿಸಿದ ಅವರು, ಭಾರತದ ಮೊತ್ತವನ್ನು 253 ರನ್ಗಳಿಗೆ ತಲುಪಿಸಲು ಪ್ರಮುಖ ಕಾರಣರಾದರು. ಇಂಗ್ಲೆಂಡ್ ಪಡೆ ಬಲವಾದ ತಿರುಗೇಟು ನೀಡಿದರೂ, ಭಾರತ ಅಂತಿಮವಾಗಿ 7 ರನ್ಗಳ ರೋಚಕ ಜಯ ಸಾಧಿಸಿ ಫೈನಲ್ಗೆ ಲಗ್ಗೆಯಿಟ್ಟಿತು. ಪ್ರಮುಖ ಘಟ್ಟಗಳಲ್ಲಿ ತಂಡಕ್ಕೆ ಬೇಕಾದ ಆಕ್ರಮಣಕಾರಿ ಹಾಗೂ ಸ್ಥಿರ ಆಟವನ್ನು ಅವರು ಸತತವಾಗಿ ನೀಡುತ್ತಾ ಬಂದಿದ್ದಾರೆ.
ಇನ್ನು 2026ರ ಟಿ20 ವಿಶ್ವಕಪ್ನ ಫೈನಲ್ ಪಂದ್ಯದಲ್ಲೂ ನ್ಯೂಜಿಲೆಂಡ್ ವಿರುದ್ಧ ಸಂಜು ಸ್ಯಾಮ್ಸನ್ ಬ್ಯಾಟ್ನಿಂದ ರನ್ ಹೊಳೆ ಹರಿಯಿತು. ಕೇವಲ 46 ಎಸೆತಗಳಲ್ಲಿ 89 ರನ್ ಸಿಡಿಸುವ ಮೂಲಕ ತಂಡದ ಸ್ಕೋರ್ ಅನ್ನು 255 ರನ್ಗಳಿಗೆ ಏರಿಸಲು ನೆರವಾದರು. ಇದಕ್ಕೆ ಉತ್ತರವಾಗಿ ಕಿವೀಸ್ ಪಡೆ 159 ರನ್ಗಳಿಗೆ ಆಲೌಟ್ ಆಗುವುದರೊಂದಿಗೆ ಭಾರತ 96 ರನ್ಗಳ ಭರ್ಜರಿ ಗೆಲುವು ದಾಖಲಿಸಿ ವಿಶ್ವಕಪ್ ತನ್ನದಾಗಿಸಿಕೊಂಡಿತು. ಈ ಅದ್ಭುತ ಪ್ರದರ್ಶನಕ್ಕಾಗಿ ಸಂಜು ಸ್ಯಾಮ್ಸನ್ 'ಪಂದ್ಯಶ್ರೇಷ್ಠ' ಪ್ರಶಸ್ತಿಗೆ ಭಾಜನರಾದರು.
ಕ್ರಿಕೆಟ್ ಎಂಬುದು ಕೇವಲ ಒಬ್ಬ ವ್ಯಕ್ತಿಯ ಆಟವಲ್ಲ; ಬ್ಯಾಟಿಂಗ್, ಬೌಲಿಂಗ್ ಹಾಗೂ ಫೀಲ್ಡಿಂಗ್ ಮೂರರ ಸಮಗ್ರ ಪ್ರದರ್ಶನದ ಮೇಲೆಯೇ ಗೆಲುವು ಸೋಲು ನಿರ್ಧಾರವಾಗುತ್ತದೆ. ಒಬ್ಬ ಬ್ಯಾಟರ್ನ ಶ್ರೇಷ್ಠ ಆಟ ಪಂದ್ಯದ ದಿಕ್ಕನ್ನೇ ಬದಲಿಸಬಲ್ಲದು ನಿಜವಾದರೂ, ಅಂತಿಮ ಗೆಲುವಿಗೆ ಬೌಲರ್ಗಳ ನಿಯಂತ್ರಣ, ಮಧ್ಯಮ ಕ್ರಮಾಂಕದ ಬೆಂಬಲ ಹಾಗೂ ಇತರೆ ಅಂಶಗಳು ಅಷ್ಟೇ ಮುಖ್ಯವಾಗುತ್ತವೆ. ಆದ್ದರಿಂದ ಸಂಜು ಆಡಿದರೆ ಭಾರತ ಸೋಲುತ್ತದೆ ಎಂಬ ಸಾಮಾಜಿಕ ಜಾಲತಾಣಗಳ ವಾದದಲ್ಲಿ ಯಾವುದೇ ತಾರ್ಕಿಕ ಸತ್ಯವಿಲ್ಲ ಎಂಬುದು ಸ್ಪಷ್ಟವಾಗುತ್ತದೆ, (ಏಜೆನ್ಸೀಸ್).