'ಸ್ಟಂಪ್ಸ್​ ಇರೋದು ಅಲ್ಲಿ...' ಕ್ರೀಡಾಸ್ಫೂರ್ತಿ ಮರೆತ ವಿಂಡೀಸ್​​ ಬೌಲರ್​ಗೆ ಬೆಂಡೆತ್ತಿದ ಸುನಿಲ್​ ಗವಾಸ್ಕರ್​ | Sunil Gavaskar

ಪಂದ್ಯವನ್ನು ಅವರಿಗೆ ಬಿಟ್ಟುಕೊಡೋಣ ನೀವು ಬನ್ನಿ ಎಂದು ಸೂಚನೆ ನೀಡಿದರು. ಈ ದೃಶ್ಯವನ್ನು ಕಮೆಂಟರಿ ಬಾಕ್ಸ್​ನಲ್ಲಿ ಕುಳಿತು ಇದನ್ನು ಲೈವ್​ ನೋಡಿದ ಸುನಿಲ್ ಗವಾಸ್ಕರ್​ ಸಿಡಿಮಿಡಿಗೊಂಡಿದ್ದಾರೆ.
 Sunil Gavaskar
'ಸ್ಟಂಪ್ಸ್​ ಇರೋದು ಅಲ್ಲಿ...' ಕ್ರೀಡಾಸ್ಫೂರ್ತಿ ಮರೆತ ವಿಂಡೀಸ್​​ ಬೌಲರ್​ಗೆ ಬೆಂಡೆತ್ತಿದ ಸುನಿಲ್​ ಗವಾಸ್ಕರ್​ | Sunil Gavaskar
Published on: 

ನವದೆಹಲಿ: ವೆಸ್ಟ್ ಇಂಡೀಸ್​ ಮತ್ತು ಭಾರತ ನಡುವಿನ ನಾಲ್ಕನೇ ಟಿ20 ಪಂದ್ಯದಲ್ಲಿ ಶ್ರೇಯಸ್​ ಅಯ್ಯರ್ ಪಡೆ 24 ರನ್​ಗಳ ಹೀನಾಯ ಸೋಲನ್ನು ಅನುಭವಿಸಿತು. ನುಂಗಲಾರದ ಸೋಲು ಒಂದೆಡೆಯಾದರೆ, ಟೀಮ್ ಇಂಡಿಯಾ ಬ್ಯಾಟ್ಸ್​ಮನ್​ ಅರ್ಷದೀಪ್​ ಸಿಂಗ್​ ಮೇಲೆ ವಿಂಡೀಸ್​ ವೇಗಿ ತೋರಿದ ಪ್ರತಾಪಕ್ಕೆ ಕ್ರಿಕೆಟ್​ ದಿಗ್ಗಜ ಸುನಿಲ್​ ಗವಾಸ್ಕರ್​ ಕಿಡಿಕಾರಿದ್ದಾರೆ.

ವೆಸ್ಟ್ ಇಂಡೀಸ್​ ನೀಡಿದ 248 ರನ್​ಗಳ ಬೃಹತ್​ ಗುರಿಯನ್ನು ಬೆನ್ನಟ್ಟಿದ ಟೀಮ್ ಇಂಡಿಯಾಗೆ ಉತ್ತಮ ಆರಂಭ ಸಿಗಲಿಲ್ಲ. ಬಹುಬೇಗನೇ ವಿಕೆಟ್​ಗಳ ಪತನಗೊಂಡು ಸ್ಟಾರ್​ ಬ್ಯಾಟರ್​ಗಳೇ ಪೆವಿಲಿಯನ್ ಸೇರಿದರು. ಭಾಗಶಃ ಗೆಲುವು ವಿಂಡೀಸ್​ ಪಾಲಾಗಿದೆ ಎಂದು ತಿಳಿದಿದ್ದರೂ ಟೀಮ್ ಇಂಡಿಯಾ ಕೊನೆಯವರೆಗೂ ಆಡಲು ಮುಂದಾಯಿತು. ಈ ವೇಳೆ, ಕ್ರೀಸ್​ನಲ್ಲಿದ್ದ ಅರ್ಷದೀಪ್ ಸಿಂಗ್​ ಅವರ ಭುಜಕ್ಕೆ ತಗುಲುವಂತೆ ಬೌಲರ್ ಶಮಾರ್​ ಜೋಸೆಫ್​ ಎಸೆದ ಬಾಲ್​ ಹಲವರನ್ನು ಕೆರಳಿಸಿತು.

ಬೌನ್ಸರ್​ ಹಾಕಿದ ಜೋಸೆಫ್​, ಬಾಲ್​ ನೇರವಾಗಿ ಅರ್ಷದೀಪ್​ ಭುಜಕ್ಕೆ ಹೊಡೆಯುವಂತೆ ಎಸೆದಿದ್ದು ಅಕ್ಷರಶಃ ಕೆರಳಿಸಿತು. ವಿಪರೀತ ನೋವಿನಿಂದ ಬಲ ಕೊಟ್ಟು ಬ್ಯಾಟ್​ ಬೀಸಲು ಪರದಾಡುತ್ತಿದ್ದ ಸಿಂಗ್​ರನ್ನು ನೋಡಿ ಸ್ವತಃ ಟೀಮ್ ಇಂಡಿಯಾ ಕ್ಯಾಪ್ಟನ್​ ಡಗ್​ಔಟ್​ನಿಂದಲೇ ಹೊರಬರುವಂತೆ ಹೇಳಿದರು. ಪಂದ್ಯವನ್ನು ಅವರಿಗೆ ಬಿಟ್ಟುಕೊಡೋಣ ನೀವು ಬನ್ನಿ ಎಂದು ಸೂಚನೆ ನೀಡಿದರು. ಈ ದೃಶ್ಯವನ್ನು ಕಮೆಂಟರಿ ಬಾಕ್ಸ್​ನಲ್ಲಿ ಕುಳಿತು ಇದನ್ನು ಲೈವ್​ ನೋಡಿದ ಸುನಿಲ್ ಗವಾಸ್ಕರ್​ ಸಿಡಿಮಿಡಿಗೊಂಡಿದ್ದಾರೆ.

Also Read
ವಿಡಿಯೋ ಎಲ್ಲಿ? ಶೃಂಗೇರಿ ವಿಧಾನಸಭಾ ಕ್ಷೇತ್ರ ಮತಎಣಿಕೆ ಕೇಸ್​ನಲ್ಲಿ ಚುನಾವಣಾ ಆಯೋಗಕ್ಕೆ 'ಸುಪ್ರೀಂ' ಕ್ಲಾಸ್​ | Supreme Court
 Sunil Gavaskar

ಆತ ಅರ್ಷದೀಪ್​ಗೆ ಗುರಿಯಿಟ್ಟು ಬಾಲ್​ ಎಸೆಯುತ್ತಿದ್ದಾನೆ. ಅಲ್ಲ, ವಿಕೆಟ್​ ಇರೋದು ಎಲ್ಲಿ, ಚೆಂಡು ಹಾಕ್ತಿರೋದು ಎಲ್ಲಿಗೆ ಎಂದು ಸಿಟ್ಟಿನಿಂದ ಪ್ರಶ್ನಿಸಿದರು. ಮತ್ತೊಂದೆಡೆ, ಟಿ20 ಕ್ರಿಕೆಟ್​ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಒಂದು ತಂಡದ ಕ್ಯಾಪ್ಟನ್​ ಓವರ್​ಗಳು ಇನ್ನೂ ಇರುವಾಗಲೇ ಇನ್ನಿಂಗ್ಸ್​ ಅನ್ನು ಡಿಕ್ಲೇರ್​ ಮಾಡಿಕೊಂಡಿರುವುದು ಎಂಬುದು ಅಚ್ಚರಿಯ ಸಂಗತಿ. ಡಗ್​ಔಟ್​ನಲ್ಲಿ ನಿಂತು ಶ್ರೇಯಸ್​ ಅಯ್ಯರ್​ ಕೈಬೀಸಿ ಕರೆಯುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಪಂದ್ಯದ ವಿವರ

ಹೈದರಾಬಾದ್‌ನ ಉಪ್ಪಾಲ್​ ಸ್ಟೇಡಿಯಂನಲ್ಲಿ ನಡೆದ ನಾಲ್ಕನೇ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಭಾರತವನ್ನು 24 ರನ್‌ಗಳಿಂದ ಮಣಿಸಿ ಇದೀಗ ಸರಣಿಯನ್ನು 2-2 ಅಂತರದಲ್ಲಿ ಸಮಬಲಗೊಳಿಸಿದೆ. ಟಾಸ್​ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ವಿಂಡೀಸ್ ಕೇವಲ 3 ವಿಕೆಟ್​ ನಷ್ಟಕ್ಕೆ 247 ರನ್​ಗಳ ಬೃಹತ್ ಸ್ಕೋರ್ ಗಳಿಸಿತು. ಈ ಗುರಿಯನ್ನು ಬೆನ್ನಟ್ಟಿದ ಟೀಮ್ ಇಂಡಿಯಾ, ಪೈಪೋಟಿ ನೀಡುವಲ್ಲಿ ಸಂಪೂರ್ಣವಾಗಿ ಮುಗ್ಗರಿಸಿತು. ಸಂಜು ಸ್ಯಾಮ್ಸನ್​ (56 ರನ್, 23 ಎಸೆತ), ತಿಲಕ್​ ವರ್ಮಾ (43 ರನ್​, 25 ಎಸೆತ) ಬಿಟ್ಟರೆ ಉಳಿದ್ಯಾವ ಬ್ಯಾಟರ್​ ಕೂಡ ಹೆಚ್ಚು ರನ್​ ಗಳಿಸಲು ಸಾಧ್ಯವಾಗಲಿಲ್ಲ. ಈಗ ಕೊನೆಯ ಪಂದ್ಯ ಬಾಕಿ ಉಳಿದಿದ್ದು, ಬೆಂಗಳೂರಿನಲ್ಲಿ ನಡೆಯಲಿರುವ ಟಿ20 ಸರಣಿಯ ಅಂತಿಮ ಪಂದ್ಯದಲ್ಲಿ ಯಾರು ರೋಚಕ ಜಯ ಸಾಧಿಸಿ, ಸರಣಿ ಗೆಲ್ಲುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net