More

    ಬುದ್ಧನಿಂದ ಪ್ರತಿಯೊಬ್ಬರಿಗೂ ಆಧ್ಯಾತ್ಮಿಕ ಸ್ವಾವಲಂಬನೆ

    ಮೈಸೂರು: ಭಗವಾನ್ ಬುದ್ಧ ಬಂದ ನಂತರ ಪ್ರತಿಯೊಬ್ಬರಿಗೂ ಆಧ್ಯಾತ್ಮಿಕ ಸ್ವಾವಲಂಬನೆ ದೊರೆಯಿತು ಎಂದು ಮೈಸೂರು ವಿಶ್ವ ವಿದ್ಯಾಲಯದ ಇಂಗ್ಲಿಷ್ ವಿಭಾಗದ ನಿವೃತ್ತ ಮುಖ್ಯಸ್ಥ ಪ್ರೊ.ಡಿ.ಎ. ಶಂಕರ್ ಅಭಿಪ್ರಾಯಪಟ್ಟರು.

    ಮೈಸೂರು ವಿಶ್ವ ವಿದ್ಯಾಲಯದ ಡಾ.ಬಿ.ಆರ್. ಅಂಬೇಡ್ಕರ್ ಸಂಶೋಧನ ಹಾಗೂ ವಿಸ್ತರಣ ಕೇಂದ್ರದ ವತಿಯಿಂದ ಕೇಂದ್ರದ ಸಭಾಂಗಣದಲ್ಲಿ ಗುರುವಾರ ಬುದ್ಧ ಪೂರ್ಣಿಮೆ ಅಂಗವಾಗಿ ‘ಧಮ್ಮಪದ : ಜಾಗತಿಕ ಅನಿವಾರ್ಯ’ ವಿಷಯದ ಕುರಿತು ಹಮ್ಮಿಕೊಂಡಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಬುದ್ಧನಿಗಿಂತ ಮುಂಚೆ ಜಪ ತಪ, ಮಂತ್ರ ತಂತ್ರ ಎಲ್ಲವೂ ಗುರು ಮುಖೇನ ನಡೆಯುತಿತ್ತು. ಬುದ್ಧ ಬಂದ ನಂತರ ಜನರಿಗೆ ಆಧ್ಯಾತ್ಮಿಕ ಸ್ವಾವಲಂಬನೆ ದೊರೆಯಿತು. ನಿಮಗೆ ನೀವೇ ದೀಪವಾಗಬೇಕು, ಬೇರೆಯವರಲ್ಲಿ ಬೆಳಕು ಹುಡುಕಲು ಹೋಗಬೇಡಿ ಎಂಬುದು ಬುದ್ಧನ ಸಲಹೆಯಾಗಿದೆ. ದೇವರು, ಸ್ವರ್ಗ ವಿಚಾರಗಳು ಅನುಪಯುಕ್ತ. ಆ ಕಾರಣಕ್ಕಾಗಿ ಈ ವಿಚಾರಗಳ ಕುರಿತು ಬುದ್ಧ ಮಾತನಾಡಲು ಹೋಗಲಿಲ್ಲ ಎಂದರು.

    ನಾವು ಏನಾಗಿದ್ದೇವೋ ಅದು ನಮ್ಮ ಯೋಚನೆಗಳ ಫಲ. ನಮ್ಮ ಆಲೋಚನೆಗಳು ಸರಿ ಇರಬೇಕು. ಆಲೋಚನೆ ಸರಿ ಇರದೆ ಇದ್ದರೆ ನಡವಳಿಕೆ ಸರಿ ಇರುವುದಿಲ್ಲ, ನಡವಳಿಕೆ ಸರಿ ಇರದೆ ಇದ್ದರೆ ನೋವುಗಳು ಬರುತ್ತವೆ. ನಮ್ಮ ಆಲೋಚನೆಗಳು ಸರಿ ಇದ್ದಾಗ ಉಳಿದೆಲ್ಲವೂ ಸರಿಯಾಗಿರುತ್ತದೆ ಎಂಬ ಮಹತ್ವದ ಸಂದೇಶವನ್ನು ಬುದ್ಧ ಜಗತ್ತಿಗೆ ನೀಡಿದ್ದಾನೆ. ನೋವುಗಳನ್ನು ದೂರ ಮಾಡು ನಾವು ಮನಸ್ಸನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು ಎಂದು ಹೇಳಿದರು.

    ಶಂಕರಾಚಾರ್ಯರು ಹಿಂದು ಧರ್ಮವನ್ನು ಉದ್ಧಾರ ಮಾಡಿದರು. ಅದೇ ರೀತಿ ದೇಶದಲ್ಲಿ ಬೌದ್ಧ ಧರ್ಮವನ್ನು ಸಂವಿಧಾನಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಪುನರುತ್ಥಾನ ಮಾಡಿದರು. ಅಂಬೇಡ್ಕರ್ ಬೌದ್ಧ ಧರ್ಮ ಸ್ವೀಕರಿಸಿದ ನಂತರ ಬೌದ್ಧ ಧರ್ಮಕ್ಕೆ ದೇಶದಲ್ಲಿ ಹೊಸ ಶಕ್ತಿ ದೊರೆಯಿತು. ಬುದ್ಧ ಪುರಾಣ ಪುರುಷನಲ್ಲ, ಆತನ ಹುಟ್ಟಿನ ಬಗ್ಗೆಯೂ ಪಾವಡ ಇಲ್ಲ. ಈ ಕಾರಣಕ್ಕೆ ಅಂಬೇಡ್ಕರ್ ಅವರ ವೈಚಾರಿಕ ಮನಸ್ಸು ಬೌದ್ಧ ಧರ್ಮದೆಡೆಗೆ ಆಕರ್ಷಿತವಾಯಿತು ಎಂದರು.

    ತೃಷೆಯಿಂದ ಮುಕ್ತರಾಗಬೇಕು ಎಂದು ಬುದ್ಧ ಕರೆ ನೀಡಿದ. ತೃಷೆಯಿಂದ ಮುಕ್ತರಾದರೆ ನೋವಿನಿಂದ ಮುಕ್ತರಾಗಬಹುದು. ನೋವು ನಮ್ಮೊಳಗೆಯೇ ಇದೆ. ಆ ನೋವಿಗೆ ನಾವೇ ಪರಿಹಾರ ಕಂಡು ಹಿಡಿಯಬೇಕು. ಮನುಷ್ಯನ ಆಸೆಗಳನ್ನು ತಣಿಸಲು ಸಾಧ್ಯವಿಲ್ಲ. ಆಸೆಗಳನ್ನು ತಣಿಸಲು ಬುದ್ಧನ ಅಷ್ಟ ಮಾರ್ಗದಲ್ಲಿ ಸಾಗಬೇಕು ಎಂದು ಹೇಳಿದರು.

    ಬೈಲುಕುಪ್ಪೆಯ ಸೆರಾ ಜೆ ಮೊನಾಸ್ಟಿಕ್ ವಿಶ್ವವಿದ್ಯಾಲಯದ ಭಿಕ್ಕು ಜಂಪಾ ಗ್ಯಾಲ್‌ಸ್ಟೇನ್ ಕಾರ್ಯಕ್ರಮ ಉದ್ಘಾಟಿಸಿದರು. ವೇದಿಕೆಯಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಸಂಶೋಧನ ಹಾಗೂ ವಿಸ್ತರಣ ಕೇಂದ್ರದ ನಿರ್ದೇಶಕ ಪ್ರೊ.ಜೆ. ಸೋಮಶೇಖರ್, ಪ್ರಾಧ್ಯಾಪಕ ನರೇಂದ್ರ ಕುಮಾರ್, ಬೌದ್ಧ ಬಿಕ್ಕು ಸೋನಂ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts