More

    ವಾಹನ ವೇಗದ ಚಾಲನೆ ಅಪಾಯಕ್ಕೆ ಆಹ್ವಾನ

    ಚಿಕ್ಕಮಗಳೂರು: ವಾಹನ ಚಾಲನೆ ವೇಳೆ ಅತಿವೇಗಕ್ಕೆ ಅವಕಾಶ ನೀಡಬಾರದು. ಚಾಲನೆ ವೇಳೆ ಮೊಬೈಲ್ ಬಳಕೆ ಸಂಪೂರ್ಣ ನಿಷೇಧಿಸಬೇಕು. ರಸ್ತೆ ಬದಿಯ ಸೂಚನಾ ಫಲಕಗಳನ್ನು ಗಮನಿಸಿ ಪಾಲಿಸಬೇಕು ಎಂದು ಮೋಟಾರ್ ವಾಹನ ನಿರೀಕ್ಷಕ ಎಚ್.ಎಸ್.ಜಗದೀಶ್ ತಿಳಿಸಿದರು.

    ನಗರದ ತಾಲೂಕು ಕಚೇರಿ ಆವರಣದಲ್ಲಿ ಸಾರಿಗೆ ಇಲಾಖೆ, ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ, ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ, ಜೆಸಿಐ, ಬ್ರಹ್ಮಕುಮಾರೀಸ್, ಕನ್ನಡಸೇನೆ, ಲಯನ್ಸ್ ಕ್ಲಬ್, ವಿವೇಕ ಜಾಗೃತಿ ಬಳಗ ಸೇರಿ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಆಯೋಜಿಸಿದ್ದ 35ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
    ವಾಹನ ಚಾಲನೆ ವೇಳೆ ಸವಾರರು ಅಗತ್ಯ ಸಂದರ್ಭಗಳಲ್ಲಿ ಕಡ್ಡಾಯವಾಗಿ ಕೈಸನ್ನೆಗಳನ್ನು ತೋರಿಸುವುದು ಅಗತ್ಯ. ಪಾದಚಾರಿಗಳು ರಸ್ತೆ ದಾಟಲು ಕಡ್ಡಾಯವಾಗಿ ಜೀಬ್ರಾ ಕ್ರಾಸಿಂಗ್ ಬಳಸಬೇಕು. ನಿಗದಿಪಡಿಸಿರುವ ವೇಗದ ಮಿತಿಯನ್ನು ಮೀರಬಾರದು ಎಂದು ಹೇಳಿದರು.
    ದಿನನಿತ್ಯದ ಚಟುವಟಿಕೆಗಳಲ್ಲಿ ತೆರಳುವ ಮುನ್ನ ವಾಹನಕ್ಕೆ ಸಂಬಂಧಿಸಿದ ದಾಖಲೆಗಳನ್ನು ವಾಹನದಲ್ಲಿ ಇರಿಸಿಕೊಳ್ಳಬೇಕು. ದ್ವಿಚಕ್ರ ವಾಹನ ಚಾಲಕರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ವಾಹನ ಚಾಲನೆ ವೇಳೆ ಸಾರಿಗೆ ಇಲಾಖೆ ಕಾನೂನು ಉಲ್ಲಂಘನೆ ಆಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
    ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹವನ್ನು ಜಿಲ್ಲೆಯ ವಿವಿಧ ತಾಲೂಕು ಹಾಗೂ ಗ್ರಾಪಂ ವ್ಯಾಪ್ತಿಯಲ್ಲಿ ನಡೆಸಿ ಸಾರ್ವಜನಿಕರು, ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲಾಗಿದೆ. ಮೋಟಾರ್ ಬೈಕ್ ಬಳಸುವವರ ಸಂಖ್ಯೆಯೇ ಹೆಚ್ಚಿದೆ. ಯುವಜನತೆ ಕಿರದಾದ ರಸ್ತೆಗಳಲ್ಲೂ ಅತಿ ವೇಗವಾಗಿ ವಾಹನ ಚಾಲನೆ ಮಾಡುತ್ತಿರುವುದನ್ನು ಗಮನಿಸುತ್ತಿದ್ದೇವೆ. ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಅರಿವು ಮೂಡಿಸಲಾಗುತ್ತಿದೆ ಎಂದು ಪ್ರಾದೇಶಿಕ ಸಾರಿಗೆ ಇಲಾಖೆ ತಾಂತ್ರಿಕ ಸಹಾಯಕ ಸಂತೋಷ್ ಹೇಳಿದರು.
    ಬ್ರಹ್ಮಕುಮಾರೀಸ್ ಜಿಲ್ಲಾ ಸಂಚಾಲಕಿ ಭಾಗ್ಯಕ್ಕ, ವಿವೇಕ ಜಾಗೃತ ಬಳಗದ ರಾಜೀವ್, ಕನ್ನಡಸೇನೆ ಆಟೋ ಘಟಕದ ಅಧ್ಯಕ್ಷ ಜಯಪ್ರಕಾಶ್, ಅನುವೃತ ಸಮಿತಿಯ ಬನ್ಸಾರಿ, ಲಯನ್ಸ್ ಕ್ಲಬ್ ಅಧ್ಯಕ್ಷ ರಮೇಶ್, ವಂದೇ ಮಾತರಂ ಟ್ರಸ್ಟ್ ಅಧ್ಯಕ್ಷ ಪ್ರೀತೇಶ್, ಡಾ. ಅನಿಲ್‌ಕುಮಾರ್, ಆರ್‌ಟಿಒ ಪ್ರಭಾರ ಅಧೀಕ್ಷಕಿ ರಮ್ಯಾ, ಸಿಬ್ಬಂದಿ ಲೋಹಿತ್, ತೇಜಸ್, ವಿಜಯ್‌ಕುಮಾರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts