More

  ಬಿತ್ತನೆ ಬೀಜ ಮಸೂದೆ; ಕೃಷಿಕರ ಪರವೋ? ಕಂಪನಿಗಳಿಗೆ ವರವೋ? 

  ಕೇಂದ್ರ ಸರ್ಕಾರ ಈ ಸಲದ ಸಂಸತ್ ಅಧಿವೇಶನದಲ್ಲಿ ರಾಷ್ಟ್ರೀಯ ಬೀಜ ಮಸೂದೆ 2019 ಮಂಡಿಸಲಿದೆ. ಈ ಪ್ರಸ್ತಾವಿತ ಮಸೂದೆ 1966ರ ಬೀಜ ಕಾಯ್ದೆಯ ಸ್ಥಳವನ್ನು ತುಂಬಲಿದೆ. 2004ರಲ್ಲಿ ಪರಿಷ್ಕೃತ ಬೀಜ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಲು ಪ್ರಯತ್ನಿಸಲಾಗಿತ್ತಾದರೂ ಸಫಲವಾಗಿರಲಿಲ್ಲ. ಈಗ ಕೇಂದ್ರ ಸರ್ಕಾರ 2004ರ ಕರಡನ್ನು ಮತ್ತೆ ಪರಿಷ್ಕರಿಸಿ ಸಂಸತ್ತಿನಲ್ಲಿ ಮಂಡಿಸಲು ಸಿದ್ಧತೆ ನಡೆಸಿದೆ. ಪರಿಷ್ಕೃತ ಮಸೂದೆ ಬಗ್ಗೆ ಸಾಕಷ್ಟು ಪರ-ವಿರೋಧದ ಚರ್ಚೆಗಳಾಗುತ್ತಿವೆ. ಅಲ್ಲಲ್ಲಿ ವಿಚಾರ ಸಂಕಿರಣಗಳು, ರೈತ ಸಮಾವೇಶಗಳೂ ನಡೆಯುತ್ತಿವೆ. ಈ ವಿದ್ಯಮಾನಗಳ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ಇದು.

  ಕೃಷಿಕರಿಗೆ ಗುಣಮಟ್ಟದ ಬಿತ್ತನೆ ಬೀಜಗಳನ್ನು ಖಾತರಿಗೊಳಿಸುವ ನಿಟ್ಟಿನಲ್ಲಿ ಪರಿಷ್ಕೃತ ಬೀಜ ಕಾಯ್ದೆಯನ್ನು ಜಾರಿಗೊಳಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಪ್ರಸ್ತಾವಿತ ಮಸೂದೆ 1966ರ ಬೀಜ ಕಾಯ್ದೆಯ ಸ್ಥಾನ ತುಂಬಲಿದ್ದು, ಇದು ಗುಣಮಟ್ಟದ ಬೀಜಗಳ ಮಾರಾಟ, ರಫ್ತು, ಆಮದುಗಳನ್ನು ಹೇಗೆ ನಿಯಂತ್ರಿಸಲಿದೆ ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ಪ್ರಸ್ತುತ ಚಾಲ್ತಿಯಲ್ಲಿರುವ 1966ರ ಕಾಯ್ದೆ ಬಿತ್ತನೆಬೀಜಗಳ ಗುಣಮಟ್ಟದ ನಿಯಂತ್ರಣದ ಕೆಲಸ ಮಾಡುತ್ತಿದೆ. ಆದರೂ ಈ ಹೊಸ ಮಸೂದೆ ಏನು ಬದಲಾವಣೆ ತರಲಿದೆ ಎಂಬ ಪ್ರಶ್ನೆ ಎಲ್ಲರಲ್ಲೂ ಸಹಜವಾಗಿಯೇ ಇದೆ.

  ಬೀಜ ಮಸೂದೆ 1966ರ ಗಮನಾರ್ಹ ಅಂಶ: ಪ್ರಸಕ್ತ ಚಾಲ್ತಿಯಲ್ಲಿರುವ ಕಾನೂನು ಈಗಾಗಲೇ ಗುರುತಿಸಲ್ಪಟ್ಟಿರುವ ತಳಿಯ ಅಥವಾ ಮಾದರಿಯ ಬೀಜಗಳಿಗೆ ಮಾತ್ರವೇ ಅನ್ವಯವಾಗುತ್ತದೆ. ಇದಕ್ಕೆ ಸಂಬಂಧಿಸಿದ ಗುಣಮಟ್ಟಕ್ಕಷ್ಟೇ ಇದು ಅನ್ವಯವಾಗುತ್ತದೆ. ಈ ರೀತಿಯ ಬೀಜಗಳು ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರಲ್ ರಿಸರ್ಚ್ ಮತ್ತು ರಾಜ್ಯ ಕೃಷಿ ವಿಶ್ವವಿದ್ಯಾಲಯಗಳಂತಹ ಸರ್ಕಾರಿ ಸಂಸ್ಥೆಗಳಲ್ಲಿ ಮಾತ್ರ ಲಭ್ಯ.

  ಬಿತ್ತನೆ ಬೀಜ ಮಸೂದೆ; ಕೃಷಿಕರ ಪರವೋ? ಕಂಪನಿಗಳಿಗೆ ವರವೋ? ಅಲ್ಲದೆ, ಹಲವು ಪ್ರದೇಶಗಳಲ್ಲಿ ಮೂರು ವರ್ಷ ಅಥವಾ ಅದಕ್ಕೂ ಹೆಚ್ಚು ಕಾಲ ಪ್ರಯೋಗಕ್ಕೆ ಒಳಗಾಗಿ ನಂತರ ಬೆಳೆಗೆ ಅಧಿಕೃತವಾಗಿ ಬಿಡುಗಡೆಯಾದವುಗಳ ಇಳುವರಿ ಪ್ರಮಾಣ, ರೋಗ ಮತ್ತು ಕೀಟಾಣು ನಿರೋಧಕ ಶಕ್ತಿ, ಗುಣಮಟ್ಟ ಮತ್ತಿತರ ಅಂಶಗಳ ಬಗ್ಗೆ ಗಮನಹರಿಸಲಾಗುತ್ತದೆ. ಗುರುತಿಸಲ್ಪಟ್ಟ ವಿವಿಗಳಲ್ಲಿ ಉತ್ಪಾದಿಸಿದ ಪ್ರಮಾಣೀಕೃತ ಬೀಜಗಳಿಗೆ ಮಾತ್ರ 1966ರ ಬೀಜ ಕಾಯ್ದೆ ಅನ್ವಯವಾಗುತ್ತದೆ.

  ರಾಷ್ಟ್ರೀಯ ಬೀಜ ಮಸೂದೆ 2019ರ ಅಂಶ: ಇದರ ಪ್ರಕಾರ ಯಾವುದೇ ರೀತಿಯ ಅಥವಾ ಮಾದರಿಯ ಬೀಜವಾದರೂ ಮಾರಾಟ ಮಾಡಬೇಕು ಎಂದಾದರೆ ಕಡ್ಡಾಯವಾಗಿ ನೋಂದಣಿ ಮಾಡಿಸಿರಬೇಕು. ಕರಡು ಮಸೂದೆಯ ಸೆಕ್ಷನ್ 14ರ ಪ್ರಕಾರ, ಯಾವುದೇ ರೀತಿ ಅಥವಾ ಮಾದರಿಯ ಬೀಜಗಳಿರಬಹುದು, ಅವುಗಳನ್ನು ಯಾವುದೇ ವ್ಯಕ್ತಿ ಬಿತ್ತನೆಗೋ ಮಾರುವುದಕ್ಕೋ ಮುಂದಾದರೆ ಕಡ್ಡಾಯವಾಗಿ ಆ ಬೀಜವನ್ನು ನೋಂದಣಿ ಮಾಡಿಸಿರಬೇಕು.

  ಇನ್ನೊಂದು ರೀತಿಯಲ್ಲಿ ಹೇಳಬೇಕು ಎಂದರೆ ಹೈಬ್ರಿಡ್ ಅಥವಾ ಖಾಸಗಿ ಕಂಪನಿಗಳು ಮಾರಾಟ ಮಾಡುವ ಬೀಜಗಳನ್ನೂ ನೋಂದಣಿ ಮಾಡಿಸಿರಬೇಕು. ಅವರು ಮಾರಾಟ ಮಾಡುವ ಬೀಜಗಳು ಸೂಚಿತವಾಗಿರುವ ಕನಿಷ್ಠ ಮಾನದಂಡಗಳಿಗೆ ಅನುಗುಣವಾಗಿರಲೇಬೇಕು. ಕನಿಷ್ಠ ಮಾನದಂಡಗಳು ಎಂದರೆ ಜರ್ವಿುನೇಶನ್, ವಂಶವಾಹಿ, ಭೌತಿಕವಾಗಿ ಪರಿಶುದ್ಧವಾಗಿರಬೇಕು.

  ನಿಶ್ಚಿತ ಮಾನದಂಡ ಪ್ರಕಾರ ನಿರೀಕ್ಷಿತ ಪ್ರಗತಿಯನ್ನು ಆ ಬೀಜಗಳು ನಿರ್ದಿಷ್ಟ ಪರಿಸ್ಥಿತಿಯಲ್ಲಿ ತೋರಿಸಬೇಕು. ಒಂದೊಮ್ಮೆ ಆ ರೀತಿ ನೋಂದಾಯಿತವಾಗಿರುವ ಮಾದರಿಯ ಅಥವಾ ರೀತಿಯ ಬೀಜಗಳು ನಿರೀಕ್ಷಿತ ಪ್ರಗತಿ ತೋರಿಸುವಲ್ಲಿ ವಿಫಲವಾದರೆ ಆಗ ಕೃಷಿಕರು ಆ ಬೀಜೋತ್ಪಾದಕ, ಡೀಲರ್, ವಿತರಕ ಅಥವಾ ವ್ಯಾಪಾರಿ ಬಳಿ 1986ರ ಗ್ರಾಹಕ ರಕ್ಷಣಾ ಕಾಯ್ದೆ ಪ್ರಕಾರ ಪರಿಹಾರ ಕೇಳಬಹುದು.

  ಈ ಮಸೂದೆ ಈಗ ಬೇಕಿತ್ತಾ?: ಹಸಿರು ಕ್ರಾಂತಿಯ ಸಂದರ್ಭದಲ್ಲಿ 1966ರಲ್ಲಿ ಬೀಜ ಕಾಯ್ದೆ ಜಾರಿಗೊಂಡಿತ್ತು. ಆಗ ಯಾವುದೇ ಖಾಸಗಿ ಕಂಪನಿಗಳು ಬೀಜೋತ್ಪಾದನೆ, ಸಂಗ್ರಹ, ಮಾರಾಟ ಮಾಡುತ್ತಿರಲಿಲ್ಲ. ಆ ಕಾಲದಲ್ಲಿ ಎಲ್ಲ ಅತ್ಯುತ್ತಮ ಇಳುವರಿ ಕೊಡುವ ಗೋಧಿ, ಭತ್ತ ಮತ್ತಿತರ ದವಸ ಧಾನ್ಯಗಳೆಲ್ಲವೂ ಐಸಿಎಆರ್ ಸಂಸ್ಥೆ ಮತ್ತು ರಾಜ್ಯ ಕೃಷಿ ವಿವಿಗಳ ಮೂಲಕವೇ ಪ್ರಮಾಣೀಕೃತ ಆಗಿರುತ್ತಿತ್ತು. ಇತ್ತೀಚಿನ ವರ್ಷಗಳ ತನಕವೂ ಈ ಏಕಸ್ವಾಮ್ಯ ಮುಂದವರಿದಿತ್ತು.

  ಬಿತ್ತನೆ ಬೀಜ ಮಸೂದೆ; ಕೃಷಿಕರ ಪರವೋ? ಕಂಪನಿಗಳಿಗೆ ವರವೋ? ಆದರೆ, ಕಳೆದ ಮೂರು ದಶಕಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ದೇಶ ಉದಾರೀಕರಣಕ್ಕೆ ತೆರೆದುಕೊಂಡ ನಂತರ ಖಾಸಗಿ ಕಂಪನಿಗಳು, ಬಹುರಾಷ್ಟ್ರೀಯ ಕಂಪನಿಗಳು ಕೂಡ ಕೃಷಿ ಕ್ಷೇತ್ರವನ್ನು ಪ್ರವೇಶಿಸಿವೆ. ಹೈಬ್ರಿಡ್ ಬೀಜಗಳನ್ನು ಮಾರಾಟ ಮಾಡುತ್ತಿವೆ. ಕುಲಾಂತರಿ ತಳಿಗಳ ಪ್ರವೇಶವೂ ಆಗಿದೆ. ಇವುಗಳನ್ನು ನಿಯಂತ್ರಿಸಲು, ನಿಭಾಯಿಸಲು ಹಳೆಯ ಕಾನೂನು ಶಕ್ತವಲ್ಲ ಎಂಬುದು ಸರ್ಕಾರ ಮತ್ತು ಪರಿಣತರ ಅಭಿಪ್ರಾಯ. ಅದರಂತೆ, 2004ರಲ್ಲೇ ರಾಷ್ಟ್ರೀಯ ಬೀಜ ಮಸೂದೆಯ ಕರಡು ಸಿದ್ಧವಾಗಿತ್ತು. ಒಮ್ಮೆ ಲೋಕಸಭೆಯಲ್ಲಿ ಮಂಡನೆಯೂ ಆಗಿತ್ತು. ಆದರೆ ಅಂಗೀಕಾರವಾಗಿರಲಿಲ್ಲ.

  ಖಾಸಗಿ ಬೀಜ ಉತ್ಪಾದಕ ವಲಯ ಏನೆನ್ನುತ್ತದೆ?

  ಬೀಜೋತ್ಪಾದಕ ಕಂಪನಿಗಳು ಹೈಬ್ರಿಡ್ ಸೇರಿ ಎಲ್ಲ ವೆರೈಟಿಗಳ ಕಡ್ಡಾಯ ನೋಂದಣಿಯ ಅಂಶವನ್ನು ಸ್ವಾಗತಿಸಿವೆ. ಇದಕ್ಕಾಗಿ ನಿಗದಿತ ಮಾನದಂಡಗಳನ್ನು ಅಳವಡಿಸಿಕೊಂಡದ್ದು ಕೂಡ ಎಲ್ಲರ ಹಿತದೃಷ್ಟಿಯಿಂದ ಸಾಧುವಾಗಿರುವ ಅಂಶ ಎಂದು ಪರಿಗಣಿಸಿವೆ. ನಿಜವಾದ ಕಂಪನಿಗಳನ್ನು ಹೊರತುಪಡಿಸಿ ರಾತ್ರೋರಾತ್ರಿ ಉದ್ಭವಿಸಿ ನಕಲಿ ಬೀಜ ಮಾರಿ ಕಣ್ಮರೆಯಾಗುವ ಕಂಪನಿಗಳಿಗೆ ಇದು ಮಾರಕವಾಗಲಿದೆ. ಆದಾಗ್ಯೂ, ನೋಂದಣಿ ಪ್ರಕ್ರಿಯೆಗೆ ಒಂದು ಸಮಯ ಮಿತಿ ಅಳವಡಿಸಬೇಕಾದ ಅವಶ್ಯಕತೆ ಇದೆ ಎಂದು ಅನೇಕ ಕಂಪನಿಗಳು ಅಭಿಪ್ರಾಯಪಟ್ಟಿವೆ.

  ಸರ್ಕಾರಿ ವ್ಯವಸ್ಥೆಯಲ್ಲಿನ ಲೋಪದಿಂದ ವಿಳಂಬವಾದರೆ ಬೀಜೋತ್ಪಾದನೆ ವಲಯಕ್ಕೆ ಹೆಚ್ಚಿನ ಹಾನಿಯಾಗುತ್ತದೆ ಎಂಬ ಬಗ್ಗೆ ಸರ್ಕಾರದ ಗಮನ ಸೆಳೆದಿವೆ. ಇದಲ್ಲದೆ, ಬೀಜ ಮಾರಾಟ ದರದ ಬಗ್ಗೆಯೂ ಇಂಡಸ್ಟ್ರಿಯಲ್ಲಿ ಆಕ್ಷೇಪಗಳಿವೆ. ಇದಕ್ಕೆ ಸಂಬಂಧಿಸಿದ ನಿಯಂತ್ರಣ, ಏಕಸ್ವಾಮ್ಯ ಮುಂತಾದ ವಿಚಾರಗಳು ಈಗ ಚರ್ಚೆಗೆ ಒಳಗಾಗುತ್ತಿವೆ. ಮಾರಾಟ ದರ ನಿಗದಿಪಡಿಸುವಲ್ಲಿ ಸರ್ಕಾರವೂ ತುಂಬಾ ಎಚ್ಚರಿಕೆಯ ಹೆಜ್ಜೆಗಳನ್ನು ಇರಿಸುತ್ತಿದೆ.

  ಈಗ ಖಾಸಗಿಯವರ ನಿಯಂತ್ರಣ ಇಲ್ಲವೆ?

  ಪ್ರಸ್ತುತ ಇರುವ ಬೀಜ ಕಾಯ್ದೆ ಈಗಾಗಲೇ ಹೇಳಿದಂತೆ ಅಧಿಸೂಚನೆ ಪಟ್ಟಿಯಲ್ಲಿರುವ ವೆರೈಟಿಗಳಿಗೆ ಸೀಮಿತ. ಅದೇ ರೀತಿ, ಒಂದು ಮಾದರಿ ಅಥವಾ ಹೈಬ್ರಿಡ್ ಅಧಿಸೂಚನೆ ಪಟ್ಟಿಯಲ್ಲಿ ಇಲ್ಲ ಎಂದರೆ ಅದರ ಬೀಜಗಳನ್ನು ಪ್ರಮಾಣೀಕರಿಸಲಾಗದು. ಬಹುತೇಕ ಖಾಸಗಿ ಹೈಬ್ರಿಡ್ ಬೀಜಗಳನ್ನು ನಮ್ಮ ದೇಶದಲ್ಲಿ ಅಧಿಕೃತವಾಗಿ ‘ಬಿಡುಗಡೆ’ ಮಾಡಲಾಗಿಲ್ಲ. ಅಥವಾ ಅವುಗಳನ್ನು ‘ಗುರುತಿಸಲಾಗಿಲ್ಲ’ ಅಥವಾ ‘ಪ್ರಮಾಣೀಕರಿಸಲಾಗಿಲ್ಲ’. ಈ ರೀತಿ ಬೀಜಗಳನ್ನು ಕಂಪನಿಗಳು ನಿಜವಾದ ಲೇಬಲ್ ಹಚ್ಚದೇ, ಕನಿಷ್ಠ ಜರ್ವಿುನೇಷನ್ ಮಾಡಿರುವುದಾಗಿ ಹೇಳಿ ಮಾರಾಟ ಮಾಡುತ್ತಿವೆ.

  ಬಿತ್ತನೆ ಮಾಡಿರುವ ಬೀಜಗಳಲ್ಲಿ ಕನಿಷ್ಠ ಶೇಕಡ 75-80ರಷ್ಟು ಬೀಜಗಳು ಮೊಳಕೆಯೊಡೆಯುತ್ತವೆ ಎಂಬ ಭರವಸೆ ನೀಡುವುದೇ ಕನಿಷ್ಠ ಜರ್ವಿುನೇಷನ್. ಅವುಗಳ ವಂಶವಾಹಿ ಪರಿಶುದ್ಧತೆಯನ್ನು ಅರ್ಥಾತ್ ನಿಜವಾದ ತಳಿ ಎಂಬುದನ್ನು ಈಗ ಪ್ರಮಾಣೀಕರಿಸಲಾಗುತ್ತಿಲ್ಲ. ಕಲಬೆರಕೆ ಆಗಿವೆಯೋ ಎಂಬುದೂ ಗೊತ್ತಿರುವುದಿಲ್ಲ. ಭೌತಿಕ ಪರಿಶುದ್ಧತೆ ಎಂದರೆ ಬೇರೆ ಬೆಳೆ, ಬೀಜಗಳಿಂದ ಈ ಬೀಜಗಳಿಗೆ ಹಾನಿಯಾಗಿದೆಯೇ ಎಂಬ ಅಂಶವೂ ಪರಿಶೀಲನೆ ಆಗಿರುವುದಿಲ್ಲ.

  ಬಾಳೆ ಕೃಷಿಯಲ್ಲೂ ಟಿಶ್ಯೂ ಕಲ್ಚರ್

  ದೇಶದ ಬಾಳೆ ಕೃಷಿಯನ್ನು ಗಮನಿಸಿದರೆ, 1990ರ ದಶಕದ ನಂತರದಲ್ಲಿ ಜೈನ್ ಇರಿಗೇಷನ್ ಮುಂತಾದ ಖಾಸಗಿ ಕಂಪನಿಗಳು ತೋಟಗಾರಿಕೆಗೆ ಪೂರಕವಾಗಿ ನೀರಾವರಿ ಮತ್ತು ಇತರ ಟೆಕ್ನಾಲಜಿಯನ್ನು ಒದಗಿಸಲು ಆರಂಭಿಸಿದ ಬಳಿಕ ಟಿಶ್ಯೂ ಕಲ್ಚರ್ ಹೆಚ್ಚಾಯಿತು. ಇದರ ನೈಜ ಉತ್ಪಾದನೆಯ ಪ್ರಮಾಣವೂ ಹೆಚ್ಚಾಯಿತು. ಅಲ್ಲದೆ, ವಾಣಿಜ್ಯ ಕೃಷಿಯಾಗಿ ಬಾಳೆ ಹೆಚ್ಚು ಪ್ರವರ್ಧಮಾನಕ್ಕೆ ಬಂತು. ಇದಕ್ಕೆ ಯಾವುದೇ ಅಡೆತಡೆ ಇರಲಿಲ್ಲ.

  ಪ್ರಸ್ತಾವಿತ ಮಸೂದೆ ಹೇಗೆ ಭಿನ್ನ?

  ಅಧಿಸೂಚಿತ ಬೀಜ ಮಾದರಿ/ತಳಿಗಳ ಪರಿಕಲ್ಪನೆಯಿಂದ ದೂರ ಇರುವ ಈ ಮಸೂದೆ, ಎಲ್ಲ ವೆರೈಟಿಗಳ ಕಡ್ಡಾಯ ನೋಂದಣಿಯನ್ನು ಬಯಸುತ್ತದೆ. ಖಾಸಗಿ ಹೈಬ್ರಿಡ್ ಬೀಜಗಳಿರಲಿ ಅಥವಾ ಅಧಿಕೃತವಾಗಿ ಬಿಡುಗಡೆ ಮಾಡಿದ ಅಥವಾ ನಿಜವಾದ ಲೇಬಲ್ ಹಚ್ಚಿದ ಬೀಜಗಳಿರಲಿ ಇವೆಲ್ಲವೂ ತನ್ನಿಂತಾನೇ ಈ ಮಸೂದೆಯ ವ್ಯಾಪ್ತಿಯೊಳಗೆ ಬಂದು ಬಿಡುತ್ತವೆ. 2006ರಲ್ಲಿ ಸರ್ಕಾರ ಜಾರಿಗೊಳಿಸಿದ ಬಿತ್ತನೆ ಬೀಜ ನಿಯಂತ್ರಣ ತಿದ್ದುಪಡಿ ಆದೇಶವನ್ನು ಇಲ್ಲಿ ನೆನಪಿಸಿಕೊಳ್ಳುವುದು ಸೂಕ್ತ. ಈ ಆದೇಶವನ್ನು ಸರ್ಕಾರ ಅಗತ್ಯ ವಸ್ತುಗಳ ಕಾಯ್ದೆಯಡಿ ಜಾರಿಗೊಳಿಸಿತ್ತು. ಹೊಸ ಪ್ರಸ್ತಾವಿತ ಮಸೂದೆಯಲ್ಲಿ ಇವೆಲ್ಲವೂ ಅಂತರ್ಗತವಾಗಿವೆ.

  ಈ ಮಸೂದೆಯಲ್ಲಿ ಕಂಪನಿಗಳ ಹಿತ ಕಾಯುವ ಹುನ್ನಾರವಿದೆ. ಬೀಜ ಸ್ವಾವಲಂಬನೆ ಅಂಶವೇ ಇಲ್ಲ. ಫೌಂಡೇಷನ್ ಸೀಡ್​ಗಳನ್ನು ನಾಶ ಮಾಡುವ ಹುನ್ನಾರ ಬೀಜ ಬ್ಯಾಂಕ್ ಪರಿಕಲ್ಪನೆಯಲ್ಲಿ ಅಡಗಿದೆ. ಮೂಲ ಬೀಜಗಳು ಇಲ್ಲದೇ ಹೋದರೆ ಹೊಸ ಬೀಜಗಳನ್ನು, ತಳಿಗಳನ್ನು ಅಭಿವೃದ್ಧಿ ಪಡಿಸಲಾಗದು. ಚೀನಾ ಕೂಡ ಕಂಪನಿಗಳ ಲಾಬಿಗೆ ಮಣಿಯದೆ ರೈತರ ಹಿತ ಕಾಯುತ್ತಿದೆ. ನಮ್ಮ ಸರ್ಕಾರಕ್ಕೆ ಏನಾಗಿದೆ? ಮಸೂದೆಗೆ ಸೇರಿಸಬೇಕಾದ ಅಂಶಗಳನ್ನು ರೈತರೇ ಸಿದ್ಧಪಡಿಸಿಕೊಡುತ್ತೇವೆ. ಅದನ್ನು ಸರ್ಕಾರ ಸ್ವೀಕರಿಸಬೇಕು.

  | ಮಾರುತಿ ಮಾನ್ಪಡೆ ಉಪಾಧ್ಯಕ್ಷರು, ಕರ್ನಾಟಕ ಪ್ರಾಂತ ರೈತ ಸಂಘ

  ವಿದೇಶಿ ಕಂಪನಿಗಳು ನಮ್ಮ ದೇಶದ ಬೀಜಗಳನ್ನು ಕದ್ದೊಯ್ದು ಅದಕ್ಕೆ ಬೇರೆ ರೂಪ ಕೊಟ್ಟೋ ಅಥವಾ ಅದನ್ನೇ ತಮ್ಮದೆಂದು ಹೇಳಿ ಇಲ್ಲಿ ಮಾರುವ ಪ್ರವೃತ್ತಿ ಹೆಚ್ಚಾಗಿದೆ. ಇದರಿಂದ ನಮ್ಮ ದೇಶದ ಮೂಲ ತಳಿ ಅಥವಾ ಬೀಜಗಳು ನಾಶದ ಹಾದಿಯಲ್ಲಿವೆ. 70 ವರ್ಷಗಳಲ್ಲಿ ಕೃಷಿ ಕ್ಷೇತ್ರ ಅವನತಿಯ ಹಾದಿ ಹಿಡಿಯುವುದಕ್ಕೂ ಇದೇ ಕಾರಣ. ನಮ್ಮದೊಂದೇ ರಾಜ್ಯದಲ್ಲಿ ಭತ್ತದ, ಗೋಧಿಯ ಸಾವಿರಾರು ತಳಿಗಳಿವೆ. ದೇಶಾದ್ಯಂತ ಇನ್ನೆಷ್ಟಿರಬಹುದು! ಇವುಗಳ ಮೂಲ ಬೀಜ ರಕ್ಷಣೆ ಆಗಬೇಕಾದರೆ ರಾಷ್ಟ್ರೀಯ ಬೀಜ ನಿಗಮದ ಸ್ಥಾಪನೆ ಅವಶ್ಯ. ಅದಕ್ಕೆ ಅಗತ್ಯ ಕಾಯ್ದೆ ತರಬೇಕಾದ್ದೂ ಅವಶ್ಯ. ಹಾಗಾಗಿ ಈ ಮಸೂದೆ ಸಿದ್ಧವಾಗಿದೆ. ಇಲ್ಲಿ ರೈತ ಹಿತ, ದೇಶದ ಹಿತ, ಕೃಷಿ ಕ್ಷೇತ್ರದ ಹಿತ ಎಲ್ಲವನ್ನೂ ಗಮನಿಸಲಾಗುತ್ತಿದೆ. ಇದು ಕೃಷಿ ಕ್ಷೇತ್ರದ ಪುನರುತ್ಥಾನದ ವಕ್ಷಿುಸೂದೆ.

  | ಶಂಕರಗೌಡ ಪಾಟೀಲ ರಾಷ್ಟ್ರೀಯ ಉಪಾಧ್ಯಕ್ಷರು, ಬಿಜೆಪಿ ಕಿಸಾನ್ ಮೋರ್ಚಾ 

  | ಉಮೇಶ್​ಕುಮಾರ್ ಶಿಮ್ಲಡ್ಕ 

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts