More

    ಮಲೆ ಮಹದೇಶ್ವರಸ್ವಾಮಿಗೆ ವಿಶೇಷ ಪೂಜೆ


    ಚಾಮರಾಜನಗರ: ಹನೂರಿನ ಮಲೆಮಹದೇಶ್ವರ ಬೆಟ್ಟದ ದೇಗುಲದಲ್ಲಿ ಬುಧವಾರ ಅಕ್ಷತ್ತದಗಿ ಅಮಾವಾಸ್ಯೆ ಅಂಗವಾಗಿ ಮಾದಪ್ಪನಿಗೆ ವಿಶೇಷ ಪೂಜೆ ನೆರವೇರಿತು. ಬೆಳಗ್ಗೆ ತುಂತುರು ಮಳೆ ನಡುವೆಯೂ ಸಾವಿರಾರು ಭಕ್ತರು ಪೂಜೆ ಸಲ್ಲಿಸಿ ದೇವರ ದರ್ಶನ ಪಡೆದರು.


    ದೇಗುಲವನ್ನು ವಿವಿಧ ಪುಷ್ಪ ಹಾಗೂ ತಳಿರು-ತೋರಣಗಳಿಂದ ಸಿಂಗಾರ, ಗೋಪುರವನ್ನು ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುವಂತೆ ಮಾಡಲಾಗಿತ್ತು. ಬೇಡಗಂಪಣ ಸರದಿ ಅರ್ಚಕರಿಂದ ದೇವರಿಗೆ ಅಮಾವಾಸ್ಯೆ ವಿಶೇಷ ಪೂಜೆ ನಡೆಯಿತು. ಬೆಳಗ್ಗೆ 6.30 ರಿಂದ ಸುಮಾರು ಒಂದು ತಾಸು ತುಂತುರು ಮಳೆಯಾಯಿತು. ಈ ನಡುವೆಯೂ ಭಕ್ತರು ಉತ್ಸಾವಾದಿ ಸೇವೆ, ಉರುಳು ಸೇವೆ ಹಾಗೂ ಪೂಜಾ ಕೈಂಕರ್ಯಗಳಲ್ಲಿ ಭಾಗಿಯಾದರು.


    ಅಮಾವಾಸ್ಯೆ ವಿಶೇಷ ಪೂಜೆ: ಬೆಳಗಿನ ಜಾವ 3 ಗಂಟೆಯಿಂದ 6.30ರವರೆಗೆ ಸ್ವಾಮಿಗೆ ಪ್ರಥಮ ಹಾಗೂ ದ್ವಿತೀಯ ವಿಶೇಷ ಪೂಜೆಯನ್ನು ನೆರವೇರಿಸಲಾಯಿತು. ಉಪವಾಸವಿದ್ದ ಬೇಡಗಂಪಣ ಸರದಿ ಅರ್ಚಕರು ಸತ್ತಿಗೆ, ಸೂರಿಪಾನಿ, ಛತ್ರಿ ಚಾಮರ ಹಾಗೂ ವಾದ್ಯಮೇಳದೊಂದಿಗೆ ದೇಗುಲ ಸಮೀಪದ ನಂದನವನದ ಮಜ್ಜನ ಬಾವಿಗೆ ತೆರಳಿ ಆಗ್ರೋದಕ ಹಾಗೂ ಬಾಯಿಗೆ ಬಟ್ಟೆ ಕಟ್ಟಿಕೊಂಡು ಕರೆದ ಹಾಲನ್ನು ಮೆರವಣಿಗೆಯ ಮೂಲಕ ದೇಗುಲಕ್ಕೆ ತಂದರು. ಸ್ವಾಮಿಗೆ ಸಂಕಲ್ಪಾಧಿ, ಗಣಪತಿ ಪೂಜೆ, ಪಂಚಕಳಸ ಪೂಜೆ, ಏಕವಾರು ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ಎಳನೀರು, ಜೇನುತುಪ್ಪ, ಮೊಸರು, ಸಕ್ಕರೆ, ಖರ್ಜೂರ, ದ್ರಾಕ್ಷಿಯ ಮೂಲಕ ಹಾಲಿನ ಅಭಿಷೇಕ ನೆರವೇರಿಸಿದರು.


    ಬಳಿಕ 2ನೇ ಅಭಿಷೇಕದ ವಿಶೇಷ ಪೂಜೆಯಲ್ಲಿ ಮಾದಪ್ಪನಿಗೆ ಅಭಿಷೇಕ ಅರ್ಚನೆ, ಏಕವಾರು ರುದ್ರಾಭಿಷೇಕ, ಸಂಕಲ್ಪ ಬಿಲ್ವಾರ್ಚನೆ, ನವರತ್ನ ಕಿರೀಟಧಾರಣೆ, ಧೂಪದಾರತಿ ಹಾಗೂ ಮಹಾ ಮಂಗಳಾರತಿ ಬೆಳಗಿಸುವುದರ ಮೂಲಕ ಅಮಾವಾಸ್ಯೆ ಪೂಜೆಯನ್ನು ನೆರವೇರಿಸಲಾಯಿತು. ಬಳಿಕ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ನೀಡಲಾಯಿತು. ಭಕ್ತರು ಸರದಿ ಸಾಲಿನಲ್ಲಿ ತೆರಳಿ ದೇವರ ದರ್ಶನ ಪಡೆದರು. ಕೆಲವರು 500 ರೂ. ಟಿಕೆಟ್ ಖರೀದಿಸಿ ರಾಜಗೋಪುರದ ವಿಶೇಷ ಕೌಂಟರ್ ಮೂಲಕ ತೆರಳಿ ದರ್ಶನ ಪಡೆದರು.


    ಉತ್ಸವದಲ್ಲಿ ಭಾಗಿ: ಮಾದಪ್ಪನ ಭಕ್ತರು ಹುಲಿವಾಹನ, ರುದ್ರಾಕ್ಷಿವಾಹನ, ಬಸವ ವಾಹನವನ್ನು ದೇಗುಲದ ಸುತ್ತ ಪ್ರದಕ್ಷಿಣೆ ಹಾಕಿಸುವುದರ ಮೂಲಕ ಉತ್ಸವದಲ್ಲಿ ಪಾಲ್ಗೊಂಡಿದ್ದರು. ಈ ಉತ್ಸವಗಳು ಬೆಳಗ್ಗೆಯಿಂದ ಸಂಜೆಯವರೆಗೆ ಜರುಗಿತು. ಈ ವೇಳೆ ಹರಕೆ ಹೊತ್ತ ಭಕ್ತರು ದಂಡಿನ ಕೋಲನ್ನು ಹೊತ್ತು ಉತ್ಸವಮೂರ್ತಿಗಳಿಗೆ ಧನ, ಧಾನ್ಯ ಸೇರಿದಂತೆ ಇನ್ನಿತರ ವಸ್ತುಗಳನ್ನು ಎಸೆದು ದೇವರ ಕೃಪೆಗೆ ಪಾತ್ರರಾದರು. ಉಘೇ ಮಾದಪ್ಪ ಉಘೇ.. ಜೈ ಮಹತ್ ಮಲೆಯಾ ಎಂಬಿತ್ಯಾದಿ ಘೋಷಣೆಗಳನ್ನು ಕೂಗಿ ಭಕ್ತಿ ಮೆರೆದರು.


    ಹರಕೆ ಹೊತ್ತ ಭಕ್ತರು ಮುಡಿಸೇವೆ, ಉರುಳುಸೇವೆ, ಪಂಜಿನಸೇವೆ ಹಾಗೂ ರಜಾ ಹೊಡೆಯುವ ಸೇವೆಯನ್ನು ಕೈಗೊಂಡು ಹರಕೆ ತೀರಿಸಿದರು. ಚಾಮರಾಜನಗರ, ಮೈಸೂರು, ಬೆಂಗಳೂರು, ಬಿಡದಿ, ರಾಮನಗರ, ಕನಕಪುರ, ಚನ್ನಪಟ್ಟಣ, ಮದ್ದೂರು, ಮಳವಳ್ಳಿ ಹಾಗೂ ಮಂಡ್ಯದಿಂದ ಹೆಚ್ಚಿನ ಭಕ್ತರು ಆಗಮಿಸಿದ್ದರು. ‘ಶಕ್ತಿ’ ಯೋಜನೆಯ ಪರಿಣಾಮ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಶ್ರೀ ಮಲೆಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಅನ್ನದಾಸೋಹ, ಕುಡಿಯುವ ನೀರು, ಇತರ ಅಗತ್ಯ ಮೂಲಸೌಕರ್ಯ ಒದಗಿಸಲಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts