More

    ಮೇಲುಕೋಟೆಯಲ್ಲಿ ವಿಶೇಷ ಪೂಜಾ ಕೈಂಕರ್ಯಗಳು

    ಮೇಲುಕೋಟೆ: ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ಸೋಮವಾರ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ನಡೆದ ಹಿನ್ನೆಲೆಯಲ್ಲಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲಿ, ಭಾರತದಲ್ಲಿ ರಾಮರಾಜ್ಯ ಸ್ಥಾಪನೆಯಾಗಲಿ ಎಂದು ಪ್ರಾರ್ಥಿಸಿ ಮೇಲುಕೋಟೆ ಪುರಾತನ ಪಟ್ಟಾಭಿರಾಮನ ಸನ್ನಿಧಿಯಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ವೈಭವದಿಂದ ನೆರವೇರಿತು.

    ರಾಮಾನುಜಾಚಾರ್ಯರಿಂದ ಪೂಜಿಸಲ್ಪಟ್ಟು ನಂತರ ಕಾಲನ ಮಹಿಮೆಗೆ ತುತ್ತಾಗಿ ಸುಮಾರು 800 ವರ್ಷಗಳ ಹಿಂದೆ ಮತ್ತೆ ಜೀರ್ಣೋದ್ಧಾರಗೊಂಡ ಪಟ್ಟಾಭಿರಾಮನ ಸನ್ನಿಧಿ ಮತ್ತೆ ಶಿಥಿಲಾವಸ್ಥೆ ತಲುಪಿ ದಶಗಳ ಹಿಂದೆ ಜೀರ್ಣೋದ್ಧಾರಗೊಂಡಿತ್ತು. ಇಂತಹ ಮಹತ್ವದ ರಾಮನ ಸನ್ನಿಧಿಯಲ್ಲಿ ಸಡಗರ ಸಂಭ್ರಮದಿಂದ ವಿಶೇಷ ಪೂಜಾ ಕೈಂಕರ್ಯಗಳು ನಡೆದವು. ಈ ವಿಶೇಷದ ಅಂಗವಾಗಿ ಸೀತಾಲಕ್ಷ್ಮಣ ಸಮೇತನಾದ ಶ್ರೀರಾಮಚಂದ್ರನಿಗೆ ಬೆಳಗ್ಗೆ ಎಣ್ಣೆಕಾಪ್ಪುಸೇವೆ, ಮಹಾಭಿಷೇಕ, ರಾಮತಾರಕಹೋಮ, ಮಧ್ಯಾಹ್ನ ಮಹಾಮಂಗಳಾರತಿ ಶಾತ್ತುಮೊರೆ, ನಂತರ ಸಾವಿರಾರು ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು.

    ರಾತ್ರಿರಾಮನ ದೇಗುದಲ್ಲಿ ದೀಪೋತ್ಸವ ನೆರವೇರಿತು. ಪಂಚಭಾಷಾ ಕವಿತಾವಲ್ಲಭ ವಿದ್ವಾನ್ ಅರೆಯರ್ ಶ್ರೀರಾಮಶರ್ಮ ನೇತೃತ್ವದಲ್ಲಿ ಅರ್ಚಕ ಅರೆಯರ್ ಪಾರ್ಥಸಾರಥಿ ಕೈಂಕರ್ಯ ನೆರವೇರಿಸಿದರು. ರಾಮಪ್ರಿಯ ಭಟ್ಟರು ಅಭಿಷೇಕ ನೆರವೇರಿಸಿದರೆ ಗ್ರಾಮದ ಯುವಕರು ಮುಂದೆ ನಿಂತು ಭಕ್ತರಿಗೆ ಅಚ್ಚುಕಟ್ಟಾದ ವ್ಯವಸ್ಥೆ ಮಾಡಿಕೊಟ್ಟರು.

    ಶ್ರೀರಾಮ ಬಾಣಬಿಟ್ಟು ಸೀತಾ ಮಾತೆಗೆ ನೀರು ತರಿಸಿದ ದನುಷ್ಕೋಟಿ ಕಲ್ಯಾಣಿಯ ಬಳಿಯ ಸೀತಾರಣ್ಯ ಹಾಗೂ ಒಕ್ಕಲಿಗರ ಬೀದಿಯಲ್ಲಿರುವ ರಾಮ ಮಂದಿರದಲ್ಲೂ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು. ಪಟ್ಟಾಭಿರಾಮನ ಸನ್ನಿಧಿಗೆ ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಇಂದ್ರೇಶ್, ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಸೋಮಶೇಖರ್, ಮೇಲುಕೋಟೆ ಶಕ್ತಿಕೇಂದ್ರ ಪ್ರಮುಖ ಎಂ.ಕೆ.ಮುರಳೀಧರ, ಪಾಂಡವಪುರ ರಾಜೀವ್ ಆಗಮಿಸಿ ರಾಮಚಂದ್ರನ ದರ್ಶನ ಪಡೆದರು.
    ಬನ್ನಿಮಂಟಪದ ಬಳಿಯಿರುವ ಕಾರ್ಯಸಿದ್ಧಿ ವೀರಾಂಜನೇಯಸ್ವಾಮಿ ದೇವಾಲಯ ಹಾಗೂ ಪೇಟೆ ಆಂಜನೇಯಸ್ವಾಮಿ ದೇವಾಲಯಗಳಲ್ಲೂ ಸಹ ಅಭಿಷೇಕ ಹಾಗೂ ವಿಶೇಷ ಪೂಜೆಗಳು ನಡೆದವು. ನೂರಾರು ಭಕ್ತರಿಗೆ ಪಾನಕ, ಕೋಸಂಬರಿ ವಿತರಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts