More

    ದಸರಾ ಉತ್ಸವ ಸಮಿತಿಯಿಂದ ವಿಶೇಷ ಪೂಜೆ

    ಮಡಿಕೇರಿ: ಐತಿಹಾಸಿಕ ಮಡಿಕೇರಿ ದಸರಾ ಉತ್ಸವಾಚರಣೆಗೆ ಪೂರ್ವಭಾವಿಯಾಗಿ ಸಾಂಪ್ರದಾಯದಂತೆ ನಗರದ ಪೇಟೆ ಶ್ರೀರಾಮಮಂದಿರದಲ್ಲಿ ದಸರಾ ಉತ್ಸವ ಸಮಿತಿಯಿಂದ ವಿಶೇಷ ಪೂಜೆ ಸಲ್ಲಿಸುವ ಮೂಲಕ ಉತ್ಸವದ ಸಿದ್ಧತಾ ಕಾರ್ಯಗಳಿಗೆ ಚಾಲನೆ ದೊರಕಿತು.


    ಇತಿಹಾಸ ಪ್ರಸಿದ್ಧ ಪೇಟೆ ಶ್ರೀ ರಾಮ ಮಂದಿರದಲ್ಲಿ ದಸರಾ ಆಚರಣೆಗೂ ಮುನ್ನ ಪೂಜೆ ಸಲ್ಲಿಸುವುದು ವಾಡಿಕೆ. ಅದರಂತೆ ಈ ಬಾರಿಯೂ ಪೇಟೆ ಶ್ರೀ ರಾಮಮಂದಿರ ದೇವಾಲಯದಲ್ಲಿ ಪೂಜೆ ಸಲ್ಲಿಸುವ ಮೂಲಕ ಮೊದಲ ಹಂತದ ಕಾರ್ಯಕ್ರಮಕ್ಕೆ ದಸರಾ ಸಮಿತಿ ಅಧ್ಯಕ್ಷೆ ಅನಿತಾ ಪೂವಯ್ಯ ಚಾಲನೆ ನೀಡಿದರು.


    ಈ ಸಂದರ್ಭ ಮಾತನಾಡಿದ ಅವರು, ಮೈಸೂರಿನಲ್ಲಿ ದಸರಾದಲ್ಲಿ ಜಂಬೂ ಸವಾರಿ ಪ್ರಮುಖ ಆಕರ್ಷಣೆಯಾದರೆ ಮಡಿಕೇರಿಯಲ್ಲಿ ದಸರಾದಲ್ಲಿ ದಶ ಮಂಟಪಗಳ ಶೋಭಾಯಾತ್ರೆ ಪ್ರಮುಖ ಆಕರ್ಷಣೆಯಾಗಿದೆ. ಹೀಗಾಗಿ ಈ ಬಾರಿಯ ದಸರಾವನ್ನು ಬಹಳ ಅದ್ಧೂರಿಯಾಗಿ ಮಾಡಲು ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಮೊದಲ ಹಂತವಾಗಿ ಇಂದು ಪೂಜೆ ಸಲ್ಲಿಸಲಾಗಿದೆ. ಇನ್ನು ಮುಂದೆ ದಸರಾದ ವಿವಿಧ ಕಾರ್ಯಚಟುವಟಿಕೆಗಳು ಆರಂಭವಾಗಲಿದ್ದು, ಈ ಬಾರಿ ದಸರಾಗೆ ೨ ಕೋಟಿ ಅನುದಾನ ತರುವ ಪ್ರಯತ್ನ ನಡೆಯುತ್ತಿದೆ ಎಂದು ದಸರಾ ಸಮಿತಿ ಅಧ್ಯಕ್ಷೆ ಅನಿತಾ ಪೂವಯ್ಯ ತಿಳಿಸಿದರು.


    ಮಡಿಕೇರಿ ದಸರಾ ಉತ್ಸವ ಸಮಿತಿಯ ಕಾರ್ಯಾಧ್ಯಕ್ಷ ಪ್ರಕಾಶ್ ಆಚಾರ್ಯ ಮಾತನಾಡಿ, ಸಾಂಪ್ರದಾಯಿಕವಾಗಿ ಇಂದು ದಸರ ಸಮಿತಿ ಸಭೆಗೂ ಮುನ್ನ ಶ್ರೀ ರಾಮನಿಗೆ ಪೂಜೆ ಸಲ್ಲಿಸಲಾಗಿದೆ. ನೂತನ ಶಾಸಕರಿಂದ ಒಳ್ಳೆಯ ಅನುದಾನದ ನಿರೀಕ್ಷೆಯಲ್ಲಿ ಜಿಲ್ಲೆಯ ಜನತೆ ಇದ್ದು, ಶಾಸಕರು ಅನುದಾನ ತರುವಲ್ಲಿ ಯಶಸ್ವಿಯಾಗಲಿದ್ದಾರೆ ಎಂಬ ನಂಬಿಕೆಯಿದೆ. ವಿಜೃಂಭಣೆಯ ದಸರಾ ಆಚರಿಸಲು ನಿರ್ಧರಿಸಲಾಗಿದ್ದು, ನಾಡ ಹಬ್ಬಕ್ಕೆ ಮೈಸೂರಿನಲ್ಲಿ ಅಲಂಕಾರ ಮಾಡುವಂತೆ ಮಡಿಕೇರಿ ನಗರದಲ್ಲಿ ವಿದ್ಯುತ್ ಅಲಂಕಾರ ಮಾಡುವ ನಿರೀಕ್ಷೆ ಹೊಂದಿದ್ದೇವೆ ಎಂದರು.


    ಈ ಸಂದರ್ಭದಲ್ಲಿ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಎಸ್.ಸಿ.ಸತೀಶ್, ನಗರಸಭೆ ಸದಸ್ಯ ಕೆ.ಎಸ್.ರಮೇಶ್ ಸೇರಿದಂತೆ ನಗರಸಭೆ ಸದಸ್ಯರು, ದಶಮಂಟಪ ಸಮಿತಿಯ ಪದಾಧಿಕಾರಿಗಳು, ದಸರಾ ಉತ್ಸವ ಸಮಿತಿಯ ಮಾಜಿ ಪದಾಧಿಕಾರಿ ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts