More

    ಕಲಾದೇವಿ ಜಯಂತಿ | ಬೆಳ್ಳಿ ಮೋಡದತ್ತ ಅಭಿನಯ ಶಾರದೆ

    ಬೆಂಗಳೂರು: ಜಯಂತಿ ಅವರನ್ನು ಆಗಿನ ಕಾಲಕ್ಕೆ ‘ಬೋಲ್ಡ್ ನಟಿ’ ಎಂದು ಗುರುತಿಸಲಾಗುತ್ತಿತ್ತು. ಅದಕ್ಕೆ ಕಾರಣ, ‘ಬೆಟ್ಟದ ಹುಲಿ’ ಚಿತ್ರದಲ್ಲಿ ಅವರು ಸ್ವಿಮ್ ಸೂಟ್ ಧರಿಸಿದ್ದು. ಬರೀ ಸ್ವಿಮ್ ಸೂಟ್​ಗಷ್ಟೇ ಅಲ್ಲ, ಜಯಂತಿ ಅವರು ಬಹಳಷ್ಟು ವಿಷಯಗಳಲ್ಲಿ ಬೋಲ್ಡ್ ನಟಿಯಾಗಿದ್ದರು. ಅದು ಪಾತ್ರಗಳ ಆಯ್ಕೆ ಇರಬಹುದು, ಜೀವನದಲ್ಲಿ ತೆಗೆದುಕೊಂಡ ಕೆಲವು ನಿರ್ಧಾರಗಳಿರಬಹುದು, ಎಲ್ಲಕ್ಕಿಂತ ಹೆಚ್ಚಾಗಿ ಹಲವು ಸವಾಲುಗಳು ಮತ್ತು ಕಷ್ಟಗಳ ಮಧ್ಯೆ ಜೀವನವನ್ನು ಮುನ್ನಡೆಸಿದ ರೀತಿ ಇರಬಹುದು … ಜಯಂತಿ ಅವರು ನಿಜಕ್ಕೂ ಬೋಲ್ಡ್ ನಟಿಯೇ.

    ಪಾತ್ರಗಳ ವಿಷಯವಾಗಿ ಮಾತನಾಡುವುದಾದರೆ, ಬಹುಶಃ ಆ ಕಾಲಕ್ಕೆ ಜಯಂತಿ ಅವರಷ್ಟು ವೈವಿಧ್ಯಮಯ ಪಾತ್ರಗಳನ್ನು ನಿರ್ವಹಿಸಿದ ಮತ್ತೊಬ್ಬ ನಟಿ ಸಿಗುವುದು ಕಷ್ಟ. ‘ಮಿಸ್ ಲೀಲಾವತಿ’ ಚಿತ್ರದಲ್ಲಿ ಬೋಲ್ಡ್ ಯುವತಿಯಾಗಿ, ‘ಚಂದವಳ್ಳಿಯ ತೋಟ’ದ ಸೌಮ್ಯ ಹೆಣ್ಣಾಗಿ, ‘ಚಕ್ರತೀರ್ಥ’ ಚಿತ್ರದಲ್ಲಿ ತಾಯಿ-ಮಗಳಾಗಿ, ‘ಎಡಕಲ್ಲು ಗುಡ್ಡದ ಮೇಲೆ’ ಚಿತ್ರದಲ್ಲಿ ವಿರಹಿಣಿಯಾಗಿ, ‘ಮಸಣದ ಹೂವು’ ಚಿತ್ರದಲ್ಲಿ ವೇಶ್ಯೆಯಾಗಿ, ‘ಶ್ರೀಮಂತನ ಮಗಳು’ ಚಿತ್ರದ ಚೆಲ್ಲುಹುಡುಗಿಯಾಗಿ, ‘ಬಹದ್ದೂರ್ ಗಂಡು’ ಚಿತ್ರದ ದುರಹಂಕಾರಿ ಹೆಣ್ಣಾಗಿ … ಹೀಗೆ ಜಯಂತಿ ಅವರ ಚಿತ್ರಗಳ ಪಟ್ಟಿಯಲ್ಲಿ ವಿಭಿನ್ನವಾದ ಪಾತ್ರಗಳು ಸಿಗುತ್ತವೆ. ಆ ಕಾಲದ ಹಲವು ನಟಿಯರು ಕೆಲವು ಪಾತ್ರಗಳಿಗೆ ಬ್ರಾಂಡ್ ಆಗಿದ್ದನ್ನು ಗಮನಿಸಬಹುದು. ಆದರೆ, ಜಯಂತಿ ಮಾತ್ರ ಯಾವುದೋ ಒಂದು ತರಹದ ಪಾತ್ರಕ್ಕೆ ಸೀಮಿತವಾಗಿದ್ದನ್ನು ಗುರುತಿಸುವುದಕ್ಕೆ ಸಾಧ್ಯವಿಲ್ಲ. ಅವರು ಎಲ್ಲ ಪಾತ್ರಗಳನ್ನು ಮಾಡಿದರು ಎನ್ನುವುದರ ಜತೆಗೆ, ಸಾಮಾಜಿಕ ಚಿತ್ರಗಳಿರಲಿ, ಐತಿಹಾಸಿಕ, ಪೌರಾಣಿಕ, ಕಾದಂಬರಿ ಆಧಾರಿತ … ಹೀಗೆ ಎಲ್ಲ ಪ್ರಕಾರದ ಚಿತ್ರಗಳಲ್ಲೂ ನಟಿಸಿದರು.

    ಕಲಾದೇವಿ ಜಯಂತಿ | ಬೆಳ್ಳಿ ಮೋಡದತ್ತ ಅಭಿನಯ ಶಾರದೆಆರು ಬಾರಿ ಅತ್ಯುತ್ತಮ ನಟಿ: ಬರೀ ವಿಭಿನ್ನ ಪಾತ್ರಗಳನ್ನು ಒಪ್ಪಿಕೊಳ್ಳುವುದಷ್ಟೇ ಅಲ್ಲ, ಅದನ್ನು ನಿರ್ವಹಿಸುವುದು ಸಹ ಒಂದು ದೊಡ್ಡ ಸವಾಲೇ. ಆ ಸವಾಲನ್ನು ಯಶಸ್ವಿಯಾಗಿ ನಿಭಾಯಿಸಿದ್ದರಿಂದಲೇ ಜಯಂತಿ ಅವರಿಗೆ ರಾಜ್ಯ ಸರ್ಕಾರದಿಂದ ಅತ್ಯುತ್ತಮ ನಟನೆಗೆ ಆರು ಬಾರಿ ಪ್ರಶಸ್ತಿ ಸಿಕ್ಕಿದ್ದು. ಕನ್ನಡ ಚಿತ್ರರಂಗದ ಮಟ್ಟಿಗೆ ಇದೊಂದು ದಾಖಲೆಯೇ. ಏಕೆಂದರೆ, ಜಯಂತಿ ಅವರನ್ನು ಬಿಟ್ಟರೆ ಕನ್ನಡ ಚಿತ್ರರಂಗದಲ್ಲಿ ಬೇರೆ ಯಾವ ನಟಿ ಸಹ ಇಷ್ಟೊಂದು ಬಾರಿ ಪ್ರಶಸ್ತಿ ಸ್ವೀಕರಿಸಲಿಲ್ಲ. ಪಾತ್ರ, ಪ್ರಶಸ್ತಿ ಇವೆಲ್ಲವನ್ನೂ ಹೊರತುಪಡಿಸಿದರೆ, ಜಯಂತಿ ಆ ಕಾಲಕ್ಕೆ ಅತ್ಯಂತ ಬಿಜಿಯಾದ ನಟಿಯಾಗಿದ್ದರು. 60 ಮತ್ತು 70ರ ದಶಕದಲ್ಲಿ ಜಯಂತಿ ಅವರಿಗೆ ಅದೆಷ್ಟು ಬೇಡಿಕೆ ಇತ್ತೆಂದರೆ, ಪ್ರತೀ ವರ್ಷ ಕಡಿಮೆಯೆಂದರೂ ಅವರ ಆರು ಚಿತ್ರಗಳು ಬಿಡುಗಡೆ ಆಗುತ್ತಿದ್ದವು. 1967ರಲ್ಲಿ ಜಯಂತಿ ಅಭಿನಯದ 12 ಚಿತ್ರಗಳು ಬಿಡುಗಡೆ ಆಗಿದ್ದು ವಿಶೇಷ.

    ಬೌನ್ಸ್ ಚೆಕ್​ಗಳು ಎಷ್ಟೋ ಇವೆ..: ಜಯಂತಿ ಅವರು ತಮ್ಮ ಐದು ದಶಕಗಳ ವೃತ್ತಿಜೀವನದಲ್ಲಿ 300ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದವರು. ಇಷ್ಟು ಚಿತ್ರಗಳಲ್ಲಿ ಅದೆಷ್ಟೋ ಬೌನ್ಸ್ ಚೆಕ್​ಗಳನ್ನು ನೋಡಿರುವುದಾಗಿ ಅವರು ಹಿಂದೊಮ್ಮೆ ಹೇಳಿಕೊಂಡಿದ್ದರು. ‘ನಾನು ನಟಿಸಿರುವ ಇಷ್ಟು ಚಿತ್ರಗಳಲ್ಲಿ ವಸೂಲಿ ಮಾಡದಿರುವ ಸಂಭಾವನೆಯನ್ನು ವಸೂಲಿ ಮಾಡಿದರೆ, ಅದೇ ದೊಡ್ಡ ಮೊತ್ತವಾಗುತ್ತದೆ. ಈಗಲೂ ನನ್ನ ಬಳಿ ಬೌನ್ಸ್ ಆಗಿರುವ ಅದೆಷ್ಟೋ ಚೆಕ್​ಗಳು ಹಾಗೆಯೇ ಇವೆ. ಇನ್ನು, ನಾನೇ ಹಲವು ಬಾರಿ ಸಂಭಾವನೆ ಬಿಟ್ಟಿದ್ದೂ ಇದೆ. ಕೆಲಸವೆಲ್ಲ ಮುಗಿದ ಮೇಲೆ, ಎಷ್ಟೋ ಜನ ಬಂದು ತಾವು ಕಷ್ಟದಲ್ಲಿದ್ದೇವೆ ಎನ್ನುತ್ತಾರೆ. ಅಂಥವರಿಂದ ಬಾಕಿ ಸಂಭಾವನೆಯನ್ನು ಬಿಟ್ಟಿದ್ದೂ ಇದೆ’ ಎಂದು ಜಯಂತಿ ನೆನಪಿಸಿಕೊಂಡಿದ್ದರು.

    ಸ್ವಂತಕ್ಕೆ ಉಪಯೋಗಿಸುತ್ತಿರಲಿಲ್ಲ: ಜಯಂತಿ ಅವರು ತಾವು ಯಾವ ಚಿತ್ರದಲ್ಲಿ ನಟಿಸಿದರೂ, ಆ ಚಿತ್ರದಲ್ಲಿ ಕೊಟ್ಟ ಕಾಸ್ಟ್ಯೂಮ್​ಗಳನ್ನು ತಮ್ಮ ಸ್ವಂತಕ್ಕೆ ಉಪಯೋಗಿಸುತ್ತಿರಲಿಲ್ಲವಂತೆ. ಆದರೆ, ಕೆಲವೊಮ್ಮೆ ಚಿತ್ರಗಳಲ್ಲಿ ಉಟ್ಟ ಸೀರೆಗಳು ಬಹಳ ಇಷ್ಟವಾಗಿದ್ದೂ ಉಂಟಂತೆ. ಹಾಗೊಮ್ಮೆ ಕೆಲವು ಸೀರೆಗಳು ಇಷ್ಟವಾದರೆ, ತಮ್ಮ ಸಂಭಾವನೆಯಲ್ಲಿ ಆ ಸೀರೆ ರೇಟು ಹಿಡಿದು ಮಿಕ್ಕಿದ್ದು ಕೊಡಿ ಎಂದು ಕೇಳುತ್ತಿದ್ದರಂತೆ.

    ರಾಜಕೀಯದಲ್ಲಿ ಸೋಲಿನ ರುಚಿ: 80ರ ದಶಕದ ನಂತರ ಪೋಷಕ ಪಾತ್ರಗಳತ್ತ ಶಿಫ್ಟ್ ಆದ ಅವರು, ನಂತರ ಅಭಿನಯಿಸಿದ್ದು ಕಡಿಮೆಯೇ. ಅಷ್ಟರಲ್ಲಾಗಲೇ ವೈಯಕ್ತಿಕ ಜೀವನದಲ್ಲಿ ಸಾಕಷ್ಟು ನೋವುಂಡಿದ್ದರು. ‘ವಿಜಯ್’ ಮತ್ತು ‘ಏನ್ ಸ್ವಾಮಿ ಅಳಿಯಂದ್ರೆ’ ಎಂಬ ಎರಡು ಚಿತ್ರಗಳನ್ನು ನಿರ್ವಿುಸಿ-ನಿರ್ದೇಶಿಸಿದರು. ರಾಜಕೀಯದಲ್ಲೂ ತೊಡಗಿಸಿಕೊಂಡರು. ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಲೋಕಸಭಾ ಅಭ್ಯರ್ಥಿಯಾಗಿ ಕಣಕ್ಕಿಳಿದು ಸೋತರು. ಆ ನಂತರ ಕ್ರಮೇಣ ರಾಜಕೀಯದಿಂದ ದೂರವಾದರು.

    ಡಾ. ರಾಜ್ ಜತೆ 39 ಚಿತ್ರಗಳು

    ಕಲಾದೇವಿ ಜಯಂತಿ | ಬೆಳ್ಳಿ ಮೋಡದತ್ತ ಅಭಿನಯ ಶಾರದೆಡಾ. ರಾಜಕುಮಾರ್ ಮತ್ತು ಜಯಂತಿ ಜೋಡಿ 39 ಚಿತ್ರಗಳಲ್ಲಿ ಜತೆಯಾಗಿ ನಟಿಸಿದ್ದಾರೆ. 1964ರಲ್ಲಿ ಬಿಡುಗಡೆಯಾದ ‘ಚಂದವಳ್ಳಿಯ ತೋಟ’ ಚಿತ್ರದಿಂದ ಪ್ರಾರಂಭವಾಗಿ, ‘ಮುರಿಯದ ಮನೆ’, ‘ಲಗ್ನಪತ್ರಿಕೆ’, ‘ಮಂತ್ರಾಲಯ ಮಹಾತ್ಮೆ’, ‘ಜೇಡರ ಬಲೆ’, ‘ಶ್ರೀಕೃಷ್ಣದೇವರಾಯ’, ‘ಕಸ್ತೂರಿ ನಿವಾಸ’, ‘ಚಕ್ರತೀರ್ಥ’, ‘ಕುಲಗೌರವ’, ‘ವಾತ್ಸಲ್ಯ’, ‘ಬೆಟ್ಟದ ಹುಲಿ’ ಮುಂತಾದ ಚಿತ್ರಗಳಲ್ಲಿ ಇಬ್ಬರೂ ಜತೆಯಾಗಿ ನಟಿಸಿದರು. ಇಬ್ಬರೂ ಕಡೆಯದಾಗಿ ಒಟ್ಟಿಗೆ ನಟಿಸಿದ ಚಿತ್ರ ‘ಬಹದ್ದೂರ್ ಗಂಡು’. ಹಲವು ವರ್ಷಗಳ ನಂತರ ರಾಜ್ಯ ಸರ್ಕಾರವು ಜಯಂತಿಗೆ ಡಾ. ರಾಜಕುಮಾರ್ ಪ್ರಶಸ್ತಿ ನೀಡಿ ಗೌರವಿಸಿತು.

    ಪ್ಯಾನ್ ಇಂಡಿಯಾ ನಟಿ: ಜಯಂತಿ ಬರೀ ಕನ್ನಡವಲ್ಲದೆ, ದಕ್ಷಿಣ ಭಾರತದ ಆಗಿನ ಕಾಲದ ಎಲ್ಲ ಜನಪ್ರಿಯ ಹೀರೋಗಳ ಜತೆಗೂ ನಟಿಸಿದ್ದಾರೆ. ಎನ್.ಟಿ. ರಾಮರಾವ್, ಅಕ್ಕಿನೇನಿ ನಾಗೇಶ್ವರ ರಾವ್, ಎಂ.ಜಿ. ರಾಮಚಂದ್ರನ್, ಜೆಮಿನಿ ಗಣೇಶನ್, ಜಯಶಂಕರ್, ಮಲಯಾಳಂನ ಪ್ರೇಮ್ ನಜೀರ್, ಮಧು ಮುಂತಾದವರ ಜತೆಗೆ ಹಲವು ಚಿತ್ರಗಳಲ್ಲಿ ನಟಿಸಿದರು. ಹಿಂದಿ ಚಿತ್ರಗಳಲ್ಲೂ ನಟಿಸಿದ ಅವರು, ‘ತೀನ್ ಬಹುರಾನಿಯಾ’, ‘ತುಮ್ಸೆ ಅಚ್ಚಾ ಕೌನ್ ಹೇ’ ಚಿತ್ರಗಳಲ್ಲಿ ನಟಿಸಿ ಶಮ್ಮಿ ಕಪೂರ್, ಮೆಹಮೂದ್ ಮುಂತಾದ ಜನಪ್ರಿಯ ನಟರೊಂದಿಗೆ ತೆರೆ ಹಂಚಿಕೊಂಡಿದ್ದಾರೆ.

    ಮತ್ತೆ ಎದೆ ತುಂಬಿ ಹಾಡುವೆನು

    ಕಲಾದೇವಿ ಜಯಂತಿ | ಬೆಳ್ಳಿ ಮೋಡದತ್ತ ಅಭಿನಯ ಶಾರದೆಕನ್ನಡ ಕಿರುತೆರೆಯ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ಎಂದರೆ ಅದು ‘ಎದೆ ತುಂಬಿ ಹಾಡುವೆನು’. ದಿವಂಗತ ಎಸ್.ಪಿ. ಬಾಲುಸುಬ್ರಹ್ಮಣ್ಯಂ ನಡೆಸಿಕೊಡುತ್ತಿದ್ದ ಈ ಹಾಡುಗಳ ಕಾರ್ಯಕ್ರಮ, ಇದೀಗ ಕಲರ್ಸ್ ಕನ್ನಡದಲ್ಲಿ ಮತ್ತೆ ಶುರುವಾಗಲಿದೆ. ಈಗಾಗಲೇ ಸದ್ದಿಲ್ಲದೆ ಆಡಿಷನ್​ಗಳು ಶುರುವಾಗಿದ್ದು, ಎಲ್ಲ ಅಂದುಕೊಂಡಂತೆ ಆದರೆ, ಕಾರ್ಯಕ್ರಮವು ಆಗಸ್ಟ್ 15ರಿಂದ ಪ್ರಾರಂಭವಾಗಲಿದೆ.

    ‘ಎದೆ ತುಂಬಿ ಹಾಡುವೆನು’ ಕಾರ್ಯಕ್ರಮದ ಯಶಸ್ಸಿನಲ್ಲಿ ಎಸ್.ಪಿ.ಬಿ ಅವರು ಮಹತ್ವದ ಪಾತ್ರವಹಿಸಿದ್ದರು. ಅವರ ಬದಲು ಈಗ್ಯಾರು ತೀರ್ಪಗಾರರಾಗಿರುತ್ತಾರೆ ಎಂಬ ಪ್ರಶ್ನೆ ಸಹಜವೇ. ಮೂಲಗಳ ಪ್ರಕಾರ, ಈ ಬಾರಿ ರಾಜೇಶ್ ಕೃಷ್ಣನ್, ವಿ. ಹರಿಕೃಷ್ಣ ಮತ್ತು ರಘು ದೀಕ್ಷಿತ್ ತೀರ್ಪಗಾರರಾಗಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಅದರ ಜತೆಗೆ ಎಸ್.ಪಿ.ಬಿ ಅವರ ಸಹೋದರಿ ಎಸ್.ಪಿ. ಶೈಲಜಾ, ಮಗ ಎಸ್.ಪಿ. ಚರಣ್ ವಿಶೇಷ ತೀರ್ಪಗಾರರಾಗಿ ಭಾಗಹಿಸುವ ಸಾಧ್ಯತೆ ಇದೆಯಂತೆ.

    ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಿಮ ದರ್ಶನ

    ಕಲಾದೇವಿ ಜಯಂತಿ | ಬೆಳ್ಳಿ ಮೋಡದತ್ತ ಅಭಿನಯ ಶಾರದೆ

    ಹಿರಿಯ ನಟಿ ಜಯಂತಿ ಅವರ ಪಾರ್ಥಿವ ಶರೀರವನ್ನು ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಿಮ ದರ್ಶನಕ್ಕೆ ಇಡಲಾಗಿತ್ತು. ಕಲಾವಿದರಾದ ದೊಡ್ಡಣ್ಣ, ಜಯಮಾಲಾ, ತಾರಾ, ಸುಧಾರಾಣಿ, ಶ್ರುತಿ, ಉಮೇಶ್, ಜಗ್ಗೇಶ್, ಪುನೀತ್ ರಾಜಕುಮಾರ್, ಸೃಜನ್ ಲೋಕೇಶ್, ಭಾವನಾ, ಚಿನ್ನೇಗೌಡ, ಸಾರಾ ಗೋವಿಂದು, ಪದ್ಮಾ ವಾಸಂತಿ, ಅನು ಪ್ರಭಾಕರ್, ರವಿಶಂಕರ್ ಗೌಡ ಸೇರಿ ಚಿತ್ರರಂಗದ ಗಣ್ಯರು, ರಾಜಕೀಯ ನಾಯಕರು, ನೂರಾರು ಅಭಿಮಾನಿಗಳು ನೆಚ್ಚಿನ ನಟಿಯ ಅಂತಿಮ ದರ್ಶನ ಪಡೆದರು.

    ತಮಿಳಿಗೆ ಡಾ. ರಾಜ್ ಮೊಮ್ಮಗಳು

    ಬೆಂಗಳೂರು: ‘ನಿನ್ನ ಸನಿಹಕೆ’ ಸಿನಿಮಾ ಮೂಲಕ ಸ್ಯಾಂಡಲ್​ವುಡ್​ಗೆ ಡಾ. ರಾಜ್ ಮೊಮ್ಮಗಳು ಧನ್ಯಾ ರಾಮ್ುಮಾರ್ ಪದಾರ್ಪಣೆ ಮಾಡಿರುವುದು ಗೊತ್ತಿರುವ ವಿಚಾರ. ಇನ್ನೇನು ಆಗಸ್ಟ್ 20ಕ್ಕೆ ಆ ಸಿನಿಮಾ ಬಿಡುಗಡೆ ಆಗುತ್ತಿದೆ. ಹೀಗಿರುವಾಗಲೇ ಪರಭಾಷೆಯ ಸಿನಿಮಾಗಳಲ್ಲಿಯೂ ನಟಿಸುವ ಅವಕಾಶ ಧನ್ಯಾಗೆ ಸಿಕ್ಕಿದೆ. ಆ ಬಗ್ಗೆ ‘ವಿಜಯವಾಣಿ’ ಜತೆಗೆ ಖುಷಿ ಹಂಚಿಕೊಂಡಿದ್ದಾರೆ. ‘ಕನ್ನಡದಲ್ಲಿ ‘ನಿನ್ನ ಸಿನಿಹಕೆ’ ಒಪ್ಪಿಕೊಂಡೆ, ಅಂದಿನಿಂದ ಬೇರೆಬೇರೆ ಭಾಷೆಗಳ ಸಿನಿಮಾ ಆಫರ್​ಗಳು ಬರುತ್ತಿವೆ. ಆ ಪೈಕಿ ತಮಿಳಿನ ಸಿನಿಮಾ ಸಹ ಒಂದು. ಸದ್ಯಕ್ಕೆ ಆ ಚಿತ್ರ ಅಧಿಕೃತವಾಗಿ ಘೋಷಣೆ ಆಗಿಲ್ಲ’ ಎನ್ನುವ ಧನ್ಯಾ, ‘ಬಿಡುಗಡೆಗೆ ಸಿದ್ಧವಿರುವ ‘ನಿನ್ನ ಸನಿಹಕೆ’ ಚಿತ್ರ ತೆರೆಕಂಡ ಮೇಲೆ ಕನ್ನಡದಲ್ಲಿ ಮತ್ತೊಂದು ಸಿನಿಮಾ ಶುರುವಾಗಲಿದೆ. ಅದಾದ ಬಳಿಕ ತಮಿಳಿನ ಪ್ರಾಜೆಕ್ಟ್ ಕಡೆ ಗಮನ ಹರಿಸುವೆ. ಕನ್ನಡಕ್ಕೆ ನನ್ನ ಮೊದಲ ಪ್ರಾಶಸ್ಱ ಕನ್ನಡಕ್ಕೆ’ ಎಂಬುದು ಧನ್ಯಾ ಮಾತು.

    ಕಲಾದೇವಿ ಜಯಂತಿ | ಬೆಳ್ಳಿ ಮೋಡದತ್ತ ಅಭಿನಯ ಶಾರದೆ

    ‘ಅಭಿನಯ ಶಾರದೆ’ ಜಯಂತಿ ಅವರ ನಿಧನದ ಸುದ್ದಿ ಅತೀವ ದುಃಖ ತಂದಿದೆ. ಚಿತ್ರರಂಗಕ್ಕೆ ಅವರ ಕೊಡುಗೆ ಅಪಾರವಾಗಿದ್ದು, ಕನ್ನಡ ಕಲಾಲೋಕಕ್ಕೆ ತುಂಬಲಾರದ ನಷ್ಟವುಂಟಾಗಿದೆ. ದೇವರು ಅವರ ಆತ್ಮಕ್ಕೆ ಸದ್ಗತಿ ಕರುಣಿಸಲಿ, ಅವರ ಕುಟುಂಬ, ಅಪಾರ ಅಭಿಮಾನಿ ಬಳಗಕ್ಕೆ ನೋವನ್ನು ಭರಿಸುವ ಶಕ್ತಿಯನ್ನು ನೀಡಲಿ.

    | ಬಿ.ಎಸ್.ಯಡಿಯೂರಪ್ಪ ಹಂಗಾಮಿ ಮುಖ್ಯಮಂತ್ರಿ

    ಅಭಿಜಾತ ಪ್ರತಿಭೆಯ ಮೂಲಕ ದಶಕಗಳ ಕಾಲ ಚಿತ್ರಪ್ರೇಮಿಗಳ ಮನಗೆದ್ದಿದ್ದ ಮತ್ತು ನನ್ನ ಇಷ್ಟದ ನಟಿ ‘ಅಭಿನಯ ಶಾರದೆ’ ಜಯಂತಿಯವರ ನಿಧನದಿಂದ ಅತೀವ ದುಃಖವಾಗಿದೆ. ಜಯಂತಿ ಅವರು ತಮ್ಮ ಚಿತ್ರಗಳ ಮೂಲಕ ಸದಾಕಾಲ ನಮ್ಮೆಲ್ಲರ ಮನದಲ್ಲಿ ಅಜರಾಮರರಾಗಿ ಇರುತ್ತಾರೆ. ಅವರ ಕುಟುಂಬಕ್ಕೆ ನನ್ನ ಸಾಂತ್ವನಗಳು

    | ಸಿದ್ದರಾಮಯ್ಯ ಪ್ರತಿಪಕ್ಷ ನಾಯಕ

    ದುರ್ಗದ ಒನಕೆ ಓಬವ್ವ ಚಿರಸ್ಥಾಯಿ

    ಕಲಾದೇವಿ ಜಯಂತಿ | ಬೆಳ್ಳಿ ಮೋಡದತ್ತ ಅಭಿನಯ ಶಾರದೆ| ಡಾ.ಬಿ.ಎಲ್.ವೇಣು

    ಚಿತ್ರದುರ್ಗದ ಒನಕೆ ಓಬವ್ವಳ ಶೌರ್ಯ ಪರಾಕ್ರಮಗಳನ್ನು ನಾಡಿನ ಜನರ ಕಣ್ಮುಂದೆ ತಂದು ನಿಲ್ಲಿಸಿದವರು ನಟಿ ಜಯಂತಿ. ಎಷ್ಟೇ ಗ್ಲಾಮರಸ್ ಪಾತ್ರದಲ್ಲಿ ಮಿಂಚಿದರೂ ಜನಮನದಲ್ಲಿ ಅಚ್ಚಳಿಯದೆ ಉಳಿದದ್ದು, ವೀರ ವನಿತೆ ಓಬವ್ವಳಾಗಿ ಎಂದರೆ ಅತಿಶಯೋಕ್ತಿಯಾಗದು. 1970-71ರಲ್ಲಿ ದುರ್ಗದಲ್ಲಿ ‘ನಾಗರಹಾವು’ ಚಿತ್ರೀಕರಣವನ್ನು ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲರು ತಮ್ಮ ತಂಡದೊಡನೆ ಆರಂಭಿಸಿದ್ದರು. ದುರ್ಗದ ಆಬಾಲವೃದ್ಧ ಮಹಿಳೆಯರಾದಿಯಾಗಿ ಚಿತ್ರೀಕರಣ ನೋಡಲು ಉತ್ಸಾಹದಿಂದ ಕೋಟೆ ಏರುತ್ತಿದ್ದನ್ನು ನಾನು ನೋಡಿ ಬಲ್ಲೆ. ಏಕೆಂದರೆ, ನಾನೂ ಗೆಳೆಯರೊಂದಿಗೆ ಕೋಟೆ ಏರಿದವನೆ.

    ಹಿರಿಯ ಸಾಹಿತಿ ತರಾಸು ಅವರ ಕಾದಂಬರಿಗಳ ಆಧರಿತ ಎಂಬ ಹೆಗ್ಗಳಿಕೆ ಬೇರೆ. ಆಗೆಲ್ಲ ಚಿತ್ರೀಕರಣ ವೀಕ್ಷಿಸುವವರ ಕಣ್ಣಿಗೆ ಪುಟ್ಟಣ್ಣನವರೇ ‘ಗ್ರೇಟ್ ಹೀರೋ’… ನಮಗ್ಯಾರಿಗೂ ವಿಷ್ಣು, ಅಂಬರೀಶ್, ಆರತಿ ತೀರಾ ಅಪರಿಚಿತರು. ಪುಟ್ಟಣ್ಣನವರಿಗೆ ಓಬವ್ವೆಯ ಇತಿಹಾಸವನ್ನು ನೆನಪಿಗೆ ತಂದವರು ನವಭಾರತ ತರುಣ ಕಲಾ ಸಂಘದ ಕಲಾವಿದರು. ಅವರು ಆಡುತ್ತಿದ್ದ ಅಪಾರ ಯಶಸ್ವಿ ನಾಟಕ ‘ರಾಜವೀರ ಮದಕರಿ ನಾಯಕ.’ ಮೈಸೂರು ಮಹಾರಾಜ ಜಯಚಾಮರಾಜೇಂದ್ರ ಒಡೆಯರ್, ತಾವಾಗಿಯೇ ಸಂಘದವರನ್ನು ಮೈಸೂರಿಗೆ ಕರೆಸಿ ಈ ನಾಟಕವನ್ನು ಆಡಿಸಿದ್ದರು. ಈ ಬಗ್ಗೆ ಕೇಳಿದ ಪ್ರಯೋಗಶೀಲ ಪುಟ್ಟಣ್ಣ ತಾವೂ ತಂಡವರೊಡನೆ ನಾಟಕವನ್ನು ನೋಡಿದರು. ನಾಟಕದಲ್ಲಿ ಓಬವ್ವಳ ಪಾತ್ರವನ್ನು ಕಂಡು ಪ್ರಭಾವಿತರಾಗಿ, ಸಿನಿಮಾದಲ್ಲಿ ಹಾಡಿನ ಮೂಲಕ ಸನ್ನಿವೇಶವನ್ನು ತರಲು ನಿರ್ಧರಿಸಿದರು. ಅದನ್ನೇ ಆಧರಿಸಿ ಆರ್.ಎನ್.ಜಯಗೋಪಾಲರಿಂದ ಹಾಡು ಬರೆಸಿದರು. ವಿರೋಚಿತ ರಾಗ ಹಾಕಿದ್ದು ವಿಜಯ ಭಾಸ್ಕರ್.

    ಕಲಾದೇವಿ ಜಯಂತಿ | ಬೆಳ್ಳಿ ಮೋಡದತ್ತ ಅಭಿನಯ ಶಾರದೆ

    ಪುಟ್ಟಣ್ಣ ತಮ್ಮ ನೆಚ್ಚಿನ ನಟಿ ಕಲ್ಪನಾರನ್ನೇ ಓಬವ್ವಳ ಪಾತ್ರಕ್ಕೆ ಆಯ್ಕೆ ಮಾಡಿದ್ದರಾದರೂ, ಆಕೆ ಒಂದು ಹಾಡಿನಲ್ಲಿ ಬಂದು ಹೋಗೋದು ಆಗೋಲ್ಲವೆಂದರೆಂದು ಸುದ್ದಿಯಾಯಿತು. ನಂತರ ಜಯಂತಿಯವರನ್ನು ಆರಿಸಿಕೊಂಡರು ಪುಟ್ಟಣ್ಣ. ನಮ್ಮೂರಿನ ಹುಡುಗರೇ ಓಬವ್ವಳ ಒನಕೆಗೆ ತಲೆ ಕೊಡುವ ಸೈನಿಕರಾದರು. ಅದರಲ್ಲಿ ನನ್ನ ಗೆಳೆಯರೂ ಇದ್ದರೆನ್ನಿ. ಈ ಹಾಡಿನ ಚಿತ್ರೀಕರಣವನ್ನು ನಟ ವಿಷ್ಣುವರ್ಧನ್ ಮತ್ತು ದುರ್ಗದ ಸೇಂಟ್ ಜೋಸೆಫ್ ಕಾನ್ವೆಂಟ್ ವಿದ್ಯಾರ್ಥಿಗಳೊಂದಿಗೆ ಕೋಟೆಯಲ್ಲಿ ಚಿತ್ರೀಕರಿಸಲಾಯಿತು. ನಟಿ ಜಯಂತಿ ಭಾಗವಹಿಸಿದರು. ‘ನಾಗರಹಾವು’ ಚಿತ್ರದಷ್ಟೇ ‘ಕನ್ನಡ ನಾಡಿನ ವೀರ ರಮಣಿಯ ಗಂಡುಭೂಮಿಯ ವೀರ ನಾರಿಯ …’ ಗೀತೆಯೂ ಜನಮನ್ನಣೆ ಪಡೆಯಿತು. ನಾಡಿನ ಮನೆ ಮಾತಾಗಿದ್ದ ಜಯಂತಿ, ಓಬವ್ವೆಯಾಗಿ ಜನಮಾನಸದಲ್ಲಿ ಪ್ರತಿಷ್ಠಾಪಿತರಾದರು. ದುರ್ಗದವರ ಮನದಂಗಳದಲ್ಲೂ ಅಜರಾಮರರಾದರು. ನಮ್ಮವರು ಅನೇಕ ಸಲ ದುಗೋತ್ಸವ ನಡೆದಾಗ ಆಕೆಯನ್ನು ಗೌರವಿಸಿದ್ದುಂಟು. ಇವತ್ತಂತೂ ದುರ್ಗದ ಮನೆ ಮನಗಳಲ್ಲಿ ಜಯಂತಿಯವರ (ಓಬವ್ವೆಯ) ಸಾವಿನ ನೋವು ಮಡುಗಟ್ಟಿದೆ. ದೀರ್ಘಕಾಲ ಬದುಕಿದ ಅವರು ನಮ್ಮನ್ನೆಲ್ಲ ಅಗಲಿದರೂ ಅಭಿನಯ ಶಾರದೆಯ ಅಭಿನಯ ಪ್ರೇಕ್ಷಕರ ಹೃದಯದಲ್ಲಿ ಚಿರಸ್ಥಾಯಿ.

    ಹುಟ್ಟುಕುರುಡು ಮಗುವಿನ ಕಣ್ಣುಗಳಿಗೆ ತಾರಾ ಕಳೆ; ನಟಿ ಜಯಂತಿಯ ನೇತ್ರದಾನ..

    ಇಲ್ಲಿವೆ ‘ಅಭಿನಯ ಶಾರದೆ’ಯ ಅಪರೂಪದ ಫೋಟೋಗಳು

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts