More

    ಆಸ್ಪತ್ರೆಗಳನ್ನು ಬದುಕಿಸಿದ ಕಾರ್ಪೊರೇಟ್ ಆಕ್ಸಿಜನ್!

    ಅಂಬಾನಿ, ಅದಾನಿ, ಟಾಟಾರನ್ನು ನಮ್ಮ ದೇಶದಲ್ಲಿ ಆಡಿಕೊಳ್ಳುವವರ ಸಂಖ್ಯೆಗೇನೂ ಕಡಿಮೆ ಇಲ್ಲ. ಆಳುವ ಸರ್ಕಾರವನ್ನು ಟೀಕೆ ಮಾಡಬೇಕಾದಾಗಲೆಲ್ಲ ಈ ಉದ್ಯಮಪತಿಗಳ ಹೆಸರನ್ನು ಎಳೆದು ತರಲಾಗುತ್ತದೆ. ಅವರೆಷ್ಟು ಲಕ್ಷ ಮಂದಿಗೆ ಉದ್ಯೋಗ ನೀಡಿದ್ದಾರೆ, ತೆರಿಗೆ ರೂಪದಲ್ಲಿ ಸರ್ಕಾರದ ಬೊಕ್ಕಸಕ್ಕೆ ಯಾವ ರೀತಿ ಅನುಕೂಲವಾಗುತ್ತಾರೆ ಎಂಬುದು ಟೀಕಾಕಾರರಿಗೆ ನಗಣ್ಯ. ಆದರೆ, ಇದರ ಬಗ್ಗೆ ತಲೆಕೆಡಿಸಿಕೊಳ್ಳದ ಕಾರ್ಪೊರೇಟ್ ವಲಯ ತನ್ನ ಪಾಡಿಗೆ ತಾನು ಮುಂದೆ ಸಾಗುತ್ತಲೇ ಇದೆ. ಈ ಕರೊನಾ ಆಪತ್ಕಾಲದಲ್ಲಿ ಇದೇ ಉದ್ಯಮಪತಿಗಳು, ಅವರದೇ ವರ್ಗದಲ್ಲಿರುವ ಇತರ ಕೈಗಾರಿಕೆಗಳು ದೇಶವಾಸಿಗಳ ಪಾಲಿಗೆ ಪ್ರಾಣವಾಯು ಒದಗಿಸುವ ಆಪದ್ಬಾಂಧವರಾಗಿದ್ದಾರೆ.

    | ಶ್ರೀಕಾಂತ್ ಶೇಷಾದ್ರಿ

    ಇದೀಗ ಕರೊನಾ ವಿಪತ್ತಿನಿಂದ ಎದುರಾದ ಬಿಕ್ಕಟ್ಟು ಹಿಂದೆಂದೂ ಬಂದಿರಕ್ಕಿಲ್ಲ. ಕರೊನಾ ಒಂದನೇ ಅಲೆಯನ್ನು ತಕ್ಕಮಟ್ಟಿಗೆ ಯಶಸ್ವಿಯಾಗಿ ನಿಭಾಯಿಸಿದ ಸಮಾಧಾನದಲ್ಲಿದ್ದ ಭಾರತಕ್ಕೆ ಎರಡನೇ ಅಲೆ ಆಘಾತವನ್ನೇ ತಂದಿದೆ. ಎರಡನೇ ಅಲೆಯ ತೀವ್ರತೆ ಗ್ರಹಿಸಲು ಅಸಾಧ್ಯವಾಗಿದ್ದರಿಂದ ಪ್ರತಿ ದಿನ ಸಾವಿನ ಸಂಖ್ಯೆ ಮಿತಿ ಮೀರುತ್ತಿದೆ. ಆಕ್ಸಿಜನ್​ಗೆ ಹಾಹಾಕಾರ ಏರ್ಪಟ್ಟಿದೆ. ಆಸ್ಪತ್ರೆಯಲ್ಲಿ ಬೆಡ್ ಸಿಕ್ಕರೂ ಆಕ್ಸಿಜನ್ ಸಿಗದ ವಾತಾವರಣವಿದೆ. ಇಂತಹ ವಿಪತ್ತಿನ ಸಂದರ್ಭದಲ್ಲಿ ನೆರವಿಗೆ ಬಂದಿದ್ದು ಕೈಗಾರಿಕಾ ಕ್ಷೇತ್ರ. ದೊಡ್ಡ ದೊಡ್ಡ ಕಾರ್ಪೆರೇಟ್ ಕಂಪನಿಗಳಿಂದ ಹಿಡಿದು ಸಣ್ಣ ಸಣ್ಣ ಕೈಗಾರಿಕೆಗಳೂ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಜನರ ಜೀವ ಉಳಿಸಲು ಅಮೂಲ್ಯ ಕೊಡುಗೆ ನೀಡುತ್ತಿವೆ.

    ಬೃಹತ್ ಕೈಗಾರಿಕೆಗಳಲ್ಲಿ ಆಮ್ಲಜನಕದ ಅವಶ್ಯಕತೆ ಇರುತ್ತದೆ. ಕೈಗಾರಿಕೆಗಾಗಿಯೇ ಬಳಸುವ ಈ ಆಮ್ಲಜನಕವನ್ನು ಮೆಡಿಕಲ್ ಆಕ್ಸಿಜನ್ ಆಗಿ ಪರಿವರ್ತಿಸಿ ತುರ್ತು ಅಗತ್ಯವನ್ನು ಪೂರೈಸಲು ಟೊಂಕ ಕಟ್ಟಿ ನಿಂತಿರುವುದು ವಿಶೇಷ ಸಂಗತಿ. ಅನೇಕ ದೊಡ್ಡ ಕೈಗಾರಿಕೆಗಳು ತಮ್ಮ ಚಟುವಟಿಕೆ ನಿಲ್ಲಿಸಿ ಆಮ್ಲಜನಕವನ್ನು ಆಸ್ಪತ್ರೆಗಳಿಗೆ ಪೂರೈಸುತ್ತಿವೆ. ಕರ್ನಾಟಕದಲ್ಲಿ ಜಿಂದಾಲ್ ಕಂಪನಿ ಸೇರಿ ಹಲವು ಬೃಹತ್ ಕೈಗಾರಿಕೆಗಳು ದೊಡ್ಡ ಪ್ರಮಾಣದಲ್ಲಿ ಆಮ್ಲಜನಕ ಉತ್ಪಾದಿಸುತ್ತಿವೆ. ಅವರೆಲ್ಲ ಮೊದಲ ಆದ್ಯತೆಯಾಗಿ ಮೆಡಿಕಲ್ ಆಕ್ಸಿಜನ್ ಉತ್ಪಾದಿಸಿ ಸರಬರಾಜು ಮಾಡುತ್ತಿದ್ದಾರೆ. ಇದೇ ರೀತಿ ದೇಶದ ವಿವಿಧ ಕಡೆ ತಮ್ಮ ಕೈಗಾರಿಕೆಗಳಲ್ಲಿ ಆಮ್ಲಜನಕ ಘಟಕ ಹೊಂದಿರುವ ಕಾರ್ಪೆರೇಟ್ ಕಂಪನಿಗಳು ತಮ್ಮ ಆದ್ಯತೆಯನ್ನು ಬದಲಾಯಿಸಿ ಜನರ ಜೀವ ಉಳಿಸಲು ಪಣತೊಟ್ಟಿವೆ. ಕೈಗಾರಿಕೆಗಳಲ್ಲಿ ಉತ್ಪಾದನೆಯಾದ ದ್ರವ ರೂಪದ ಆಕ್ಸಿಜನ್ ಹೊತ್ತ ಟ್ಯಾಂಕರ್​ಗಳನ್ನು ಹಗಲು ರಾತ್ರಿ ಎನ್ನದೇ ರೈಲ್ವೆ ಇಲಾಖೆ ಗ್ರೀನ್ ಕಾರಿಡಾರ್​ಗಳನ್ನು ಮಾಡಿಕೊಂಡು ದೇಶದ ಮೂಲೆ ಮೂಲೆಗಳಿಗೆ ತಲುಪಿಸುತ್ತಿದೆ. ಖಾಲಿಯಾದ ಟ್ಯಾಂಕರ್​ಗಳನ್ನು ಏರ್​ಲಿಫ್ಟ್ ಮಾಡಿ ಪುನಃ ಉತ್ಪಾದನಾ ಘಟಕಗಳ ಸಮೀಪದ ವಿಮಾನ ನಿಲ್ದಾಣಕ್ಕೆ ತಂದು ಬಿಡಲಾಗುತ್ತಿದೆ. ಈ ಹೋರಾಟ ಅಸಾಮಾನ್ಯವೇ ಸರಿ.

    ‘ಆಮ್ಲಜನಕ ಸಮಸ್ಯೆಯಾಗಿದೆ, ಜನರು ಅಪಾಯದಲ್ಲಿ ಸಿಲುಕುತ್ತಿದ್ದಾರೆ’ ಎಂದು ತಿಳಿಯುತ್ತಿದ್ದಂತೆ ಮೊದಲು ನೆರವಿಗೆ ಬಂದಿದ್ದು ಇದೇ ಅಂಬಾನಿ ಹಾಗೂ ಟಾಟಾ. ರಿಲಯನ್ಸ್ ಇಂಡಸ್ಟ್ರೀಸ್ ತನ್ನ ತೈಲ ಸಂಸ್ಕರಣಾಗಾರ ಘಟಕವನ್ನು ಆಮ್ಲಜನಕ ಉತ್ಪಾದಕ ಘಟಕವಾಗಿ ಪರಿವರ್ತಿಸಿತು. ಪ್ರತಿ ದಿನ 700 ಟನ್ ಆಮ್ಲಜನಕವನ್ನು ಇಲ್ಲಿಂದ ಆಸ್ಪತ್ರೆಗಳಿಗಾಗಿ ಪೂರೈಸಲಾಗುತ್ತಿದೆ. ಗುಜರಾತ್​ನ ಜಾಮ್ಗರದಲ್ಲಿರುವ ಸಂಸ್ಕರಣಾ ಘಟಕದಲ್ಲಿ 100 ಟನ್​ನಷ್ಟು ಮೆಡಿಕಲ್ ಆಕ್ಸಿಜನ್ ಉತ್ಪಾದಿಸುತ್ತಿತ್ತು. ಇದನ್ನು 700 ಟನ್​ಗೆ ವೃದ್ಧಿಸಲಾಗಿದೆ. ಇಲ್ಲಿಂದ ಗುಜರಾತ್​ನ ಬೇಡಿಕೆ ಜತೆಗೆ ಮಹಾರಾಷ್ಟ್ರ, ಮಧ್ಯಪ್ರದೇಶದ ಬೇಡಿಕೆಯನ್ನೂ ಪೂರೈಸಲಾಗುತ್ತಿದೆ. ಇದೇ ರೀತಿ ಟಾಟಾ ಗ್ರೂಪ್ 24 ಕ್ರಯೋಜನಿಕ್ ಕಂಟೈನರ್​ನಲ್ಲಿ ಆಮ್ಲಜನಕವನ್ನು ಆಮದು ಮಾಡಿಕೊಂಡಿದ್ದು, ಅದನ್ನು ಅನಿಲ ರೂಪಕ್ಕೆ ಪರಿವರ್ತಿಸಿ ಪೂರೈಸುತ್ತಿದೆ. ಇನ್ನೂ 20 ಕಂಟೈನರ್ ತರಿಸಿಕೊಳ್ಳುತ್ತಿದೆ. ಜತೆಗೆ ಸ್ಥಳೀಯ ಘಟಕಗಳಿಂದ ದಿನಕ್ಕೆ 300 ಟನ್ ಆಕ್ಸಿಜನ್ ಅನ್ನು ತುರ್ತು ಸಂದರ್ಭಕ್ಕೆ ನೀಡುತ್ತಿದೆ. ಜಿಂದಾಲ್ ಗ್ರೂಪ್ ಕರ್ನಾಟಕ, ತಮಿಳುನಾಡು ಮತ್ತು ಮಹಾರಾಷ್ಟ್ರದಲ್ಲಿರುವ ಪ್ಲಾಂಟ್​ಗಳಿಂದ ದಿನಕ್ಕೆ 600 ಟನ್ ಆಮ್ಲಜನಕ ಪೂರೈಸುತ್ತಿದೆ. ವೇದಾಂತ ಗ್ರೂಪ್ ತಮಿಳುನಾಡಿನಲ್ಲಿರುವ ತನ್ನ ಘಟಕದಲ್ಲಿ 1050 ಟನ್ ಆಕ್ಸಿಜನ್ ಉತ್ಪಾದಿಸುತ್ತಿದ್ದು, ಇದರಲ್ಲಿ ಎಷ್ಟು ಬೇಕೋ ಅಷ್ಟನ್ನು ತುರ್ತು ಪರಿಸ್ಥಿತಿಗೆ ನೀಡಲು ಒಪ್ಪಿಗೆ ನೀಡಿದೆ. ಅದಾನಿ ಗ್ರೂಪ್ ಪ್ರತಿ ನಿತ್ಯ 1500 ಸಿಲಿಂಡರ್​ಗಳನ್ನು ಆರೋಗ್ಯ ಸೇವೆಗೆ ಕಳಿಸುತ್ತಿದೆ. ಜತೆಗೆ ದುಬೈನಿಂದ 5000 ಸಿಲಿಂಡರ್​ಗಳನ್ನು ತರಿಸಿಕೊಳ್ಳುತ್ತಿದೆ.

    ಕೈಗಾರಿಕೆಗೇಕೆ ಆಕ್ಸಿಜನ್?: ಮೆಟಲ್ ಕಟಿಂಗ್, ವೆಲ್ಡಿಂಗ್, ಫಾರ್ವಿುಂಗ್, ಫ್ಯಾಬ್ರಿಕೇಷನ್ ಲೇಸರ್ ಕಟಿಂಗ್, ಫ್ಲೇಮ್ ಕಟಿಂಗ್​ನಲ್ಲಿ ಆಮ್ಲಜನಕ ಅತ್ಯಗತ್ಯವಾಗಿರುತ್ತದೆ. ಆಮ್ಲಜನಕ ಹೊರತಾಗಿ ನೈಟ್ರೋಜನ್ ಕೂಡ ಉಪಯೋಗಿಸುತ್ತಾರೆ. ಆದರೆ, ಅದರ ದರ ದುಬಾರಿ.

    ಉತ್ಪಾದನೆಯೇ ರೋಚಕ: ಗಾಳಿಯಲ್ಲಿರುವ ಆಮ್ಲಜನಕದೊಂದಿಗೆ ವಿವಿಧ ಬಗೆಯ ಅನಿಲಗಳು, ನೀರು ಮಿಳಿತವಾಗಿರುತ್ತದೆ. ಅವುಗಳನ್ನು ಪ್ರತ್ಯೇಕಗೊಳಿಸಿ ಕಂಪ್ರೆಸ್ ಮಾಡಿ ಸಂಗ್ರಹಿಸಲಾಗುತ್ತದೆ. ಈ ಕಾರ್ಯದಲ್ಲಿ ಫಿಲ್ಟರೇಷನ್, ಸೆಪರೇಷನ್ ಪ್ರಮುಖಪಾತ್ರ ವಹಿಸುತ್ತದೆ. ನೈಟ್ರೋಜನ್, ಸಲ್ಪರ್​ ಕೂಡ ಪ್ರತ್ಯೇಕಗೊಳಿಸಬೇಕು.

    ವ್ಯತ್ಯಾಸ ಏನು?: ಕೈಗಾರಿಕೆಯಲ್ಲಿ ಬಳಸುವ ಆಮ್ಲಜನಕದ ಶುದ್ಧತೆ ಶೇ. 92ರಿಂದ 94ರಷ್ಟಿರುತ್ತದೆ. ಆದರೆ, ವೈದ್ಯಕೀಯ ಆಮ್ಲಜನಕದ ಶುದ್ಧತೆ ಶೇ. 99.2ರಷ್ಟಾದರೂ ಇರಬೇಕಾಗುತ್ತದೆ.

    ಉತ್ಪಾದನೆ ಎಲ್ಲಿ?: ಕೈಗಾರಿಕೆಗೆ ಬಳಸಲು ಆಮ್ಲಜನಕ ಉತ್ಪಾದಿಸುವ ಘಟಕದಲ್ಲೇ ಮೆಡಿಕಲ್ ಆಕ್ಸಿಜನ್ ಉತ್ಪಾದಿಸಲಾಗುತ್ತದೆ. ಫಿಲ್ಟರೇಷನ್ ವ್ಯವಸ್ಥೆ ಕೊಂಚ ಬದಲಾವಣೆ ಮಾಡಿಕೊಳ್ಳಲಾಗುತ್ತದೆ. ಆದರೆ, ಮೆಡಿಕಲ್ ಆಕ್ಸಿಜನ್ ಉತ್ಪಾದನೆಗೆ ಸರ್ಕಾರದಿಂದ ಪ್ರತ್ಯೇಕ ಅನುಮತಿ ಕಡ್ಡಾಯ.

    ಎಲ್ಲೆಲ್ಲಿ ಬಳಕೆ?: ಲೇಸರ್ ಕಟಿಂಗ್ ಮಷಿನ್​ನಲ್ಲಿ ಆಮ್ಲಜನಕ ಬಳಸಲಾಗುತ್ತದೆ. ಫ್ಲೇಮ್ ಕಟಿಂಗ್ ಮಷಿನ್​ಗೂ ಆಕ್ಸಿಜನ್ ಬೇಕೇಬೇಕು.

    ಕಳೆದ ವರ್ಷದ ಲಾಕ್​ಡೌನ್​ನಿಂದಲೇ ಪರಿಸ್ಥಿತಿ ಇನ್ನೂ ಸುಧಾರಿಸಿಲ್ಲ. ಆದರೂ ಈಗ ಮಾನವೀಯತೆ ದೃಷ್ಟಿಯಿಂದ ಆಮ್ಲಜನಕ ಬಳಸದೇ ಸಂಪೂರ್ಣವಾಗಿ ಕೈಗಾರಿಕೆಗಳು ಮುಚ್ಚಲ್ಪಟ್ಟಿವೆ. ಯಾವುದೇ ಬೇಡಿಕೆ ಇಡದೇ ಸರ್ಕಾರದ ಕರೆಗೆ ಮನ್ನಣೆ ನೀಡಿದ್ದೇವೆ. ಜನರ ಜೀವ ಉಳಿಯುವುದು ಮೊದಲು ಮುಖ್ಯ ಎಂಬ ಮನವಿ ನಮ್ಮ ಸಂಘದ್ದು.

    | ಸಿ. ಪ್ರಕಾಶ್ ಪೀಣ್ಯ ಕೈಗಾರಿಕಾ ಸಂಘ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts