More

    ವಿದೇಶ ವಿದ್ಯಮಾನ | ಟ್ರಂಪ್ ಯುಗಕ್ಕೆ ಹಿಂಸಾವಿದಾಯ

    ಮೇಕ್ ಅಮೆರಿಕ ಗ್ರೇಟ್ ಅಗೇನ್ ಎನ್ನುತ್ತ ಮತ್ತೊಂದು ಅವಧಿಗೆ ಅಧ್ಯಕ್ಷ ಗಾದಿಯಲ್ಲಿ ಉಳಿಯಲು ಡೊನಾಲ್ಡ್ ಟ್ರಂಪ್ ನಡೆಸಿದ ಎಲ್ಲ ಪ್ರಯತ್ನಗಳೂ ವಿಫಲವಾದವು. ವಿವಾದಗಳೊಂದಿಗೇ ಅಧ್ಯಕ್ಷ ಪಟ್ಟಕ್ಕೇರಿದ ಡೊನಾಲ್ಡ್ ಟ್ರಂಪ್, ಅಲ್ಲಿನ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಸಿ ಬಳಿಯುವಂಥ ಹಿಂಸಾಚಾರದೊಂದಿಗೆ ಅಧಿಕಾರದಿಂದ ಕೆಳಗಿಳಿಯುತ್ತಿದ್ದಾರೆ. ಈ ವಿದ್ಯಮಾನದ ಚಿತ್ರಣ ಇಲ್ಲಿದೆ.

    ಅಮೆರಿಕದ 2020ರ ಅಧ್ಯಕ್ಷೀಯ ಚುನಾವಣೆ ಜಗತ್ತಿನ ಗಮನಸೆಳೆದುದೇ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಿಚಿತ್ರ ವೈಖರಿಯಿಂದ! ಚುನಾವಣಾ ಫಲಿತಾಂಶ ಘೋಷಣೆಯಾದರೂ, ಅದನ್ನು ಒಪ್ಪಿಕೊಳ್ಳದೇ ಕೋರ್ಟ್ ಮೆಟ್ಟಿಲೇರಿ ಮುಖಭಂಗ ಅನುಭವಿಸಿದರು. ಸೆನೆಟ್ ಮೂಲಕ ಚುನಾವಣಾ ಫಲಿತಾಂಶ ಅಡಿಮೇಲು ಮಾಡುವ ಪ್ರಯತ್ನವೂ ಕೈಗೂಡಲಿಲ್ಲ. ಸಂಸತ್ತಿನ ಸೆನೆಟ್ ಮತ್ತು ಹೌಸ್ ಆಫ್ ರೆಪ್ರಸೆಂಟೇಟಿವ್ಸ್ ಜಂಟಿ ಅಧಿವೇಶನದಲ್ಲಿ ಜೋ ಬೈಡೆನ್ ತಂಡದ ಗೆಲುವು ಸ್ಥಿರೀಕರಿಸಲು ಆಕ್ಷೇಪ ಒಡ್ಡುವುದಕ್ಕೂ ಟ್ರಂಪ್ ಹಿಂದೇಟು ಹಾಕಲಿಲ್ಲ. ಇಷ್ಟಾಗ್ಯೂ, ಎಲ್ಲ ಕಡೆ ಸೋಲು ಕಂಡರು ಟ್ರಂಪ್. ಜೋ ಬೈಡೆನ್ ಅಮೆರಿಕದ ಮುಂದಿನ ಅಧ್ಯಕ್ಷರೆಂದೂ, ಕಮಲಾ ಹ್ಯಾರಿಸ್ ಉಪಾಧ್ಯಕ್ಷರೆಂದೂ ಸಂಸತ್ತು ದೃಢೀಕರಿಸಿತು.

    ಹಿಂಸೆಗೆ ಪ್ರಚೋದನೆ: ಬುಧವಾರ ರಾತ್ರಿ ಕ್ಯಾಪಿಟಲ್ ಹಿಲ್​ಗೆ ನುಗ್ಗಲು ಪ್ರಯತ್ನಿಸಿ ಹಿಂಸಾಚಾರಕ್ಕೆ ಇಳಿದ ಬೆಂಬಲಿಗರನ್ನು ಉದ್ದೇಶಿಸಿ ವಿಡಿಯೋ ಒಂದನ್ನು ಪೋಸ್ಟ್ ಮಾಡಿದರು ಟ್ರಂಪ್. ಅದರಲ್ಲಿ ಅವರು, ‘ಚುನಾವಣಾ ಫಲಿತಾಂಶ ಸರಿಯಾದುದಲ್ಲ, ಮತವಂಚನೆ ಆಗಿದೆ’ ಎಂದು ಹೇಳಿದ ಬೆಂಬಲಿಗರನ್ನು ಇಷ್ಟಪಡುತ್ತಿರುವುದಾಗಿ ಹೇಳಿದ್ದಾರೆ. ಅವರ ಈ ಮಾತುಗಳು ಹಿಂಸಾಚಾರಕ್ಕೆ ಇಳಿದ ಬೆಂಬಲಿಗರನ್ನು ಮತ್ತಷ್ಟು ಪ್ರಚೋದಿಸಿದವು ಎಂಬ ಆರೋಪ ವ್ಯಕ್ತವಾಗಿದೆ. ವಾಷಿಂಗ್ಟನ್ ಡಿಸಿಯಲ್ಲಿ 15 ದಿನಗಳ ಕಾಲ ಸಾರ್ವಜನಿಕ ತುರ್ತಪರಿಸ್ಥಿತಿ ಘೋಷಿಸಲಾಗಿದೆ

    ಪೊಲೀಸರ ಗುಂಡಿಗೆ ಮಹಿಳೆ ಬಲಿ: ಉದ್ರಿಕ್ತ ಗುಂಪು ಸಂಸತ್ ಕಟ್ಟಡದ ಕಿಟಕಿ ಒಡೆದು ಒಳಗೆ ನುಗ್ಗುವುದಕ್ಕೆ ಪ್ರಯತ್ನಿಸಿದ ವೇಳೆ ಪೊಲೀಸರ ಗುಂಡಿಗೆ ಅಶ್ಲಿ ಬಬ್ಬಿಟ್ (35) ಎಂಬ ಮಹಿಳೆ ಬಲಿಯಾಗಿದ್ದಾರೆ. ಇವರು ವಾಯುಪಡೆಯಲ್ಲಿ ಸೇವೆ ಸಲ್ಲಿಸಿದ್ದ ಹಿರಿಯ ಅಧಿಕಾರಿ ಎಂದು ಗುರುತಿಸಲಾಗಿದೆ. ಇನ್ನುಳಿದ ಮೂವರು ಅಸ್ವಸ್ಥರಾಗಿ ಪ್ರಾಣ ಬಿಟ್ಟಿದ್ದಾರೆ.

    ಪದಚ್ಯುತಿಗೆ ಏನು ಕ್ರಮ?

    ಡೊನಾಲ್ಡ್ ಟ್ರಂಪ್ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯುವುದಕ್ಕೆ ಅರ್ಹರಲ್ಲ ಅಥವಾ ಅವರಿಂದ ಅದು ಸಾಧ್ಯವಾಗುತ್ತಿಲ್ಲ ಎಂದು ಉಪಾಧ್ಯಕ್ಷ ಮೈಕ್ ಪೆನ್ಸ್ ಮತ್ತು 15 ಪ್ರಮುಖ ಸಂಪುಟ ಸದಸ್ಯರ ಪೈಕಿ 8 ಸದಸ್ಯರು ಒಪ್ಪಿಕೊಂಡು ಕಾಂಗ್ರೆಸ್​ಗೆ ತಿಳಿಸಬೇಕು. ಅಂದರೆ ಹೌಸ್ ಸ್ಪೀಕರ್​ಗೆ ಔಪಚಾರಿಕ ಸೂಚನೆ ರವಾನೆಯಾಗಬೇಕು. ಅದು ಅಂಗೀಕಾರವಾದ ಕೂಡಲೇ ಪೆನ್ಸ್ ಹಂಗಾಮಿ ಅಧ್ಯಕ್ಷರಾಗುತ್ತಾರೆ. ಇದಲ್ಲದೇ ಹೋದರೆ, ಕಾಂಗ್ರೆಸ್ ಕೂಡ ತನ್ನದೇ ಆದ ವ್ಯವಸ್ಥೆಯನ್ನು ರೂಪಿಸಿಕೊಂಡು ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯಲು ಟ್ರಂಪ್ ಅರ್ಹರೇ ಎಂಬುದನ್ನು ಪರಿಶೀಲಿಸಿ ನಿರ್ಧಾರ ತೆಗೆದುಕೊಳ್ಳಬಹುದು. ಇಲ್ಲೂ ಪೆನ್ಸ್ ಅವರ ನಿರ್ಧಾರ/ನಿಲವು ನಿರ್ಣಾಯಕ. ಇನ್ನೂ ಒಂದು ಆಯ್ಕೆ ಇದ್ದು, ಪ್ರಿನ್ಸಿಪಾಲ್ ಆಫೀಸರ್ಸ್ ಗುಂಪು ಅಂದರೆ 15 ಸಂಪುಟ ಸದಸ್ಯರ ಸಂಖ್ಯೆಗಿಂತ ಹೆಚ್ಚಾಗಿದ್ದು, ಬಹುತೇಕರು ಟ್ರಂಪ್ ಅನರ್ಹ ಎಂದು ಹೇಳಿದರೂ ಆಗಲೂ ಪದಚ್ಯುತಿಗೆ ಕ್ರಮ ತೆಗೆದುಕೊಳ್ಳಬಹುದು.

    ವಿದೇಶ ವಿದ್ಯಮಾನ | ಟ್ರಂಪ್ ಯುಗಕ್ಕೆ ಹಿಂಸಾವಿದಾಯನಮ್ಮ ದೇಶ, ಸಂವಿಧಾನವನ್ನು ರಕ್ಷಿಸುವುದಕ್ಕೆ ಬೇಕಾದ ಕ್ರಮ ತೆಗೆದುಕೊಳ್ಳಲು ಮೈಕ್ ಪೆನ್ಸ್​ಗೆ ಧೈರ್ಯವಿಲ್ಲ. ಮತವಂಚನೆ ಸರಿಪಡಿಸುವುದಕ್ಕೆ ಅವಕಾಶ ನೀಡುವ ಬದಲು ಅವರು ರಾಜ್ಯಗಳಿಗೆ ಫಲಿತಾಂಶವನ್ನು ಸ್ಥಿರೀಕರಿಸುವುದಕ್ಕೆ ಅವಕಾಶ ನೀಡಿದ್ದಾರೆ. ಅಮೆರಿಕಕ್ಕೆ ಸತ್ಯ ಗೊತ್ತಾಗಬೇಕು!

    | ಡೊನಾಲ್ಡ್ ಟ್ರಂಪ್ ಅಮೆರಿಕ ಅಧ್ಯಕ್ಷ

    ವಿದೇಶ ವಿದ್ಯಮಾನ | ಟ್ರಂಪ್ ಯುಗಕ್ಕೆ ಹಿಂಸಾವಿದಾಯನಮ್ಮ ಕ್ಯಾಪಿಟಲ್​ನಲ್ಲಿ ಹಿಂಸಾಚಾರ ನಡೆಸಿದವರ ಗಮನಕ್ಕೆ ಹೇಳ್ತೇನೆ- ನೀವು ಗೆಲ್ಲೋದಿಲ್ಲ. ಹಿಂಸಾಚಾರಕ್ಕೆ ಗೆಲುವು ಸಿಗೋ ದಿಲ್ಲ. ಸ್ವಾತಂತ್ರ್ಯಕ್ಕೇ ವಿಜಯ ಸಿಗೋದು. ಇದು ಇನ್ನೂ ಕೂಡ ಜನರದ್ದೇ ಸಂಸತ್ತು. ಹಿಂಸಾಚಾರವನ್ನು ನಾವು ಖಂಡಿಸುತ್ತೇವೆ.

    | ಮೈಕ್ ಪೆನ್ಸ್ ಅಮೆರಿಕದ ಉಪಾಧ್ಯಕ್ಷ

    ವಿದೇಶ ವಿದ್ಯಮಾನ | ಟ್ರಂಪ್ ಯುಗಕ್ಕೆ ಹಿಂಸಾವಿದಾಯಕ್ಯಾಪಿಟಲ್ ಹಿಲ್​ನಲ್ಲಿ ನಡೆದ ಹಿಂಸಾಚಾರವನ್ನು ಇತಿಹಾಸ ಎಂದಿಗೂ ನೆನಪಿಸಿಕೊಳ್ಳಲಿದೆ. ಅಧ್ಯಕ್ಷ ಸ್ಥಾನದಲ್ಲಿ ಕುಳಿತವರು ನಿರಾಧಾರ ಸುಳ್ಳುಗಳನ್ನೇ ಹೇಳುತ್ತ ಬಂದಿದ್ದು, ಹಿಂಸೆಗೆ ಪ್ರಚೋದನೆ ನೀಡಿದ್ದಾರೆ. ಅಷ್ಟೇ ಅಲ್ಲ, ಕಾನೂನು ಬದ್ಧವಾಗಿ ನಡೆದ ಚುನಾವಣೆಯ ಫಲಿತಾಂಶವನ್ನು ಒಪ್ಪಿ ಕೊಳ್ಳದೆ, ಅಗೌರವ ತೋರುವ ಮೂಲಕ ದೇಶವೇ ತಲೆತಗ್ಗಿಸುವಂತೆ ಮಾಡಿದ್ದಾರೆ’.

    | ಬರಾಕ್ ಒಬಾಮ ಅಮೆರಿಕದ ಮಾಜಿ ಅಧ್ಯಕ್ಷ

    ಸ್ಪೀಕರ್ ಕಚೇರಿಗೆ ಹಾನಿ

    ವಿದೇಶ ವಿದ್ಯಮಾನ | ಟ್ರಂಪ್ ಯುಗಕ್ಕೆ ಹಿಂಸಾವಿದಾಯಹೌಸ್ ಆಫ್ ರೆಪ್ರಸೆಂಟೇಟಿವ್ಸ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ಕಚೇರಿಗೂ ನುಗ್ಗಿದ ಟ್ರಂಪ್ ಬೆಂಬಲಿಗರು ಅಲ್ಲಿನ ಪೀಠೋಪಕರಣಗಳಿಗೆ ಹಾನಿ ಎಸಗಿದ್ದಾರೆ. ಕೈಗೆ ಸಿಕ್ಕ ವಸ್ತುಗಳನ್ನು ದೋಚಿಕೊಂಡು ಹೋಗಿದ್ದಾರೆ. ಕೆಲವರು ಅಲ್ಲಿ ಸ್ಪೀಕರ್ ಕುರ್ಚಿಯಲ್ಲಿ ಕುಳಿತು ಫೋಟೋಗೂ ಪೋಸ್ ಕೊಟ್ಟಿದ್ದಾರೆ. ನ್ಯಾನ್ಸಿ ಪೆಲೋಸಿ ಸ್ಪೀಕರ್ ಹುದ್ದೆಗೇರಿದ ಏಕೈಕ ಮಹಿಳೆ ಎಂಬ ಕೀರ್ತಿಗೂ ಭಾಜನರು.

    ಕ್ಯಾಬಿನೆಟ್ ಸಭೆ

    ಅಮೆರಿಕ ಸಂವಿಧಾನದ 25ನೇ ತಿದ್ದುಪಡಿ ಬಳಸಿಕೊಂಡು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಪದಚ್ಯುತಿಗೊಳಿಸುವ ವಿಚಾರವನ್ನು ಅವರದ್ದೇ ಸಂಪುಟ ಸದಸ್ಯರು ರ್ಚಚಿಸತೊಡಗಿದ್ದಾರೆ. ಕ್ಯಾಪಿಟಲ್ ಹಿಲ್ ಹಿಂಸಾಚಾರಕ್ಕೆ ಪ್ರೇರೇಪಿಸಿದ ಟ್ರಂಪ್ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯಲು ಅರ್ಹರಲ್ಲ ಎಂದು ಬಹುತೇಕ ಸದಸ್ಯರು ಅಭಿಪ್ರಾಯ ಪಟ್ಟಿದ್ದಾರೆ. ಈ ಸಂಬಂಧ ಕ್ರಮ ತೆಗೆದುಕೊಳ್ಳುವಂತೆ ಉಪಾಧ್ಯಕ್ಷ ಮೈಕ್ ಪೆನ್ಸ್ ಅವರನ್ನು ಆಗ್ರಹಿಸಿದ್ದಾರೆ. ಇನ್ನೊಂದೆಡೆ ಟ್ರಂಪ್ ಪದಚ್ಯುತಿಗೆ ಸಂಬಂಧಪಟ್ಟ ಪ್ರಸ್ತಾವನೆ ಸಿದ್ಧಪಡಿಸುತ್ತಿರುವುದಾಗಿ ಹಿರಿಯ ಡೆಮಾಕ್ರಟ್ ಸದಸ್ಯೆ ಹಕೀಮ್ ಜೆಫ್ರೀಸ್ ಟ್ವೀಟ್ ಮಾಡಿದ್ದಾರೆ.

    ಪ್ರತಿಭಟನಾಕಾರರ ಕೈಲಿ ತಿರಂಗಾ!

    ಕ್ಯಾಪಿಟಲ್ ಹಿಂಸಾಚಾರದ ವೇಳೆ ಟ್ರಂಪ್ ಬೆಂಬಲಿಗರು ತ್ರಿವರ್ಣ ಧ್ವಜ ಹಿಡಿದುಕೊಂಡಿರುವ ದೃಶ್ಯ ಗಮನಸೆಳೆಯಿತು. ಇದಕ್ಕೆ ಕೆಲ ಭಾರತೀಯರು ಪ್ರತಿಕ್ರಿಯೆ ನೀಡಿದ್ದು, ‘ಪ್ರಜಾಪ್ರಭುತ್ವ ತಲೆತಗ್ಗಿಸುವ ಕೆಲಸ ಮಾಡುವಾಗ ತಿರಂಗಾ ಹಿಡಿದುಕೊಳ್ಳಬೇಡಿ. ನಮ್ಮ ದೇಶದ ಧ್ವಜಕ್ಕೆ ಅವಮಾನ ಎಸಗುತ್ತಿದ್ದೀರಿ’ ಎಂದು ಟ್ವೀಟ್ ಮಾಡಿದ್ದಾರೆ.

    ವಿಶ್ವನಾಯಕರ ಕಳವಳ: ಕ್ಯಾಪಿಟಲ್ ಹಿಲ್ ಹಿಂಸಾಚಾರದ ವಿಚಾರವಾಗಿ ವಿಶ್ವಸಂಸ್ಥೆ ಮುಖ್ಯಸ್ಥರು, ವಿವಿಧ ರಾಷ್ಟ್ರಗಳ ನಾಯಕರು ಕಳವಳ ವ್ಯಕ್ತಪಡಿಸಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಎತ್ತಿಹಿಡಿದು ಸುಗಮವಾಗಿ ಅಧಿಕಾರ ಹಸ್ತಾಂತರಿಸಬೇಕು ಎಂದು ಆಗ್ರಹಿಸಿದ್ದಾರೆ.

    207 ವರ್ಷ ನಂತರ ಹಿಂಸೆ: ಕ್ಯಾಪಿಟಲ್ ಹಿಲ್​ನಲ್ಲಿ ಈ ಹಿಂದೆ 1814ರಲ್ಲಿ ಹಿಂಸಾಚಾರವಾಗಿತ್ತು. 1812ರ ಯುದ್ಧ ಮುಂದುವರಿದ ಸಂದರ್ಭದಲ್ಲಿ ಬ್ರಿಟಿಷ್ ಸೇನೆ ಕ್ಯಾಪಿಟಲ್ ಹಿಲ್​ಗೆ ನುಗ್ಗಿ ಆ ಕಟ್ಟಡಕ್ಕೆ ಬೆಂಕಿ ಹಚ್ಚಿತ್ತು. ಅದೃಷ್ಟವಶಾತ್ ಮಳೆ ಬಿದ್ದ ಕಾರಣ ಸಂಪೂರ್ಣ ಸುಟ್ಟು ಹೋಗಲಿಲ್ಲ ಎಂಬ ಅಂಶ ಇತಿಹಾಸದ ಪುಟದಲ್ಲಿ ದಾಖಲಾಗಿದೆ.

    ಅಧಿಕಾರಿಗಳ ರಾಜೀನಾಮೆ: ಶ್ವೇತಭವನದ ಡೆಪ್ಯೂಟಿ ನ್ಯಾಷನಲ್ ಸೆಕ್ಯೂರಿಟಿ ಅಡ್ವೈಸರ್ ಮಟ್ ಪೊಟ್ಟಿಂಜರ್ ಸೇರಿ ಅನೇಕರು ರಾಜೀನಾಮೆ ಸಲ್ಲಿಸಿದ್ದಾರೆ. ಮೆಲೆನಿಯಾ ಟ್ರಂಪ್ ಅವರ ಸಿಬ್ಬಂದಿ ಮುಖ್ಯಸ್ಥೆ ಸ್ಟೆಫೈನ್ ಗ್ರಿಶಮ್ ಕೂಡ ರಾಜೀನಾಮೆ ಸಲ್ಲಿಸಿದ್ದಾರೆ.

    ಫೇಸ್​ಬುಕ್, ಟ್ವಿಟರ್ ​ಬ್ಲಾಕ್: ಡೊನಾಲ್ಡ್ ಟ್ರಂಪ್ ಅವರ ಫೇಸ್​ಬುಕ್, ಟ್ವಿಟರ್, ಇನ್​ಸ್ಟಾಗ್ರಾಂ ಸೇರಿ ಎಲ್ಲ ಸಾಮಾಜಿಕ ಜಾಲತಾಣಗಳ ಖಾತೆಗಳು ಬ್ಲಾಕ್ ಆಗಿವೆ. ಅವರ ಖಾತೆಯಲ್ಲಿ ಪ್ರಚೋದನಾತ್ಮಕ ಸಂದೇಶಗಳು ಪೋಸ್ಟ್ ಆಗುತ್ತಿದ್ದ ಕಾರಣ ಸೋಷಿಯಲ್ ಮೀಡಿಯಾಗಳು ಅವರ ಖಾತೆಗಳನ್ನು ಬ್ಲಾಕ್ ಮಾಡಿವೆ.

    ವಿದೇಶ ವಿದ್ಯಮಾನ | ಟ್ರಂಪ್ ಯುಗಕ್ಕೆ ಹಿಂಸಾವಿದಾಯ
    ಕ್ಯಾಪಿಟಲ್ ಹಿಲ್​ನಲ್ಲಿ ಪ್ರತಿಭಟನಾನಿರತ ಟ್ರಂಪ್ ಬೆಂಬಲಿಗರು.

    ಸುಂದರ ದೃಶ್ಯ ಎಂದ ಚೀನಾ: ಹಾಂಗ್​ಕಾಂಗ್ ಪ್ರತಿಭಟನೆಯ ಫೋಟೋವನ್ನು ಕ್ಯಾಪಿಟಲ್ ಹಿಲ್ ಹಿಂಸಾಚಾರದ ಫೋಟೋದ ಜತೆಗೆ ಜೋಡಿಸಿರುವ ಚೀನಾದ ಸರ್ಕಾರಿ ಸ್ವಾಮ್ಯದ ‘ಗ್ಲೋಬಲ್ ಟೈಮ್್ಸ’, ಇದನ್ನು ‘ಸುಂದರ ದೃಶ್ಯ’ ಎಂದು ಟ್ವೀಟ್ ಮಾಡಿ ಲೇವಡಿ ಮಾಡಿದೆ.

    ಗಮನ ಸೆಳೆದ 25ನೇ ತಿದ್ದುಪಡಿ: ಅಮೆರಿಕದ ಸಂವಿಧಾನಕ್ಕೆ 1967ರಲ್ಲಿ ತಂದಿರುವ 25ನೇ ತಿದ್ದುಪಡಿ ಈಗ ಗಮನಸೆಳೆದಿದೆ. ಜಾನ್ ಎಫ್ ಕೆನಡಿ ಹತ್ಯೆ ನಂತರದಲ್ಲಿ ಈ ತಿದ್ದುಪಡಿ ತರಲಾಗಿತ್ತು. ಇದಲ್ಲಿ ನಾಲ್ಕು ಸೆಕ್ಷನ್​ಗಳಿದ್ದು, ನಾಲ್ಕು ಸಂದರ್ಭಗಳನ್ನು ಉಲ್ಲೇಖಿಸಿ ಅಧ್ಯಕ್ಷರಾಗಿ ಆಯ್ಕೆಯಾದವರಿಗೆ ಅವರ ಅಧಿಕಾರಾವಧಿಯಲ್ಲಿ ಏನಾದರೂ ಸಂಭವಿಸಿದರೆ ಅಥವಾ ಪದಚ್ಯುತಿ ಸಂದರ್ಭದಲ್ಲಿ ಉತ್ತರಾಧಿಕಾರಿ ಆಯ್ಕೆ ವಿಚಾರಕ್ಕೆ ಸಂಬಂಧಿಸಿದ್ದೇ ಆಗಿದೆ.

    ಟ್ರಂಪ್ ನೇರ ಹೊಣೆ ಎಂದ ಮಾಧ್ಯಮ: ಡೊನಾಲ್ಡ್ ಟ್ರಂಪ್ ಅವರ ರಾಷ್ಟ್ರದ್ರೋಹದ ಮಾತುಗಳೇ ಹಿಂಸಾಚಾರಕ್ಕೆ ಪ್ರೇರಣೆ. ಹೀಗಾಗಿ ಕ್ಯಾಪಿಟಲ್ ಹಿಲ್ ಹಿಂಸಾಚಾರಕ್ಕೆ ಟ್ರಂಪ್ ನೇರ ಹೊಣೆಗಾರ ಎಂದು ಅಮೆರಿಕದ ಮಾಧ್ಯಮ ಸಂಸ್ಥೆಗಳು ನೇರವಾಗಿ ಆರೋಪಿಸಿವೆ. ಅಲ್ಲದೆ ಅವರನ್ನು ಪದಚ್ಯುತಿಗೊಳಿಸಲು ಕ್ರಮ ತೆಗೆದುಕೊಳ್ಳ ಬೇಕು ಮತ್ತು ಕ್ರಿಮಿನಲ್ ವಿಚಾರಣೆಗೆ ಒಳಪಡಿಸಬೇಕು ಎಂದು ಆಗ್ರಹಿಸಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts