More

    ವೈವಿಧ್ಯಮಯ ಅನುಭವ ಪರಿಪೂರ್ಣ ವ್ಯಕ್ತಿತ್ವ; ಆರೆಸ್ಸೆಸ್​ನ ರಾಷ್ಟ್ರೀಯ ಸರಕಾರ್ಯವಾಹರಾಗಿ ಆಯ್ಕೆಯಾಗಿರುವ ಕನ್ನಡಿಗ

    ವೈವಿಧ್ಯಮಯ ಅನುಭವ ಪರಿಪೂರ್ಣ ವ್ಯಕ್ತಿತ್ವ; ಆರೆಸ್ಸೆಸ್​ನ ರಾಷ್ಟ್ರೀಯ ಸರಕಾರ್ಯವಾಹರಾಗಿ ಆಯ್ಕೆಯಾಗಿರುವ ಕನ್ನಡಿಗದತ್ತಾತ್ರೇಯ ಹೊಸಬಾಳೆ ಸೌಮ್ಯ ಸ್ವಭಾವದ ಮೃದುಭಾಷಿ. ಆದರೆ ವೈಚಾರಿಕತೆಯ ವಿಷಯ ಬಂದಾಗ ‘ವಜ್ರಾದಪಿ ಕಠೋರಾಣಿ’! ಅವರ ಜತೆ 40 ವರ್ಷಗಳ ಒಡನಾಟ ಹೊಂದಿರುವ ಎಂ.ಎಚ್. ಶ್ರೀಧರ್ ಅವರು ಇಲ್ಲಿ ಹಲವು ಆಪ್ತ ಘಟನೆಗಳನ್ನು ಮೆಲುಕು ಹಾಕಿದ್ದಾರೆ.

    ದತ್ತಾತ್ರೇಯ ಹೊಸಬಾಳೆ ನಮ್ಮೆಲ್ಲರ ಪ್ರೀತಿಯ ದತ್ತ. ಅವರದು ಬಹು ವೈವಿಧ್ಯಮಯ ವ್ಯಕ್ತಿತ್ವ. ಅವರಿಗೆ ಎಲ್ಲ ವಿಷಯಗಳ ಬಗ್ಗೆಯೂ ತೀವ್ರ ಆಸಕ್ತಿ. ಅವರ ಬಗ್ಗೆ ಹತ್ತಿರದಿಂದ ಬಲ್ಲವರು ಹೇಳುವ ಮಾತು ‘ನೋಡಿ ಕಲಿ, ಕೇಳಿ ತಿಳಿ’. ಅಂದರೆ ಅವರನ್ನು ನೋಡಿ ನಾವು ಕಲಿಯುವುದು ಬೇಕಾದಷ್ಟಿದೆ, ಅವರೊಂದಿಗೆ ಮಾತನಾಡುತ್ತ ತಿಳಿಯುವುದೂ ಸಾಕಷ್ಟಿದೆ.

    ನನಗೆ ಅವರ ಒಡನಾಟ ಮೊದಲು ಸಿಕ್ಕಿದ್ದು ಅವರು ಎಬಿವಿಪಿಯ ಕಾರ್ಯಾಲಯ ಕಾರ್ಯದರ್ಶಿಯಾಗಿದ್ದಾಗ. ಆ ಹುದ್ದೆ ನಿಭಾಯಿಸುವವರು ಹೇಗಿರಬೇಕು ಎಂಬುದಕ್ಕೆ ಅವರೊಂದು ಸ್ಪಷ್ಟ ಉದಾಹರಣೆ. ಒಂದು ಎನ್ವಲಪ್​ಗೆ ವಿಳಾಸ ಹೇಗೆ ಬರೆಯಬೇಕು, ಸ್ಟಾಂಪ್​ಗಳನ್ನು ಹೇಗೆ ಅಂಟಿಸಬೇಕು ಎಂಬಂತಹ ಸೂಕ್ಷ್ಮ ವಿಚಾರಗಳನ್ನೂ ಹೇಳಿಕೊಟ್ಟು ನಮ್ಮನ್ನು ಬೆಳೆಸಿದರು. ಯಾವುದೇ ಪತ್ರ ಸ್ವೀಕಾರದ ನಂತರ ಉತ್ತರ ಬರೆಯುವ ರೀತಿಯೂ ಸ್ಪಷ್ಟವಾಗಿರುತ್ತಿತ್ತು.

    ಎಬಿವಿಪಿಯ ಅತ್ಯಂತ ಕಷ್ಟದ ದಿನಗಳಲ್ಲಿ ಅವರು ಕಾರ್ಯದರ್ಶಿಯಾಗಿದ್ದರು. ಆ ವೇಳೆ ಮಾಧ್ಯಮ ಸಂಪರ್ಕ ಅತ್ಯಂತ ಮುಖ್ಯವಾಗಿತ್ತು. ಪತ್ರಿಕಾ ಹೇಳಿಕೆಗಳನ್ನು ಹೇಗೆ ಸಿದ್ಧಪಡಿಸಬೇಕು ಎಂಬುದನ್ನು ಅವರು ಹೇಳಿಕೊಡುತ್ತಿದ್ದರು. ವಿಷಯ ಮತ್ತು ಭಾಷೆ ಬಗ್ಗೆ ಬಹಳ ಎಚ್ಚರ ವಹಿಸುತ್ತಿದ್ದರು. ಮಾಧ್ಯಮ ಕಚೇರಿಗಳಿಗೆ ಹೋದಾಗ ಸಂಪಾದಕರು, ಮುಖ್ಯ ವರದಿಗಾರು ಹಾಗೂ ವರದಿಗಾರರನ್ನು ಕಡ್ಡಾಯವಾಗಿ ಭೇಟಿ ಮಾಡುವಂತೆ ಹೇಳುತ್ತಿದ್ದರು. ಇದರಿಂದ ನಮಗೆ ಸಂಪರ್ಕ ಬೆಳೆಯುತ್ತಿತ್ತು. ಭೇಟಿ ಮಾಡಬೇಕೆಂಬ ಕಾರಣಕ್ಕೇ ನಾವು ಮಾಧ್ಯಮ ಹೇಳಿಕೆಗಳನ್ನು ಅರ್ಥ ಮಾಡಿಕೊಳ್ಳುತ್ತಿದ್ದೆವು.

    ಫೀಲ್ ಗುಡ್ ಫ್ಯಾಕ್ಟರ್: ಯಾವುದೇ ಕಚೇರಿಯಾದರೂ ಅಲ್ಲಿ ಫೀಲ್ ಗುಡ್ ಫ್ಯಾಕ್ಟರ್ ಇರಬೇಕು ಎಂಬುದು ಅವರ ನಂಬಿಕೆ. ಯಾರೇ ಕಚೇರಿಗೆ ಬಂದರೂ ಸಮಸ್ಯೆಯನ್ನು ಕೇಳಿ, ಸಮಾಧಾನದಿಂದ ಉತ್ತರಿಸುತ್ತಿದ್ದರು. ನಂತರ ಫಾಲೋಅಪ್ ಮಾಡುತ್ತಿದ್ದರು. ಸಂಪರ್ಕದ ಮಹತ್ವ ಅವರಿಗೆ ಚೆನ್ನಾಗಿ ಗೊತ್ತಿತ್ತು. ಸಾಹಿತಿಗಳು, ಕಲಾವಿದರು, ಪತ್ರಕರ್ತರ ಜತೆ ತಾವು ಸಂಪರ್ಕ ಇಟ್ಟುಕೊಳ್ಳುವುದು ಮಾತ್ರವಲ್ಲದೆ, ಅವರ ಭೇಟಿಗೆ ನಮ್ಮಂಥ ಕಿರಿಯರನ್ನೂ ಕಳಿಸುತ್ತಿದ್ದರು.

    ಎಬಿವಿಪಿಯಿಂದ ‘ವಿದ್ಯಾರ್ಥಿಪಥ’ ವಿಶೇಷ ಸಂಚಿಕೆ ರೂಪಿಸುವ ಸಂದರ್ಭದಲ್ಲಿ ಮುಖಪುಟ ಚಿತ್ರವನ್ನು ಚಂದ್ರನಾಥ ಆಚಾರ್ಯ ಅವರಿಂದ ಬರೆಸುವ ನಿರ್ಧಾರ ಮಾಡಿದ್ದು ಮತ್ತು ಅವರಿಂದ ಬರೆಸಿದ್ದು ಮರೆಯಲಾಗದ ನೆನಪು.

    ಸೋಶಿಯಲ್ ಇಂಜಿನಿಯರಿಂಗ್: ಸಂಘದಲ್ಲಿ ಸೋಶಿಯಲ್ ಇಂಜಿನಿಯರಿಂಗ್ ಬಗ್ಗೆ ಮೊದಲು ದನಿ ಎತ್ತಿದ್ದು ದತ್ತ. ಆದ್ದರಿಂದಲೇ ಸಂಘದಲ್ಲಿ ಸಾಮರಸ್ಯ ಎಂಬ ವಿಭಾಗವನ್ನೇ ತೆರೆಯಲಾಯಿತು. ‘ಸರ್ವವ್ಯಾಪಿ ಸರ್ವ ರ್ಸ³’ ಎಂಬ ಪದವನ್ನು ತಂದವರೇ ಅವರು. ವೇದಿಕೆ ಕಾರ್ಯಕ್ರಮ, ಪದಾಧಿಕಾರಿಗಳ ನೇಮಕದಲ್ಲಿ ಸಾಮಾಜಿಕ ನ್ಯಾಯ ಹಾಗೂ ಪ್ರಾದೇಶಿಕ ಸಮಾನತೆಯ ಬಗ್ಗೆ ಸದಾ ಮುನ್ನೆಚ್ಚರಿಕೆ ವಹಿಸುವುದು ಅವರ ವಿಶೇಷ ಗುಣ.

    ಅಪಾರ ನೆನಪಿನ ಶಕ್ತಿ: ಎಂಎ ಇಂಗ್ಲಿಷ್ ಅಭ್ಯಾಸ ಮಾಡಿರುವ ದತ್ತಾತ್ರೇಯ ಅವರಿಗೆ ಎಲ್ಲ ಭಾಷೆಗಳ ಬಗ್ಗೆಯೂ ಸಮಾನ ಗೌರವ. ಕನ್ನಡ, ಹಿಂದಿ, ಇಂಗ್ಲಿಷ್ ಮಾತ್ರವಲ್ಲದೆ ಇನ್ನೂ ಹಲವು ಭಾಷೆಗಳು ಅವರಿಗೆ ಗೊತ್ತು. ದೇಶದ ಎಲ್ಲ ಜಿಲ್ಲೆಗಳನ್ನೂ ಅವರು ಸುತ್ತಿದ್ದಾರೆ. ಪ್ರತಿ ಜಿಲ್ಲೆಯಲ್ಲೂ ಕನಿಷ್ಠ 50 ಕಾರ್ಯಕರ್ತರ ಹೆಸರನ್ನು ನೆನಪಿಟ್ಟುಕೊಂಡಿದ್ದಾರೆ. ಅವರ ದೂರವಾಣಿ ಸಂಖ್ಯೆಗಳು ಬಾಯಲ್ಲಿವೆ. ಅಷ್ಟರ ಮಟ್ಟಿಗೆ ಅವರ ನೆನಪಿನ ಶಕ್ತಿ ಇದೆ.

    ಕಾರ್ಯಕರ್ತರ ಕಷ್ಟ ಸುಖಗಳಲ್ಲಿ ಅವರು ಭಾಗಿಯಾಗುತ್ತಾರೆ. ಕಾರ್ಯಕರ್ತರ ಮನೆಗಳಿಗೆ ಭೇಟಿ ನೀಡುತ್ತಾರೆ. 1979ರಲ್ಲಿ ಪ್ರೊ. ಕೆ.ಇ. ರಾಧಾಕೃಷ್ಣ ಎಬಿವಿಪಿ ಅಧ್ಯಕ್ಷರಾಗಿ ಘೋಷಣೆಯಾಗುವ 2 ದಿನ ಮೊದಲು ಅವರ ತಂದೆ ನಿಧನರಾದರು. ವಿಷಯ ತಿಳಿದು ಅವರ ಊರಿಗೆ ಬಸ್ಸಿನಲ್ಲಿ ತೆರಳಿ, ಕರೆಂಟ್ ಇಲ್ಲದ ಹಾದಿಯಲ್ಲಿ ರಾತ್ರಿ 3 ಕಿಮೀ ನಡೆದು ಹೋಗಿ ಸಾಂತ್ವನ ಹೇಳಿ ಅವರನ್ನು ಅಧ್ಯಕ್ಷರಾಗಲು ಒಪ್ಪಿಸಿ ಬಂದಿದ್ದರು. ನಿಜಕ್ಕೂ ಅವರೊಬ್ಬ ಭಾವನಾಜೀವಿ.

    ವೈವಿಧ್ಯಮಯ ಅನುಭವ ಪರಿಪೂರ್ಣ ವ್ಯಕ್ತಿತ್ವ; ಆರೆಸ್ಸೆಸ್​ನ ರಾಷ್ಟ್ರೀಯ ಸರಕಾರ್ಯವಾಹರಾಗಿ ಆಯ್ಕೆಯಾಗಿರುವ ಕನ್ನಡಿಗ
    2013ರಲ್ಲಿ ಶಿವಮೊಗ್ಗದ ಎಬಿವಿಪಿ ಕಚೇರಿಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ದತ್ತಾತ್ರೇಯ ಹೊಸಬಾಳೆ ಮತ್ತು ಬಿ.ಎಸ್. ಯಡಿಯೂರಪ್ಪ ಕುಶಲೋಪರಿ. ಕೆ.ಎಸ್. ಈಶ್ವರಪ್ಪ, ಎನ್. ರವಿಕುಮಾರ್ ಇದ್ದರು.

    ಅಸ್ಸಾಂ ಚಲೋ: 1983ರಲ್ಲಿ ಅವರು ಸಂಘಟಿಸಿದ್ದ ಅಸ್ಸಾಂ ಚಲೋ ಅವಿಸ್ಮರಣೀಯ ಕಾರ್ಯಕ್ರಮ. ದೇಶದ ಎಲ್ಲ ಭಾಗಗಳಿಂದ ವಿದ್ಯಾರ್ಥಿಗಳು ಬಂದಿದ್ದರು. ಅದರ ಬಗ್ಗೆ ಅವರೊಂದು ಪುಸ್ತಕವನ್ನೇ ಬರೆದರು. ಮುಂದೆ ಆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ವಿದ್ಯಾರ್ಥಿಯೊಬ್ಬ ಆ ರಾಜ್ಯದ ಮುಖ್ಯಮಂತ್ರಿಯೂ ಆಗಿದ್ದರು. ದೇಶದ ಎಲ್ಲ ಕಡೆ ವಿದ್ಯಾರ್ಥಿಗಳ ನಡುವೆ ಸಮನ್ವಯ, ಸಾಮರಸ್ಯ ಬೆಳೆಸಲು ಎಸ್​ಇಐಎಲ್ (ಸ್ಟೂಡೆಂಟ್ ಎಕ್ಸ್​ಪೀರಿಯನ್ಸ್ ಇನ್ ಇಂಟರ್​ಸ್ಟೇಟ್ ಲಿವಿಂಗ್) ಎಂಬ ಕಾರ್ಯಕ್ರಮ ರೂಪಿಸಿದರು. ಅವರಿಗೆ ಹಿಂದುತ್ವದ ಬಗ್ಗೆ ಬದ್ಧತೆ ಇದ್ದರೂ ಇತರರ ಜತೆಯೂ ಸ್ನೇಹ ಇತ್ತು. ಲಂಕೇಶ್, ಕಿ.ರಂ., ಶೂದ್ರ, ಪ್ರಸನ್ನ, ಗೋಪಾಲಕೃಷ್ಣ ಅಡಿಗ.. ಹೀಗೆ ಎಲ್ಲರ ಜತೆಗೂ ಎಲ್ಲ ವಿಷಯಗಳ ಬಗ್ಗೆ ಮಾತನಾಡುತ್ತಿದ್ದರು.

    ದತ್ತ ಅವರ ಬೆಳವಣಿಗೆಯಲ್ಲಿ ಬಹಳ ಮುಖ್ಯ ಪಾತ್ರ ವಹಿಸಿದವರೆಂದರೆ ಎಬಿವಿಪಿಯಲ್ಲಿ ಮದನ್​ದಾಸ್ ದೇವಿ, ಪ್ರೊ. ಬಾಳಾ ಆಪ್ಟೆ, ಯಶವಂತರಾವ್ ಕೇಳ್ಕರ್ ಮತ್ತು ಪಿ.ವಿ. ಕೃಷ್ಣಭಟ್. ಅದೇ ರೀತಿ ಆರೆಸ್ಸೆಸ್​ನಲ್ಲಿ ಹೊ.ವೆ. ಶೇಷಾದ್ರಿ, ಯಶವಂತರಾವ್ ಜೋಶಿ, ನಾ. ಕೃಷ್ಣಪ್ಪ ಮತ್ತು ಮೈ.ಚ. ಜಯದೇವ. ಇವರೆಲ್ಲ ದತ್ತ ಅವರನ್ನು ತಿದ್ದಿತೀಡಿ ಅವರ ವ್ಯಕ್ತಿತ್ವವನ್ನು ರೂಪಿಸಿದ್ದಾರೆ.

    ಹೀಗೆ ಒಂದೊಂದೇ ಮೆಟ್ಟಿಲುಗಳನ್ನು ಹತ್ತಿ ಬಂದಿರುವ ದತ್ತಾತ್ರೇಯ ಹೊಸಬಾಳೆ ಅವರದು ಪರಿಪೂರ್ಣ ವ್ಯಕ್ತಿತ್ವ.

    ನಾಟಕ, ಸಿನಿಮಾ ಇತ್ಯಾದಿ: ಎಲ್ಲ ಕ್ಷೇತ್ರಗಳ ಬಗ್ಗೆಯೂ ಅವರಿಗೆ ಆಸಕ್ತಿ, ಹೊಸದರ ಬಗ್ಗೆ ತಿಳಿಯುವ ಹುಮ್ಮಸ್ಸು. ಒಳ್ಳೆಯ ನಾಟಕ, ಸಿನಿಮಾ ನೋಡುತ್ತಾರೆ. ಒಮ್ಮೆ ರಂಗಶಂಕರ ನೋಡಬೇಕೆಂದರು. ಅಲ್ಲಿಗೆ ಹೋಗಿ ಮೈಸೂರು ಮಲ್ಲಿಗೆ ನಾಟಕ ನೋಡಿದೆವು. ನಿರ್ದೇಶಕ ರಾಜಾರಾಂ ಅವರೊಂದಿಗೆ ಸಾಕಷ್ಟು ಚರ್ಚೆ ಮಾಡಿದರು. ಇನ್ನೊಮ್ಮೆ ಅನಂತಕುಮಾರ್ ಅವರ ಮನೆಯಲ್ಲಿ ಊಟ ಮಾಡುವಾಗ ಸಿನಿಮಾ ನೋಡುವ ಆಸೆ ವ್ಯಕ್ತಪಡಿಸಿದರು. ಮೂವರೂ ಆಟೋದಲ್ಲಿ ಅಭಿನಯ ಥಿಯೇಟರ್​ಗೆ ಹೋಗಿ ‘ಅಮೆರಿಕಾ ಅಮೆರಿಕಾ’ ಸಿನಿಮಾ ನೋಡಿ ಬಂದೆವು.

    ಆರೆಸ್ಸೆಸ್​ನ ನಂ. 2 ಸ್ಥಾನಕ್ಕೆ ಏರಿದ ಕನ್ನಡಿಗ

    ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರಕಾರ್ಯವಾಹರಾಗಿ ಆಯ್ಕೆಯಾಗಿರುವ ದತ್ತಾತ್ರೇಯ ಹೊಸಬಾಳೆ ಅವರದು ಸಂಘಪರಿವಾರದಲ್ಲಿ ಐದು ದಶಕಗಳ ದಣಿವರಿಯದ ಸೇವೆ. ಶಿವಮೊಗ್ಗ ಜಿಲ್ಲೆ ಸೊರಬದ ಹೊಸಬಾಳೆಯಲ್ಲಿ ಶೇಷಗಿರಿಯಪ್ಪ-ಮೀನಾಕ್ಷಮ್ಮ ದಂಪತಿಯ ಪುತ್ರನಾಗಿ 1954ರ ಡಿ. 1ರಂದು ಜನಿಸಿದರು. 1968ರಲ್ಲಿ ಆರೆಸ್ಸೆಸ್​ನಲ್ಲಿ ಸಕ್ರಿಯರಾದರು. 1972ರಲ್ಲಿ ಎಬಿವಿಪಿ ಸೇರ್ಪಡೆಯಾದರು. 1973ರಿಂದ 1975ರವರೆಗೆ ಎಬಿವಿಪಿ ಪ್ರಾಂತ ಕಾರ್ಯಾಲಯ ಕಾರ್ಯದರ್ಶಿಯಾಗಿದ್ದರು.

    ವೈವಿಧ್ಯಮಯ ಅನುಭವ ಪರಿಪೂರ್ಣ ವ್ಯಕ್ತಿತ್ವ; ಆರೆಸ್ಸೆಸ್​ನ ರಾಷ್ಟ್ರೀಯ ಸರಕಾರ್ಯವಾಹರಾಗಿ ಆಯ್ಕೆಯಾಗಿರುವ ಕನ್ನಡಿಗ
    ದತ್ತಾತ್ರೇಯ ಹೊಸಬಾಳೆ ಅವರು 1975ರಲ್ಲಿ ತುರ್ತಪರಿಸ್ಥಿತಿ ವಿರುದ್ಧದ ಹೋರಾಟದಲ್ಲಿ ಪಾಲ್ಗೊಂಡು ಜೈಲು ಸೇರಿದ್ದರು.ಅವರೊಂದಿಗೆ ಮೋಹನ ಶೆಣೈ, ಪ್ರಭಾಕರ ಭಟ್, ನಾಮದೇವ ಶೆಣೈ, ಪುತ್ತೂರು ರಾಮಭಟ್ ಮತ್ತು ಮರ್ತಪ್ಪ ಪ್ರಭು. ಎಡದಿಂದ ನಾಲ್ಕನೆಯವರು ದತ್ತಾಜಿ.

    1975ರಲ್ಲಿ ತುರ್ತಸ್ಥಿತಿ ಘೊಷಿಸಿದಾಗ, ಬೆಂಗಳೂರಿನಲ್ಲಿದ್ದ ವಾಜಪೇಯಿ, ಆಡ್ವಾಣಿ, ಮಧು ದಂಡವತೆಗೆ ಈ ವಿಚಾರವನ್ನು ತಿಳಿಸಿದ ಹೊಸಬಾಳೆ, ಹೋರಾಟ ಮುಂದುವರಿಸುವ ದೃಷ್ಟಿಯಿಂದ ಭೂಗತರಾದರು. ರಾಜ್ಯದೆಲ್ಲೆಡೆ ಸಂಚರಿಸಿ ಕಾಲೇಜು ವಿದ್ಯಾರ್ಥಿಗಳನ್ನು ಸಂಘಟಿಸಿದರು. 1975ರ ಡಿ. 18ರಂದು ಅವರನ್ನು ಪೊಲೀಸರು ಬಂಧಿಸಿದರು. ಏಳು ತಿಂಗಳು ಬೆಂಗಳೂರು ಸೆಂಟ್ರಲ್ ಜೈಲಿನಲ್ಲಿದ್ದ ಅವರನ್ನು ಬಳ್ಳಾರಿಗೆ ಸ್ಥಳಾಂತರಿಸಲಾಯಿತು. 1977ರ ಫೆಬ್ರವರಿಯಲ್ಲಿ ಲೋಕಸಭಾ ಚುನಾವಣೆ ಘೊಷಣೆ ನಂತರ ಬಿಡುಗಡೆಯಾದರು. ವಿದ್ಯಾರ್ಥಿಗಳ ಅಂತಾರಾಷ್ಟ್ರೀಯ ಸಂಘಟನೆಯಾದ ವೋಸಿ (ವರ್ಲ್್ಡ ಆರ್ಗನೈಸೇಷನ್ ಫಾರ್ ಸ್ಟುಡೆಂಟ್ ಆಂಡ್ ಯುಥ್) ಹಾಗೂ ಇತರ ಕೆಲವು ಸಂಘಟನೆಗಳು, ಕನ್ನಡದ ಮಾಸ ಪತ್ರಿಕೆ ಅಸೀಮಾದ ಸಂಸ್ಥಾಪಕರಾದರು. 1986ರಿಂದ 1991ರವರೆಗೆ ಎಬಿವಿಪಿ ದಕ್ಷಿಣ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ, 1991-92ರಲ್ಲಿ ಅಖಿಲ ಭಾರತ ಸಹ ಸಂಘಟನಾ ಕಾರ್ಯದರ್ಶಿ, 1992ರಲ್ಲಿ ಅಖಿಲ ಭಾರತ ಸಂಘಟನಾ ಕಾರ್ಯದರ್ಶಿಯಾದರು. 2003ರಲ್ಲಿ ಅವರಿಗೆ ಆರ್​ಎಸ್​ಎಸ್​ನ ಅಖಿಲ ಭಾರತ ಸಹ ಬೌದ್ಧಿಕ್ ಪ್ರಮುಖ್ ಹೊಣೆಗಾರಿಕೆ ನೀಡಲಾಯಿತು. 2009ರಿಂದ ಇಲ್ಲಿಯವರೆಗೆ ಸಹ ಸರಕಾರ್ಯವಾಹ ಹೊಣೆ ನಿಭಾಯಿಸಿದರು. ಕನ್ನಡಿಗರಾದ ಹೊ.ವೆ. ಶೇಷಾದ್ರಿ ಅವರೂ ಈ ಹಿಂದೆ ಆರೆಸ್ಸೆಸ್​ನ ಸರಕಾರ್ಯವಾಹರಾಗಿದ್ದರು. ಹೊಸಬಾಳೆ ಈ ಹುದ್ದೆಗೇರಿದ ಎರಡನೇ ಕನ್ನಡಿಗ.

    ಲವ್ ​ಜಿಹಾದ್ ಕಾನೂನಿಗೆ ಹೊಸಬಾಳೆ ಸಹಮತ

    ಮತಾಂತರ ಉದ್ದೇಶದಿಂದ ವಿವಾಹ ಆಗುವುದು ತಪ್ಪು, ಅದರ ವಿರುದ್ಧ ರೂಪಿಸುವ ಕಾನೂನಿಗೆ ಸಹಮತವಿದೆ. ಸಹಬಾಳ್ವೆಯಿಂದ ಅಂತರ್ಜಾತಿ ವಿವಾಹ ಮಾಡಿಕೊಂಡರೆ ಯಾವುದೇ ಸಮಸ್ಯೆ ಇಲ್ಲ ಎಂದು ಸರಕಾರ್ಯವಾಹರಾಗಿ ಆಯ್ಕೆಯಾದ ನಂತರ ನಡೆಸಿದ ಮೊದಲ ಸುದ್ದಿಗೋಷ್ಠಿಯಲ್ಲಿ ದತ್ತಾತ್ರೇಯ ಹೊಸಬಾಳೆ ಹೇಳಿದರು. ಆರೆಸ್ಸೆಸ್​ನ ವಿವಿಧ ಸಂಘಟನೆಗಳಲ್ಲಿ ಸಾವಿರಾರು ಜನರು ಅಂತರ್ಜಾತಿ ವಿವಾಹವಾಗಿದ್ದಾರೆ. ಇದರಲ್ಲಿ ಯಾವುದೇ ಸಮಸ್ಯೆ ಇಲ್ಲ. ಅಸ್ಪೃಶ್ಯತೆ ನಿವಾರಣೆಯ ನಿಟ್ಟಿನಲ್ಲಿ ಪೇಜಾವರ ಮಠದ ವಿಶ್ವೇಶತೀರ್ಥರಿಂದ ನಾವೆಲ್ಲರೂ ಪ್ರೇರಣೆ ಪಡೆದಿದ್ದೇವೆ. ಅವರು ಹಲವು ಕಾರ್ಯಕ್ರಮಗಳನ್ನು ರೂಪಿಸಿದ್ದರು. ಅಸ್ಪೃಶ್ಯತೆ ನಿವಾರಿಸಲು ಆರೆಸ್ಸೆಸ್ ಕಾರ್ಯನಿರ್ವಹಿಸುತ್ತಾ ಬಂದಿದೆ. ಆದರೆ ಮತಾಂತರ ಮಾಡುವ ಉದ್ದೇಶದಿಂದ, ಬೇರೆ ದೇಶಕ್ಕೆ ಮಾರಾಟ ಮಾಡುವ ದುರುದ್ದೇಶದಿಂದ ಯಾವುದೇ ಧರ್ಮ, ಮತದಿಂದ ಮತ್ತೊಂದಕ್ಕೆ ಮತಾಂತರ ಮಾಡಿದರೆ ಅದನ್ನು ವಿರೋಧಿಸುತ್ತೇವೆ. ಕೇರಳ, ಅಸ್ಸಾಂ ನ್ಯಾಯಾಲಯಗಳೇ ಲವ್ ಜಿಹಾದ್ ಎಂಬ ಪದಪ್ರಯೋಗ ಮಾಡಿವೆ. ಈಗಾಗಲೇ ಲವ್ ಜಿಹಾದ್ ತಡೆಗಟ್ಟಲು ಕೆಲವು ರಾಜ್ಯಗಳು ಕಾನೂನು ರಚನೆಗೆ ಮುಂದಾಗಿವೆ. ಈ ಕಾರ್ಯಕ್ಕೆ ಆರೆಸ್ಸೆಸ್ ಸಹಮತವಿದೆ ಎಂದರು.

    ಸುಮಾರು 50 ವರ್ಷಗಳಿಂದ ದತ್ತಾತ್ರೇಯ ಮನೆಯಿಂದ ಹೊರಗೆ ಇದ್ದರೂ ನಮ್ಮ ಬಾಂಧವ್ಯ ಕಡಿಮೆಯಾಗಿಲ್ಲ. ವರ್ಷಕ್ಕೆರಡು ಬಾರಿ ಸೊರಬದ ಮನೆಗೆ ಬಂದು ನಮ್ಮೆಲ್ಲರೊಂದಿಗೆ ಬೆರೆಯುತ್ತಾನೆ. ಶುಭ ಸಮಾರಂಭಗಳಿಗೆ ತಪ್ಪದೇ ಹಾಜರಾಗುತ್ತಾನೆ.

    | ಎಚ್.ಎಸ್. ಮಂಜಪ್ಪ ದತ್ತಾತ್ರೇಯ ಹೊಸಬಾಳೆ ಅವರ ಸಹೋದರ

    ವೈವಿಧ್ಯಮಯ ಅನುಭವ ಪರಿಪೂರ್ಣ ವ್ಯಕ್ತಿತ್ವ; ಆರೆಸ್ಸೆಸ್​ನ ರಾಷ್ಟ್ರೀಯ ಸರಕಾರ್ಯವಾಹರಾಗಿ ಆಯ್ಕೆಯಾಗಿರುವ ಕನ್ನಡಿಗ
    ದೆಹಲಿಯಲ್ಲಿ 1989ರಲ್ಲಿ ನಡೆದ ‘ಛಾತ್ರ ಸಂಸದ್’ ಕಾರ್ಯಕ್ರಮದಲ್ಲಿ ಕರ್ನಾಟಕದ ಎಬಿವಿಪಿಯಿಂದ ಭಾಗವಹಿಸಿದ್ದ ದತ್ತಾತ್ರೇಯ ಹೊಸಬಾಳೆ, ವಿಶ್ವೇಶ್ವರ ಹೆಗಡೆ ಕಾಗೇರಿ, ಜಿ.ಆರ್. ಜಗದೀಶ್ ಮತ್ತಿತರರು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts