More

    ಕ್ಷೇತ್ರದ ಸೇವೆಗೆ ಸ್ಥಾನ ಅಡ್ಡಿಯಾಗದು ಮಂಗಳೂರಿನಲ್ಲಿ ಸ್ಪೀಕರ್ ಯು.ಟಿ.ಖಾದರ್ ಹೇಳಿಕೆ


    ಮಂಗಳೂರು: ವಿಧಾನಸಭಾ ಅಧ್ಯಕ್ಷ ಸ್ಥಾನದಲ್ಲಿ ಇದ್ದರೂ, ಮಂಗಳೂರು ಕ್ಷೇತ್ರದ ಜನರ, ಕಾರ್ಯಕರ್ತರ ಜತೆ ನಿಕಟ ಸಂಪರ್ಕದಲ್ಲಿದ್ದು, ಅವರ ಬೇಡಿಕೆಗೆ ಸ್ಪಂದಿಸಿ, ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುವುದಾಗಿ ಯು.ಟಿ.ಖಾದರ್ ಹೇಳಿದರು.


    ವಿಧಾನಸಭಾ ಅಧ್ಯಕ್ಷರಾಗಿ ಆಯ್ಕೆಯಾಗಿ ಮೊದಲ ಬಾರಿಗೆ ನಗರಕ್ಕೆ ಗುರುವಾರ ಆಗಮಿಸಿದ ಅವರು ಸರ್ಕೀಟ್ ಹೌಸ್‌ನಲ್ಲಿ ಅಭಿಮಾನಿಗಳು, ಕಾರ್ಯಕರ್ತರಿಂದ ಅಭಿನಂದನೆ ಸ್ವೀಕರಿಸಿ, ಸುದ್ದಿಗಾರರ ಜತೆ ಮಾತನಾಡಿದರು.


    ಸಭಾಧ್ಯಕ್ಷ ಹುದ್ದೆಗೆ ಏರಲು ಎಲ್ಲರ ಸಹಕಾರ, ಮಾರ್ಗದರ್ಶನ ಕಾರಣ. ಸಂವಿಧಾನಾತ್ಮಕ ಸ್ಥಾನದ ಗೌರವ ಉಳಿಸಿಕೊಂಡು ಜಿಲ್ಲೆಗೆ ಮತ್ತು ಕ್ಷೇತ್ರಕ್ಕೆ ಚ್ಯುತಿ ಬಾರದಂತೆ ಕೆಲಸ ಮಾಡುತ್ತೇನೆ. ವಿಧಾನಸಭೆಯಲ್ಲಿ ದ್ವೇಷ, ಆವೇಶ ಇಲ್ಲದೆ ಸದಸ್ಯರ ಜೊತೆ ಇರುತ್ತೇನೆ. ಈ ಸಮಯದಲ್ಲಿ ಕ್ಷೇತ್ರದ ಜನತೆ ಕೂಡ ನನಗೆ ಬೆಂಬಲ ನೀಡುತ್ತಾರೆ ಎನ್ನುವ ವಿಶ್ವಾಸವಿದೆ ಎಂದರು.


    ಕ್ಷೇತ್ರದ ಜನರು ಹಾಗೂ ಕಾರ್ಯಕರ್ತರಿಗೆ ಮಂತ್ರಿ ಸ್ಥಾನದ ಬಗ್ಗೆ ಹೆಚ್ಚು ತಿಳಿವಳಿಕೆ ಇದೆ. ಆದರೆ ಸಭಾಧ್ಯಕ್ಷ ಸ್ಥಾನದ ಬಗ್ಗೆ ಹೆಚ್ಚಿನವರಿಗೆ ಗೊತ್ತಿಲ್ಲ. ಇದರಿಂದ ಅವರ ಕೈಗೆ ಸಿಗುವುದಿಲ್ಲ ಎನ್ನುವ ಪ್ರೀತಿಯ ಆತಂಕ ಇದೆ. ಆದರೆ ಕೆಲವೇ ತಿಂಗಳಲ್ಲಿ ಈ ಬಗ್ಗೆ ಅವರಿಗೆ ಅರಿವಾಗಲಿದೆ ಎಂದು ಹೇಳಿದರು.


    ಹೈಕಮಾಂಡ್ ನಿರ್ಧಾರಕ್ಕೆ ಬದ್ಧ: ಪಕ್ಷದ ಹೈಕಮಾಂಡ್ ನಿರ್ಧಾರಕ್ಕೆ ನಾನು ಬದ್ಧನಾಗಿದ್ದೇನೆ. ವಯಸ್ಸಿನಲ್ಲಿ ಕಿರಿಯನಾದರೂ ಐದು ಬಾರಿ ಶಾಸಕನಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಈ ಹುದ್ದೆಗೆ ಪರಿಗಣಿಸಿದ್ದಾರೆ. ನಾನು ಮಂತ್ರಿಯಾಗಿದ್ದರೆ ಒಂದು ಇಲಾಖೆಗೆ ಮಾತ್ರ. ಈಗ ಎಲ್ಲ ಇಲಾಖೆಯ ಮಂತ್ರಿಗಳು ಕೂಡ ನನ್ನ ವ್ಯಾಪ್ತಿಗೆ ಬರುತ್ತಾರೆ. ಆ ಮೂಲಕ ಕೆಲಸ ಮಾಡಿಸುತ್ತೇನೆ ಎಂದರು.


    ಹಿಜಾಬ್ ನಿಷೇಧ ಸೇರಿ ಕೆಲವೊಂದು ಸಂವಿಧಾನಬದ್ಧ ವಿಷಯಗಳು ಸುಪ್ರೀಂ ಕೋರ್ಟ್‌ನಲ್ಲಿದೆ. ಸಂವಿಧಾನಕ್ಕೆ ವಿರುದ್ಧವಾಗಿ ಸರ್ಕಾರ ಕೆಲಸ ಮಾಡುವುದಿಲ್ಲ. ಸಭಾಧ್ಯಕ್ಷನಾದ ಹಿನ್ನೆಲೆಯಲ್ಲಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದೇನೆ. ಪ್ರೊಟೋಕಾಲ್ ಎಂದು ಅಡ್ಡಿಪಡಿಸದೆ ಜನಸಾಮಾನ್ಯರಿಗೂ ನನ್ನನ್ನು ತಲುಪಲು ಅವಕಾಶ ಮಾಡಿ ಕೊಡಿ ಎಂದು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.

    ಪ್ರೊಟೋಕಾಲ್ ಏನ್ ಬೇಡ್ರಿ ಒಳಗೆ ಬಿಡ್ರೀ
    ಸರ್ಕೀಟ್ ಹೌಸ್ ಹೊರಗೆ ಭಾರಿ ಸಂಖ್ಯೆಯಲ್ಲಿ ಅಭಿಮಾನಿಗಳು, ಕಾರ್ಯಕರ್ತರು ಸೇರಿದ್ದರು. ಆದರೆ, ಸ್ಪೀಕರ್‌ಗಿರುವ ಪ್ರೊಟೋಕಾಲ್ ಪ್ರಕಾರ ಪೊಲೀಸರು ಯಾರನ್ನೂ ಒಳಗೆ ಬಿಟ್ಟಿರಲಿಲ್ಲ. ಖಾದರ್ ವಿಧಾನಸಭೆ ಅಧ್ಯಕ್ಷರಿಗೆ ಮೀಸಲಾದ ಕಾರಿನಲ್ಲಿ ಒಳಗೆ ಬರುತ್ತಿದ್ದಂತೆ ತಡೆದು ನಿಲ್ಲಿಸಿದ ಕಾರ್ಯಕರ್ತರು, ಅಲ್ಲಿಯೇ ಅಭಿನಂದನೆ ಸಲ್ಲಿಸಲು ಮುಂದಾದರು. ಆಗ ಖಾದರ್ ಪೊಲೀಸರನ್ನು ಉದ್ದೇಶಿಸಿ ಪ್ರೊಟೋಕಾಲ್ ಏನ್ ಬೇಡ್ರಿ, ಒಳಗೆ ಬಿಡ್ರೀ ಎಂದರು. ಬಳಿಕ ಸರ್ಕೀಟ್ ಹೌಸ್‌ನಲ್ಲಿ ಅಭಿನಂದನೆ ಸಲ್ಲಿಸಿ, ಫೋಟೊ ತೆಗೆಸಿಕೊಂಡು ಕಾರ್ಯಕರ್ತರು ಸಂಭ್ರಮಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts