More

    ಕೋಸ್ಟಲ್‌ವುಡ್ ಬೆಳಗಿದ ಎಸ್‌ಪಿಬಿ

    ಮಂಗಳೂರು: ಅಪ್ರತಿಮ ಕಲಾವಿದ, ಗಾಯಕ ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರು ಮರೆಯಲಾಗದ ಹಲವು ಹಾಡುಗಳನ್ನು ನೀಡುವ ಮೂಲಕ ತುಳು ಚಿತ್ರರಂಗ ಮತ್ತು ಪ್ರಾದೇಶಿಕ ಭಾಷೆ ಬೆಳಗುವಲ್ಲಿ ಮಹತ್ವದ ಕೊಡುಗೆ ನೀಡಿದ್ದಾರೆ.
    ಸಂಗೀತ ನಿರ್ದೇಶಕ ರಾಜನ್ ನಾಗೇಂದ್ರ ಅವರು ಎಸ್‌ಪಿಬಿ ಅವರನ್ನು ಪ್ರಥಮ ಬಾರಿಗೆ ‘ಪಗೆತ ಪುಗೆ’ ಸಿನಿಮಾ ಮೂಲಕ ತುಳುವಿನಲ್ಲಿ ಹಾಡಲು ಅವಕಾಶ ನೀಡಿದ್ದರು. ಈ ಚಿತ್ರದಲ್ಲಿ ಎಸ್ಪಿಬಿ ಹಾಡಿದ ‘ಮೋಕೆದ ಸಿಂಗಾರಿ.. ಉಂತುದೆ ವಯ್ಯರಿ…’ ತುಳುವಿನ ಎವರ್‌ಗ್ರೀನ್ ಹಾಡುಗಳಲ್ಲಿ ಒಂದು.

    ಸಂಗಮ ಸಾಕ್ಷಿ ಚಿತ್ರದ-ಉಪ್ಪು ನೀರ್ ಅಂಚಿಗ್.. ಸುದೆತ ಚಪ್ಪೆ ನೀರ್ ಇಂಚಿಗ್…(ಸಾಹಿತ್ಯ- ಡಾ.ಅಮೃತ ಸೋಮೇಶ್ವರ), ಬಯ್ಯ ಮಲ್ಲಿಗೆ ಚಿತ್ರದ-ತುಳುವೆರೆ ಪೊಣ್ಣು ತೂಯೆರೆ ಪೊರ್ಲು…, ಯಾನ್ ಸನ್ಯಾಸಿ ಆಪೆ ಚಿತ್ರದ ರಾಧಾ ರಾಧಾ ಓಡೆ ಪೋಪ ಎನನ್ ಬುಡ್ದ್ ಸೀದಾ, ಒರಿಯರ್ದೊರಿ ಅಸಲ್ ಚಿತ್ರದ ಗಣಪತಿ ಬಪ್ಪ ಮೋರ್ಯ… ಇವರ ಇತರ ಕೆಲವು ಜನಪ್ರಿಯ ಹಾಡುಗಳು. ಕರಾವಳಿಯ ರಿಚರ್ಡ್ ಕ್ಯಾಸ್ಟಲಿನೊ ಅವರು 24 ಗಂಟೆ ಅವಧಿಯಲ್ಲಿ ನಿರ್ಮಿಸಿ ದಾಖಲೆ ಬರೆದ ‘ಸೆಪ್ಟಂಬರ್ 8’ ಚಿತ್ರದಲ್ಲೂ ಅವರು ಹಾಡಿದ್ದರು.
    ಭಾಗ್ಯವಂತೆದಿ, ಬೀಸತ್ತಿ ಬಾಬು, ಜೈ ತುಳುನಾಡು ಸಹಿತ ಹತ್ತರಷ್ಟು ತುಳುಚಿತ್ರಗಳ ಹಾಡಿಗೆ ಸ್ವರ ನೀಡುವ ಮೂಲಕ ತುಳು ಭಾಷೆಯನ್ನು ಬೆಳಗುವಲ್ಲಿ ಕೈಜೋಡಿಸಿದ್ದಾರೆ. ‘ಜೈ ತುಳುನಾಡು’ ಅವರು ಹಾಡಿದ ಕೊನೆಯ ತುಳು ಸಿನಿಮಾ.
    ಕರಾವಳಿಯಲ್ಲಿ ಅಧಿಕ ಜನರು ಮಾತನಾಡುವ ಕೊಂಕಣಿ ಸಂಗೀತದ ಅಲ್ಬಮ್‌ಗಳಲ್ಲಿಯೂ ಎಸ್‌ಪಿ ಹಾಡಿದ್ದಾರೆ. ಮಾತ್ರವಲ್ಲದೆ ತುಳು ಭಾಷೆಯಲ್ಲಿ ನೂರಾರು ಭಕ್ತಿಗೀತೆಗಳನ್ನು ಹಾಡಿದ್ದಾರೆ.

    ತುಳು ಸಿನಿಮಾ ಸಂಗೀತಕ್ಕೆ ಭದ್ರ ಅಡಿಪಾಯ ಹಾಕುವಲ್ಲಿ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ಕೊಡುಗೆ ಅಪಾರ. ತುಳು ಭಾಷೆಯ ಸೊಗಡಿಗೆ ಅವರ ಧ್ವನಿ ಚೆನ್ನಾಗಿ ಹೋಲುತ್ತದೆ. ತುಳು ಭಾಷೆ ಮೇಲೆ ಅಭಿಮಾನ ಹೊಂದಿದ್ದ ಅವರು ತುಳುವಿಗಾಗಿ ಹಾಡುವಾಗ ಸಂಭಾ ವನೆಯ ವಿಷಯದಲ್ಲಿ ಧಾರಾಳಿಯಾಗುತ್ತಿದ್ದರು.
    ತಮ್ಮ ಲಕ್ಷ್ಮಣ ಹಿರಿಯ ರಂಗಕರ್ಮಿ, ಮಂಗಳೂರು

    ವಿಜಯವಾಣಿ- ದಿಗ್ವಿಜಯ ಕಾರ್ಯಕ್ರಮದ ನೆನಪು
    ಬೆಂಗಳೂರಿನ ಸ್ವಾಮಿ ಎಂಟರ್‌ಪ್ರೈಸಸ್, ‘ವಿಜಯವಾಣಿ-ದಿಗ್ವಿಜಯ’ ಸಹಯೋಗದಲ್ಲಿ ಎಸ್‌ಪಿಬಿ ಅಭಿಮಾನಿಗಳು 2020ರ ಜನವರಿ 19ರಂದು ಮಂಗಳೂರಿನ ಅಡ್ಯಾರ್ ಸಹ್ಯಾದ್ರಿಯ ನೇತ್ರಾವತಿ ನದಿ ತೀರದಲ್ಲಿ ಆಯೋಜಿಸಿದ ‘ಸಂಗೀತ ಸಂಜೆ’ ಕರಾವಳಿಯಲ್ಲಿ ಎಸ್.ಪಿ.ಬಾಲಸುಬ್ರಹಣ್ಯಂ ಅವರು ನೀಡಿದ ಕೊನೆಯ ಸಾರ್ವಜನಿಕ ಕಾರ್ಯಕ್ರಮ.

    ಅಂದು ಅವರು ಗಾಯಕಿ ದಿವ್ಯಾ ರಾಘವನ್ ಜತೆ ಕನ್ನಡ, ತುಳು, ತಮಿಳು, ತೆಲುಗು ಹಾಗೂ ಹಿಂದಿಯಲ್ಲಿ ನಿರರ್ಗಳ ಗಾನಸುಧೆ ಹರಿಸಿ ಕರಾವಳಿಯ ಸಂಗೀತ ಆರಾಧಕರಲ್ಲಿ ಧನ್ಯತೆಯ ಭಾವ ಮೂಡಿಸಿದ್ದರು.

    ಕಲ್ಲಾದರೇ ನಾ ಬೇಲೂರಲ್ಲಿ ಗುಡಿಯಲಿ ಇರುವೆ..ಮಣ್ಣಾದರೆ ನಾನು ಕೋಲಾರದ ಮಣ್ಣಲ್ಲಿ ಬೆರೆವೆ…, ಬಯಸದೆ ಬಳಿ ಬಂದೆ, ಬಯಕೆಯ ಸಿರಿ ತಂದೆ, ಜೀವ ವೀಣೆ ಮಿಡಿತದ ಸಂಗೀತ… ಭಾವಗೀತೆ ಬಾಳಿನೊಲುಮೆಯ ಸಂಕೇತ, ರಾದಿಕೆ ನಿನ ಸರಸ ಇದೇನೆ.. ಮುರಳಿಯ ಮರೆಸಿ ನಗುತಿಹ ಸರಸಿ ನಿನ್ನ ವಿನೋದ ಇದೇನೆ.., ನಿಮ್ಕಡೆ ಸಾಂಬರ್ ಅಂದ್ರೆ ನಮ್ಕಡಿ ತಿಳಿಯೋದಿಲ್ಲ.. ನಮ್ಕಡಿ ಡಾಂಬರ್ ಅಂದ್ರೆ ನಿಮ್ಕಡಿ ತಿಳಿಯೋದಿಲ್ಲ.., ಮಡಿಕೇರಿ ಸಿಪಾಯಿ… ಮೊದಲಾದ ಆಯ್ದ ಜನಪ್ರಿಯ ಹಾಡುಗಳನ್ನು ಎಸ್ಪಿ ಅಂದು ಪ್ರೇಕ್ಷಕರ ಮುಂದೆ ಪ್ರಸ್ತುತಪಡಿಸಿದ್ದರು.
    ಮಂಗಳೂರಿನ ಸೀತಾರಾಮ ಕುಲಾಲ್ ಅವರು ಬರೆದ ‘ಮೋಕೆದ ಸಿಂಗಾರಿ.. ಉಂತುದೆ ವಯ್ಯರಿ… ಯಾನ್ ಮೂಲೆ ಕಾತೊಂದುಲ್ಲೆ.. ಹಾಡು ಎಸ್ಪಿ ಕಂಠದಲ್ಲಿ ಕೇಳುತ್ತಲೇ ಜನ ಹುಚ್ಚೆದ್ದು ಕುಣಿದು ಸಂಭ್ರಮಿಸಿದ್ದರು.

    ಸಂಗೀತ ಭಗವಂತನ ಭಾಷೆ: ಸಂಗೀತದ ಎಲ್ಲ ನುಡಿ, ಸಾಲುಗಳು ಪವಿತ್ರ. ಭಗವಂತನ ಭಾಷೆ ಸಂಗೀತ. ಇಲ್ಲದಿದ್ದರೆ ಆಂಧ್ರದಲ್ಲಿ ಹುಟ್ಟಿದ ನನಗೆ ಇಲ್ಲಿ ಈ ಮರ್ಯಾದೆ, ಅಭಿಮಾನ ಸಿಗಲು ಹೇಗೆ ಸಾಧ್ಯ ಎಂದು ಕಾರ್ಯಕ್ರಮದ ನಡುವೆಯೇ ಎಸ್.ಪಿ.ಬಿ. ಮಾತಿಗಿಳಿದಿದ್ದರು. 1966, ಡಿಸೆಂಬರ್ 15ರಂದು ಮೊದಲು ತೆಲುಗು ಚಿತ್ರದಲ್ಲಿ ಹಾಡಿದೆ. ಅಲ್ಲಿಂದ ಸುದೀರ್ಘ ಪಯಣ ಆರಂಭಗೊಂಡಿತು. 40 ಸಾವಿರ ಹಾಡುಗಳನ್ನು ಹಾಡಿರಬಹುದು. ಇದು ನಿಮ್ಮೆಲ್ಲರ ಆಶೀರ್ವಾದದಿಂದ ಸಾಧ್ಯವಾಯಿತು. ನಾನು ಸಂಗೀತದ ಸೇವಕ. ಸಂಗೀತ ರಸಿಕರ ಸೇವಕ ಎಂದು ವಿನೀತರಾಗಿ ಹೇಳಿದ್ದರು.

    ಕರುನಾಡಲಿ ಹುಟ್ಟುವೆ!
    ಮೂಡುಬಿದಿರೆ: ‘ಮಗುವಾದರೇ ನಾನು ಕರುನಾಡಲಿ ಹುಟ್ಟಿ ಬರುವೆ’
    – ಹನ್ನೊಂದು ವರ್ಷಗಳ ಹಿಂದೆ (2015) ಆಳ್ವಾಸ್ ವಿರಾಸತ್ ಪ್ರಶಸ್ತಿ ಸ್ವೀಕರಿಸಿ, ಹಾಡಿದ ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಂ, ಹಾಡೊಂದರರಲ್ಲೇ ‘ಮಗುವಾದರೇ ನಾನು ಕರುನಾಡಲಿ ಹುಟ್ಟಿ ಬರುವೆ’ ಎಂದಿದ್ದರು.
    ಅಂದು ಅವರ ತಂಡ ಮೂರು ಗಂಟೆಗಳ ಕಾಲ ಸಂಗೀತ ಕಾರ್ಯಕ್ರಮ ನೀಡಿತ್ತು. ಕಾರ್ಯಕ್ರಮದ ಮಧ್ಯೆ ‘ಸಿಂಹಾದ್ರಿಯ ಸಿಂಹ’ ಸಿನಿಮಾಕ್ಕೆ ತಾವೇ ಹಾಡಿದ್ದ ‘ಕಲ್ಲಾದರೆ ನಾನು…’ ಹಾಡುತ್ತ ತಮ್ಮ ಮನದಿಂಗಿತ ವ್ಯಕ್ತಪಡಿಸಿದ್ದರು. ಅಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಎಸ್ಪಿಬಿ ಅವರಿಗೆ ವಿರಾಸತ್ ಪ್ರಶಸ್ತಿ ಪ್ರದಾನ ಮಾಡಿದ್ದರು. ಧರ್ಮಸ್ಥಳದ ಹೇಮಾವತಿ ವಿ.ಹೆಗ್ಗಡೆ, ಆಳ್ವಾಸ್ ಶಿಕ್ಷಣ ಸಂಸ್ಥೆಯ ರೂವಾರಿ ಡಾ.ಎಂ.ಮೋಹನ ಆಳ್ವ ಸಹಿತ ಪ್ರಮುಖರು ಅಂದು ಉಪಸ್ಥಿತರಿದ್ದರು.

    ಫೋಟೋ………..ಎಂಎನ್‌ಜಿ ಸೆ.25 ಎಸ್‌ಪಿಬಿ ವಿರಾಸತ್
    ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು 2015ರಲ್ಲಿ ಹಿರಿಯ ಗಾಯಕ ಎಸ್.ಪಿ ಬಾಲಸುಬ್ರಹ್ಮಣ್ಯಂ ಅವರಿಗೆ ಆಳ್ವಾಸ್ ವಿರಾಸತ್ ಪ್ರಶಸ್ತಿ ನೀಡಿ ಗೌರವಿಸಿದ್ದ ಕ್ಷಣ.
    ==============================

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts