More

    ಮಕ್ಕಳಿಗಾಗಿ ಸಮಯ ಮೀಸಲಿಡಲು ಡಾ. ಸುಧಾ ಮೂರ್ತಿ ಸಲಹೆ

    ಹುಬ್ಬಳ್ಳಿ: ಡಿಜಿಟಲ್ ಯುಗ, ಸೋಷಿಯಲ್ ಮೀಡಿಯಾ ಪ್ರಭಾವದ ಮಧ್ಯೆಯೂ ಮಕ್ಕಳನ್ನು ಸುಸಂಸ್ಕೃತರನ್ನಾಗಿ ಬೆಳೆಸಬಹುದು. ಅದಕ್ಕಾಗಿ ಪಾಲಕರು ಒಂದಿಷ್ಟು ಸಮಯ ಮಕ್ಕಳಿಗಾಗಿ ಮೀಸಲಿಡಬೇಕು ಎಂದು ಖ್ಯಾತ ಲೇಖಕಿ, ರಾಜ್ಯಸಭಾ ಸದಸ್ಯೆ ಡಾ. ಸುಧಾ ಮೂರ್ತಿ ಸಲಹೆ ನೀಡಿದರು.

    ಇಲ್ಲಿಯ ಸಪ್ನ ಬುಕ್ ಹೌಸ್ ವತಿಯಿಂದ ಭಾನುವಾರ ಏರ್ಪಡಿಸಿದ್ದ ಸಂವಾದದಲ್ಲಿ ಅವರು ಮಾತನಾಡಿದರು. ಕಥೆ, ಕಾದಂಬರಿಕಾರ ಜೋಗಿ ಅವರು ನಡೆಸಿಕೊಟ್ಟ ಸಂವಾದದಲ್ಲಿ ಅವರು ಹಲವು ವಿಚಾರಗಳನ್ನು ಹಂಚಿಕೊಂಡರು. ನಂತರ ಕೇಳುಗರ ಪ್ರಶ್ನೆಗಳಿಗೂ ಉತ್ತರಿಸಿದರು.
    ಮಕ್ಕಳ ಓದಿಗೆ ಇಂದು ಬಹಳಷ್ಟು ಅಡೆತಡೆಗಳು ಇವೆ. ಮನೆಯಲ್ಲಿ ಅಪ್ಪ ಅಮ್ಮ ಇಬ್ಬರೂ ಕೆಲಸಕ್ಕೆ ಹೋಗುವವರು ಇದ್ದರೆ ತೊಂದರೆ ಇನ್ನೂ ಜಾಸ್ತಿ. ಮಕ್ಕಳು ಕೆಡುವುದಕ್ಕೆ ಬಹಳಷ್ಟು ದಾರಿಗಳಿವೆ. ಅವುಗಳನ್ನು ಪಾಲಕರು ಗಮನಿಸಬೇಕು. ವಿದ್ಯೆ ಬೇಕಾದರೆ ಅಧ್ಯಯನ, ಕಲಿಕೆ, ಅನುಭವ ಎಲ್ಲವೂ ಬೇಕಾಗುತ್ತದೆ ಎಂದು ಹೇಳಿದರು.

    • ನಿಮ್ಮ ಬರೆಯುವ ರೀತಿ ಹೇಗೆ ಹಾಗೂ ಯಾವ ವಯಸ್ಸಿನಲ್ಲಿ ಬರೆಯಲು ಆರಂಭಿಸಿದಿರಿ?
      ವಯಸ್ಸಿಗೂ ಬರವಣಿಗೆಗೂ ಸಂಬಂಧ ಇಲ್ಲ. ಹುಟ್ಟಿ ಬೆಳೆದ ಊರು ಹುಬ್ಬಳ್ಳಿ, ನಾನು ಎಲ್ಲೇ ಹೋದರೂ ಧಾರವಾಡ ಜಿಲ್ಲೆ ಸಾಕೀನ್ ಹುಬ್ಬಳ್ಳಿ ಎಂದು ಹೇಳುತ್ತೇನೆ. ನನ್ನ ಬರವಣಿಗೆಯಲ್ಲಿ ಊರಿನ ಪ್ರಭಾವ ಇದ್ದೇ ಇರುತ್ತದೆ.
      ಆಧುನಿಕ ಜಗತ್ತಿನಲ್ಲಿ ಸ್ವಾರ್ಥ ಹೆಚ್ಚು ಕಾಣಿಸಿಕೊಳ್ಳುತ್ತಿದೆ. ಯುವ ಪೀಳಿಗೆಯು ಹಣದ ಹಿಂದೆ ಬೀಳದೆ ಜೀವನ ಕಲೆ ಅನುಭವಿಸಬೇಕು. ಸಂಬಂಧಗಳಿಗೆ ಬೆಲೆ ಕೊಡಬೇಕು. ಅಂತಃಕರಣ ಬೆಳೆಸಿಕೊಳ್ಳಬೇಕು. ನಾನು ಟ್ರಕ್, ಕಾರು, ಸ್ಕೂಟರ್ ಡ್ರೈವ್ ಮಾಡಿದ್ದೇನೆ. ನಿಮ್ಮೊಳಗೆ ನಂಬಿಕೆ ಎಂಬುದು ಇರಬೇಕು, ಹೆದರಿಕೆ ಇರಬಾರದು. ಆಡಿಕೊಳ್ಳುವವರ ಬಗ್ಗೆ ಯೋಚಿಸದೇ ಮನಃಸಾಕ್ಷಿಯೊಂದಿಗೆ ಮುನ್ನಡೆಯಿರಿ, ದಾರಿ ತಾನಾಗಿಯೇ ಕಾಣಿಸುತ್ತದೆ, ಹಾಗೇ ಬರವಣಿಗೆಯೂ ಹೊರಗೆ ಬರುತ್ತದೆ.
    • ಬರವಣಿಗೆಯ ವಿಷಯ ಆಯ್ಕೆ ಹೇಗೆ?
      ಒಬ್ಬ ಲೇಖಕ ತಾನು ಬರೆಯುವ ಪ್ರಬಂಧದ ಜತೆಗೆ ಬೆಳೆಯುತ್ತಾನೆ. ಆರಂಭದಲ್ಲಿ ಅನುಭವ ನೆರವಿಗೆ ಬಂದರೆ, ಮುಂದೆ ಓದುಗರು, ಅವರೊಂದಿಗಿನ ಒಡನಾಟ, ಸಮಾಜ ಎಲ್ಲವೂ ವಿಷಯಗಳೇ ಆಗಿರುತ್ತವೆ. ನನ್ನ ಪುಸ್ತಕಗಳ ಬಗ್ಗೆ ಕೆಲವರು ಸರಿಯಾದ ವಿಮರ್ಶೆ ಮಾಡುವುದಿಲ್ಲ. ದೊಡ್ಡ ಲೇಖಕರು ಟೀಕೆ ಮಾಡಬಾರದು ಎಂದುಕೊಳ್ಳುತ್ತಾರೆ. ಹಾಗಾಗಿಯೇ ನೇರವಾಗಿ ಹೇಳುವಂತಹ ಮಕ್ಕಳ ಕೈಗೆ ಪುಸ್ತಕ ಕೊಟ್ಟು ಯಾವ ವಿಷಯ ಇಷ್ಟ ಇಲ್ಲ ಹೇಳಿ ಎಂದು ಕೇಳುತ್ತೇನೆ. ಅದನ್ನು ಸ್ವೀಕಾರವನ್ನೂ ಮಾಡುತ್ತೇನೆ ಎಂದರು.
    • ಲೇಖಕನಾಗಲು ಎಷ್ಟು ಕಾಲಬೇಕು?
      ಜಗತ್ತಿನ ಕೆಲ ವಿಶೇಷ ವ್ಯಕ್ತಿಗಳನ್ನು ಹೊರತುಪಡಿಸಿದರೆ ಯಾರೂ ಏಕಾಏಕಿ ಲೇಖಕರಾಗಿಲ್ಲ, ಪ್ರಸಿದ್ಧಿ ಪಡೆದಿಲ್ಲ. ನನ್ನ ಮೊದಲ ಕೃತಿಯನ್ನು ಪ್ರಕಟಿಸಿ ಎಂದು ಕೊಡಲು ಹೋದರೆ ಹತ್ತು ಕಡೆಗಳಲ್ಲಿ ತಿರಸ್ಕರಿಸಲ್ಪಟ್ಟಿತ್ತು. ಹಾಗೆಂದು ನಾನು ಬರೆಯುವುದನ್ನು ನಿಲ್ಲಿಸಲಿಲ್ಲ. ಪುಸ್ತಕವು ಜನರ ಮನ ತಟ್ಟಬೇಕು. ಆಗಲೇ ಲೇಖಕ ಆಗಲು ಸಾಧ್ಯ ಎಂದರು.
      ಸಪ್ನ ಬುಕ್ ಹೌಸ್ ಎಂಡಿ ನಿತಿನ್ ಷಾ ಸ್ವಾಗತಿಸಿದರು. ಮೇಘನಾ ನಿರೂಪಿಸಿದರು. ದೊಡ್ಡೇಗಾಡ, ರಘು, ಕಾಶೀನಾಥ ಚಾಟ್ನಿ, ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts