More

    ಬಿತ್ತನೆ ಬೀಜ ಬಲು ದುಬಾರಿ

    ಬಸವರಾಜ ಇದ್ಲಿ ಹುಬ್ಬಳ್ಳಿ
    ಮುಂಗಾರು ಪೂರ್ವ ಮಳೆಯು ಉತ್ತಮವಾಗಿ ಸುರಿದಿರುವುದರಿಂದ ಉಲ್ಲಸಿತರಾಗಿರುವ ರೈತರು ಬಿತ್ತನೆಗೆ ಅಣಿಯಾಗುತ್ತಿದ್ದಂತೆ ಕೃಷಿ ಇಲಾಖೆಯು ರಿಯಾಯಿತಿ ದರದಲ್ಲಿ ವಿತರಿಸುವ ಬೀಜಗಳ ದರ ಹೆಚ್ಚಿಸಿ ಶಾಕ್ ನೀಡಿದೆ.
    ಕಳೆದ ವರ್ಷಕ್ಕೆ ಹೋಲಿಸಿದರೆ ಕೆಲವೊಂದು ಬಿತ್ತನೆ ಬೀಜಗಳ ಬೆಲೆ ಏಕಾಏಕಿ ಸಾವಿರ ರೂ.ಗಳಷ್ಟು ಏರಿಕೆಯಾಗಿದೆ. ವಿಶೇಷವಾಗಿ ಧಾರವಾಡ ಜಿಲ್ಲೆಯಲ್ಲಿ ಮುಂಗಾರಿನಲ್ಲಿ ಬಿತ್ತನೆಯಾಗುವ ಸೋಯಾಬೀನ್, ಹೆಸರು, ಶೇಂಗಾ ಬೀಜಗಳ ದರ ಗಗನಮುಖಿಯಾಗಿದೆ. ಕರೊನಾ ಸಂಕಷ್ಟ ಕಾಲದಲ್ಲಿ ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ಇಲ್ಲದೆ ಪರದಾಡುತ್ತಿರುವ ರೈತರಿಗೆ ಇದರಿಂದ ಬರೆ ಎಳೆದಂತಾಗಿದೆ.
    ಪ್ರತಿ ವರ್ಷ ಮುಂಗಾರು ಆರಂಭದಲ್ಲಿ ಕೃಷಿ ಇಲಾಖೆಯು ರೈತ ಸಂಪರ್ಕ ಕೇಂದ್ರಗಳ ಮೂಲಕ ಸರ್ಕಾರದ ಸಹಾಯಧನದಡಿ (ಸಬ್ಸಿಡಿ) ರೈತರಿಗೆ ಬಿತ್ತನೆ ಬೀಜ ವಿತರಣೆ ಮಾಡುತ್ತದೆ. ಇದೇ ರೀತಿ ಈ ವರ್ಷದ ಬಿತ್ತನೆ ಬೀಜ ವಿತರಣೆಗೆ ಇಲಾಖೆ ಸಜ್ಜಾಗಿದೆ. ಆದರೆ, ದರ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿರುವುದು ರೈತರನ್ನು ಚಿಂತೆಗೀಡು ಮಾಡಿದೆ. ಬಹಳಷ್ಟು ರೈತರಿಗೆ ಬೀಜ ಕೊಳ್ಳುವ ಶಕ್ತಿ ಇಲ್ಲದಂತಾಗಿದೆ.
    ಸೋಯಾಬೀನ್ ಬಿತ್ತನೆ ಬೀಜ ಕಳೆದ ವರ್ಷ (2020-21) 30 ಕೆಜಿ ಪ್ಯಾಕೆಟ್​ಗೆ
    ರೈತರ ವಂತಿಗೆ 1260 ರೂ. ಇತ್ತು. ಸರ್ಕಾರದ ಸಹಾಯಧನ 750 ರೂ. ಸೇರಿ ಒಟ್ಟು ಬೆಲೆ 2010 ರೂ. ಬೆಲೆ ಇತ್ತು. ಪರಿಶಿಷ್ಟ ಜಾತಿ, ಪಂಗಡದ ರೈತರಿಗೆ 885 ರೂ.ಗೆ ಪ್ಯಾಕೆಟ್​ನಂತೆ ನೀಡಲಾಗಿತ್ತು. ಆದರೆ, ಈ ವರ್ಷ ಸೋಯಾಬೀನ್ 30 ಕೆಜಿ ಪ್ಯಾಕೆಟ್​ಗೆ ರೈತರು 2370 ರೂ. ಕೊಡಬೇಕಾಗಿದೆ. ಅಂದರೆ 1110 ರೂ. ಹೆಚ್ಚಿಗೆ ಕೊಡಬೇಕಾಗಿದೆ. ಹೆಸರುಕಾಳು 5 ಕೆಜಿ ಪ್ಯಾಕೆಟ್​ಗೆ 362 ರೂ. ಇತ್ತು. ಪರಿಶಿಷ್ಟ ಜಾತಿ, ಪಂಗಡದ ರೈತರಿಗೆ 300 ರೂ. ಇತ್ತು. ಈ ವರ್ಷ ಇದರ ಬೆಲೆ 495 ರೂ. ಆಗಿದೆ. ಶೇಂಗಾ ಕಾಳು 30 ಕೆಜಿ ಪ್ಯಾಕೆಟ್​ಗೆ 1800 ರೂ. ಇತ್ತು. ಪರಿಶಿಷ್ಟ ಜಾತಿ, ಪಂಗಡದ ರೈತರಿಗೆ 1575 ರೂ. ಇತ್ತು. ಈ ಬಾರಿ ಶೇಂಗಾ ಕಾಯಿ (ಸಿಪ್ಪೆ ಸಹಿತವಾಗಿ) 30 ಕೆಜಿಗೆ 2040 ರೂ. ಆಗಿದೆ. ಇದೇ ರೀತಿ ಪ್ರತಿಯೊಂದು ಬಿತ್ತನೆ ಬೀಜಗಳ ದರದಲ್ಲಿ ವ್ಯತ್ಯಾಸವಾಗಿದೆ.


    ಅತಿವೃಷ್ಟಿ, ನೆರೆ, ಕೃಷಿ ಉತ್ಪನ್ನಗಳ ಬೆಲೆ ಕುಸಿತ ಇತ್ಯಾದಿ ಕಾರಣದಿಂದ ಕಳೆದ ಎರಡು ವರ್ಷಗಳಿಂದಲೂ ಆರ್ಥಿಕ ಸಂಕಷ್ಟದಲ್ಲಿರುವ ರೈತರಿಗೆ ಈಗ ಬಿತ್ತನೆ ಬೀಜಗಳ ದರ ಏರಿಕೆ ಮತ್ತಷ್ಟು ಹೊರೆಯುಂಟು ಮಾಡಿದೆ. ಬಿತ್ತನೆ ಬೀಜಕ್ಕೆ ಸರ್ಕಾರ ಸಹಾಯಧನ ಒದಗಿಸಿದ್ದರೂ ಉಪಯೋಗ ಇಲ್ಲದಂತಾಗಿದೆ. ಕರೊನಾ ಮಹಾಮಾರಿಯಿಂದ ದುಸ್ತರವಾಗಿರುವ ರೈತರ ಬದುಕಿಗೆ ಬೀಜ ದರ ನಿಯಂತ್ರಿಸುವ ಮೂಲಕ ಸರ್ಕಾರ ಒಂದಿಷ್ಟು ನೆರವಾಗಬೇಕು.
    | ಪರುತಪ್ಪ ಬಳಗಣ್ಣವರ ರೈತ ಸಂಘದ ಅಧ್ಯಕ್ಷ, ಹುಬ್ಬಳ್ಳಿ


    ಪ್ರತಿ ವರ್ಷ ಬಿತ್ತನೆ ಬೀಜ ಪೂರೈಕೆಗೆ ರಾಜ್ಯ ಮಟ್ಟದಲ್ಲಿ ಟೆಂಡರ್ ಪ್ರಕ್ರಿಯೆ ನಡೆಯುತ್ತದೆ. ಅದರಲ್ಲಿ ಬೀಜ ಉತ್ಪಾದಕರು ಹಾಕಿದ ಬಿಡ್​ನಂತೆ ದರ ನಿಗದಿ ಯಾಗುತ್ತದೆ. ಜತೆಗೆ ಸರ್ಕಾರ ಸಹಾಯ ಧನವನ್ನೂ ನಿಗದಿಪಡಿಸುತ್ತದೆ.
    | ರಾಜಶೇಖರ ಬಿಜಾಪುರ ಜೆಡಿ ಧಾರವಾಡ ಕೃಷಿ ಇಲಾಖೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts