More

    ರೈತರಿಗೆ ಸಬ್ಸಿಡಿ ದರದಲ್ಲಿ ಬಿತ್ತನೆ ಬೀಜ ವಿತರಣೆ ನಾಳೆಯಿಂದ

    ಸವಣೂರ: ಸಬ್ಸಿಡಿ ದರದಲ್ಲಿ ರೈತರಿಗೆ ಬಿತ್ತನೆ ಬೀಜ ವಿತರಣೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮೇ 28ರಂದು ಹತ್ತಿಮತ್ತೂರ ಹೋಬಳಿಯಲ್ಲಿ ಬಿತ್ತನೆ ಬೀಜ ವಿತರಣೆಗೆ ಶಾಸಕ ನೆಹರು ಓಲೇಕಾರ ಚಾಲನೆ ನೀಡಲಿದ್ದಾರೆ. ಸವಣೂರ ಹೋಬಳಿ ರೈತರಿಗೆ ಮೇ 29ರಿಂದ ಬೀಜ ವಿತರಿಸಲಾಗುವುದು ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಶ್ರೀಧರಮೂರ್ತಿ ತಿಳಿಸಿದರು.

    ಪಟ್ಟಣ ಸೇರಿದಂತೆ ತಾಲೂಕಿನ ಕೃಷಿ ಇಲಾಖೆಯ ಬೀಜ ಮಾರಾಟ ಮಳಿಗೆಗಳಿಗೆ ಬುಧವಾರ ಭೇಟಿ ನೀಡಿ ನಂತರ ಇಲಾಖೆ ಸಭಾಂಗಣದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಮುಂಗಾರು ಹಂಗಾಮಿನಲ್ಲಿ ತಾಲೂಕಿನ ಪ್ರಮುಖ ಬೆಳೆಗಳನ್ನಾಗಿ ಶೇಂಗಾ ಮತ್ತು ಗೋವಿನಜೋಳವನ್ನು ಪರಿಗಣಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ ಶೇಂಗಾ, ಗೋವಿನಜೋಳ, ಸೋಯಾಬೀನ್ ಬಿತ್ತನೆ ಕ್ಷೇತ್ರ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಅವಶ್ಯಕತೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಬೀಜಗಳನ್ನು ದಾಸ್ತಾನಿಡಲಾಗಿದೆ. ಜತೆಗೆ ಹೆಸರು, ತೊಗರಿ, ಅಲಸಂದಿ ಬೀಜಗಳನ್ನು ದಾಸ್ತಾನು ಮಾಡಲಾಗಿದೆ ಎಂದರು.

    ರೈತರು ಭೂಮಿಯನ್ನು ಬಿತ್ತನೆಗೆ ಸಿದ್ಧಪಡಿಸಿದ್ದಾರೆ. ಪಟ್ಟಣ ಹಾಗೂ ಹತ್ತಿಮತ್ತೂರ, ಕಡಕೋಳ, ಯಲವಿಗಿ, ಚಿಕ್ಕಮರಳಿಹಳ್ಳಿ, ಹುರಳಿಕುಪ್ಪಿ, ತೆವರಮೆಳ್ಳಿಹಳ್ಳಿ ಗ್ರಾಮಗಳಲ್ಲಿ ಬೀಜ ಮಾರಾಟ ಕೇಂದ್ರ ತೆರೆಯಲಾಗುವುದು ಎಂದರು.

    ಬಿತ್ತನೆ ಬೀಜಗಳಾದ ಶೇಂಗಾ 300 ಕ್ವಿಂಟಾಲ್, ಗೋವಿನಜೋಳ 225.62 ಮೆಟ್ರಿಕ್ ಟನ್, ಸೋಯಾಬೀನ್ 550 ಕ್ವಿಂಟಾಲ್, ತೊಗರಿ 87 ಕ್ವಿಂಟಾಲ್, ಹೆಸರು 15 ಕ್ವಿಂಟಾಲ್, ಅಲಸಂದಿ 6 ಕ್ವಿಂಟಾಲ್, ಜೋಳ 12 ಕ್ವಿಂಟಾಲ್ ಹಾಗೂ ರಸಗೊಬ್ಬರ ದಾಸ್ತಾನು ಮಾಡಲಾಗಿದೆ. ರೈತರ ಅನುಕೂಲಕ್ಕಾಗಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳಲ್ಲಿ ಗೊಬ್ಬರ ಸಂಗ್ರಹಿಸಲಾಗುತ್ತಿದೆ ಎಂದರು.

    ಸೋಯಾಬೀನ್ ಬೀಜ ಸೂಕ್ಷ್ಮವಾಗಿರುವುದಿಂದ ಬಿತ್ತನೆ ಪೂರ್ವದಲ್ಲಿ ಭೂಮಿಯಲ್ಲಿನ ತೇವಾಂಶ ಗಮನಿಸಬೇಕು. ತೇವಾಂಶ ಕಡಿಮೆಯಿದ್ದರೆ ಬಿತ್ತನೆಗೆ ಮುಂದಾಗಬಾರದು. ರಾಜ್ಯಕ್ಕೆ ಜೂನ್ ಮೊದಲ ವಾರದಲ್ಲಿ ಮುಂಗಾರು ಪ್ರವೇಶಿಸಲಿದೆ. ಸಂಪೂರ್ಣವಾಗಿ ಮಳೆ ಆದ ಮೇಲೆ ಬಿತ್ತನೆಗೆ ಮುಂದಾಗಬೇಕು. ಬೇಗನೆ ಬಿತ್ತನೆಗೆ ಮುಂದಾದರೆ ಕೀಟಗಳ ಹಾವಳಿ ಹೆಚ್ಚಾಗುವ ಸಾಧ್ಯತೆ ಇರುತ್ತದೆ ಎಂದರು.

    ನಿಗದಿಗಿಂತ ಹೆಚ್ಚು ಹಣ ಪಡೆದರೆ ಕಪ್ಪುಪಟ್ಟಿಗೆ: ಬಿತ್ತನೆ ಬೀಜ ಮಾರಾಟಗಾರರು ಹೆಚ್ಚಿನ ಬೆಲೆ ಪಡೆಯಲು ಮುಂದಾದರೆ ಅಂಗಡಿ ಪರವಾನಗಿ ರದ್ದುಪಡಿಸಿ ಕಪ್ಪುಪಟ್ಟಿಗೆ ಸೇರಿಸಲಾಗುವುದು ಎಂದು ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಎಚ್ಚರಿಸಿದರು.

    ಬ್ಯಾಡಗಿ ರೈತ ಸಂಪರ್ಕ ಕೇಂದ್ರದಲ್ಲಿ ಪ್ರಸಕ್ತ ಸಾಲಿನ ಬಿತ್ತನೆ ಬೀಜ ವಿತರಣೆಗೆ ಬುಧವಾರ ಚಾಲನೆ ನೀಡಿ ಅವರು ಮಾತನಾಡಿದರು.

    ತಾಲೂಕಿನ 32 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ಬೀಜಗಳ ದಾಸ್ತಾನು ಸಮರ್ಪಕವಾಗಿದೆ. ಕಳಪೆ ಬೀಜ ವಿತರಣೆಯಾಗದಂತೆ ಅಧಿಕಾರಿಗಳು ಮುನ್ನೆಚ್ಚರಿಕೆ ವಹಿಸಬೇಕು ಎಂದರು. ಕೃಷಿ ಸಹಾಯಕ ನಿರ್ದೇಶಕ ಎ.ಡಿ. ವೀರಭದ್ರಪ್ಪ ಮಾತನಾಡಿ, ತಾಲೂಕಿನ ಬ್ಯಾಡಗಿ, ಮೋಟೆಬೆನ್ನೂರು, ಕಾಗಿನೆಲೆ, ಚಿಕ್ಕಬಾಸೂರು ಕೇಂದ್ರದಲ್ಲಿ ಬಿತ್ತನೆ ಬೀಜಗಳು ಲಭ್ಯವಿವೆ. ಡಿಎಪಿ ಗೊಬ್ಬರವನ್ನು ಹಳೆಯ ದರ (1230 ರೂ.) ದಲ್ಲಿ ಖರೀದಿಸಬೇಕು. ಸಮಸ್ಯೆ ಎದುರಾದರೆ ಸಮೀಪದ ರೈತ ಸಂಪರ್ಕ ಕೇಂದ್ರವನ್ನು ಸಂರ್ಪಸಬೇಕು ಎಂದರು.

    ತಾ.ಪಂ. ಅಧ್ಯಕ್ಷೆ ಸವಿತಾ ಸುತ್ತಕೋಟಿ, ಉಪಾಧ್ಯಕ್ಷ ಶಾಂತಪ್ಪ ದೇಸಾಯಿ, ಕೃಷಿ ಇಲಾಖೆ ಉಪ ನಿರ್ದೇಶಕಿ ಜಿ.ಎಸ್. ಸ್ಪೂರ್ತಿ, ಜಿಲ್ಲಾ ಜಂಟಿ ಕೃಷಿ ನಿರ್ದೆಶಕ ವಿ.ಮಂಜುನಾಥ, ತಾಪಂ ಇಒ ಕೆ. ತಿಮ್ಮಾರೆಡ್ಡಿ, ಕೃಷಿ ಸಹಾಯಕ ಅಧಿಕಾರಿಗಳಾದ ಆರ್. ಮಂಜುನಾಥ, ಎಸ್.ಡಿ. ಮರಬಸಣ್ಣನವರ, ಬಸವರಾಜ ಮರಗಣ್ಣನವರ, ನಾಗರಾಜ ಬನ್ನಿಹಟ್ಟಿ, ಆರ್.ಟಿ. ಕರಿಲಿಂಗಪ್ಪ, ಕೆ.ಬಿ.ಹಿರೇಹಾಳ, ಜಲಾನಯನ ಸಹಾಯಕ ಅಧಿಕಾರಿ ಅಣ್ಣಪ್ಪ ದ್ಯಾಮನಗೌಡ್ರ ರೈತರಾದ ಬಸವರಾಜ ಸಂಕಣ್ಣನವರ, ಅಶೋಕ ಮಾಳೇನಹಳ್ಳಿ, ಬಸವರಾಜ ಗುತ್ತಲ ಇತರರಿದ್ದರು.

    ಹಾನಗಲ್ಲಿನಲ್ಲಿ ರೈತರ ಬೇಡಿಕೆಗೆ ತಕ್ಕಂತೆ ಪೂರೈಕೆ: ರೈತರು ಹೊಲಗಳನ್ನು ಹಸನುಗೊಳಿಸಿ ಬಿತ್ತನೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ. ತಾಲೂಕಿನ 44,159 ಹೆಕ್ಟೇರ್ ಪ್ರದೇಶದಲ್ಲಿ ವಿವಿಧ ಬೆಳೆ ಬಿತ್ತನೆ ಗುರಿ ಹೊಂದಲಾಗಿದ್ದು, ವಾರದೊಳಗೆ ತಾಲೂಕಿನ ರೈತರ ಬೇಡಿಕೆಗೆ ಅನುಗುಣವಾಗಿ ಬಿತ್ತನೆ ಬೀಜ ಪೂರೈಕೆಯಾಗಲಿವೆ ಎಂದು ಹಾನಗಲ್ಲ ಶಾಸಕ ಸಿ.ಎಂ. ಉದಾಸಿ ತಿಳಿಸಿದ್ದಾರೆ. ತಾಲೂಕಿನಲ್ಲಿ 7,630 ಕ್ವಿಂಟಾಲ್ ಬಿತ್ತನೆ ಬೀಜಕ್ಕೆ ಬೇಡಿಕೆ ಸಲ್ಲಿಸಲಾಗಿದೆ. 280 ಕ್ವಿಂ. ಗೋವಿನಜೋಳ, 300 ಕ್ವಿಂ. ಭತ್ತ, 1254 ಕ್ವಿಂ. ಸೋಯಾಬೀನ್, 30 ಕ್ವಿಂಟಾಲ್ ಶೇಂಗಾ ಬೀಜ ದಾಸ್ತಾನಿದೆ. ಅದರಲ್ಲಿ 3,800 ಕ್ವಿಂಟಾಲ್ ಭತ್ತ, 1,300 ಕ್ವಿಂ. ಗೋವಿನಜೋಳ, 2,300 ಕ್ವಿಂ. ಸೋಯಾಬೀನ್, 230 ಕ್ವಿಂ. ಶೇಂಗಾ ಬೀಜ ದಾಸ್ತಾನು ಮಾಡಿಕೊಳ್ಳುವಂತೆ ಕೃಷಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಖಾಸಗಿ ಬಿತ್ತನೆ ಬೀಜ ಮಾರಾಟಗಾರರು ಗುಣಮಟ್ಟದ, ಪ್ರಮಾಣೀಕರಿಸಿದ ಬಿತ್ತನೆ ಬೀಜಗಳನ್ನು ರೈತರಿಗೆ ವಿತರಿಸುವಂತೆ ಸೂಚಿಸಲಾಗಿದೆ. ತಾಲೂಕಿನಲ್ಲಿ ಈಗಾಗಲೇ 1432 ಮೆಟ್ರಿಕ್ ಟನ್ ಡಿಎಪಿ, 4895 ಮೆಟ್ರಿಕ್ ಟನ್ ಯೂರಿಯಾ, 4254 ಮೆಟ್ರಿಕ್ ಟನ್ ಕಾಂಪ್ಲೆಕ್ಸ್, 1011 ಮೆಟ್ರಿಕ್ ಟನ್ ಪೊಟ್ಯಾಷ್ ಸೇರಿದಂತೆ 11,592 ಮೆಟ್ರಿಕ್ ಟನ್ ವಿವಿಧ ರಸಗೊಬ್ಬರ ದಾಸ್ತಾನು ಮಾಡಲಾಗಿದೆ. ತಾಲೂಕಿನ ರೈತರಿಗೆ ರಸಗೊಬ್ಬರ ಕೊರತೆಯಾಗಲಾರದು. ರೈತರ ಅನುಕೂಲಕ್ಕಾಗಿ ಹಾನಗಲ್ಲ, ಅಕ್ಕಿಆಲೂರು, ಬಮ್ಮನಹಳ್ಳಿ, ಚಿಕ್ಕಾಂಶಿ ಹೊಸೂರ, ಆಡೂರು, ಬೆಳಗಾಲಪೇಟ, ಮಾರನಬೀಡ ಗ್ರಾಮಗಳಲ್ಲಿ ಸಹಾಯಧನದಲ್ಲಿ ಬಿತ್ತನೆ ಬೀಜಗಳನ್ನು ವಿತರಿಸಲು ಕೇಂದ್ರಗಳನ್ನು ತೆರೆಯಲಾಗಿದೆ. ಬೀಜ-ಗೊಬ್ಬರಗಳನ್ನು ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡಿದವರ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ವ್ಯಾಪಾರಸ್ಥರು ರಸಗೊಬ್ಬರಗಳನ್ನು ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿರುವ ಬಗ್ಗೆ ರೈತರಿಂದ ದೂರುಗಳು ಬರುತ್ತಿವೆ. ಅಂತಹವರು ಕಂಡು ಬಂದರೆ ಅಂಗಡಿಯ ಪರವಾನಗಿ ರದ್ದು ಮಾಡಿ ಕಾನೂನು ಕ್ರಮ ಕೈಗೊಳ್ಳಲಾಗುವುದು.

    | ಶ್ರೀಧರಮೂರ್ತಿ ಕೃಷಿ ಇಲಾಖೆ ಸಹಾಯಕ ನಿರ್ದೇಶಕ, ಸವಣೂರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts