More

    ಕಿರುಚಿತ್ರದಲ್ಲಿದೆ ದೇಶಪ್ರೇಮದ ಕಿಚ್ಚು ; ಗೌರಿಬಿದನೂರು ಎಚ್.ಎನ್. ಕಲಾಭವನದಲ್ಲಿ ಕರ್ನಾಟಕದ ಜಲಿಯನ್ ವಾಲಾಬಾಗ್ ಪ್ರದರ್ಶನ

    ಗೌರಿಬಿದನೂರು: 1938ರಲ್ಲಿ ಬ್ರಿಟಿಷ್ ಸರ್ಕಾರ ವಿದುರಾಶ್ವತ್ಥದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಮೇಲೆ ನಡೆಸಿದ ನರಮೇಧದ ನೈಜ ಕತೆ ಆಧಾರಿತ ಕರ್ನಾಟಕದ ಜಲಿಯನ್ ವಾಲಾಬಾಗ್ ಕಿರುಚಿತ್ರ ಪ್ರದರ್ಶನಕ್ಕೆ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಅಧಿಕೃತ ಚಾಲನೆ ನೀಡಲಾಯಿತು.

    ನಗರದ ಡಾ.ಎಚ್.ಎನ್.ಕಲಾಭವನದಲ್ಲಿ ಏರ್ಪಡಿಸಿದ್ದ ಕಿರುಚಿತ್ರ ಪ್ರದರ್ಶನದಲ್ಲಿ ಅನೇಕ ಗಣ್ಯರು ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಅತ್ಯಾಧುನಿಕ ಧ್ವನಿ ವ್ಯವಸ್ಥೆಯುಳ್ಳ ಕಲಾಭವನದಲ್ಲಿ ನೂರಾರು ಮಂದಿ ಪ್ರದರ್ಶನ ಕಣ್ತುಂಬಿಕೊಂಡರು. ತಾಲೂಕಿನವರೇ ಆದ ಸಾಹಿತಿ ಹಾಗೂ ಕಿರುಚಿತ್ರದ ನಿರ್ದೇಶಕ ವಾಗೀಶ್ ಆರ್.ಕಟ್ಟಿ ಅವರನ್ನು ಹಿರಿಯ ವಿದ್ಯಾರ್ಥಿಗಳು ಹಾಗೂ ಸ್ನೇಹಿತರು ಸನ್ಮಾನಿಸಿದರು.

    ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸಿ: ನಿರ್ಮಾಪಕ, ಉದ್ಯಮಿ ಕೆ.ಎಚ್.ಪುಟ್ಟಸ್ವಾಮಿಗೌಡ ಕಿರುಚಿತ್ರ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿ, ಸ್ವಾತಂತ್ರ್ಯ ಹೋರಾಟಕ್ಕೆ ತಾಲೂಕು ತನ್ನದೇ ಆದ ಕೊಡುಗೆ ನೀಡಿದೆ. ವೀರಪುತ್ರರಿಗೆ ಜನ್ಮನೀಡಿದ ವೀರಭೂಮಿ ಇದು. ಅಂದಿನ ತ್ಯಾಗ ಬಲಿದಾನಗಳನ್ನು ಯುವಪೀಳಿಗೆಗೆ ಪರಿಚಯಿಸಿ ದೇಶಾಭಿಮಾನ ಮೂಡಿಸಬೇಕು ಎಂಬ ಉದ್ದೇಶದಿಂದ ಈ ಚಿತ್ರ ನಿರ್ಮಿಸಲಾಗಿದೆ. ಚಿತ್ರೀಕರಣಕ್ಕೆ ಅಡೆ-ತಡೆಗಳು ಉಂಟಾದರೂ ಚಿತ್ರ ಉತ್ತಮವಾಗಿ ಮೂಡಿ ಬಂದಿದೆ. ಕಲಾವಿದರ ನೈಜ ಅಭಿನಯ ಹಾಗೂ ಉತ್ತಮ ಹಾಡುಗಳು ಚಿತ್ರಕ್ಕೆ ಶಕ್ತಿ ತುಂಬಿವೆ ಎಂದರು.

    ವಾಗೀಶ್ ಆರ್.ಕಟ್ಟಿ ಮಾತನಾಡಿ, ಪುಟ್ಟಸ್ವಾಮಿಗೌಡರು ನೀಡಿದ ಪ್ರೋತ್ಸಾಹದಿಂದಾಗಿ ಕಿರುಚಿತ್ರ ಮಾಡಿದ್ದೇವೆ. ಇದು ಈ ಮಣ್ಣಿನ ಶೌರ್ಯದ ಕತೆ. ಹೀಗಿರುವಾಗ ಜಿಲ್ಲಾಧಿಕಾರಿ ಅನುಮತಿ ಪಡೆದಿದ್ದರೂ ವಿದುರಾಶ್ವತ್ಥದ ವೀರ ಸೌಧದಲ್ಲಿ ಚಿತ್ರೀಕರಣ ಮಾಡಲು ಕೆಲವರು ಅಡ್ಡಿಪಡಿಸಿದರು ಎಂದು ಬೇಸರಿಸಿದರು.

    ಕೋಚಿಮುಲ್ ನಿರ್ದೇಶಕ ಜೆ.ಕಾಂತರಾಜು ಮಾತನಾಡಿ, ಪುಟ್ಟಸ್ವಾಮಿಗೌಡರು ಲಾಭದ ಉದ್ದೇಶವವಿಲ್ಲದೆ ಕಿರುಚಿತ್ರದ ಮೇಲೆ ಬಂಡವಾಳ ಹೂಡಿ ಮುಕ್ತ ಮನಸ್ಸಿನಿಂದ ಪ್ರೋತ್ಸಾಹಿಸಿದ್ದಾರೆ. ಅದರ ಫಲವಾಗಿ ಕಿರುಚಿತ್ರ ಉತ್ತಮವಾಗಿ ಮೂಡಿ ಬಂದಿದೆ. ಯುವ ಪೀಳಿಗೆ ಕೇವಲ ಮನೋರಂಜನೆಗೆ ಸೀಮಿತಗೊಳ್ಳದೆ, ಇಂತಹ ವಿಚಾರಗಳ ಬಗ್ಗೆಯೂ ತಿಳಿದುಕೊಳ್ಳಬೇಕು ಎಂದರು.

    ನಗರಸಭೆ ಮಾಜಿ ಸದಸ್ಯ ಕೆ.ಎಸ್.ಅನಂತರಾಜು ಮಾತನಾಡಿ, ಕರ್ನಾಟಕದಲ್ಲಿ ಜಲಿಯನ್ ವಾಲಾಬಾಗ್ ನಂತಹ ಘಟನೆ ನಡೆದಿದೆ ಎಂಬ ವಿಷಯ ಸಾಕಷ್ಟು ಮಂದಿಗೆ ತಿಳಿದಿಲ್ಲ. ಆದ್ದರಿಂದ ಈ ಚಿತ್ರವನ್ನು ಶಾಲಾ-ಕಾಲೇಜುಗಳಲ್ಲಿ ಪ್ರದರ್ಶಿಸುವ ವ್ಯವಸ್ಥೆ ಮಾಡಬೇಕು ಎಂದರು.
    ನಗರಸಭೆ ಅಧ್ಯಕ್ಷೆ ರೂಪಾ ಅನಂತರಾಜು, ನಗರಸಭೆ ಸದಸ್ಯರಾದ ರಾಜಕುಮಾರ್, ಫರೀದ್, ಲಕ್ಷ್ಮೀನಾರಾಯಣಪ್ಪ, ಮುಖಂಡರಾದ ಜಿ.ಕೆ.ಸತೀಶ್ ಕುಮಾರ್, ಅಬೂಬಕರ್, ವೆಂಕಟರಾಮರೆಡ್ಡಿ, ಗಂಗಾಧರಪ್ಪ, ಆರ್.ಪಿ.ಗೋಪಾಲಗೌಡ, ಚಂದ್ರಶೇಖರ್ ಸೇರಿ ಇನ್ನಿತರ ಮುಖಂಡರು ಇದ್ದರು.

    ಪುಟ್ಟಸ್ವಾಮಿಗೌಡ ಕಾರ್ಯಕ್ಕೆ ಪ್ರಶಂಸೆ:ವಿದುರಾಶ್ವತ್ಥ ಸ್ಥಳದ ಮಹಿಮೆ ಹಾಗೂ ಇತಿಹಾಸದ ಪುಟಗಳಲ್ಲಿ ದಾಖಲಾಗಿರುವ ಸ್ವಾತಂತ್ರ್ಯ ಹೋರಾಟದ ಚಿತ್ರಣವನ್ನು ದೃಶ್ಯ ರೂಪದಲ್ಲಿ ದಾಖಲಿಸುವ ಕೆಲಸವನ್ನು ಪುಟ್ಟಸ್ವಾಮಿಗೌಡ ಮಾಡಿದ್ದಾರೆ. ಇಂತಹವರ ಸೇವೆಯನ್ನು ಜನ ಗುರುತಿಸಿ ಪ್ರೋತ್ಸಾಹಿಸಿದರೆ ಸಮಾಜಕ್ಕೆ ಮತ್ತಷ್ಟು ಕೊಡುಗೆ ನೀಡಲು ಪ್ರೇರಣೆ ಸಿಗಲಿದೆ ಎಂಬ ಪ್ರಶಂಸೆಯ ಮಾತುಗಳು ಗಣ್ಯರಿಂದ ಕೇಳಿಬಂದವು.

    ಎಲ್ಲರೂ ಕಿರುಚಿತ್ರ ವೀಕ್ಷಿಸಬೇಕು ಹಾಗೂ ಮಕ್ಕಳಿಗೆ ತೋರಿಸಿ ತಾಲೂಕಿನಲ್ಲಿ ನಡೆದ ವಿರೋಚಿತ ಸ್ವಾತಂತ್ರ್ಯ ಹೋರಾಟವನ್ನು ಪರಿಚಯಿಸಿಕೊಡಬೇಕು. ದೇಶವನ್ನು ದಾಸ್ಯದ ಸಂಕೋಲೆಯಿಂದ ಬಿಡಿಸಲು ತ್ಯಾಗ ಬಲಿದಾನ ಮಾಡಿದವರನ್ನು ಸ್ಮರಿಸುವ ಕೆಲಸ ಮಾಡಬೇಕು.
    ಕೆ.ಎಚ್.ಪುಟ್ಟಸ್ವಾಮಿಗೌಡ, ನಿರ್ಮಾಪಕ, ಉದ್ಯಮಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts