More

    ಸೋರುತ್ತಿವೆ ಜ್ಞಾನದೀವಿಗೆ ಹಚ್ಚಬೇಕಾದ ಶಾಲೆಗಳು: ಚನ್ನಪಟ್ಟಣ ತಾಲೂಕಿನ 50ಕ್ಕೂ ಹೆಚ್ಚು ಶಾಲೆಗಳ ದುಸ್ಥಿತಿ

    ಚನ್ನಪಟ್ಟಣ: ಸೋರುತಿಹುದು ಮನೆಯ ಮಾಳಿಗಿ… ಅಜ್ಞಾನದಿಂದ… ಎಂಬುದು ಸಂತ ಶಿಶುನಾಳ ಶರೀರ ತತ್ವಪದ. ಇದೇ ರೀತಿ ಜ್ಞಾನದ ದೀವಿಗೆ ಹಚ್ಚಬೇಕಾದ ತಾಲೂಕಿನ 50ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳು ಸೋರುತ್ತಿವೆ. ಸಂಬಂಧಪಟ್ಟ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಅಜ್ಞಾನಕ್ಕೆ ಇವು ಸಾಕ್ಷಿಯಾಗಿವೆ.

    ತಾಲೂಕಿನ ಇಷ್ಟೊಂದು ಶಾಲೆಗಳು ದುಸ್ಥಿತಿ ತಲುಪಿ ಹಲವು ವರ್ಷಗಳೇ ಕಳೆದಿವೆ. ಒಡೆದ ಹೆಂಚುಗಳು.., ಬಿರುಕುಬಿಟ್ಟ ಗೋಡೆಗಳು.., ಕಳಚಿ ಬೀಳುವ ಸ್ಥಿತಿಯಲ್ಲಿರುವ ಮರದ ಪಟ್ಟಿಗಳು.. ಇವುಗಳ ಮಧ್ಯೆ ಆತಂಕದಿಂದ ಪಾಠ ಕಲಿಯಬೇಕಾದ ಅನಿವಾರ್ಯತೆ ಮಕ್ಕಳದ್ದಾಗಿದೆ. ಮಳೆ ಬಂದರಂತೂ ಈ ಶಾಲೆಗಳ ಸ್ಥಿತಿ ಹೇಳತೀರದಾಗಿದೆ. ಆರ್‌ಸಿಸಿ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೆಲ ಶಾಲೆಗಳ ಸ್ಥಿತಿ ಕೂಡ ಇದಕ್ಕೆ ಹೊರತಾಗಿಲ್ಲ. ಇವು ಕೂಡ ಕಲಿಕೆಗೆ ಯೋಗ್ಯವಾಗಿಲ್ಲ. ಈ ಪೈಕಿ ತಾಲೂಕಿನ 12 ಗ್ರಾಮಗಳ ಶಾಲೆಗಳಿಗೆ ತುರ್ತು ಕಟ್ಟಡಗಳ ಅವಶ್ಯಕವಿದೆ. ಈ ಬಗ್ಗೆ ಸಾರ್ವಜನಿಕರು ಸಂಬಂಧಪಟ್ಟವರ ಗಮನ ಸೆಳೆದಿದ್ದರೂ ಪ್ರಯೋಜನವಾಗಿಲ್ಲ.

    ತಾಲೂಕಿನ ಶ್ಯಾನುಭೋಗನಹಳ್ಳಿ, ಹಾರೋಹಳ್ಳಿ, ಅಮ್ಮಳ್ಳಿದೊಡ್ಡಿ, ಎಚ್. ಬ್ಯಾಡರಹಳ್ಳಿ, ತಟ್ಟೆಕೆರೆ, ಇಗ್ಗಲೂರು, ಬೇವೂರು, ನೇರಳೂರು, ಮಾಗನೂರು, ಕಾಲಿಕೆರೆ, ಬಿ.ವಿ.ಪಾಳ್ಯ, ನಗರದ ಪೆಟ್ಟಾದಲ್ಲಿರುವ ಶಾಲೆಗಳು ಶಿಥಿಲಾವಸ್ಥೆ ತಲುಪಿವೆ. ಇವುಗಳನ್ನು ತೆರವುಗೊಳಿಸಿ ನೂತನ ಕಟ್ಟಡ ಕಟ್ಟಬೇಕಾಗಿದೆ. ಇನ್ನುಳಿದ ಶಾಲೆಗಳೂ ದುರಸ್ತಿಗಾಗಿ ಕಾಯುತ್ತಿವೆ.

    ದುರಸ್ತಿಯಾಗದಿದ್ದರೆ ಮಕ್ಕಳನ್ನು ಕಳಿಸಲ್ಲ: ತಾಲೂಕಿನ ಕೋಡಂಬಳ್ಳಿ ಸಮೀಪವಿರುವ ಶ್ಯಾನುಭೋಗನಹಳ್ಳಿ ಗ್ರಾಮದ ಶಾಲೆ 2 ವರ್ಷಗಳಿಂದ ತೀವ್ರ ಹಾನಿಗೊಳಗಾಗಿದೆ. ಪಂಚಾಯಿತಿಯಿಂದ ಹಿಡಿದು, ಶಿಕ್ಷಣ ಸಚಿವರಿಗೆ ದೂರು ನೀಡಿದರೂ ಕ್ರಮ ಕೈಗೊಂಡಿಲ್ಲ. ಬೀಳುವ ಸ್ಥಿತಿಯಲ್ಲಿರುವ ಶಾಲೆಯನ್ನು ಕೆಡವಿ ಹೊಸ ಕಟ್ಟಡ ಕಟ್ಟಿಕೊಡಬೇಕು ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ. ಕರೊನಾ ಹಿನ್ನೆಲೆಯಲ್ಲಿ ಶಾಲೆ ಮುಚ್ಚಿದೆ. ಶಾಲೆ ಕಟ್ಟಡ ದುರಸ್ತಿಯಾಗದಿದ್ದರೆ ಶಾಲೆ ಆರಂಭವಾದರೂ ಮಕ್ಕಳನ್ನು ಕಳಿಸುವುದಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಯಾಕಿಷ್ಟು ತಾತ್ಸಾರ?: ಸರ್ಕಾರಿ ಶಾಲೆಗಳ ಬಲವರ್ಧನೆಯೇ ಗುರಿ ಎನ್ನುವ ಶಿಕ್ಷಣ ಸಚಿವರು, ತಾತ್ಸಾರ ತೋರದೆ ಮಕ್ಕಳು ನೆಮ್ಮದಿಯಾಗಿ ಕಲಿಕೆಯಲ್ಲಿ ತೊಡಗುವಂತಾಗಲು ಹೊಸ ಶಾಲಾ ಕಟ್ಟಡಗಳಿಗೆ ಶೀಘ್ರವಾಗಿ ಅನುದಾನ ಬಿಡುಗಡೆ ಮಾಡಿಸಬೇಕಿದೆ. ಅಲ್ಲದೆ, ಕ್ಷೇತ್ರದ ಶಾಸಕರು ಹಾಗೂ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ಸಂಸದ ಡಿ.ಕೆ,ಸುರೇಶ್, ಮೇಲ್ಮನೆ ಸದಸ್ಯ ಸಿ.ಪಿ. ಯೋಗೇಶ್ವರ್ ಅವರು ತಮ್ಮ ವ್ಯಾಪ್ತಿಯಲ್ಲಿರುವ ಈ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಲು ಮುಂದಾಗಬೇಕಿದೆ.

    ತಾಲೂಕಿನಲ್ಲಿ ಶಿಥಿಲಾವಸ್ಥೆ ತಲುಪಿರುವ ಶಾಲೆಗಳ ಪಟ್ಟಿ ಮಾಡಿ ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಮತ್ತು ಸರ್ಕಾರಕ್ಕೆ ನೀಡಲಾಗಿದೆ. ಇವುಗಳ ಪೈಕಿ ಶ್ಯಾನುಭೋಗನಹಳ್ಳಿ, ಹಾರೋಹಳ್ಳಿ, ಅಮ್ಮಳ್ಳಿದೊಡ್ಡಿ ಗ್ರಾಮದ ಶಾಲೆಗಳು ಸಂಪೂರ್ಣವಾಗಿ ಹಾನಿಗೊಳಗಾಗಿದ್ದು, ತುರ್ತಾಗಿ ಹೊಸ ಕಟ್ಟಡ ನಿರ್ಮಾಣವಾಗಬೇಕಿದೆ. ಅನುದಾನದ ಬಿಡುಗಡೆಗಾಗಿ ಕಾಯುತ್ತಿದ್ದೇವೆ.
    ನಾಗರಾಜು, ಕ್ಷೇತ್ರ ಶಿಕ್ಷಣಾಧಿಕಾರಿ, ಚನ್ನಪಟ್ಟಣ

    ಗ್ರಾಮದ ಶಾಲೆ ಬೀಳುವ ಸ್ಥಿತಿಯಲ್ಲಿದೆ. ಮಕ್ಕಳನ್ನು ಕಳುಹಿಸುವುದಾದರೂ ಹೇಗೆ? ಕರೊನಾ ಹಿನ್ನೆಲೆಯಲ್ಲಿ ಶಿಕ್ಷಕರು ವಿದ್ಯಾಗಮ ಕಾರ್ಯಕ್ರಮದ ಮೂಲಕ ಬಯಲು ಪ್ರದೇಶಗಳಲ್ಲಿ ಪಾಠ ಬೋಧಿಸುತ್ತಿದ್ದಾರೆ. ಶಾಲೆ ಆರಂಭವಾದರೂ, ಶಿಥಿಲಾವಸ್ಥೆ ತಲುಪಿರುವ ಶಾಲೆಗೆ ಮಕ್ಕಳನ್ನು ಕಳುಹಿಸದಿರಲು ಗ್ರಾಮಸ್ಥರೆಲ್ಲ ಚಿಂತನೆ ನಡೆಸಿದ್ದೇವೆ.
    ರವಿ ಶ್ಯಾನುಭೋಗನಹಳ್ಳಿ ಗ್ರಾಪಂ ಮಾಜಿ ಸದಸ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts