More

    ಸಂತನೆಂದರೆ ಯಾರು.. ದಿವ್ಯತೆ ಅರಿತವರು… ಸಖತ್​ ವೈರಲ್ ಆಗ್ತಿದೆ ಸಿದ್ದೇಶ್ವರ ಸ್ವಾಮೀಜಿ ಕುರಿತ ಈ ಹಾಡು!

    |ಕಿರಣ್​ ಮಾದರಹಳ್ಳಿ ಚಾಮರಾಜನಗರ
    ಸಂತನೆಂದರೆ ಯಾರು, ದಿವ್ಯತೆಯ ಅರಿತವನು… ಸರಳತೆಯ ಸೂತ್ರದಲಿ ಸುಖವ ಕಂಡವನು… ಮಮತೆ ಬಂಧನ ಕಳಚಿ ಬಲು ದೂರ ನಿಂತವನು… ಎಲ್ಲರಲಿ ಅವನೊಬ್ಬ ಮುದ್ದುರಾಮ…

    ವಿಜಯಪುರ ಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಲಿಂಗೈಕ್ಯರಾದ ಮೇಲೆ ಸಾಮಾಜಿಕ ಜಾಲತಾಣಗಳಲ್ಲಿ ಈ ಹಾಡು ವೈರಲ್​ ಆಗಿದೆ. ಫೇಸ್​ಬುಕ್​, ವಾಟ್ಸ್​ಆ್ಯಪ್​ಗಳಲ್ಲಿ ಸಿದ್ದೇಶ್ವರ ಶ್ರೀಗಳ ಭಾವಚಿತ್ರದೊಂದಿಗೆ ಹಿನ್ನೆಲೆ ಧ್ವನಿಯಲ್ಲಿ ಕೇಳಸಿಗುವ ಈ ಹಾಡು ಅಪಾರ ಮೆಚ್ಚುಗೆ ಗಳಿಸಿದೆ. ಶ್ರೀಗಳ ನಡೆ, ನುಡಿಗೆ ಒಪ್ಪುವಂತೆ ರಚನೆಯಾಗಿರುವ ಈ ಗೀತೆಯನ್ನು ಬರೆದವರು ಮೂಲತಃ ಚಾಮರಾಜನಗರ ಜಿಲ್ಲೆಯವರು.

    ಚಾಮರಾಜನಗರ ತಾಲೂಕಿನ ಕಾಗಲವಾಡಿಯ ಕೆ.ಪಿ.ಚಿಕ್ಕವಿರಪ್ಪ ಮತ್ತು ಶಿವಮ್ಮ ದಂಪತಿಯ ಪುತ್ರ, ಹಿರಿಯ ಸಾಹಿತಿ ಕೆ.ಸಿ.ಶಿವಪ್ಪ ಈ ಗೀತೆ ಬರೆದಿದ್ದಾರೆ. ಇವರು ಹುಟ್ಟಿದ್ದು ಕಾಗಲವಾಡಿಯಲ್ಲಾದರೂ ಬೆಳದದ್ದೆಲ್ಲ ರಾಮಸಮುದ್ರದ ಅಜ್ಜಿ ರಾಚಮ್ಮ ಅವರ ಮನೆಯಲ್ಲಿ. ಪ್ರಸ್ತುತ ಮೈಸೂರಿನಲ್ಲಿ ಶಿವಪ್ಪ ವಾಸವಿದ್ದು, 2003ರಲ್ಲಿ ಪ್ರಕಟಗೊಂಡ “ಮುದ್ದುರಾಮನ ಮನಸು” ಕೃತಿಯಲ್ಲಿ “ಸಂತನೆಂದರೆ ಯಾರು” ಚೌಪದಿಯಾಗಿ ಅಕ್ಷರ ರೂಪಕ್ಕಿಳಿದಿತ್ತು. ನಂತರ 2007ರಲ್ಲಿ ಚೌಪದಿಗಳನ್ನೆಲ್ಲ ಸೇರಿಸಿ ಎನ್​.ಎಸ್​.ಪ್ರಸಾದ್​ ಸಂಗೀತ ಸಂಯೋಜನೆಯಲ್ಲಿ ಹಾಡಾಯಿತು. ಸಿದ್ದೇಶ್ವರ ಶ್ರೀಗಳು ಲಿಂಗೈಕ್ಯರಾದ ದಿನ ಸಾಮಾಜಿಕ ಜಾಲತಾಣಗಳಲ್ಲಿ ಸಖತ್​ ವೈರಲ್​ ಆಗಿದೆ.

    ಶ್ರೀಗಳಿಗಾಗಿಯೇ ಬರೆದದ್ದು: ಸಿದ್ದೇಶ್ವರ ಶ್ರೀಗಳ ಪ್ರಭಾವಕ್ಕೊಳಗಾಗಿ “ಸಂತನೆಂದರೆ ಯಾರು” ಚೌಪದಿಯನ್ನು ರಚನೆ ಮಾಡಲಾಯಿತು ಎಂದು ಸಾಹಿತಿ ಕೆ.ಸಿ.ಶಿವಪ್ಪ ಹೇಳುತ್ತಾರೆ. ಡಿವಿಜಿ, ಸುತ್ತೂರಿನ ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಮತ್ತು ಸಿದ್ದೇಶ್ವರಪ್ಪ ನನ್ನ ವ್ಯಕ್ತಿತ್ವದ ಮೇಲೆ ಪ್ರಭಾವ ಬೀರಿದ್ದರು. ಜೆಎಸ್​ಎಸ್​ ಮಹಾವಿದ್ಯಾಪೀಠದಲ್ಲಿ ಸೇವೆ ಸಲ್ಲಿಸುತ್ತಿದ್ದಾಗ ಸಿದ್ದೇಶ್ವರ ಶ್ರೀಗಳ ಒಡನಾಟ ಬೆಳೆಯಿತು. ಅವರೊಂದಿಗೆ ನಾನು ಯೂರೋಪ್​, ಅಮೆರಿಕ ಪ್ರವಾಸ ಮಾಡಿದ್ದೆ. ಅವರ ವ್ಯಕ್ತಿತ್ವ ನನ್ನ ಮೇಲೆ ಬೀರಿದ ಅಗಾಧ ಪ್ರಭಾವದಿಂದ ಚೌಪದಿ ರಚನೆ ಮಾಡಿದೆ. ಇತ್ತೀಚೆಗೆ ಸಿದ್ದೇಶ್ವರ ಶ್ರೀಗಳು ಅನಾರೋಗ್ಯದಿಂದಾಗಿ ಹಾಸಿಗೆ ಹಿಡಿದಿದ್ದಾಗ ಬಿಜಾಪುರಕ್ಕೆ ಹೋಗಿ ಅವರಿಗೆ ಈ ಹಾಡು ಕೇಳಿಸಿದೆ. ಸನ್ಹೆಯ ಮೂಲಕ ಶ್ರೀಗಳು ಹಾಡಿನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಆ ಕ್ಷಣ ನನಗೆ ಕಣ್ಣೀರು ಬಂತು ಎಂದು ಕೆ.ಸಿ.ಶಿವಪ್ಪ ವಿಜಯವಾಣಿಗೆ ತಿಳಿಸಿದರು.

    ಪ್ರೇಮಕವಿಯ ಅಧ್ಮಾತ್ಮ ಬರಹ: ಕೆ.ಸಿ.ಶಿವಪ್ಪ ಪ್ರೇಮಕವಿ. ಸಿದ್ದೇಶ್ವರರ ಒಡನಾಟದಿಂದ ಅಧ್ಯಾತ್ಮ ಬರಹಕ್ಕಿಳಿದರು. ಚಾಮರಾಜನಗರ, ಮೈಸೂರಿನಲ್ಲಿ ವಿದ್ಯಾಭ್ಯಾಸ ಮಾಡಿದ ಶಿವಪ್ಪ ಅವರು, ಮೈಸೂರಿನ ಸರ್ಕಾರಿ ಮಹಾವಿದ್ಯಾಲಯ, ಚೆನ್ನೈನ ಕೇಂದ್ರ ಚರ್ಮ ಸಂಶೋಧನಾಲಯ, ಬೆಂಗಳೂರು ವಿಶ್ವವಿದ್ಯಾಲಯ, ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ಸಚಿವಾಲಯ(ವಿಧಾನಸೌಧ), ಜೆಎಸ್​ಎಸ್​ ಮಹಾವಿದ್ಯಾಪೀಠದಲ್ಲಿ ಸೇವೆ ಸಲ್ಲಿಸಿದ್ದಾರೆ. ಹೀಗೆ ಕಾಯಕದ ಜತೆ ಸಾಹಿತ್ಯ ಕೃಷಿಯಲ್ಲೂ ತೊಡಗಿ ಕವನ ಸಂಕಲನ, ಚೌಪದಿಗಳ ಸಂಕಲನ, ವ್ಯಕ್ತಿ ವಿಕಸನ, ಚಿಂತನ ಬಿಡಿನುಡಿ ಸಂಚಯ, ಅನುವಾದ ಸೇರಿದಂತೆ ಅನೇಕ ಕೃತಿಗಳನ್ನು ರಚನೆ ಮಾಡಿದ್ದಾರೆ. ಇವುಗಳಲ್ಲಿ “ಮೌನ ಸಂಪದ” ಎನ್ನುವ ಚಿಂತನ ಬಿಡಿ ಸಂಚಯಕ್ಕೆ ಸಿದ್ಧೇಶ್ವರ ಸ್ವಾಮೀಜಿ ಬೆನ್ನುಡಿ ಬರೆದಿದ್ದಾರೆ. ಕೆ.ಸಿ.ಶಿವಪ್ಪ ಅವರ ಸಾಹಿತ್ಯ ಸೇವೆಗೆ ಹಲವು ಪ್ರಶಸ್ತಿಗಳು ಒಲಿದು ಬಂದಿವೆ.

    ಸಂತನೆಂದರೆ ಯಾರು.. ದಿವ್ಯತೆ ಅರಿತವರು… ಸಖತ್​ ವೈರಲ್ ಆಗ್ತಿದೆ ಸಿದ್ದೇಶ್ವರ ಸ್ವಾಮೀಜಿ ಕುರಿತ ಈ ಹಾಡು!

    ಸಖತ್​ ವೈರಲ್​: ಸಂತನೆಂದರೆ ಯಾರು… ಹಾಡು ಸಿದ್ದೇಶ್ವರ ಶ್ರೀಗಳಿರುವ ದೃಶ್ಯಗಳೊಂದಿಗೆ ಸಖತ್​ ವೈರಲ್​ ಆಗಿದೆ. ಶ್ರೀಗಳು ಲಿಂಗೈಕ್ಯರಾದ ಬಳಿಕ ಸಂತಾಪ ಸಲ್ಲಿಸಲು ಈ ಗೀತೆಯನ್ನು ವಾಟ್ಸ್​ಆ್ಯಪ್​ ಸ್ಟೇಟಸ್​, ಫೇಸ್​ಬುಕ್​ಗಳಲ್ಲಿ ಅಪ್ಲೋಡ್​ ಮಾಡಲಾಗಿತ್ತು. 2003ರಲ್ಲಿ ಈ ಗೀತೆ ರಚನೆಯಾಗಿ, 2007ರಲ್ಲಿ ಸಂಗೀತ ಸಂಯೋಜನೆಗೊಡಿದ್ದರೂ ಸಿದ್ದೇಶ್ವರ ಶ್ರೀಗಳು ಲಿಂಗೈಕ್ಯರಾದ ದಿನವಷ್ಟೇ ಬಹಳಷ್ಟು ಜನರಿಗೆ ಗೊತ್ತಾಯಿತು. ಶ್ರೀಗಳಿಗೆ ಒಪ್ಪುವಂತಹ ಸಾಹಿತ್ಯ, ಸಾಮಾನ್ಯರಲ್ಲಿ ಸಾಮಾನ್ಯರಂತಿದ್ದ ಸ್ವಾಮೀಜಿ ಅವರ ದೃಶ್ಯಗಳನ್ನು ಗೀತೆಯೊಂದಿಗೆ ಜೋಡಣೆ ಮಾಡಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

    ಸಂತನೆಂದರೆ ಯಾರು… ಹಿನ್ನೆಲೆ ಧ್ವನಿಯಲ್ಲಿ ಸಿದ್ದೇಶ್ವರ ಸ್ವಾಮೀಜಿ ಅವರ ಚಿತ್ರಗಳನ್ನು ನೋಡುತ್ತಿದ್ದರೆ ನಿಜಕ್ಕೂ ಮೈ ರೋಮಾಂಚನವಾಗುತ್ತದೆ. ಈ ಗೀತೆ ಕೇಳುತ್ತಿದ್ದರೆ ಸಿದ್ದೇಶ್ವರ ಸ್ವಾಮೀಜಿ ಅವರ ವ್ಯಕ್ತಿತ್ವದ ಒಳಹೊಕ್ಕಿ ನೋಡಿ ರಚನೆ ಮಾಡಿ ಬರಬಹುದು ಎನಿಸುತ್ತದೆ. ಅವರು ಲಿಂಗೈಕ್ಯರಾದ ದಿನ ಎಲ್ಲೆಲ್ಲೂ ಈ ಗೀತೆಯೇ ಕೇಳಿಸಿತು.
    | ಕೊಂಗರಹಳ್ಳಿ ನಾಗರಾಜು ತಾಲೂಕು ಅಧ್ಯಕ್ಷ, ಕನ್ನಡ ಸಾಹಿತ್ಯ ಪರಿಷತ್ತು, ಕೊಳ್ಳೇಗಾಲ

    PSI ಹುದ್ದೆ ನೇಮಕಾತಿಯಲ್ಲಿ ಅಕ್ರಮ: ದಿವ್ಯಾ ಹಾಗರಗಿ ಸೇರಿ 26 ಮಂದಿಗೆ ಜಾಮೀನು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts