More

    ಹುಷಾರಾದ ಬಳಿಕ ಪುತ್ರ ತನ್ನ ತಾಯಿಯನ್ನೇ ನಡುರಸ್ತೆಯಲ್ಲಿ ಬಿಟ್ಟ, ಆದರೂ ದೈವ ಆಕೆಯ ಕೈಬಿಡಲಿಲ್ಲ!

    ಮುಂಬೈ: ಆಕೆಯ ಹೆಸರು ಲೀಲಾವತಿ ಕೇದಾರನಾಥ ದುಬೆ. ವಯಸ್ಸು 70 ವರ್ಷ. ದೆಹಲಿಯ ಮಯೂರ್​ ವಿಹಾರದ ನಿವಾಸಿ. ಮುಂಬೈನಲ್ಲಿ ಆಟೋರಿಕ್ಷಾ ಚಾಲಕನಾಗಿರುವ ತನ್ನ ಪುತ್ರ ದಿನೇಶ್​ ಕುಮಾರ್​ ದುಬೆ ಅನಾರೋಗ್ಯಕ್ಕೆ ತುತ್ತಾಗಿರುವ ವಿಷಯ ತಿಳಿದು ಆತನನ್ನು ನೋಡಲೆಂದು ಹೆತ್ತಕರಳು ದೆಹಲಿಯಿಂದ ಮುಂಬೈಗೆ ಬಂದಿತ್ತು.

    ಹುಷಾರಾಗುವವರೆಗೂ ಸುಮ್ಮನಿದ್ದ ದಿನೇಶ್​, ಬಳಿಕ ಮನೆಯಿಂದ ಹೊರಹೋಗುವಂತೆ ತನ್ನ ತಾಯಿಯನ್ನು ಪೀಡಿಸಲಾರಂಭಿಸಿದ. ತನ್ನ ಊಟ, ತಿಂಡಿಯ ವೆಚ್ಚವನ್ನು ಹಿರಿಯ ಜೀವ ಭರಿಸುತ್ತಿದ್ದರೂ ಆತ ಮಾತ್ರ ನಿಷ್ಕರುಣೆಯಿಂದ ತನ್ನ ಪತ್ನಿ ಜತೆಗೂಡಿ ತಾಯಿಯನ್ನು ಮನೆಯಿಂದ ಹೊರದೂಡಲು ಹುನ್ನಾರ ನಡೆಸುತ್ತಲೇ ಇದ್ದ.

    ಭಾನುವಾರ ಸಿಕ್ಕ ಅವಕಾಶ ಬಳಸಿಕೊಂಡ ಆತ ತನ್ನ ತಾಯಿಯನ್ನು ಮುಂಬೈನ ಮಾಹುಲ್​ ಗಾಂವ್​ಗೆ ತಂದುಬಿಟ್ಟು ಹಿಂದಿರುಗಿ ನೋಡದೆ ಹೊರಟು ಹೋದ.

    ಕೈಯಲ್ಲಿ ಹಣವಿಲ್ಲ. ಎಲ್ಲಿಗೆ ಹೋಗಬೇಕೆಂಬುದು ತಿಳಿದಿಲ್ಲ. ಹಾಗಾಗಿ ಆ ಮಹಾತಾಯಿ ಮಾಹುಲ್​ ಗಾಂವ್​ನಿಂದ ಬಾಂದ್ರಾ ಟರ್ಮಿನಸ್​ ರೈಲು ನಿಲ್ದಾಣಕ್ಕೆ 13 ಕಿ.ಮೀ. ನಡೆದುಕೊಂಡು ಬಂದರು. ಬರುವ ದಾರಿಯಲ್ಲಿ ಸಂತ್ರಸ್ತರಿಗೆ ಹಂಚುತ್ತಿದ್ದ ಬಿಸ್ಕತ್ತು, ಅನ್ನ ಮತ್ತು ನೀರು ಇವರ ಜೀವವನ್ನು ಆಧರಿಸಿದವು.

    ಪುಣ್ಯಾತ್ಮನೊಬ್ಬ ಮಹಾತಾಯಿಯ ಸಂಕಷ್ಟ ಕೇಳಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಇದು ಪಶ್ಚಿಮ ರೈಲ್ವೆ ಅಧಿಕಾರಿಗಳ ಗಮನಕ್ಕೆ ಬಂದಿತು. ಬಾಂದ್ರಾ ರೈಲು ನಿಲ್ದಾಣದ ಹೊರಗೆ ಕುಳಿತಿದ್ದ ಇವರಿಗೆ ಸಹಾಯ ಮಾಡಲು ಅಧಿಕಾರಿಗಳ ದಂಡು ಮುಂದಾಯಿತು.

    ಇದನ್ನೂ ಓದಿ: ನಿರ್ಗತಿಕರಿಗೆ ಸಹಾಯ ಹಸ್ತ ನೀಡಿದ ಅಂಗವಿಕಲ ಭಿಕ್ಷಕ; ‘ಮನ್ ಕಿ ಬಾತ್​​’ನಲ್ಲಿ ಶ್ಲಾಘಿಸಿದ ಪ್ರಧಾನಿ ಮೋದಿ

    ಭಾರತೀಯ ರೈಲ್ವೆ ಸಂಚಾರ ಸೇವೆ (ಐಆರ್​ಟಿಎಸ್​) ಅಧಿಕಾರಿ ಮತ್ತು ಹಿರಿಯ ವಿಭಾಗೀಯ ರೈಲ್ವೆ ಅಧಿಕಾರಿ ಸುಹಾನಿ ಮಿಶ್ರಾ, ರೈಲ್ವೆ ಭದ್ರತಾ ಪಡೆಯ (ಆರ್​ಪಿಎಫ್​) ಸಬ್​ ಇನ್​ಸ್ಪೆಕ್ಟರ್​ ಜೀತೇಂದ್ರ ಜಾಟ್​ ಮತ್ತಿತರ ಸಿಬ್ಬಂದಿಯೊಂದಿಗೆ ಲೀಲಾವತಿ ಬಳಿ ತೆರಳಿದರು.
    ಅವರನ್ನು ಬಾಂದ್ರಾ ಟರ್ಮಿನಸ್​ನ ವೇಟಿಂಗ್​ ರೂಂಗೆ ಕರೆದೊಯ್ದು, ಆಶ್ರಯ ನೀಡಿದರು. ಕಷ್ಟಸುಖ ಆಲಿಸಿದರು. ಅವರ ಹಿನ್ನೆಲೆಯನ್ನೆಲ್ಲ ತಿಳಿದುಕೊಂಡರು. ಬಿಸಿಯಾದ ಆಹಾರ, ಕುಡಿಯುವ ನೀರು ಒದಗಿಸಿ ಆರೈಕೆ ಮಾಡಿದರು.

    ನಾನು ನನ್ನ ತಿಂಡಿ, ಊಟದ ವೆಚ್ಚವನ್ನು ನನ್ನ ಮಗನಿಗೆ ಕೊಡುತ್ತಿದ್ದೆ. ಆದರೂ ಆತ ಮೂರು ತಿಂಗಳಿಂದ ನನ್ನನ್ನು ಮನೆಯಿಂದ ಹೊರಹೋಗುವಂತೆ ಕಿರುಕುಳ ಕೊಡುತ್ತಿದ್ದ. ಅದೆಲ್ಲವನ್ನೂ ಸಹಿಸಿಕೊಂಡಿದ್ದೆ. ಆದರೆ ಇಂದು ಅಕ್ಷರಶಃ ಆತ ನನ್ನನ್ನು ಮನೆಯಿಂದ ಹೊರಹಾಕಿದ ಎಂದು ಲೀಲಾವತಿ ಕಣ್ಣೀರು ಹಾಕಿದ್ದಾಗಿ ಸುಹಾನಿ ಮಿಶ್ರಾ ತಿಳಿಸಿದ್ದಾರೆ.

    ಇವರ ಬಳಿ ಹಣ ಇಲ್ಲದಿರುವುದು ತಿಳಿದ ಕಾರಣ ಸುಹಾನಿ ಮಿಶ್ರಾ ಅವರು ತಮ್ಮ ಸ್ವಂತ ಖರ್ಚಿನಲ್ಲೇ ಭಾನುವಾರ ಮಧ್ಯರಾತ್ರಿ ದೆಹಲಿಗೆ ಹೊರಡುವ ರೈಲಿನ ಎಸಿ ಬೋಗಿಯಲ್ಲಿ ಟಿಕೆಟ್​ ಕಾಯ್ದಿರಿಸಿಕೊಟ್ಟಿದ್ದಾರೆ. ಅಲ್ಲದೆ, ದೆಹಲಿ ತಲುಪಿದ ಬಳಿಕ ಇವರೊಂದಿಗೆ ಮನೆಗೆ ತೆರಳಿ ದೆಹಲಿಯಲ್ಲಿರುವ ಪುತ್ರನೊಂದಿಗೆ ಮಾತನಾಡುವಂತೆ ದೆಹಲಿಯ ರೈಲ್ವೆ ಸಿಬ್ಬಂದಿಗೂ ಸೂಚನೆ ನೀಡಿದ್ದಾರೆ.

    ಪುತ್ರ ಕೈಬಿಟ್ಟರೂ, ದೇವರ ರೂಪದಲ್ಲಿ ರೈಲ್ವೆ ಅಧಿಕಾರಿಗಳು ತಮ್ಮ ನೆರವಿಗೆ ಬಂದಿದ್ದಕ್ಕೆ ಹರ್ಷ ವ್ಯಕ್ತಪಡಿಸಿರುವ ಲೀಲಾವತಿ, ಅವರಿಗೆ ತುಂಬು ಹೃದಯದಿಂದ ಆಶೀರ್ವದಿಸಿದ್ದಾರೆ. ಇವರೇ ಈಗ ನನ್ನ ನಿಜವಾದ ಕುಟುಂಬ ಎಂದು ಹೇಳಿದ್ದಾರೆ.

    ಕರೆ ಮಾಡಿ ನೆರೆಮನೆಯವರನ್ನು ಕರೆದ ಯುವಕ: ಬಂದು ನೋಡಿದವರಿಗೆ ಕಾದಿತ್ತೊಂದು ಶಾಕ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts