More

    Web Exclusive| ರನ್ ವೇ ಮೇಲೆ ತೋಳ ಬಂತು ತೋಳ: ವಿಮಾನ ನಿಲ್ದಾಣಕ್ಕೆ ನಾಯಿ, ನರಿ ಕಾಟ!

    | ಕೇಶವಮೂರ್ತಿ ವಿ.ಬಿ. ಹುಬ್ಬಳ್ಳಿ

    ಅಂತಾರಾಷ್ಟ್ರೀಯ ದರ್ಜೆಯದ್ದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ನಾಯಿ, ನರಿ ಕಾಟ ಹೆಚ್ಚಾಗಿದೆ!

    ವಿಮಾನಗಳು ಗಗನಕ್ಕೇರುವ ಮತ್ತು ನೆಲಕ್ಕಿಳಿಯುವ ಸೂಕ್ಷ್ಮ ಪ್ರದೇಶದಲ್ಲಿ ಪ್ರಾಣಿ, ಪಕ್ಷಿಗಳ ಹಾವಳಿ ತಪ್ಪಿಸುವುದೇ ನಿಲ್ದಾಣದ ಅಧಿಕಾರಿ ಮತ್ತು ಸಿಬ್ಬಂದಿಗೆ ಸವಾಲಾಗಿದೆ.

    Web Exclusive| ರನ್ ವೇ ಮೇಲೆ ತೋಳ ಬಂತು ತೋಳ: ವಿಮಾನ ನಿಲ್ದಾಣಕ್ಕೆ ನಾಯಿ, ನರಿ ಕಾಟ!ಬರೋಬ್ಬರಿ 955 ಎಕರೆ ವಿಸ್ತೀರ್ಣ ಹೊಂದಿರುವ ವಿಮಾನ ನಿಲ್ದಾಣ ಆವರಣದಲ್ಲಿ ಟರ್ವಿುನಲ್, ಎಟಿಸಿ, ರನ್ ವೇ ಹಾಗೂ ಕೆಲ ಪ್ರದೇಶ ಹೊರತುಪಡಿಸಿದರೆ ಹಲವೆಡೆ ಹುಲ್ಲು, ಗಿಡ ಕಂಟಿಗಳು ಬೆಳೆದಿವೆ. ಸುತ್ತಮುತ್ತ ಹಸಿರು ಪರಿಸರ, ಆಹಾರ, ನೀರು ಯಥೇಚ್ಛವಾಗಿದೆ. ಪ್ರಾಣಿ, ಪಕ್ಷಿಗಳಿಗೆ ವಾಸ ಮಾಡಲು ಹೇಳಿ ಮಾಡಿಸಿದಂತಿದೆ. ಸಂತಾನೋತ್ಪತ್ತಿಗೂ ಸೂಕ್ತವಾಗಿದೆ. ಹಾಗಾಗಿ, ನಾಯಿ, ನರಿ, ತೋಳ, ಮೊಲ, ನವಿಲು, ರಣಹದ್ದು, ಕಾಗೆ ಸೇರಿದಂತೆ ವಿವಿಧ ಪ್ರಭೇದದ ಪ್ರಾಣಿ, ಪಕ್ಷಿಗಳು ಬೀಡು ಬಿಟ್ಟಿವೆ.

    ವಿಮಾನ ಟೇಕ್ ಆಫ್ ಮತ್ತು ಲ್ಯಾಂಡಿಂಗ್ ಮಾಡುವಾಗ ಕೆಲವೊಮ್ಮೆ ರನ್ ವೇ ಮೇಲೆ ತೋಳ, ಮೊಲ, ಹದ್ದುಗಳು ಸಂಚರಿಸುವ ಮೂಲಕ ಅಡ್ಡಿಪಡಿಸುತ್ತವೆ. ಅವುಗಳ ನಿಯಂತ್ರಣಕ್ಕೆಂದೇ ನಿಲ್ದಾಣದಲ್ಲಿ ವಿಶೇಷ ತಂಡವಿದೆ. ವಿಮಾನ ಸಂಚರಿಸುವ ಮೊದಲೇ ಆ ತಂಡ ರನ್​ವೇ ತಪಾಸಣೆ ನಡೆಸಿ ಎಟಿಸಿಗೆ ಮಾಹಿತಿ ರವಾನಿಸುತ್ತದೆ. ನಂತರವಷ್ಟೇ ವಿಮಾನ ಸಂಚಾರ ಸುಗಮವಾಗುತ್ತದೆ. ಆದರೂ ಕೆಲವೆಡೆ ಕಣ್ತಪ್ಪಿಸಿ ಓಡಾಡುತ್ತಿರುತ್ತವೆ.

    ಪ್ರಾಣಿ, ಪಕ್ಷಿಗಳಿಂದ ತೊಂದರೆಯಾಗದಂತೆ ನೋಡಿಕೊಳ್ಳಲು ‘ಬರ್ಡ್ ಆಂಡ್ ಎನಿಮಲ್ಸ್ ಕ್ಯಾರಿಂಗ್’ ಗುತ್ತಿಗೆ ನೀಡಲಾಗಿದೆ. ಈ ತಂಡ ವಿಮಾನ ಸಂಚಾರ ವೇಳೆ ಪ್ರಾಣಿ, ಪಕ್ಷಿಗಳು ರನ್ ವೇ ಮೇಲೆ ಬಾರದಂತೆ ಎಚ್ಚರ ವಹಿಸುತ್ತದೆ. ಪಕ್ಷಿಗಳನ್ನು ಬೆದರಿಸಲು ಜೋನ್ ಗನ್ ಅಳವಡಿಸಲಾಗಿದೆ ಎನ್ನುತ್ತಾರೆ ಹುಬ್ಬಳ್ಳಿ ವಿಮಾನ ನಿಲ್ದಾಣ ನಿರ್ದೇಶಕ ಪ್ರಮೋದಕುಮಾರ ಠಾಕರೆ.

    ಅರಣ್ಯ ಇಲಾಖೆ ಪರಿಶೀಲನೆ
    ವಿಮಾನ ನಿಲ್ದಾಣದ ಅಧಿಕಾರಿಗಳ ಮನವಿ ಮೇರೆಗೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಯಶಪಾಲ ಕ್ಷೀರಸಾಗರ ನೇತೃತ್ವದ ತಂಡ ಇತ್ತೀಚೆಗೆ ನಿಲ್ದಾಣದಲ್ಲಿ ಪರಿಶೀಲನೆ ನಡೆಸಿದೆ. ಹಲವೆಡೆ ಗಿಡ-ಕಂಟಿ ಬೆಳೆದಿದ್ದು, ಪ್ರಾಣಿ, ಪಕ್ಷಿಗಳ ವಾಸಕ್ಕೆ ಯೋಗ್ಯವಾಗಿದೆ. ಸ್ವಚ್ಛಗೊಳಿಸಿದರೆ ಪ್ರಾಣಿ- ಪಕ್ಷಿಗಳು ತಾವಾಗಿಯೇ ಬೇರೆಡೆ ಸ್ಥಳಾಂತರಗೊಳ್ಳುತ್ತವೆ. ಹಾಗಾಗಿ, ನಿಲ್ದಾಣವನ್ನು ಸ್ವಚ್ಛಗೊಳಿಸಿ, ಕಾಂಪೌಂಡ್ ನಿರ್ವಿುಸುವಂತೆ ಅರಣ್ಯಾಧಿಕಾರಿಗಳು ನಿಲ್ದಾಣದ ನಿರ್ದೇಶಕರಿಗೆ ಸಲಹೆ ನೀಡಿದ್ದಾರೆ.

    ಸವಾಲಾದ ಕಾರ್ಯಾಚರಣೆ
    ಪ್ರಾಣಿ, ಪಕ್ಷಿಗಳಿಗೂ ತೊಂದರೆಯಾಗದಂತೆ, ವಿಮಾನ ಹಾರಾಟಕ್ಕೂ ಸಮಸ್ಯೆಯಾಗದಂತೆ ನೋಡಿಕೊಳ್ಳುವುದು ನಿಲ್ದಾಣದ ಅಧಿಕಾರಿಗಳಿಗೆ ನಿಜಕ್ಕೂ ಸವಾಲಿನ ಕೆಲಸವಾಗಿದೆ. ಪ್ರಾಣಕ್ಕೆ ಹಾನಿಯಾಗದಂತೆ ಪಟಾಕಿ ಮತ್ತಿತರ ಸದ್ದು ಮಾಡುವ ಮೂಲಕ ಅವುಗಳನ್ನು ರನ್ ವೇನಿಂದ ಓಡಿಸಬೇಕಿದೆ.

    ಅರಣ್ಯ ಇಲಾಖೆ ಸಲಹೆ ಮೇರೆಗೆ ವಿಮಾನ ನಿಲ್ದಾಣದ ಕೆಲವೆಡೆ ಬೆಳೆದಿರುವ ಕುರುಚಲು ಗಿಡಗಳನ್ನು ಸ್ವಚ್ಛಗೊಳಿಸುವ ಕೆಲಸ ಆರಂಭಿಸಲಾಗಿದೆ. ಹಾಳಾಗಿರುವ ಕಾಂಪೌಂಡ್ ದುರಸ್ತಿ ಕಾರ್ಯ ನಡೆದಿದೆ. ಪ್ರಾಣಿ, ಪಕ್ಷಿಗಳ ಸಮಸ್ಯೆಗೆ ಶೀಘ್ರವೇ ಪರಿಹಾರ ದೊರೆಯಲಿದೆ.
    | ಪ್ರಮೋದಕುಮಾರ ಠಾಕರೆ, ನಿರ್ದೇಶಕ, ಹುಬ್ಬಳ್ಳಿ ವಿಮಾನ ನಿಲ್ದಾಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts