More

    ಸೋಮೇಶ್ವರ ಬೀಚ್‌ಗಿಲ್ಲ ಮೂಲಸೌಕರ್ಯ

    ನರಸಿಂಹ ನಾಯಕ್ ಬೈಂದೂರು
    ಜಿಲ್ಲೆಯ ಪ್ರವಾಸಿ ಸ್ಥಳ ಬೈಂದೂರಿನ ಸೋಮೇಶ್ವರ ಕಡಲ ಕಿನಾರೆ ಮೂಲ ಸೌಕರ‌್ಯ ವಂಚಿತವಾಗಿದೆ. ಕಡಲ ಕಿನಾರೆ ಅಭಿವೃದ್ಧಿ ಕುರಿತು ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ನಿರ್ಲಕ್ಷೃ ತೋರಿದಂತಿದೆ. ನಿತ್ಯ ಸಾವಿರಾರು ಪ್ರವಾಸಿಗರು ಸಂಭ್ರಮಿಸುವ ಕಿನಾರೆಯಲ್ಲಿ ವಾಹನ ಪಾರ್ಕಿಂಗ್‌ಗಾಗಿ ಪರದಾಡಬೇಕಾಗಿದೆ. ಶೌಚಗೃಹ, ಕುಡಿಯುವ ನೀರು, ರಸ್ತೆ ಸೌಕರ್ಯಗಳು ಕೇವಲ ಕಡತಕ್ಕಷ್ಟೆ ಸೀಮಿತವಾಗಿದೆ.

    ಇಲ್ಲಿನ ಕಡಲ ಕಿನಾರೆ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದ್ದು, ನದಿ, ಸಾಗರ, ಸಂಗಮದ ಜತೆಗೆ ಕಡಲಿಗೆ ಚಾಚಿಕೊಂಡಿರುವ ಗುಡ್ಡದ ಮೇಲೆ ಅರಣ್ಯ ಇಲಾಖೆ ವಸತಿಗೃಹ ನಿರ್ಮಿಸಿದೆ. ಇಲ್ಲಿನ ಸೂರ್ಯಾಸ್ತ ದೃಶ್ಯ ವೀಕ್ಷಣೆ ವಿಶೇಷ. ನದಿ, ಸಾಗರದ ವಿಹಂಗಮ ನೋಟ ಗಮನ ಸೆಳೆಯುತ್ತದೆ. ಕಡಲ ದಂಡೆಯಲ್ಲಿ ಸೋಮೇಶ್ವರ ದೇವಸ್ಥಾನವಿರುವುದರಿಂದ ಧಾರ್ಮಿಕ ಹಾಗೂ ಪ್ರವಾಸೋದ್ಯಮ ಎರಡು ಕ್ಷೇತ್ರದಲ್ಲಿ ಅಭಿವೃದ್ಧಿ ಹೊಂದಲು ವಿಪುಲ ಅವಕಾಶವಿದೆ.

    ಕಳೆದ ವರ್ಷ ಪ್ರವಾಸೋದ್ಯಮ ಇಲಾಖೆ ಐದು ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿರುವ ಜತೆಗೆ ಹಲವು ಯೋಜನೆ ರೂಪಿಸಿತ್ತು. ರಾಷ್ಟ್ರೀಯ ಹೆದ್ದಾರಿಯಲ್ಲಿ ಸೋಮೇಶ್ವರಕ್ಕೆ ಪ್ರವಾಸಿಗರನ್ನು ಆಕರ್ಷಿಸಲು ಸ್ವಾಗತ ಗೋಪುರ, ಶೌಚಗೃಹ ನಿರ್ಮಾಣ ಸೇರಿದಂತೆ ಹತ್ತು ಹಲವು ಘೋಷಣೆಗಳನ್ನು ಶಾಸಕರು ಹಾಗೂ ಸಂಸದರ ಸಮ್ಮುಖ ಘೋಷಿಸಲಾಗಿತ್ತು. ಆದರೆ ಒಂದು ವರ್ಷ ಕಳೆದರೂ ಅನುಷ್ಠಾನವಾಗಿಲ್ಲ. ಕೇಂದ್ರ ಸರ್ಕಾರ ಕೂಡ ಇದರ ಅಭಿವೃದ್ಧಿಗೆ ಹಲವು ಯೋಜನೆ ರೂಪಿಸುತ್ತಿದೆ. ಹೀಗಾಗಿ ಬೀಚ್ ಅಭಿವೃದ್ಧಿಗಾಗಿ ನನೆಗುದಿಗೆ ಬಿದ್ದಿರುವ ಯೋಜನೆಗಳನ್ನು ತಕ್ಷಣ ಪುನರಾರಂಭಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

    ಪ್ರಮುಖ ಸಮಸ್ಯೆಗಳು: ಸೋಮೇಶ್ವರ ಕಡಲ ಕಿನಾರೆ ಅಭಿವೃದ್ಧಿಗೆ ಮೊದಲು ಜಂಟಿ ಸರ್ವೇ ಮೂಲಕ ಅತಿಕ್ರಮಣ ಸ್ಥಳಗಳನ್ನು ತೆರವುಗೊಳಿಸಬೇಕಾಗಿದೆ. ಇದರಿಂದ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲು ಸ್ಥಳಾವಕಾಶ ದೊರೆಯುತ್ತದೆ. ಜತೆಗೆ ಶಿರೂರು- ದೊಂಬೆ ಮೂಲಕ ಬರುವ ವಾಹನಗಳು ಸೋಮೇಶ್ವರ ರಸ್ತೆಗೆ ತಿರುಗಲು ಸಾಧ್ಯವಾಗುವುದಿಲ್ಲ. ಇಳಿಜಾರು, ಪ್ರಪಾತ ಮತ್ತು ಸ್ಥಳದ ಕೊರತೆಯಿದೆ. ಅರಣ್ಯ ಇಲಾಖೆ ಸಹಕಾರದಲ್ಲಿ ದೊಂಬೆಯಿಂದ ಸೋಮೇಶ್ವರ ಮಾರ್ಗಕ್ಕೆ ಸಂಪರ್ಕ ಕಲ್ಪಿಸಲು ರಸ್ತೆ ವಿಸ್ತರಣೆ ಮತ್ತು ವಿಶಾಲ ವೃತ್ತ ಮಾಡಬೇಕಾಗಿದೆ. ಇದರಿಂದ ವಾಹನಗಳ ಸರಾಗ ಸಂಚಾರ ಸಾಧ್ಯ. ಶೌಚಗೃಹ ನಿರ್ವಹಣೆ ಕೊರತೆಯಿಂದ ಸಾರ್ವಜನಿಕರಿಗೆ ದೊರಕುತ್ತಿಲ್ಲ. ಸೋಮೇಶ್ವರದಲ್ಲಿ ನಿರ್ಮಿಸಿದ ವಾಚ್ ಟವರ್ ಕಳಪೆ ಕಾಮಗಾರಿಯಿಂದ ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ಪ್ರವಾಸಿಗರ ಸುರಕ್ಷತೆ ದೃಷ್ಟಿಯಿಂದ ಇಲಾಖೆ ಯಾವುದೇ ಮಹತ್ತರ ಕ್ರಮ ಕೈಗೊಂಡಂತಿಲ್ಲ. ಮಹಿಳೆಯರ, ಮಕ್ಕಳ ರಕ್ಷಣೆ ಮತ್ತು ಸುರಕ್ಷತೆ ಬಗೆಗೂ ಚಿಂತಿಸಬೇಕಾಗಿದೆ.

    ಗ್ರಾಮ ಪಂಚಾಯಿತಿ ಅವಧಿಯಲ್ಲಿ ಪಡುವರಿ ಗ್ರಾಪಂ ಸೋಮೇಶ್ವರ ಕಡಲ ಕಿನಾರೆ ನಿರ್ವಹಣೆ ಜವಾಬ್ದಾರಿ ವಹಿಸಿಕೊಂಡಿತ್ತು. ಆದರೆ ಪ್ರಸ್ತುತ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿರುವ ಕಾರಣ ಇನ್ನಷ್ಟೆ ನಿರ್ಧಾರ ಕೈಗೊಳ್ಳಬೇಕಿದೆ. ಸಂಸದರು, ಶಾಸಕರು ಸೋಮೇಶ್ವರ ಕಡಲ ಕಿನಾರೆ ಅಭಿವೃದ್ಧಿ ಕುರಿತು ಗಂಭೀರವಾಗಿ ಪರಿಗಣಿಸಿ ಸಂಬಂಧಪಟ್ಟ ಇಲಾಖೆ ಮೂಲಕ ಪ್ರವಾಸಿಗರಿಗೆ ಸೂಕ್ತ ಸೌಕರ‌್ಯ ಒದಗಿಸಬೇಕಿದೆ.

    ಬೈಂದೂರು ಕ್ಷೇತ್ರದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ವಿಪುಲ ಅವಕಾಶಗಳಿವೆ. ಹೀಗಾಗಿ ಆರಂಭಿಕವಾಗಿ 25 ಕೋಟಿ ರೂ. ಅನುದಾನದಲ್ಲಿ ಸೋಮೇಶ್ವರ ಬೀಚ್ ಅಭಿವೃದ್ಧಿ, ಸೀವಾಕ್, ಬೋಟಿಂಗ್, ಏರ್‌ಲಿಪ್ಟ್ ಯೋಜನೆಗಳನ್ನು ಅನುಷ್ಠಾನಗೊಳಿಸಿ ಅಭಿವೃದ್ಧಿಪಡಿಸುವ ಯೋಜನೆಗಳ ಕುರಿತು ನೀಲಿನಕ್ಷೆ ತಯಾರಾಗಿದೆ. ಈಗಾಗಲೇ ಈ ಬಗ್ಗೆ ಸ್ಥಳೀಯವಾಗಿ ಒಂದು ಸುತ್ತಿನ ಮಾತುಕತೆ ಮುಗಿದಿದ್ದು, ಶೀಘ್ರ ಸಂಬಂಧಪಟ್ಟವರೊಡನೆ ಚರ್ಚಿಸಿ ಕಾರ್ಯಗತ ಮಾಡಲು ಪ್ರಯತ್ನಿಸಲಾಗುವುದು.
    -ಬಿ.ವೈ. ರಾಘವೇಂದ್ರ, ಶಿವಮೊಗ್ಗ ಲೋಕಸಭಾ ಸದಸ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts