ಇಸ್ಲಮಾಬಾದ್: ಭಾರತ ಬಣ್ಣಗಳ ಹಬ್ಬ ಹೋಳಿ ಸಂಭ್ರಮದಲ್ಲಿದೆ. ಹೋಳಿ ಹಬ್ಬ ಆಚರಿಸುತ್ತಿರುವ ನಮ್ಮ ದೇಶದ ಹಿಂದು ಜನರಿಗೆ ಪ್ರಧಾನಿ ನರೇಂದ್ರ ಮೋದಿ ಸೇರಿ ಹಲವು ಗಣ್ಯರು ಶುಭಾಶಯ ಕೋರಿದ್ದಾರೆ.
ಹಾಗೇ ಪಾಕಿಸ್ತಾನದಲ್ಲಿರುವ ಅಲ್ಪಸಂಖ್ಯಾತ ಹಿಂದುಗಳಿಗೆ ಅಲ್ಲಿನ ಪ್ರಧಾನಿ ಇಮ್ರಾನ್ ಖಾನ್ ನಿನ್ನೆ (ಮಾ.9) ಹೋಳಿ ಹಬ್ಬದ ಶುಭ ಕೋರಿದ್ದರು. ಶಾಂತಿ ಹಾಗೂ ಸಂತೋಷದಿಂದ ಬಣ್ಣಗಳ ಹಬ್ಬವನ್ನು ಆಚರಿಸಿ. ಈ ಹಬ್ಬ ನಮ್ಮ ಹಿಂದು ಸಮುದಾಯಕ್ಕೆ ಭದ್ರತೆ, ನೆಮ್ಮದಿ, ಉಲ್ಲಾಸವನ್ನು ಹೊತ್ತು ತರಲಿ ಎಂದು ಪಾಕಿಸ್ತಾನದ ಪ್ರಧಾನಿ ಟ್ವೀಟ್ ಮಾಡಿದ್ದರು.
ಆದರೆ ಇಮ್ರಾನ್ ಖಾನ್ ಟ್ವೀಟ್ ಪಾಕ್ ಮುಸ್ಲಿಮರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಇಮ್ರಾನ್ ಟ್ವೀಟ್ ವಿರೋಧಿಸಿ ಪಾಕ್ನ ಅನೇಕರು ಕಾಮೆಂಟ್ ಮಾಡಿದ್ದಾರೆ. ಸೋಷಿಯಲ್ ಮೀಡಿಯಾ ಮೂಲಕ ಪ್ರಧಾನಿಯನ್ನೇ ನಿಂದಿಸಿದ್ದಾರೆ.
ಮುಸ್ಲಿಂ ಹಬ್ಬಗಳಲ್ಲಿ ಎಂದಿಗೂ ನಮಗೆ ಅಭಿನಂದನೆ, ಶುಭಾಶಯ ತಿಳಿಸದ ಈ ನಕಲಿ ಪ್ರಧಾನಿ ಇಂದು ಹಿಂದುಗಳಿಗೆ ಶುಭಾಶಯ ಕೋರಿದ್ದಾರೆ ಎಂದು ಓರ್ವ ಟ್ವಿಟರ್ ಬಳಕೆದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಾಗೇ ಇನ್ನೋರ್ವರು ಕಾಮೆಂಟ್ ಮಾಡಿ, ಭಾರತದಲ್ಲಿ ಹಿಂದುಗಳು, ಮುಸ್ಲಿಮರಿಗೆ ಏನು ಮಾಡುತ್ತಿದ್ದಾರೆ ಎಂದು ಗೊತ್ತಿಲ್ಲವಾ? ಹಿಂದುಗಳು ನಿಮ್ಮ ಶುಭಹಾರೈಕೆಗಾಗಲೀ, ಅಭಿನಂದನೆಗಾಗಲೀ ಅರ್ಹರಲ್ಲ. ಅವರಿಗೆ ವಿಶ್ ಮಾಡುವ ಮೂಲಕ ನೀವು ಹಿಂದುಗಳ ಭಾವನೆಗೆ ನೋವುಂಟು ಮಾಡಬೇಡಿ ಎಂದು ಹೇಳಿದ್ದಾರೆ.
ಭಾರತದಲ್ಲಿ ಮುಸ್ಲಿಮರಿಗೆ ಅನ್ಯಾಯ ಮಾಡಲಾಗುತ್ತಿದೆ. ಆದರೆ ನೀವಿಲ್ಲಿ ಹಿಂದುಗಳಿಗೆ ಗೌರವ, ಪ್ರೀತಿಯಿಂದ ಹೋಳಿ ಶುಭಾಶಯ ಕೋರುತ್ತಿದ್ದೀರಿ ಎಂದು ಮತ್ತೋರ್ವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್)
ಹಿಂದೂ ಸಮುದಾಯಕ್ಕೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ರಿಂದ ಹೋಳಿ ಶುಭಾಶಯ; ಶಾಂತಿಯಿಂದ ಹಬ್ಬ ಆಚರಿಸುವಂತೆ ಟ್ವೀಟ್