More

    ಹಕ್ಕುಪತ್ರ ವಿತರಣೆಗೆ 24ರಂದು ಪರಿಹಾರ

    ಬ್ಯಾಡಗಿ: ಪಟ್ಟಣದ ವಿವಿಧ ಬಡಾವಣೆ ನಿವೇಶನಗಳ ಹಕ್ಕುಪತ್ರ ಹಾಗೂ ಬಸವೇಶ್ವರ ನಗರದ ಜಾಗದ ಸಮಸ್ಯೆ ಕುರಿತು ಉಸ್ತುವಾರಿ ಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಫೆ. 24ರಂದು ಜರುಗುವ ಸಭೆಯಲ್ಲಿ ರ್ಚಚಿಸಿ ನ್ಯಾಯ ಒದಗಿಸಲಾಗುವುದು ಎಂದು ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ತಿಳಿಸಿದರು.

    ಪುರಸಭೆ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಬಹುದಿನಗಳಿಂದ ಬಸವೇಶ್ವರ ನಗರದ ಜಾಗದ ಸಮಸ್ಯೆ ಕಗ್ಗಂಟಾಗಿದೆ. ಇಲ್ಲಿನ ಮಾಲೀಕರಿಗೆ ವಾಸವಿದ್ದಷ್ಟು ಜಾಗವನ್ನು ಕೊಡಲು ಸರ್ಕಾರಕ್ಕೆ ತಿಳಿಸಲಾಗಿದೆ. ಕೆಲವರು 20ರಿಂದ 28 ಗುಂಟೆ ಜಾಗದ ಕಬ್ಜಾದಲ್ಲಿದ್ದು, ಈ ಕುರಿತು ಹಿರಿಯ ಅಧಿಕಾರಿಗಳು ಪರಿಹಾರ ತಿಳಿಸಬೇಕಿದೆ. ತಾಲೂಕಿನ ವಿವಿಧೆಡೆ ಇರುವ ಒಟ್ಟು 180 ಎಕರೆ ಜಾಗವನ್ನು ಕೆಜಿಪಿ ಮಾಡಲು ಸೂಚಿಸಿದ್ದು, ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿರುವವರಿಗೆ ಇದರಿಂದ ಅನುಕೂಲವಾಗಲಿದೆ ಎಂದರು.

    ಬಸವರಾಜ ಛತ್ರದ ಮಾತನಾಡಿ, ಬಹುತೇಕ ಜಾಗದ ಹಕ್ಕುಪತ್ರ ನೀಡುವ ಕುರಿತು ಠರಾವು ಮಾಡಿದ್ದು, ತಾಂತ್ರಿಕೆ ಹಾಗೂ ಕಾನೂನು ತೊಡಕಿನಿಂದ ನಿವೇಶನಗಳಿಗೆ ಹಕ್ಕುಪತ್ರ ಸಿಕ್ಕಿಲ್ಲ. ಇಸ್ಲಾಂಪುರ, ಸುಭಾಸನಗರ, ಹಳೇಮೆಣಸಿನಕಾಯಿ ಪೇಟೆ ಸೇರಿದಂತೆ ಹಲವೆಡೆ ಜಾಗದ ಸಮಸ್ಯೆಗೆ ಮುಕ್ತಿ ಸಿಕ್ಕಿಲ್ಲ ಎಂದರು.

    ವಾಣಿಜ್ಯ ಬಾಡಿಗೆಗೆ ವಿನಾಯಿತಿ ಇಲ್ಲ: ಪಟ್ಟಣದಲ್ಲಿ ವಾಣಿಜ್ಯ ಮಳಿಗೆಗಳನ್ನು ಬಾಡಿಗೆಗೆ ಪಡೆದ ಬಹುತೇಕ ವ್ಯಾಪಾರಸ್ಥರು ಕರೊನಾ ಅವಧಿಯಲ್ಲಿ ಬಾಡಿಗೆಯನ್ನು ಸಮರ್ಪಕವಾಗಿ ತುಂಬಿಲ್ಲ. ಹೀಗಾಗಿ ಅವರಿಗೆ ನೋಟಿಸ್ ನೀಡಲಾಗಿದೆ. ವ್ಯಾಪಾರಸ್ಥರು ಕಡ್ಡಾಯವಾಗಿ ಬಾಡಿಗೆ ತುಂಬಬೇಕು. ಅನಧಿಕೃತವಾಗಿ ಮನೆ ನಿರ್ವಿುಸಿಕೊಂಡ ನಿವಾಸಿಗಳಿಗೆ ಒಂದು ವಾರಗಳ ಕಾಲ ಅವಕಾಶ ನೀಡಿದ್ದು, ತಕ್ಷಣ ಎಲ್ಲರೂ ಹಣ ಭರ್ತಿ ಮಾಡಿ ಪಾವತಿ ಪಡೆಯಬೇಕು ಎಂದು ಮುಖ್ಯಾಧಿಕಾರಿ ವಿ.ಎಂ. ಪೂಜಾರ ತಿಳಿಸಿದರು.

    ಅಧ್ಯಕ್ಷೆ ಕವಿತಾ ಸೊಪ್ಪಿನಮಠ, ಉಪಾಧ್ಯಕ್ಷೆ ಕಲಾವತಿ ಬಡಿಗೇರ, ಶಿವರಾಜ ಅಂಗಡಿ, ಶಂಕರ ಕುಸಗೂರು, ರಾಮಣ್ಣ ಕೋಡಿಹಳ್ಳಿ, ಫಕೀರಮ್ಮ ಚಲವಾದಿ, ವಿನಯ ಹಿರೇಮಠ, ಈರಣ್ಣ ಬಣಕಾರ, ಚಂದ್ರಪ್ಪ ಶೆಟ್ಟರ, ಸರೋಜ ಉಳ್ಳಾಗಡ್ಡಿ, ಸುಭಾಸ ಮಾಳಗಿ, ಗಾಯತ್ರಿ ರಾಯ್ಕರ, ಗಂಗಮ್ಮ ಪಾಟೀಲ, ಮಹ್ಮದಪೀಕ ಮುದಗಲ್ಲ, ಸಂಜೀವ ಮಡಿವಾಳರ, ಮಂಜು ಬಣಕಾರ, ಮಂಗಳಾ ಗೆಜ್ಜೆಹಳ್ಳಿ, ಗಣೇಶ ಅಚಲಕರ ಇತರರಿದ್ದರು.

    ಸಮಸ್ಯೆ ಹೇಳಲು ಅವಕಾಶ ನೀಡಿ: ಮಂಜಣ್ಣ ರ್ಬಾ ಮಾತನಾಡಿ, ಪುರಸಭೆಯಲ್ಲಿ ಸದಸ್ಯರಿಗೆ ಎಲ್ಲ ವಿಷಯಗಳನ್ನು ರ್ಚಚಿಸಲು ಅವಕಾಶವಿದೆ. ಆದರೆ, ನಾವು ವಾರ್ಡ್ ಸಮಸ್ಯೆ ಹೇಳುತ್ತಿದ್ದಂತೆ ಕೆಲವರು ನಮಗೆ ಅವಕಾಶ ನೀಡುವುದಿಲ್ಲ, ನಾವು ಜನರಿಗೆ ಏನೆಂದು ಉತ್ತರಿಸಬೇಕು ಎಂದು ಆಕ್ರೋಶಭರಿತರಾಗಿ ಹೊರನಡೆಯಲು ಯತ್ನಿಸಿದರು. ಆಗ ಮುಖ್ಯಾಧಿಕಾರಿ, ‘ನಿಮ್ಮ ಸಮಸ್ಯೆಗೆ ಸ್ಪಂದಿಸುತ್ತೇವೆ. ಅವಕಾಶ ನೀಡಲಾಗುವುದು’ ಎಂದು ಮನವಿ ಮಾಡಿದ ಬಳಿಕ ವಾಪಸ್ಸಾದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts