More

    ನರಭಕ್ಷಕ ಚಿರತೆ ಕೂಂಬಿಂಗ್‌ಗೆ ಚಾಮರಾಜನಗರ ಜಿಲ್ಲೆಯ ಸೋಲಿಗರು

    ಚಾಮರಾಜನಗರ: ಗುಬ್ಬಿ ತಾಲೂಕಿನಲ್ಲೇ 3 ತಿಂಗಳಲ್ಲಿ ನಾಲ್ಕು ಜನರನ್ನು ಬಲಿ ಪಡೆದ ಚಿರತೆ ಸೆರೆಗೆ ಚಾಮರಾಜನಗರ ಜಿಲ್ಲೆಯ ಪರಿಣತ ಸೋಲಿಗರು ಕಾರ್ಯಾಚರಣೆಗೆ ಇಳಿಯಲಿದ್ದಾರೆ.

    ನರಹಂತಕ ವ್ಯಾಘ್ರಗಳನ್ನು ಸೆರೆ ಹಿಡಿಯುವಲ್ಲಿ ನಿಸ್ಸೀಮರಾದ ತಾಲೂಕಿನ ಅಟ್ಟಗುಳಿಪುರದ ಆಲುಮೇಗೌಡ, ಶಿವಣ್ಣೇಗೌಡ, ಪುಣಜೂರಿನ ಬೇದೇಗೌಡ, ಅಲಗೇಗೌಡ ಅವರಿಗೆ ತುಮಕೂರಿನಲ್ಲಿ ನಡೆಯುತ್ತಿರುವ ಕೂಂಬಿಂಗ್‌ನಲ್ಲಿ ಪಾಲ್ಗೊಳ್ಳಲು ಚಾಮರಾಜನಗರ ಅರಣ್ಯ ಇಲಾಖೆ (ಬಿಆರ್‌ಟಿ ಹುಲಿ ಯೋಜನೆ) ಬುಲಾವ್ ನೀಡಿದೆ.

    ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನಲ್ಲಿ ಮೂರು ತಿಂಗಳಲ್ಲಿ ನಾಲ್ವರ ಬಲಿ ಪಡೆದಿದ್ದ ಚಿರತೆ ಇತ್ತೀಚೆಗಷ್ಟೇ ಮಣೆಕುಪ್ಪೆಯಲ್ಲಿ ಒಬ್ಬ ಬಾಲಕನ ಸಾವಿಗೂ ಕಾರಣವಾಗಿತ್ತು. ಸುತ್ತಮುತ್ತಲಿನ ಗ್ರಾಮಸ್ಥರು ಚಿರತೆ ಸೆರೆಗೆ ಪ್ರತಿಭಟನೆ ನಡೆಸಿದ್ದರು. ಅರಣ್ಯ ಇಲಾಖೆ ಜ.12ರಿಂದ ಕೂಂಬಿಂಗ್ ಆರಂಭಿಸಿದ್ದು, ಈ ಕಾರ್ಯಾಚರಣೆಗೆ ಸೋಲಿಗರ ತಂಡ ಸೇರಿಕೊಳ್ಳುತ್ತಿದೆ.

    ಇದು ಸೋಲಿಗರ ಸ್ಟೈಲ್!: ಕಾಡಂಚಿನ ಪ್ರದೇಶಗಳಲ್ಲಿ ಉಪಟಳವಿಡುವ ಮತ್ತು ಜನರ ಮೇಲೆ ದಾಳಿ ನಡೆಸುವ ವನ್ಯಮೃಗಗಳನ್ನು ಸೆರೆ ಹಿಡಿಯಲು ಆನೆಗಳು, ಕ್ಯಾಮರಾ, ಅಗತ್ಯ ಸಿಬ್ಬಂದಿ ಸೇರಿ ಇತರ ಸಾಧನ ಸಲಕರಣೆಗಳನ್ನು ಅರಣ್ಯ ಇಲಾಖೆ ಬಳಸುತ್ತದೆ. ಆದರೆ ಸೋಲಿಗರು ಈ ವ್ಯಾಘ್ರಗಳನ್ನು ಸೆರೆ ಹಿಡಿಯುವ ಸ್ಟೈಲ್ ಬೇರೆಯದ್ದೇ ರೀತಿ ಇದೆ.

    ತಾಲೂಕಿನ ಅಟ್ಟಗೂಳಿಪುರ ಮತ್ತು ಪುಣಜನೂರು ಅರಣ್ಯ ವ್ಯಾಪ್ತಿಯಲ್ಲಿ ವಾಚರ್‌ಗಳಾಗಿ (ದಿನಗೂಲಿ ನೌಕರರು) ಕರ್ತವ್ಯ ನಿರ್ವಹಿಸುತ್ತಿರುವ ಆಲುಮೇಗೌಡ, ಶಿವಣ್ಣೇಗೌಡ, ಬೇದೇಗೌಡ, ಅಲಗೇಗೌಡ ಅವರು ಕೇವಲ ಒಂದು ಕುಡಗೋಲು (ಮಚ್ಚು) ಹಿಡಿದು ಎಂತದ್ದೇ ದಟ್ಟ ಕಾಡಿನೊಳಗೆ ಅಥವಾ ವನ್ಯಮೃಗಗಳು ಹಾವಳಿ ಇಡುತ್ತಿರುವ
    ಪ್ರದೇಶದಲ್ಲಿ ಕಾರ್ಯಾಚರಣೆಗಿಳಿಯುತ್ತಾರೆ. ಅರಣ್ಯ ಇಲಾಖೆ ಸೂಚಿಸುವ ಮತ್ತು ಕ್ಯಾಮರಾದಲ್ಲಿ ಪ್ರಾಣಿ ಟ್ರ್ಯಾಪ್ ಆಗಿರುವ ಪ್ರದೇಶದಲ್ಲಿ ಕೆಲಸ ಆರಂಭಿಸುತ್ತಾರೆ.ಮೊದಲು ಪ್ರಾಣಿಗಳ ಹೆಜ್ಜೆ ಗುರುತು ಪತ್ತೆ ಹಚ್ಚಲಾರಂಭಿಸುತ್ತಾರೆ. ಹೆಜ್ಜೆ ಗುರುತು ಸಿಕ್ಕಲ್ಲಿ ಅದರ ತೇವಾಂಶ ಗಮನಿಸಿ ವನ್ಯಮೃಗದ ಸುಳಿದಾಟದ ಸಮಯ ಲೆಕ್ಕಾಚಾರ ಹಾಕುತ್ತಾರೆ. ಎಷ್ಟು ದೂರ ಕ್ರಮಿಸಿರಬಹುದೆಂದು ಅಂದಾಜಿಸಿ ಶೋಧ ನಡೆಸುತ್ತಾರೆ.

    ಕಾರ‌್ಯಾಚರಣೆ ಸ್ಥಳದಲ್ಲಿ ಸೆರೆ ಹಿಡಿಯಬೇಕಾದ ಪ್ರಾಣಿಯ ಮಲ ಪತ್ತೆಯಾದರೆ ಅದರ ವಾಸನೆ ಹಿಡಿದು
    ಕೂಂಬಿಂಗ್ ನಡೆಸುವುದು, ತಂಡದ ನಾಲ್ವರು ಸದಸ್ಯರಲ್ಲಿ ಒಬ್ಬರಿಗೆ ಹುಡುಕುತ್ತಿರುವ ಪ್ರಾಣಿ ಕಾಣಿಸಿಕೊಂಡರೆ ತಕ್ಷಣ ಅರಣ್ಯ ಇಲಾಖೆಗೆ ಸಿಬ್ಬಂದಿಗೆ ಕರೆ ಮಾಡಿ ತಿಳಿಸುತ್ತಾರೆ.

    ಚಾಣಾಕ್ಷ ಸೋಲಿಗರು: ಗುಂಡ್ಲುಪೇಟೆ ತಾಲೂಕಿನ ಹುಂಡೀಪುರದಲ್ಲಿ ಕಳೆದ 3 ತಿಂಗಳ ಹಿಂದೆ ಇಬ್ಬರು ರೈತರ ಮೇಲೆ ದಾಳಿ ನಡೆಸಿದ್ದ ನರಹಂತಕ ಹುಲಿ ಸೆರೆ ಹಿಡಿಯಲು ಅರಣ್ಯ ಇಲಾಖೆ ನಡೆಸಿದ ಕಾರ್ಯಾಚರಣೆಗೆ ಪಾಲ್ಗೊಂಡ ಸೋಲಿಗರ ತಂಡ ಒಂದೇ ದಿನದಲ್ಲಿ ಹುಲಿ ಪತ್ತೆ ಹಚ್ಚಿತ್ತು. 2014ರಲ್ಲಿ ಬೆಳಗಾವಿಯಲ್ಲಿ ಮಹಿಳೆಯೊಬ್ಬರನ್ನು ಬಲಿ ತೆಗೆದುಕೊಂಡಿದ್ದ ಹುಲಿ ಸೆರೆ ಹಿಡಿಯಲು ಜಾಂಬೋಟಿ ವಲಯದ ಸುತ್ತಲಿನಲ್ಲಿ ತಂಡ ಕೂಂಬಿಂಗ್ ನಡೆಸಿತ್ತು.

    ತುಮಕೂರಿನಲ್ಲಿ ಚಿರತೆ ಸೆರೆ ಹಿಡಿಯುವ ಕಾರ್ಯಾಚರಣೆಗೆ ಸೋಲಿಗರ ತಂಡ ಕಳುಹಿಸಿಕೊಡಲು ತೀರ್ಮಾನಿಸಲಾಗಿದೆ. ಇಲಾಖೆಯಿಂದ ಅಧಿಕೃತ ಸೂಚನೆ ಬಂದ ಮೇಲೆ ಕಳುಹಿಸಲಾಗುವುದು.
    ಡಾ.ಸಂತೋಷ್ ಕುಮಾರ್,
    ನಿರ್ದೇಶಕ, ಬಿಆರ್‌ಟಿ ಹುಲಿ ಯೋಜನೆ, ಚಾಮರಾಜನಗರ

    ಇಲಾಖೆ ಅಧಿಕಾರಿಗಳು ತುಮಕೂರಿನಲ್ಲಿ ಚಿರತೆ ಕೂಂಬಿಂಗ್ ತೆರಳಬೇಕೆಂದು ತಿಳಿಸಿದ್ದಾರೆ. ಸಾರ್ವಜನಿಕರಿಗೆ ಅನುಕೂಲವಾಗಬೇಕೆಂಬ ಉದ್ದೇಶದಿಂದ ಕೂಂಬಿಂಗ್‌ನಲ್ಲಿ ಪಾಲ್ಗೊಳ್ಳಲು ನಿರ್ಧರಿಸಿ ತಮ್ಮ ತಂಡದೊಂದಿಗೆ ಮಾತುಕತೆ ನಡೆಸಿದ್ದೇವೆ.
    ಆಲುಮಲೇಗೌಡ ಸೋಲಿಗ, ಚಾಮರಾಜನಗರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts