More

    ಸ್ವಚ್ಛ ಮೈಸೂರಿಗೆ 2 ನೂತನ ತ್ಯಾಜ್ಯ ಸಂಸ್ಕರಣಾ ಘಟಕ

    ಸದೇಶ್ ಕಾರ್ಮಾಡ್ ಮೈಸೂರು

    ಸ್ವಚ್ಛ ಸರ್ವೇಕ್ಷಣೆಯಲ್ಲಿ ಕಳೆದ ಕೆಲವು ವರ್ಷಗಳಿಂದ ಸಾಂಸ್ಕೃತಿಕ ನಗರಿ ಮೈಸೂರು ಹಿನ್ನಡೆ ಅನುಭವಿಸಲು ಸಮರ್ಪಕ ತ್ಯಾಜ್ಯ ಸಂಸ್ಕರ ಣೆ ನಡೆಯದೆ ಇರುವುದು ಕೂಡ ಒಂದು ಕಾರಣ. ಈ ಸಮಸ್ಯೆಗೆ ನಗರ ಪಾಲಿಕೆಯು ಇದೀಗ ಶಾಶ್ವತ ಪರಿಹಾರ ಕಂಡುಕೊಂಡಿದ್ದು, ಇನ್ನು ಮುಂದೆ ನಗರದಲ್ಲಿ ತ್ಯಾಜ್ಯ ಸಂಸ್ಕರಣೆಯ ಸಮಸ್ಯೆ ತಲೆದೂರುವುದಿಲ್ಲ.

    ಪ್ರಸ್ತುತ ನಗರದ ಬಹುಪಾಲು ತ್ಯಾಜ್ಯವನ್ನು ನಗರದ ಸೂಯೇಜ್ ಫಾರ್ಮ್‌ಗೆ ತಂದು ಸುರಿಯಲಾಗುತ್ತಿದೆ. ಆದರೆ, ಸೂಯೇಜ್ ಫಾರ್ಮ್‌ನಲ್ಲಿ 200 ಟನ್‌ನಷ್ಟು ಮಾತ್ರ ತ್ಯಾಜ್ಯ ಸಂಸ್ಕರಣಾ ಘಟಕವಿದೆ. ಆದರೆ, ಇಲ್ಲಿಗೆ ಪ್ರತಿನಿತ್ಯ 550 ಟನ್ ತ್ಯಾಜ್ಯ ಬಂದು ಬೀಳುತ್ತಿದೆ. ಹೀಗಾಗಿ ತ್ಯಾಜ್ಯ ಸಂಸ್ಕರಣೆಯಾಗದೆ ತ್ಯಾಜ್ಯದ ರಾಶಿ ಬೆಟ್ಟದ ರೀತಿಯಲ್ಲಿ ಬೆಳೆಯುತ್ತಿದೆ. ಇದರಿಂದ ಸೂಯೇಜ್ ಫಾರ್ಮ್ ಸುತ್ತಮುತ್ತಲಿನ ನಗರದ ನಿವಾಸಿಗಳು ತ್ಯಾಜ್ಯದಿಂದ ಹೊರಹೊಮ್ಮುವ ದುರ್ನಾತ, ಸೊಳ್ಳೆಗಳ ಹಾವಳಿಯಿಂದ ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಸಲುವಾಗಿ ಕೆಸರೆ ಹಾಗೂ ರಾಯನಕೆರೆಯಲ್ಲಿ ಘನತ್ಯಾಜ್ಯ ನಿರ್ವಹಣಾ ಘಟಕ ನಿರ್ಮಾ ಣಕ್ಕೆ ನಗರ ಪಾಲಿಕೆ ಚಾಲನೆ ನೀಡಿತು.

    ಕೆಸರೆ ಘನತ್ಯಾಜ್ಯ ನಿರ್ವಹಣಾ ಘಟಕದ ಕಾಮಗಾರಿ ಸಂಪೂರ್ಣಗೊಂಡಿದ್ದು, ಮಾಸಾಂತ್ಯದೊಳಗೆ ಈ ಘಟಕ ಕಾರ್ಯಾರಂಭಗೊಳ್ಳ ಲಿದೆ. ಅದೇ ರೀತಿ ರಾಯನಕೆರೆಯಲ್ಲೂ ಘನತ್ಯಾಜ್ಯ ನಿರ್ವಹಣಾ ಘಟಕ ನಿರ್ಮಾಣಗೊಳ್ಳುತ್ತಿದ್ದು, ಇನ್ನು ಎರಡು ತಿಂಗಳ ಒಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ. ಒಂದೆರಡು ತಿಂಗಳ ಒಳಗೆ ನಗರದ ತ್ಯಾಜ್ಯ ವಿಲೇವಾರಿ ಹಾಗೂ ಸಂಸ್ಕರಣೆಯ ಸಮಸ್ಯೆಗೆ ಸಂಪೂರ್ಣ ಪರಿಹಾರ ದೊರೆಯಲಿದೆ.

    ಕೆಸೆರೆಯಲ್ಲಿ 22 ಕೋಟಿ ರೂ.ವೆಚ್ಚದಲ್ಲಿ 200 ಟನ್ ಸಾಮರ್ಥ್ಯದ ಹಾಗೂ ರಾಯನಕೆರೆಯಲ್ಲಿ 9.2 ಕೋಟಿ ರೂ.ವೆಚ್ಚದಲ್ಲಿ 150 ಟನ್ ಸಾಮರ್ಥ್ಯದ ತ್ಯಾಜ್ಯ ಸಂಸ್ಕರಣಾ ಘಟಕ ನಿರ್ಮಾಣ ಮಾಡಲಾಗಿದೆ. ಒಟ್ಟು 350 ಟನ್ ತ್ಯಾಜ್ಯ ನೂತನ ಎರಡು ಘಟಕಗಳಿಗೆ ಹಂಚಿಕೆಯಾಗುವ ಹಿನ್ನೆಲೆಯಲ್ಲಿ ಸೂಯೇಜ್ ಫಾರ್ಮ್ ಮೇಲಿನ ಒತ್ತಡ ಸಂಪೂರ್ಣ ಕಡಿಮೆಯಾಗಲಿದೆ. ಸೂಯೇಜ್‌ಫಾರ್ಮ್ ಘಟಕದಲ್ಲಿ ತ್ಯಾಜ್ಯ ಸಂಸ್ಕರಣೆಯ ಜವಾಬ್ದಾರಿಯನ್ನು ಐಎಲ್ ಆ್ಯಂಡ್ ಎಫ್‌ಎಸ್ ಕಂಪನಿ ನಿರ್ವಹಿಸುತಿತ್ತು. ಆದರೆ, 2022ಕ್ಕೆ ಈ ಕಂಪನಿ ಹಾಗೂ ಪಾಲಿಕೆ ನಡುವಿನ ಒಡಂಬಡಿಕೆ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಪ್ರಸ್ತುತ ಈ ಘಕಟವನ್ನು ಪಾಲಿಕೆಯೇ ನಿರ್ವಹಣೆ ಮಾಡುತ್ತಿದೆ.

    ಸ್ವಚ್ಛತೆಯಲ್ಲಿ ನಂ.1 ಸ್ಥಾನಕ್ಕೆ ಮರಳಲು ಸಹಕಾರಿ

    ಮೈಸೂರು ಸ್ವಚ್ಛತೆಯಲ್ಲಿ ಮತ್ತೆ ದೇಶದ ನಂ.1 ನಗರವಾಗಿ ರೂಪುಗೊಳ್ಳಲು ಕೆಸರೆ ಹಾಗೂ ರಾಯನಕೆರೆಯ ನೂತನ ತ್ಯಾಜ್ಯ ಸಂಸ್ಕರಣಾ ಘಟಕ ಸಹಕಾರಿಯಾಗಲಿದೆ. ಸ್ವಚ್ಛ ಸರ್ವೇಕ್ಷಣೆಯಲ್ಲಿ ಉತ್ತಮ ಸಾಧನೆ ತೋರಲು ಮನೆ ಮನೆಯಿಂದ ಹಸಿಕಸ ಒಣಕಸವನ್ನು ಬೇರ್ಪಡಿಸಿ ಪಡೆಯುವುದು ಹಾಗೂ ಪ್ರತಿದಿನ ಸಂಗ್ರಹಿಸುವ ತ್ಯಾಜ್ಯವನ್ನು ಆಯಾ ದಿನವೇ ವಿಲೇವಾರಿ ಮಾಡಬೇಕು. ಕಳೆದ ಬಾರಿ ಒಟ್ಟು 7,500 ಅಂಕಗಳಿಗೆ ಸ್ವಚ್ಛ ಸರ್ವೇಕ್ಷಣೆ ನಡೆಯಿತು. ಈ ಪೈಕಿ ಸರ್ವೀಸ್ ಲೆವಲ್ ಪ್ರೋಗ್ರೆಸ್ ವಿಭಾಗಕ್ಕೆ 3,000 ಅಂಕಗಳನ್ನು ನಿಗದಿ ಪಡಿಸಲಾಗಿತ್ತು. ಆದರೆ, ಮೈಸೂರು ನಗರ ಸರ್ವೀಸ್ ಲೆವಲ್ ಪ್ರೋಗ್ರೆಸ್ ವಿಭಾಗದಲ್ಲಿ ಹಿಂದೆ ಬಿದ್ದಿತ್ತು.


    ಸರ್ವಿಸ್ ಲೆವಲ್ ಪ್ರೋಗ್ರೆಸ್ ವಿಭಾಗದಲ್ಲಿ ಅಂಕಗಳನ್ನು ನೀಡುವ ಸಂದರ್ಭ ಮನೆ ಮನೆಗಳಿಂದ ತ್ಯಾಜ್ಯವನ್ನು ಹಸಿ ಮತ್ತು ಒಣ ಕಸವಾಗಿ ವಿಂಗಡಿಸಿ ನೀಡಲಾಗುತ್ತಿದೆಯೇ?, ಸಂಗ್ರಹಿಸಿದ ತ್ಯಾಜ್ಯವನ್ನು ಸಮರ್ಪಕವಾಗಿ ವಿಲೇವಾರಿ ಮಾಡಿ ಸಂಸ್ಕರಣೆ ಮಾಡಲಾಗುತ್ತಿದೆಯೇ? ನಗರದಲ್ಲಿ ನೈರ್ಮಲ್ಯವನ್ನು ಸದಾ ಉತ್ತಮವಾಗಿ ಕಾಪಾಡಲಾಗುತ್ತಿದೆಯೇ?, ಒಳಚರಂಡಿ ಶುಚಿಗೊಳಿಸಲು ಯಂತ್ರೋ ಪಕರಣ ಬಳಕೆ ಮಾಡಲಾಗುತ್ತಿದೆಯೇ ಎಂಬ ಅಂಶಗಳನ್ನು ಪ್ರಮುಖವಾಗಿ ಗಮನಿಸಲಾಗುತ್ತದೆ. ಆದರೆ, ಈ ವಿಭಾಗದಲ್ಲಿ ಮೈಸೂರು ಹಿನ್ನಡೆ ಅನುಭವಿಸಿದ ಹಿನ್ನೆಲೆಯಲ್ಲಿ ಸ್ವಚ್ಛತೆಯಲ್ಲಿ ನಂ.1 ಸ್ಥಾನ ಪಡೆಯಲು ಸಾಧ್ಯವಾಗಲಿಲ್ಲ.

    ಸರ್ವಿಸ್ ಲೆವಲ್‌ಪ್ರೋಗ್ರೆಸ್‌ನಲ್ಲಿ ಮೈಸೂರು 2,452.02 ಅಂಕಗಳನ್ನು ಪಡೆದರೆ ಸ್ವಚ್ಛತೆಯಲ್ಲಿ ನಂ.1 ಸ್ಥಾನ ಪಡೆದ ಇಂದೋರ್ 2,701.71 ಅಂಕಗಳನ್ನು, ಸಿಟಿಜನ್ ವಾಯ್ಸನಲ್ಲಿ ಮೈಸೂರು 2,064.41 ಅಂಕಗಳು, ಇಂದೋರ್ 2,194.70 ಅಂಕಗಳನ್ನು ಪಡೆದುಕೊಂಡಿತ್ತು. ಸರ್ಟಿಫಿಕೇಷನ್‌ನಲ್ಲಿ ಮೈಸೂರು ಮತ್ತು ಇಂದೋರ್ ತಲಾ 2,250 ಅಂಕಗಳನ್ನು ಪಡೆದುಕೊಂಡಿತ್ತು. ಇಂದೋರ್‌ಗೆ ಸರಿಸಮಾನವಾಗಿ ಮೈಸೂರು ಎರಡು ವಿಭಾಗಗಳಲ್ಲಿ ಅಂಕಗಳನ್ನು ಪಡೆದರೂ ಸರ್ವೀಸ್ ಲೆವಲ್ ಪ್ರೋಗ್ರೆಸ್‌ನಲ್ಲಿ ಮಾತ್ರ ಹಿನ್ನಡೆ ಅನುಭವಿಸಿದ ಹಿನ್ನೆಲೆಯಲ್ಲಿ 8ನೇ ಸ್ಥಾನಕ್ಕೆ ತೃಪ್ತಿಪಡುವ ಪರಿಸ್ಥಿತಿ ನಿರ್ಮಾಣವಾಯಿತು.

    ನೂತನ ಪೆಟ್ರೋಲ್ ಬಂಕ್

    ಪ್ರಸ್ತುತ ತ್ಯಾಜ್ಯ ವಿಲೇವಾರಿ ಮಾಡುವ ವಾಹನಗಳು ಇಂಧನ ತುಂಬಿಸಲು ನಗರ ಪಾಲಿಕೆ ಮುಖ್ಯ ಕಚೇರಿಗೆ ಆಗಮಿಸಬೇಕು. ಇದರಿಂದ ಅನಗತ್ಯವಾಗಿ ಇಂಧನ ಹಾಗೂ ಸಮಯ ವ್ಯರ್ಥವಾಗುತ್ತಿದೆ. ಅಲ್ಲದೆ ಪಾಲಿಕೆ ಆವರಣದಲ್ಲಿ ಪಾರ್ಕಿಂಗ್ ಸಮಸ್ಯೆ ಎದುರಾಗುತ್ತಿದೆ. ಹಾಗಾಗಿ ಕೆಸರೆಯಲ್ಲಿ ನೂತನ ಪೆಟ್ರೋಲ್ ಬಂಕ್ ನಿರ್ಮಾಣ ಮಾಡಲು ಪಾಲಿಕೆ ಈಗಾಗಲೇ ಟೆಂಡರ್ ಕರೆದಿದ್ದು, ಸದ್ಯದಲ್ಲಿಯೇ ಕಾಮಗಾರಿ ಕಾರ್ಯಾರಂಭಗೊಳ್ಳುವ ನಿರೀಕ್ಷೆ ಇದೆ.

    ಕೆಸರೆ ತ್ಯಾಜ್ಯ ನಿರ್ವಹಣಾ ಘಟಕ ಮಾಸಾಂತ್ಯದೊಳಗೆ ಕಾರ್ಯಾರಂಭಗೊಳ್ಳಲಿದೆ. ರಾಯನಕೆರೆ ತ್ಯಾಜ್ಯ ನಿರ್ವಣಾ ಘಟಕದ ಕಾಮ ಗಾರಿ ನಡೆಯುತ್ತಿದ್ದು, ಕಾಮಗಾರಿ ಪೂರ್ಣಗೊಳ್ಳಲು ಎರಡು ತಿಂಗಳು ಬೇಕಾಗುತ್ತದೆ. ಈ ಎರಡು ಘಟಗಳು ಕಾರ್ಯಾರಂಭಗೊಂಡರೆ ನಗರ ಎದುರಿಸುತ್ತಿರುವ ತ್ಯಾಜ್ಯ ಸಂಸ್ಕರಣೆಯ ಸಮಸ್ಯೆ ಸಂಪೂರ್ಣ ಪರಿಹಾರವಾಗಲಿದೆ. ಕೆಸರೆಯಲ್ಲಿ ತ್ಯಾಜ್ಯ ವಿಲೇವಾರಿ ಮಾಡುವ ವಾಹನಗಳಿಗೆ ಪೆಟ್ರೋಲ್ ಮತ್ತು ಡೀಸೆಲ್ ತುಂಬಿಸಲು ಪೆಟ್ರೋಲ್ ಬಂಕ್ ನಿರ್ಮಾಣಕ್ಕೆ ಟೆಂಡರ್ ಕರೆಯಲಾಗಿದ್ದು, ಶೀಘ್ರದಲ್ಲಿಯೇ ಕಾಮಗಾರಿ ಪ್ರಾರಂಭಿಸಲಾಗುವುದು.

    ಜಿ. ಲಕ್ಷ್ಮೀಕಾಂತ್ ರೆಡ್ಡಿ, ಆಯುಕ್ತ, ನಗರ ಪಾಲಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts