More

    ಸೌರಶಕ್ತಿ ಯೋಜನೆ ಗ್ರಹಣಮುಕ್ತಿ!

    ಹುಬ್ಬಳ್ಳಿ: ಟೆಂಡರ್ ಕರೆದು ದಿನಾಂಕ ನಿಗದಿಪಡಿಸಿ ಕಾಯುವುದು. ನಿಗದಿತ ದಿನ ಟೆಂಡರ್ ಪೆಟ್ಟಿಗೆ ತೆಗೆದರೆ ಖಾಲಿ ಖಾಲಿ. ಮತ್ತೆ ಟೆಂಡರ್ ಕರೆದರೆ ಮತ್ತದೇ ಕತೆ. ಸೂರ್ಯನ ಶಕ್ತಿ ಬಳಸಿಕೊಳ್ಳುವ ಯೋಜನೆಗೇ ಗ್ರಹಣ!

    ಹುಬ್ಬಳ್ಳಿ-ಧಾರವಾಡ ಸ್ಮಾರ್ಟ್ ಸಿಟಿ ಕಂಪನಿ ರೂಪಿಸಿದ್ದ ಛಾವಣಿ ಸೌರಶಕ್ತಿ (ರೂಫ್ ಟಾಪ್ ಸೋಲಾರ್) ಪ್ರಾಜೆಕ್ಟ್ ಪರಿಸ್ಥಿತಿ ಹೀಗಾಗಿತ್ತು. ನಿರ್ವಿುಸಿ, ಕಾರ್ಯಾಚರಣೆ ಮಾಡಿ, ಹಸ್ತಾಂತರಿಸುವ (ಬಿಲ್ಟ್ ಆಪರೇಟ್ ಟ್ರಾನ್ಸ್​ಫರ್- ಬಿಒಟಿ) ಆಧಾರದ ಈ ಯೋಜನೆಗೆ ಪುನಃ ಪುನಃ ಟೆಂಡರ್ ಕರೆದರೂ ಗುತ್ತಿಗೆದಾರರು ಮುಂದೆ ಬಂದಿರಲಿಲ್ಲ. ಉಳಿದೆಲ್ಲ ಯೋಜನೆಗಳ ಟೆಂಡರ್​ನಲ್ಲಿ ಸ್ಪರ್ಧೆ ಕಂಡುಬಂದರೂ ಸೋಲಾರ್ ವಿದ್ಯುತ್ ಯೋಜನೆಯನ್ನು ಮಾತ್ರ ಕೇಳುವವರಿರಲಿಲ್ಲ. ಹೀಗಾಗಿ, ಇದನ್ನು ಕೈ ಬಿಡುವುದು ಬಹುತೇಕ ಖಾತ್ರಿ ಎಂದು ಭಾವಿಸಲಾಗಿತ್ತು. ಆದರೆ, ಮತ್ತೆ ಮತ್ತೆ ಪರಿಷ್ಕರಣೆ ಮಾಡಿ ಟೆಂಡರ್ ಕರೆದಿದ್ದರಿಂದ ಕೊನೆಗೂ ಗುತ್ತಿಗೆದಾರರು ಮುಂದೆ ಬಂದಿದ್ದಾರೆ. ರೂಫ್ ಟಾಪ್ ಸೋಲಾರ್ ಯೋಜನೆಗೆ ಹಿಡಿದಿದ್ದ ಗ್ರಹಣ ಬಿಟ್ಟಂತಾಗಿದೆ.

    ಬದಲಿ ಹಾಗೂ ಪರಿಸರ ಸ್ನೇಹಿ ಇಂಧನವನ್ನು ಪ್ರೋತ್ಸಾಹಿಸಬೇಕು ಎನ್ನುವುದು ಸ್ಮಾರ್ಟ್ ಸಿಟಿಯ ಗುರಿಗಳಲ್ಲಿ ಒಂದು. ಇದಕ್ಕಾಗಿ ಹುಬ್ಬಳ್ಳಿಯ ಸರ್ಕಾರಿ ಕಟ್ಟಡಗಳ ಛಾವಣಿ/ಟೆರೇಸ್ ಮೇಲೆ ಸೋಲಾರ್ ಪ್ಯಾನಲ್ ಹಾಕಿ ವಿದ್ಯುತ್ ಉತ್ಪಾದಿಸಲು ಸಮೀಕ್ಷೆ ನಡೆಸಲಾಗಿತ್ತು. ಮಹಾನಗರ ಪಾಲಿಕೆ ಪ್ರಧಾನ ಕಚೇರಿ, ಮಿನಿ ವಿಧಾನಸೌಧ, ಅಶೋಕ ನಗರ ಕನ್ನಡ ಭವನ, ನ್ಯೂ ಕಾಟನ್ ಮಾರ್ಕೆಟ್ ಸಾಂಸ್ಕೃತಿಕ ಭವನ ಸೇರಿ ಸರ್ಕಾರಿ ಮತ್ತು ಸ್ಥಳೀಯ ಸಂಸ್ಥೆಯ ಒಡೆತನದ ನಿರ್ದಿಷ್ಟ ಕಟ್ಟಡಗಳನ್ನು ಈ ಹಿಂದೆಯೇ ಆಯ್ಕೆ ಮಾಡಲಾಗಿತ್ತು.

    ಸಹಾಯಧನ ಇಲ್ಲದಿರುವುದು, ಕೆಇಆರ್​ಸಿ ನಿಯಮಾವಳಿಗಳ ಪ್ರಕಾರ ಹೆಸ್ಕಾಂಗೆ ನಿರ್ದಿಷ್ಟ ದರಕ್ಕೆ ವಿದ್ಯುತ್ ಪೂರೈಸುವುದು ಅಷ್ಟೊಂದು ಲಾಭದಾಯಕ ಅಲ್ಲದಿರುವುದು, ದೀರ್ಘಾವಧಿ ಯೋಜನೆ… ಹೀಗೆ ಗುತ್ತಿಗೆದಾರರು ತಮ್ಮದೇ ಆದ ಕಾರಣಗಳಿಂದಾಗಿ ಛಾವಣಿ ಸೌರ ವಿದ್ಯುತ್ ಯೋಜನೆಯಲ್ಲಿ ಆಸಕ್ತಿ ತೋರಿಸಿರಲಿಲ್ಲ.

    4-5 ಸಲ ಟೆಂಡರ್ ಕರೆದ ಮೇಲೆ ಯೋಜನೆಯನ್ನು ಕೈಬಿಡುವ ವಿಚಾರ ಬಂದಿತ್ತು. ಆದರೆ, ಅಧಿಕಾರಿಗಳು ಪಟ್ಟು ಹಿಡಿದು ಯೋಜನೆಯಲ್ಲಿ ಕೆಲವು ಬದಲಾವಣೆ, ಆಯಾ ಕಟ್ಟಡದಲ್ಲಿ ಉತ್ಪಾದಿಸಿದ ವಿದ್ಯುತ್ ಅನ್ನು ಅಲ್ಲಿಯ ಕಚೇರಿಗಳಿಗೆ ಪೂರೈಸುವುದು, ಸ್ಮಾರ್ಟ್ ಸಿಟಿಯಿಂದ ತಾಂತ್ರಿಕ ಬೆಂಬಲ ಹೀಗೆ ಪರಿಷ್ಕರಣೆ ಮಾಡಿ ಪುನಃ ಟೆಂಡರ್ ಕರೆದಾಗ ಒಬ್ಬ ಅರ್ಹ ಗುತ್ತಿಗೆದಾರರು ಮುಂದೆ ಬಂದಿದ್ದು, ಆಯ್ಕೆ ಮಾಡಲಾಗಿದೆ. ಸದ್ಯದಲ್ಲೇ ಅವರು ಕೆಲಸ ಶುರು ಮಾಡಲಿದ್ದಾರೆ.

    ಸರ್ಕಾರಿ ಖರ್ಚು ಇಲ್ಲ

    ಬಿಒಟಿ ಆಧಾರದ್ದು ಆಗಿರುವುದರಿಂದ ಸೌರಶಕ್ತಿ ಯೋಜನೆಗೆ ಸರ್ಕಾರ ಹಣ ಹಾಕುವುದಿಲ್ಲ. ಅಂದಾಜು 2.31 ಕೋಟಿ ರೂಪಾಯಿ ವೆಚ್ಚದ ಕೆಲಸ ಇದು. ವಿನ್ಯಾಸ, ಹಣಕಾಸು, ಸೌರಶಕ್ತಿ ಪ್ಯಾನಲ್ ಅಳವಡಿಕೆ, ವಿದ್ಯುತ್ ಉತ್ಪಾದನೆಗೆ ಅಗತ್ಯ ಏರ್ಪಾಟು ಮಾಡುವುದು, ಪರೀಕ್ಷೆ, ಕಾರ್ಯಾಚರಣೆ, ನಿರ್ವಹಣೆ ಎಲ್ಲವೂ ಗುತ್ತಿಗೆದಾರರದ್ದೇ. ನಾಲ್ಕು ತಿಂಗಳ ಅವಧಿಯಲ್ಲಿ ಸಜ್ಜುಗೊಳಿಸಿ ವಿದ್ಯುತ್ ಪೂರೈಕೆ ಆರಂಭಿಸಬೇಕು ಎಂಬ ಷರತ್ತು ವಿಧಿಸಲಾಗಿದೆ.

    25 ವರ್ಷ ಅವಧಿ

    ಗುತ್ತಿಗೆದಾರ 25 ವರ್ಷ ಕಾಲ ಸೌರಶಕ್ತಿ ಯೋಜನೆ ಮೇಲೆ ಅಧಿಕಾರ ಹೊಂದಿರುತ್ತಾನೆ. ಅದುವರೆಗೆ ಉತ್ಪಾದನೆಯಾಗುವ ವಿದ್ಯುತ್ ಪೂರೈಕೆಯ ಆದಾಯ ಪೂರ್ತಿಯಾಗಿ ಆತನಿಗೆ ಸಲ್ಲುತ್ತದೆ. 25 ವರ್ಷದ ನಂತರ ಸುಸ್ಥಿತಿಯಲ್ಲಿರುವ ಸೌರ ವಿದ್ಯುತ್ ಉತ್ಪಾದನಾ ಘಟಕಗಳನ್ನು ಸರ್ಕಾರಕ್ಕೆ ಹಸ್ತಾಂತರಿಸಬೇಕು ಎಂಬ ಷರತ್ತು ಹಾಕಲಾಗಿದೆ.

    ಯೋಜನೆ ಕೈ ತಪ್ಪಿ ಹೋಗಬಾರದು ಎಂಬ ಉದ್ದೇಶದಿಂದ ಸರ್ಕಾರದ ಸೂಚನೆಯಂತೆ ಸೂಕ್ತ ಪರಿಷ್ಕರಣೆ ಮಾಡಿ ಟೆಂಡರ್ ಕರೆದಿದ್ದು, ಗುತ್ತಿಗೆದಾರರು ಭಾಗವಹಿಸಿದ್ದಾರೆ. ಎಲ್ಲ ಪ್ರಕ್ರಿಯೆಗಳು ಮುಗಿದಿದ್ದು, ಇನ್ನೊಂದು ವಾರದಲ್ಲಿ ಕಾರ್ಯಾದೇಶ ನೀಡಲಾಗುತ್ತದೆ.

    | ಎಸ್.ಎಚ್. ನರೇಗಲ್

    ಹು-ಧಾ ಸ್ಮಾರ್ಟ್ ಸಿಟಿ ವಿಶೇಷಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts