More

    ಆನೆ ಹಾವಳಿ ತಡೆಗೆ ಸೌರಶಕ್ತಿ ಚಾಲಿತ ತೂಗು ತಂತಿ ಬೇಲಿ : ಚನ್ನಪಟ್ಟಣ ತಾಲೂಕಿನ ಕೆಲವೆಡೆ ಯಶಸ್ವಿ ಪ್ರಯೋಗ

    ಚನ್ನಪಟ್ಟಣ : ಕಾಡಂಚಿನ ಗ್ರಾಮಗಳಲ್ಲಿ ಕಾಡಾನೆಗಳ ಉಪಟಳ ಹೆಚ್ಚಾಗಿದ್ದು, ಗಜಪಡೆಯ ಹಾವಳಿಗೆ ಬ್ರೇಕ್ ಹಾಕಲು ಅರಣ್ಯ ಇಲಾಖೆ ಸೋಲಾರ್ ವಿದ್ಯುತ್ ತೂಗುತಂತಿ ಬೇಲಿಯ (ಟೆಂಟಕಲ್ ೆನ್ಸ್) ಮೊರೆ ಹೋಗಿದೆ.

    ಕಾಡಂಚಿನ ಗ್ರಾಮಗಳಲ್ಲಿ ಹಲವಾರು ವರ್ಷಗಳಿಂದ ಕಾಡಾನೆಗಳ ಹಾವಳಿ ತಲೆದೋರಿದೆ. ರಾತ್ರಿ ವೇಳೆ ರೈತರ ಜಮೀನುಗಳಿಗೆ ಲಗ್ಗೆಯಿಡುವ ಗಜಪಡೆ ರೈತರ ಬೆಳೆಗಳನ್ನು ಮನಸ್ಸೋಇಚ್ಛೆ ತಿಂದು ರೈತರ ಹೊಟ್ಟೆ ಮೇಲೆ ಬರೆ ಎಳೆಯುತ್ತಿವೆ. ಈ ಕಾರಣದಿಂದಾಗಿ ತಾಲೂಕಿನ ಕನ್ನಿದೊಡ್ಡಿ, ಬಿ.ವಿ.ಹಳ್ಳಿ, ಅರಳಾಳುಸಂದ್ರ, ಶಾನುಭೋಗನಹಳ್ಳಿ, ಬೈರಶೆಟ್ಟಿಹಳ್ಳಿ ಸೇರಿ ಸುತ್ತಮುತ್ತಲ ಹಲವು ಗ್ರಾಮಗಳ ರೈತರು ಆನೆಗಳ ಉಪಟಳದಿಂದಾಗಿ ಹೈರಾಣಾಗಿದ್ದಾರೆ.

    ಅರಣ್ಯ ಇಲಾಖೆಗೆ ತಲೆಬಿಸಿ: ಪದೇಪದೆ ಅನೆಗಳ ದಾಳಿ ನಡೆಯುತ್ತಿರುವುದು ರೈತರನ್ನು ಸಂಕಷ್ಟಕ್ಕೆ ದೂಡುವ ಜತೆಗೆ, ಅರಣ್ಯ ಇಲಾಖೆಗೆ ತಲೆಬಿಸಿಯಾಗಿದೆ. ಗಜಪಡೆಯನ್ನು ಕಾಡಿನತ್ತ ಓಡಿಸುವುದು ಇಲಾಖೆಗೆ ಸವಾಲಾಗಿದೆ. ಒಂದೆಡೆಯಿಂದ ಓಡಿಸಿಕೊಂಡು ಹೋದರೆ, ಇನ್ನೊಂದು ಕಡೆಯಿಂದ ಮತ್ತೆ ನಾಡಿಗೆ ಆಗಮಿಸುವ ಆನೆಗಳ ಕಾಟಕ್ಕೆ ಸಿಬ್ಬಂದಿ ಸುಸ್ತಾಗಿದ್ದಾರೆ. ತಿಂಗಳಿಗೆ ಹಲವು ಬಾರಿ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಆನೆಗಳ ಕಣ್ಣಾಮುಚ್ಚಾಲೆ ಆಟ ಸಾಕಾಗಿಹೋಗಿದೆ.

    ಸೋಲಾರ್ ತೂಗುತಂತಿ ಪ್ರಯೋಗ: ಅನೆಗಳ ದಾಳಿ ತಡೆಯಲು ಹಾಗೂ ಬೆಳೆ ರಕ್ಷಿಸಲು ರೈತರ ಸಹಕಾರದೊಂದಿಗೆ ಅರಣ್ಯ ಇಲಾಖೆ ಸೋಲಾರ್ ವಿದ್ಯುತ್ ತೂಗುತಂತಿ ಬೇಲಿ (ಟೆಂಟಕಲ್ ೆನ್ಸ್) ಅಸ್ತ್ರವನ್ನು ಪ್ರಯೋಗ ನಡೆಸುತ್ತಿದೆ. ಪ್ರಥಮ ಹಂತವಾಗಿ ಚನ್ನಪಟ್ಟಣ ವಲಯ ಅರಣ್ಯ ಪ್ರದೇಶಕ್ಕೆ ಬರುವ ಅರಳಾಳುಸಂದ್ರ ಹಾಗೂ ಕನಕಪುರ ತಾಲೂಕಿನ ಕಂಚನಹಳ್ಳಿ ಗ್ರಾಮಗಳ ಬಳಿ ಮೂವರು ರೈತರ ಜಮೀನು ಹಾಗೂ ರಾಗಿ ಕಣಗಳಿಗೆ ಈ ಬೇಲಿ ನಿರ್ಮಿಸಿ ಯಶಸ್ವಿಯಾಗಿದೆ.

    ಸೋಲಾರ್ ಬೇಲಿಗೆ ಪರ್ಯಾಯ: ಈ ಹಿಂದೆ ಕಾಡಂಚಿನ ಪ್ರದೇಶದಲ್ಲಿ ಕಾಡು ಪ್ರಾಣಿಗಳು ನಾಡಿಗೆ ಆಗಮಿಸದಂತೆ ತಡೆಯಲು ಸೋಲಾರ್ ವಿದ್ಯುತ್ ತಂತಿ ಬೇಲಿ ನಿರ್ಮಾಣ ಮಾಡಲಾಗುತಿತ್ತು. ಆದರೆ, ಅನೆಗಳು ಈ ಬೇಲಿಯನ್ನು ನೆಲಸಮಗೊಳಿಸುತ್ತಿದ್ದವು. ಜತೆಗೆ ಈ ಬೇಲಿಗಳ ನಿರ್ವಹಣೆ ಕೂಡ ಕಷ್ಟವಾಗಿದ್ದ ಕಾರಣ ಆನೆಗಳನ್ನು ತಡೆಯಲು ವಿಲವಾಗಿದ್ದರಿಂದ ಇದಕ್ಕೆ ಪರ್ಯಾಯವಾದ ಯೋಜನೆಯೇ ಈ ನೇತಾಡುವ ಸೋಲಾರ್ ವಿದ್ಯುತ್ ತಂತಿಬೇಲಿ.

    ಏನಿದು ಸೋಲಾರ್ ತೂಗು ಬೇಲಿ
    20ರಿಂದ 30 ಅಡಿ ಅಂತರದಲ್ಲಿ ಎತ್ತರದ ನೀಲಗಿರಿ ಕಂಬಗಳನ್ನು ನೆಟ್ಟು, ಎರಡು ಲೈನ್ ತಂತಿ ಎಳೆದು, ತಂತಿಗೆ ಬ್ರೇಕ್‌ವೈರ್ ಮಾದರಿಯ ತಂತಿಗಳನ್ನು ತೂಗಿಬಿಡುವುದು. ಜಮೀನಿನ ಸುತ್ತ ಈ ಮಾದರಿಯಲ್ಲಿ ಬೇಲಿ ನಿರ್ಮಿಸಿಕೊಳ್ಳುವುದು. ಈ ಬೇಲಿಯ ಸಮೀಪ ಅನೆಗಳು ಬರುತ್ತಿದ್ದಂತೆ ವಿದ್ಯುತ್ ಶಾಕ್ ತಗುಲುವ ಜತೆಗೆ, ಮೇಲಿರುವ ತಂತಿಗಳು ಅನೆಗಳ ಮೇಲೆ ಜೋತುಬೀಳುವ ಕಾರಣ, ಅನೆಗಳು ಗಲಿಬಿಲಿಗೊಂಡು ಅಲ್ಲಿಂದ ಜಾಗ ಖಾಲಿ ಮಾಡಲಿವೆ. ನೀಲಗೀರಿ ಕಂಬಗಳು, ವೈಯರ್‌ಗಳು, ಬ್ಯಾಟರಿ, ಸೋಲಾರ್ ಪ್ಯಾನಲ್, ಶಕ್ತಿ ನಿರ್ವಹಣಾ ಯಂತ್ರ ಈ ಬೇಲಿಗೆ ಅವಶ್ಯಕವಾಗಿದೆ. ಒಟ್ಟಾರೆ ಆನೆ ದಾಳಿಯಿಂದ ಕಂಗೆಟ್ಟಿರುವ ರೈತರಿಗೆ ಈ ಸೋಲಾರ್ ತೂಗುಬೇಲಿ ಅನುಕೂಲವಾಗುವುದೇ ಹಾಗೂ ಈ ಬೇಲಿ ನಿರ್ಮಿಸಲು ಸರ್ಕಾರ, ಅರಣ್ಯ ಇಲಾಖೆ ಎಷ್ಟರ ಮಟ್ಟಿಗೆ ಸಹಕಾರ ನೀಡುವುದು ಎಂಬುದನ್ನು ಕಾದುನೋಡಬೇಕಿದೆ.

    ತುಂಬೇನಹಳ್ಳಿಯಲ್ಲಿ ಬಾಳೆ ತೋಟಕ್ಕೆ ಹಾನಿ
    ಕೈಲಾಂಚ: ಹೋಬಳಿಯ ಹುಣಸನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತುಂಬೇನಹಳ್ಳಿ ಗ್ರಾಮದಲ್ಲಿ ಮಂಗಳವಾರ ರಾತ್ರಿ ಎರಡು ಆನೆಗಳು ಆನಂದ್ ಎಂಬುವವರ ಬಾಳೆತೋಟಕ್ಕೆ ನುಗ್ಗಿ ಹಾನಿಯುಂಟುಮಾಡಿವೆ. ತೆಂಗಿನಕಲ್ಲು ಅರಣ್ಯದಲ್ಲಿ ಬೀಡುಬಿಟ್ಟಿದ್ದ ಆನೆಗಳು ಕನಕಪುರ- ರಾಮನಗರ ರಾಜ್ಯ ಹೆದ್ದಾರಿ ರಸ್ತೆ ಪಕ್ಕದ ಅರ್ಕಾವತಿ ನದಿ ದಾಟಿ ಗುನ್ನೂರು ಮಾರ್ಗವಾಗಿ ತುಂಬೇನಹಳ್ಳಿ ಬಳಿಯ ಹಂದಿಗೊಂದಿ ಅರಣ್ಯ ಸೇರಿ ಸೀಗೆಹುದಿ ಎಂಬಲ್ಲಿ ಬೀಡುಬಿಟ್ಟಿವೆ.ರಾತ್ರಿ ವೇಳೆಯಲ್ಲಿ ಅರಣ್ಯ ಸುತ್ತಮುತ್ತಲ ಗ್ರಾಮಗಳಲ್ಲಿ ಸಂಚರಿಸಿ ರೈತರ ಫಸಲು ನಾಶಪಡಿಸಿದ್ದವು. ಕೆಲವು ದಿನಗಳ ಹಿಂದೆ 35 ವರ್ಷದ ಗಂಡಾನೆ ವಿದ್ಯುರ್ತ ತಗುಲಿ ಮೃತಪಟ್ಟಿತ್ತು. ಆನೆಗಳ ದಾಳಿಯಿಂದ ಬಾಳೆತೋಟಕ್ಕೆ ಹಾನಿಯಾಗಿದ್ದು, ಸರ್ಕಾರ ಸೂಕ್ತ ಪರಿಹಾರ ನೀಡುವಂತೆ ರೈತ ಆನಂದ್ ಒತ್ತಾಯಿಸಿದ್ದಾರೆ.

    ರಾಜ್ಯದ ಕೆಲ ಭಾಗಗಳಲ್ಲಿ ತೂಗು ತಂತಿ ಬೇಲಿ (ಟೆಂಟಕಲ್ ಫೆನ್ಸ್) ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಈ ಮಾದರಿಯನ್ನು ತಾಲೂಕಿನಲ್ಲೂ ಪ್ರಯೋಗಿಸಿ ಇಲಾಖೆ ಯಶಸ್ವಿಯಾಗಿದೆ. ಬೆಳೆ ರಕ್ಷಣೆಗೆ ಉತ್ತಮವಾದ ದಾರಿ ಇದಾಗಿದೆ. ಈ ಬೇಲಿಗೆ ಅವಶ್ಯಕವಿರುವ ಕೆಲ ಪರಿಕರಗಳನ್ನು ಇಲಾಖೆ ಒದಗಿಸಲಿದೆ. ರೈತರು ಸಹ ಇದಕ್ಕೆ ಕೈಜೋಡಿಸಬೇಕಾಗಿದೆ. ಕೇವಲ ಅನೆದಾಳಿ ಅಲ್ಲದೇ ಎಲ್ಲ ವನ್ಯಜೀವಿಗಳ ದಾಳಿಯಿಂದ ಈ ಬೇಲಿ ರೈತರ ಬೆಳೆ ರಕ್ಷಣೆ ಮಾಡಲಿದೆ. ಕಡಿಮೆ ಖರ್ಚಿನಲ್ಲಿ ಈ ಬೇಲಿ ನಿರ್ಮಾಣವಾಗಲಿದೆ. ಸರ್ಕಾರ ಅನುದಾನ ದೊರೆತ ತಕ್ಷಣ ಈ ಬೇಲಿ ನಿರ್ಮಾಣ ಕೈಗೊಳ್ಳಲಾಗುವುದು.
    ದೇವರಾಜ್ ಡಿಸಿಎಫ್, ಅರಣ್ಯ ಇಲಾಖೆ

     

    ಅರಣ್ಯ ಇಲಾಖೆ ಅಧಿಕಾರಿಗಳು ಅನೆ ದಾಳಿ ತಡೆಗಟ್ಟಲು ಕಡಿಮೆ ಖರ್ಚಿನಲ್ಲಿ ರೂಪಿಸಿರುವ ಈ ಯೋಜನೆ ಉತ್ತಮವಾಗಿದೆ. ಆನೆಗಳು ನಾಡಿಗೆ ಬರದಂತೆ ಶಾಶ್ವತ ಯೋಜನೆಯಾದ ರೈಲ್ವೆ ಬ್ಯಾರಿಕೇಡ್ ಯೋಜನೆ ಕೆಲದಿನಗಳಲ್ಲಿ ಅನುಮೋದನೆಯಾಗಲಿದೆ. ಸೋಲಾರ್ ತೂಗು ತಂತಿ ಬೇಲಿಗೆ ಅವಶ್ಯಕವಾಗಿರುವ ಹಣವನ್ನು ಸಿಆರ್‌ಎಸ್ ಫಂಡ್ ಇನ್ನಿತರ ಮೂಲಗಳಿಂದ ಕ್ರೋಡೀಕರಿಸಿಕೊಡಲಾಗುವುದು.
    ಎಚ್.ಡಿ.ಕುಮಾರಸ್ವಾಮಿ ಮಾಜಿ ಸಿಎಂ ಹಾಗೂ ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts