ಚಿಕ್ಕೋಡಿ ಗ್ರಾಮಿಣ: ಉತ್ಸವಗಳು ಭಾರತೀಯ ಸಂಸ್ಕೃತಿಯ ದ್ಯೋತಕಗಳಾಗಿವೆ. ಪ್ರೇರಣಾ ಉತ್ಸವ ಗಡಿಭಾಗದ ಜನರಲ್ಲಿ ಉತ್ಸಾಹ ಮೂಡಿಸುತ್ತ ಬಂದಿದೆ. ರಾಜಕೀಯ ಮೂಲಕ ಸಮಾಜ ಸೇವೆ ಮಾಡುವುದೇ ಜೊಲ್ಲೆ ಪರಿವಾರದ ಆದ್ಯತೆ ಎಂದು ಶೇಗುಣಿಸಿ ವಿರಕ್ತಮಠದ ಡಾ. ಮಹಾಂತ ಸ್ವಾಮೀಜಿ ಹೇಳಿದರು.
ಯಕ್ಸಂಬಾ ಪಟ್ಟಣದ ಜೊಲ್ಲೆ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಪ್ರೇರಣಾ ಉತ್ಸವ ಅಂಗವಾಗಿ ಬುಧವಾರ ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಜೊಲ್ಲೆ ದಂಪತಿ ಶಿಕ್ಷಣವೇ ಶಕ್ತಿ ಎಂದು ಅರಿತು ಶಾಲೆ ತೆರೆದಿದ್ದಾರೆ. ಆ ಮೂಲಕ ಸಾಮಾಜಿಕ ನ್ಯಾಯ ಒದಗಿಸಿ ಸಮಾಜದ ಋಣ ತೀರಿಸುವ ಕಾಯಕ ಮಾಡುತ್ತಿದ್ದಾರೆ ಎಂದರು.
ದಿವ್ಯ ಸಾನ್ನಿಧ್ಯ ವಹಿಸಿ ಜನವಾಡದ ಮಲ್ಲಿಕಾರ್ಜುನದೇವರು ಸ್ವಾಮೀಜಿ ಮಾತನಾಡಿ, ನಮಗೆಲ್ಲ ಈಶ್ವರನೇ ಪ್ರೇರಣೆ. ಮಕ್ಕಳಿಗೆ ಪಾಲಕರೇ ದೇವರಂತೆ. ಪಾಲಕರಿಗೆ ಮಕ್ಕಳೇ ದೇವಪುತ್ರರು. ಜೊಲ್ಲೆ ಪರಿವಾರದ ಕಲಾತ್ಮಕ ಜೀವನ ಎಲ್ಲರಿಗೂ ಪ್ರೇರಣೆ ಎಂದರು.
ಶಾಸಕಿ ಶಶಿಕಲಾ ಜೊಲ್ಲೆ ಮಾತನಾಡಿ, ನಮ್ಮ ಸಂಸ್ಥೆ ಬೆಳೆಯಬೇಕಾದರೆ ಹಲವಾರು ಜನರ ಸಹಕಾರವೇ ಕಾರಣವಾಗಿದೆ. ಜೊಲ್ಲೆ ಗ್ರೂಪ್ ವತಿಯಿಂದ ಹಲವಾರು ವರ್ಷಗಳಿಂದ ಸಮಾಜಮುಖಿ ಕಾರ್ಯಗಳನ್ನು ಹಮ್ಮಿಕೊಳ್ಳುತ್ತ ಬರಲಾಗಿದೆ. ಇನ್ನು ಮುಂದೆಯೂ ಎಲ್ಲ ಯುವಕ-ಯುವತಿಯರ, ಬಡವರ ಹಾಗೂ ರೈತರ ಏಳಿಗೆಗಾಗಿ ಶ್ರಮಿಸಲಾಗುವುದು. ನಮ್ಮೆಲ್ಲ ಸಮಾಜಮುಖಿ ಕಾರ್ಯಗಳಿಗೆ ಹಿರಿಯ ಪುತ್ರ ಜ್ಯೋತಿಪ್ರಸಾದನೆ ಪ್ರೇರಣೆಯಾಗಿದ್ದಾನೆ ಎಂದರು.
ವಚನ ಕಂಠಪಾಠ, ಮಗ್ಗಿ ಕಂಠಪಾಠ, ರಂಗೋಲಿ, ಸಮೂಹ ಗೀತ ಗಾಯನ ಸ್ಪರ್ಧೆಗಳ ವಿಜೇತರಿಗೆ ಪ್ರಶಸ್ತಿ ಹಾಗೂ ಬಹುಮಾನ ವಿತರಿಸಲಾಯಿತು. ಚಿಕ್ಕೋಡಿ ಸಂಪಾದನಾ ಸ್ವಾಮೀಜಿ, ಹುಬ್ಬಳ್ಳಿ ಯೋಗೇಶ್ವರ ಸ್ವಾಮೀಜಿ, ಸಂಸದ ಅಣ್ಣಾಸಾಹೇಬ ಜೊಲ್ಲೆ, ಯುವ ಧುರೀಣ ಬಸವಪ್ರಸಾದ ಜೊಲ್ಲೆ,
ಆಶಾಜ್ಯೋತಿ ವಿಶೇಷ ಮಕ್ಕಳ ಶಾಲೆಯ ಅಧ್ಯಕ್ಷ ಜ್ಯೋತಿಪ್ರಸಾದ ಜೊಲ್ಲೆ, ಪ್ರಿಯಾ ಜೊಲ್ಲೆ, ರಾಜ್ಯ ವಿಶೇಷ ಒಲಿಂಪಿಕ್ಸ್ ಕಾರ್ಯದರ್ಶಿ ಅಮರೇಂದ್ರ ಸೇರಿ ಜೊಲ್ಲೆ ಗ್ರೂಪ್ ಸಂಸ್ಥೆಗಳ ಆಡಳಿತ ಮಂಡಳಿ ಸದಸ್ಯರು, ಶಾಲಾ ಕಾಲೇಜುಗಳು ಪ್ರಾಚಾರ್ಯರು, ಶಿಕ್ಷಕರು ಹಾಗೂ ಪೋಷಕರು ಇತರರಿದ್ದರು.