More

    ನಿಸ್ವಾರ್ಥ ಸೇವಕ ಪ್ರದೀಪ್ ಈಶ್ವರ್​ಗೆ ವಿಜಯರತ್ನ: ವಿಜಯವಾಣಿ, ದಿಗ್ವಿಜಯ ನ್ಯೂಸ್ ವಾಹಿನಿಯ ಪ್ರತಿಷ್ಠಿತ ಗೌರವ ಪ್ರದಾನ

    ಬೆಂಗಳೂರು: ಭವಿಷ್ಯದ ವೈದ್ಯರನ್ನು ರೂಪಿಸಬೇಕು ಎಂಬ ದೊಡ್ಡ ಕನಸನ್ನು ಇಟ್ಟುಕೊಂಡು ಕಡಿಮೆ ಬಂಡವಾಳ ಹೂಡಿ ಪರಿಶ್ರಮ ನೀಟ್ ಅಕಾಡೆಮಿ ಸ್ಥಾಪಿಸಿ, ಮೂರು ವರ್ಷದಲ್ಲಿ ನೂರಾರು ವಿದ್ಯಾರ್ಥಿಗಳು ನೀಟ್​ಗೆ ಸರ್ಕಾರಿ ಕೋಟಾದಡಿ ಆಯ್ಕೆಯಾಗುವಂತೆ ಮಾಡಿದ ಸಾಧಕ ಪ್ರದೀಪ್ ಈಶ್ವರ್​ಗೆ ಕನ್ನಡದ ನಂ.1 ದಿನಪತ್ರಿಕೆ ವಿಜಯವಾಣಿ ಮತ್ತು ದಿಗ್ವಿಜಯ ನ್ಯೂಸ್ ವಾಹಿನಿಯ ಪ್ರತಿಷ್ಠಿತ ‘ವಿಜಯರತ್ನ-2022 ’ ಪ್ರಶಸ್ತಿ ಪ್ರದಾನ ಮಾಡಲಾಯಿತು.

    ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಸಮಾರಂಭದಲ್ಲಿ ನಾಡಿನಾದ್ಯಂತ ಶಿಕ್ಷಣ, ಉದ್ಯಮ, ಆರೋಗ್ಯ, ಪರಿಸರ ಕಾಳಜಿ, ಸಮಾಜಸೇವೆ ಸೇರಿ ವಿವಿಧ ಕ್ಷೇತ್ರಗಳಲ್ಲಿ ಸಾಧನಗೈದ 40 ಸಾಧಕರಿಗೆ ವಿಜಯರತ್ನ-2022 ಪ್ರಶಸ್ತಿ ನೀಡಿ ಗೌರವಿಸಲಾಯಿತು. ಭವಿಷ್ಯದ ವೈದ್ಯರನ್ನು ರೂಪಿಸಲು ಪರಿಶ್ರಮ ನೀಟ್ ಅಕಾಡೆಮಿಯನ್ನು ಕಳೆದ 3 ವರ್ಷಗಳ ಹಿಂದೆ ಪ್ರದೀಪ್ ಸ್ಥಾಪಿಸಿದರು. ಆಗ ಅವರ ಕೈಯಲ್ಲಿ 60 ಸಾವಿರ ಹಣವಿತ್ತು. ಆ ಹಣದಿಂದಲೇ ಈ ಸಂಸ್ಥೆ ಹುಟ್ಟುಹಾಕಿದರು. ಅದು ಇವರನ್ನು ಇಷ್ಟು ದೂರದವರೆಗೂ ಕರೆದುಕೊಂಡು ಬಂದಿದೆ. 60 ವಿದ್ಯಾರ್ಥಿಗಳಿಂದ ಪ್ರಾರಂಭವಾದ ಸಂಸ್ಥೆಯಲ್ಲಿ ಈಗ 2 ಸಾವಿರ ವಿದ್ಯಾರ್ಥಿಗಳಿದ್ದಾರೆ.

    ಬೆಂಗಳೂರಿನ ಉತ್ತರಹಳ್ಳಿಯಲ್ಲಿ ಮುಖ್ಯ ಕಚೇರಿ ಇದ್ದು, ದೆಹಲಿಯಲ್ಲಿ ಪರಿಶ್ರಮ ಅಕಾಡೆಮಿಯ ಶಾಖೆ ಇದೆ. ದೆಹಲಿಯಲ್ಲಿ 600ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ. 2019ರಲ್ಲಿ 60 ಮಂದಿಗೆ ಉತ್ತಮ ಕೋಚಿಂಗ್ ನೀಡಲಾಯಿತು. ಅದರಲ್ಲಿ 48 ಮಂದಿ ನೀಟ್​ಗೆ ಸರ್ಕಾರಿ ಕೋಟಾದಡಿ ಆಯ್ಕೆಯಾದರು. 2020ರಲ್ಲಿ 130 ಮಂದಿಯಲ್ಲಿ 88 ಮಂದಿ ಆಯ್ಕೆಯಾದರು. 2021ರಲ್ಲಿ 240-220 ಆಯ್ಕೆಯಾದರು. ಈ ಆಯ್ಕೆ ಭಾರತದಲ್ಲಿಯೇ ಟಾಪ್ ಆಗಿದೆ. ಕನ್ನಡದ ಯುವಕನೊಬ್ಬ ಈ ಸಾಧನೆ ಮಾಡಿದ್ದಾರೆ ಎಂಬುದು ಹೆಮ್ಮೆ ತರುವಂಥ ವಿಷಯ.

    ಹೋರಾಟ ಮಾಡಿ ಯಶಸ್ಸು ಕಂಡವರು: ಪ್ರದೀಪ್ ಅವರ ಯಶಸ್ಸು ತುಂಬಾ ಸುಲಭವಾಗಿರಲಿಲ್ಲ. ಸಾಕಷ್ಟು ಹೋರಾಟ ಮಾಡಿ ಯಶಸ್ಸು ಕಂಡಿದ್ದಾರೆ. ಸಮಾಜಕ್ಕೆ ಒಳ್ಳೆಯದು ಮಾಡಬೇಕು ಎಂಬ ಆಶಯ ಇವರನ್ನು ಇಲ್ಲಿವರೆಗೂ ಕರೆದುಕೊಂಡು ಬಂದಿದೆ. ಇದನ್ನು ಅದೃಷ್ಟ ಅನ್ನಬೇಕೋ, ಹೋರಾಟ ಅನ್ನಬೇಕೋ, ಪರಿಶ್ರಮ ಎನ್ನಬೇಕೋ ಅದು ವಿಧಿಗೆ ಬಿಟ್ಟಿದ್ದಾಗಿದೆ. ಸೋಲಲು ಸಿದ್ಧವಾಗಿರುವವನು ಖಂಡಿತಾ ಗೆಲ್ಲುತ್ತಾನೆ. ಇನ್ಪೋಸಿಸ್ ಸಂಸ್ಥೆ ಕಟ್ಟುವಾಗ ಅದರ ಫೌಂಡರ್ ಅವರ ಶ್ರೀಮತಿಯವರ ಒಡವೆ ಅಡವಿಟ್ಟು ಸಂಸ್ಥೆ ಕಟ್ಟಿದರು. ಅಂದು ಅವರು ಭಾವುಕರಾಗಿದ್ದರೆ ಇಂದು ಇನ್ಪೋಸಿಸ್ ಎಂಬ ದೊಡ್ಡ ಸಂಸ್ಥೆ ಕಟ್ಟಲು ಸಾಧ್ಯವಾಗುತ್ತಿರಲಿಲ್ಲ. ಆರಂಭದಲ್ಲಿ ನಾನು ಒಂದೊಂದು ರೂಪಾಯಿಗೂ ಕಷ್ಟಪಟ್ಟಿದ್ದೇನೆ. ಕೆಲ ಸ್ನೇಹಿತರ ಸಹಾಯ ಪಡೆದುಕೊಂಡಿದ್ದೇನೆ. ಎಲ್ಲಕ್ಕಿಂತ ಮಿಗಿಲಾಗಿ ವಿದ್ಯಾರ್ಥಿಗಳು ನನ್ನನು ನಂಬಿ ಬಂದರು ಎಂದು ತಮ್ಮ ಸಂಸ್ಥೆಯ ಆರಂಭ ದಿನಗಳ ಬಗ್ಗೆ ಪ್ರದೀಪ್ ಮೆಲುಕು ಹಾಕುತ್ತಾರೆ.

    ಐಎಎಸ್ ಆಗುವ ಕನಸು ಕಂಡಿದರು: ಪ್ರದೀಪ್ ಮೊದಲು ಉಪನ್ಯಾಸಕರಾಗಿದ್ದರು. ಚಿಕ್ಕಬಳ್ಳಾಪುರದಲ್ಲಿ ಹೊಸದಾಗಿ ಕೋಚಿಂಗ್ ಸೆಂಟರ್ ಪ್ರಾರಂಭವಾಗಿತ್ತು. ಬೆಳಗ್ಗೆ ಮತ್ತು ಸಂಜೆ ಉಪನ್ಯಾಸಕರಾಗಿ ವಿದ್ಯಾರ್ಥಿಗಳಿಗೆ ಜೀವಶಾಸ್ತ್ರ ವಿಷಯ ಭೋದಿಸುತ್ತಿದ್ದರು. ಮಾಸ್ಟರ್ ಡಿಗ್ರಿ ಮಾಡುವ ಹೊತ್ತಿಗೆ 6 ಬ್ಯಾಚ್ ವಿದ್ಯಾರ್ಥಿಗಳಿಗೆ ಪಾಠ ಮಾಡಿದ್ದಾರೆ. ಐಎಎಸ್ ಆಗಬೇಕು ಎಂಬ ಕನಸು ಕಂಡು ಅದಕ್ಕೆ ಸಿದ್ಧತೆ ಕೂಡ ನಡೆಸಿದ್ದರು. ಆದರೆ, ಆ ಕ್ಷೇತ್ರಕ್ಕೆ ಬೇಕಾದ ಶ್ರಮವನ್ನು ಹಾಕಲು ಸಾಧ್ಯವಾಗಲಿಲ್ಲ. ಆದರೆ ಇಂದು ಸಾವಿರಾರು ಮಂದಿಗೆ ಜ್ಞಾನದ ಬೆಳಕನ್ನು ತೋರುವ ದಾರಿ ದೀಪವಾಗಿದ್ದಾರೆ ಎಂದರೆ ಅತಿಶಯೋಕ್ತಿಯಾಗದು.

    ಸಮಾಜಕ್ಕೆ ಸೇವೆ: 18 ಎಂಬಿಬಿಎಸ್ ವಿದ್ಯಾರ್ಥಿಗಳನ್ನು ಪ್ರದೀಪ್ ದತ್ತು ಪಡೆದು ಓದಿಸುತ್ತಿದ್ದಾರೆ. ಆ ವಿದ್ಯಾರ್ಥಿಗಳು ಬೆಂಗಳೂರು ಮತ್ತು ಮೈಸೂರು ಮೆಡಿಕಲ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಅವರ ಶುಲ್ಕ ಹಾಗೂ ಹಾಸ್ಟೆಲ್ ವೆಚ್ಚವನ್ನು ಇವರೇ ಭರಿಸುತ್ತಾರೆ. ಮಾನವೀಯ ಮೌಲ್ಯವುಳ್ಳ ಡಾಕ್ಟರ್​ಗಳನ್ನು ಕೊಡುಗೆಯಾಗಿ ನೀಡುವುದೇ ಇವರ ಪ್ರಮುಖ ಗುರಿಯಾಗಿದೆ. ಇಷ್ಟೇ ಅಲ್ಲದೆ, ಚಿಕ್ಕಬಳ್ಳಾಪುರ ಜಿಲ್ಲೆಯ ಮಂಚೇನಹಳ್ಳಿಯಲ್ಲಿ ರಾಗಿಮಾಕಲಹಳ್ಳಿಯನ್ನು ಪ್ರಾಥಮಿಕ ಸರ್ಕಾರಿ ಶಾಲೆಯನ್ನು ದತ್ತು ಪಡೆದು ಅದನ್ನು ಮಾದರಿ ಶಾಲೆಯನ್ನಾಗಿ ಅಭಿವೃದ್ಧಿಪಡಿಸಿದ್ದಾರೆ. ಇವರ ತಂದೆ-ತಾಯಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಗದೆ ಮೃತಪಟ್ಟಿದ್ದರು. ಹಾಗಾಗಿ ತಾಯಿಯ ಹೆಸರಿನಲ್ಲಿ ಮೆಡಿಕಲ್ ಕಾಲೇಜು ಮಾಡಬೇಕು, ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಬೇಕು ಎಂದುಕೊಂಡಿದ್ದಾರೆ.

    ತಂದೆ-ತಾಯಿಗಳನ್ನು ವೃದ್ಧಾಶ್ರಮಗಳಿಗೆ ತಳ್ಳಬೇಡಿ: ನಿಮ್ಮ ತಂದೆ-ತಾಯಿಯ ಒಳ್ಳೆತನ ನಿಮ್ಮನ್ನು ಗೆಲ್ಲಿಸುತ್ತೆ. ತಂದೆಗಿಂತ ದೊಡ್ಡ ಹೀರೋ ಇಲ್ಲ. ತಾಯಿಗಿಂತ ದೊಡ್ಡ ಮಾರ್ಗದರ್ಶಕರು ಸಿಗಲ್ಲ. ತಂದೆ-ತಾಯಿಯನ್ನು ನೋಯಿಸದೆ ಇರುವವರು ಜೀವನದಲ್ಲಿ ದೊಡ್ಡ ಸಾಧನೆ ಮಾಡುತ್ತಾರೆ. ಇಂದು ಎಲ್ಲ ಇದ್ದರೂ ನನ್ನ ತಂದೆ-ತಾಯಿ ನೋಡಿಕೊಳ್ಳುವ ಭಾಗ್ಯ ನನಗಿಲ್ಲ. ನಿಮ್ಮ ತಂದೆ-ತಾಯಿಯನ್ನು ವೃದ್ಧಾಶ್ರಮಗಳಿಗೆ ತಳ್ಳದೇ ಚೆನ್ನಾಗಿ ನೋಡಿಕೊಳ್ಳಿ ಎಂದು ಭಾವುಕರಾಗುತ್ತಾರೆ ಪ್ರದೀಪ್.

    ಯಾರೇ ಹೊಸ ಉದ್ಯಮ ಪ್ರಾರಂಭಿಸಿದಾಗ ಡಾ. ವಿಜಯ ಸಂಕೇಶ್ವರ ಅವರೇ ನಿಜವಾದ ಸ್ಪೂರ್ತಿಯಾಗುತ್ತಾರೆ. ನನಗೂ ಮತ್ತು ವಿಆರ್​ಎಲ್ ಸಂಸ್ಥೆಗೂ ಒಂದು ಭಾವನಾತ್ಮಕ ಸಂಬಂಧವಿದೆ. ದಿಗ್ವಿಜಯ ವಾಹಿನಿಯವರು ನನ್ನನ್ನು ಗುರುತಿಸಿ ಪ್ರತಿ ಭಾನುವಾರ ಪ್ರದೀಪ್ ಈಶ್ವರ್ ಎಂಬ ಕಾರ್ಯಕ್ರಮ ಮಾಡಲು ನನಗೊಂದು ವೇದಿಕೆ ಕೊಟ್ಟು ಕರ್ನಾಟಕ ಮನೆ ಮನಗಳನ್ನು ತಲುಪಲು ಸಹಕಾರಿಯಾಗಿದ್ದಾರೆ. ಈ ಮೂಲಕ ಎಲ್ಲರಿಗೂ ಧನ್ಯವಾದ ಅರ್ಪಿಸುತ್ತೇನೆ. ಈ ಪ್ರಶಸ್ತಿ ಸ್ವೀಕರಿಸಿರುವುದಕ್ಕೆ ಬಹಳ ಸಂತಸವಾಗಿದೆ.
    | ಪ್ರದೀಪ್ ಈಶ್ವರ್ ಪರಿಶ್ರಮ ಅಕಾಡೆಮಿ ಮುಖ್ಯಸ್ಥ

    ಪ್ರದೀಪ್ ಸರ್​ದು ನಿಸ್ವಾರ್ಥ ಸೇವೆ

    ಪ್ರದೀಪ್ ಸರ್ ಬಗ್ಗೆ ಹೇಳಲು ನನ್ನ ಬಳಿ ಪದಗಳಿಲ್ಲ. ಸಹಾಯ ಮಾಡುವ ಮನೋಭಾವ ಅವರದ್ದು, ಯಾವಾಗಲೂ ಸ್ಪೂರ್ತಿದಾಯಕವಾದ ಮಾತುಗಳನ್ನು ಆಡುತ್ತಾರೆ. ಅವರ ಅಕಾಡೆಮಿಯಲ್ಲಿ ಕೋಚಿಂಗ್​ಗೆ ಸೇರಿಕೊಂಡರೆ ಒಬ್ಬ ದಡ್ಡ ಕೂಡ ನೀಟ್ ಪಾಸ್ ಮಾಡುವ ಮಟ್ಟಿಗೆ ತರಬೇತಿ ನೀಡುತ್ತಾರೆ. ಅವರ ಸಹಾಯ ಮತ್ತು ಸಹಕಾರದಿಂದ ನನಗೆ ಪ್ರತಿಷ್ಠಿತ ಮೈಸೂರು ಮೆಡಿಕಲ್ ಕಾಲೇಜಿನಲ್ಲಿ ಸೀಟ್ ಸಿಕ್ಕಿದೆ. ಒಬ್ಬರೇ ಬೆಳೆಯಬೇಕು ಎನ್ನದೇ ಎಲ್ಲರನ್ನೂ ಬೆಳೆಸುತ್ತಾರೆ. ನಿಸ್ವಾರ್ಥ ಸೇವೆ ಮಾಡುತ್ತಾರೆ ಎಂದು ಮೈಸೂರು ಮೆಡಿಕಲ್ ಕಾಲೇಜಿನ ವಿದ್ಯಾರ್ಥಿ ಎಂ.ಕೆ. ಚಂದನ್ (ಪ್ರದೀಪ್ ಈಶ್ವರ್ ನೆರವು ನೀಡಿದ ವಿದ್ಯಾರ್ಥಿ) ಕೃತಜ್ಞತೆ ಸಲ್ಲಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts