More

    ಸಾಮಾಜಿಕ ನ್ಯಾಯ ಕೊಡಿಸುವುದು ಬಿಜೆಪಿ ಅಜೆಂಡಾ: ಕೆ.ಎಸ್.ಈಶ್ವರಪ್ಪ

    ಶಿವಮೊಗ್ಗ: ಬಿಜೆಪಿ ಎಲ್ಲ ವರ್ಗದ ಜನರ ಪಕ್ಷವಾಗಿದ್ದು, ಎಲ್ಲೂ ಜಾತಿ ನೋಡಲ್ಲ. ಸಾಮಾಜಿಕ ನ್ಯಾಯ ಕೊಡಿಸುವುದೇ ಬಿಜೆಪಿಯ ಅಜೆಂಡಾ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಹೇಳಿದರು.

    ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಗುರುವಾರ ಎಸ್‌ಸಿ ಮೋರ್ಚಾ ನೂತನ ಜಿಲ್ಲಾ ಪದಾಧಿಕಾರಿಗಳ ಪದಗ್ರಹಣ ಹಾಗೂ ಜಿಲ್ಲಾ ಕಾರ್ಯಕಾರಿಣಿ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಒಂದು ಕಾಲದಲ್ಲಿ ಬಿಜೆಪಿ ಬ್ರಾಹ್ಮಣರ ಪಕ್ಷ ಎಂದಿತ್ತು. ಆದರೆ, ಈಗ ಪಾರ್ಟಿ ವಿಶ್ವದಲ್ಲೇ ಅತಿದೊಡ್ಡ ಪಕ್ಷವಾಗಿ ಬೆಳೆದಿದ್ದು ಎಲ್ಲ ಜಾತಿ ಧರ್ಮದವರಿಗೆ ಆದ್ಯತೆ ನೀಡಿದೆ. ಆದರೆ ಕಾಂಗ್ರೆಸ್‌ನವರು ದಲಿತ, ಹಿಂದುಳಿದ, ಅಲ್ಪಸಂಖ್ಯಾತರ ಪಾರ್ಟಿ ಎಂದು ಬಿಂಬಿಸುತ್ತಾ ಸುಳ್ಳು ಹೇಳಿಕೊಂಡು ಅಧಿಕಾರಕ್ಕೆ ಬಂದಿದ್ದು ಬಿಟ್ಟರೆ ದಲಿತರ ಕಲ್ಯಾಣಕ್ಕೆ ಏನೂ ಮಾಡಿಲ್ಲ ಎಂದು ಕಿಡಿಕಾರಿದರು.
    ದಲಿತರ ಮೀಸಲಿಟ್ಟ ಹಣವನ್ನು ಕಾಂಗ್ರೆಸ್ ಗ್ಯಾರಂಟಿಗೆ ವಿನಿಯೋಗಿಸಿ ಅಭಿವೃದ್ಧಿ ಕಾರ್ಯಗಳು ನನೆಗುದಿಗೆ ಬಿದ್ದು ಸಾಮಾಜಿಕ ನ್ಯಾಯಕ್ಕೆ ಕಾಂಗ್ರೆಸ್ ಅನ್ಯಾಯ ಮಾಡಿದೆ ಎಂದು ಟೀಕಿಸಿದ ಈಶ್ವರಪ್ಪ, ಸ್ವಾತಂತ್ರ್ಯ ಬಂದಾಗಿನಿಂದ ದಲಿತರ ಕೇರಿಗಳ ಉದ್ಧಾರ ಆಗಿದೆಯಾ? ಮೂಲ ಸೌಕರ್ಯ ಕಲ್ಪಿಸಿದ್ದು ಯಾರು ಎಂದು ದಲಿತ ಬಂಧುಗಳು ಚಿಂತಿಸಬೇಕು. ಎಸ್‌ಸಿ ಮೋರ್ಚಾ ಕೇಂದ್ರ ಮತ್ತು ರಾಜ್ಯದ ಬಿಜೆಪಿ ಸರ್ಕಾರಗಳು ದಲಿತರಿಗೆ ನೀಡಿದ ಸೌಲಭ್ಯಗಳನ್ನು ಮನೆ ಮನೆಗೆ ತೆರಳಿ ಮನದಟ್ಟು ಮಾಡಿಸಬೇಕು ಎಂದು ಹೇಳಿದರು.
    ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಮಾಜಿ ಶಾಸಕ ಕೆ.ಜಿ.ಕುಮಾರಸ್ವಾಮಿ, ಎಸ್‌ಸಿ ಮೋರ್ಚಾದ ಜಿಲ್ಲಾಧ್ಯಕ್ಷ ರಾಮ ನಾಯ್ಕ ಕೋಹಳ್ಳಿ, ಮಾಜಿ ಮೇಯರ್ ಶಿವಕುಮಾರ್, ಪ್ರಮುಖರಾದ ಶಿವರಾಜ್, ವೀರಭದ್ರಪ್ಪ ಪೂಜಾರ್, ಬಸವರಾಜಪ್ಪ, ದೇವರಾಜ ನಾಯ್ಕ ಮಹದೇವಪ್ಪ, ವಿನ್ಸೆಂಟ್ ರೋಡ್ರಿಗಸ್, ರಾಜು, ಮೂರ್ತಿ, ಎಚ್.ಎನ್.ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts