More

    ಸಾಮಾಜಿಕ ಅವಾಂತರಕ್ಕೆ ಡ್ರೋಣ್ ಕಣ್ಗಾವಲು

    ಬೆಳಗಾವಿ: ‘ಲಾಕ್‌ಡೌನ್ ಮುಗಿಯುವವರೆಗೂ ಕಡ್ಡಾಯವಾಗಿ ಮನೆಯಲ್ಲಿರಿ’ ಎಂಬ ಆದೇಶ ಧಿಕ್ಕರಿಸಿ ರಸ್ತೆಗೆ ಇಳಿಯುವವರ ಸಂಖ್ಯೆ ಜಾಸ್ತಿಯಾಗುತ್ತಲೇ ಇದೆ. ಹೀಗಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳದವರ ವಿರುದ್ಧ ಕಾನೂನು ಕ್ರಮ ಜರುಗಿಸಲು ನಗರ ಪೊಲೀಸರು ಡ್ರೋಣ್ ಕ್ಯಾಮರಾ ಕಾರ್ಯಾಚರಣೆಗೆ ಇಳಿದಿದ್ದಾರೆ.

    ಅಗತ್ಯ ವಸ್ತು ಮತ್ತು ತುರ್ತು ಸೇವೆಗೆ ಮಾತ್ರ ಹೊರಗೆ ಬರುವಂತೆ ಸೂಚನೆ ನೀಡಿದ್ದರಿಂದ ಅದೇ ನೆಪವೊಡ್ಡಿ ಅನಗತ್ಯವಾಗಿ ಅನೇಕರು ರಸ್ತೆಗೆ ಇಳಿಯುತ್ತಿದ್ದಾರೆ. ಜನರ ಓಡಾಟಕ್ಕೆ ಜಿಲ್ಲಾಡಳಿತ ನಿರ್ಬಂಧ ಹೇರಿದ್ದರೂ ದಿನ ಕಳೆದಂತೆ ವಾಹನಗಳ ಓಡಾಟ ಹೆಚ್ಚುತ್ತಿದೆ. ಹೀಗಾಗಿ ಅನಗತ್ಯವಾಗಿ ಅಲೆದಾಡುವವರ ವಿರುದ್ಧ ಪೊಲೀಸರು ಲಾಠಿ ಬೀಸುವುದರ ಜತೆಗೆ ಪ್ರಾರ್ಥನೆ ಹೆಸರಲ್ಲಿ ಮನೆಯ ಆವರಣ ಹಾಗೂ ಟೆರೇಸ್ ಮೇಲೆ ಗುಂಪುಗೂಡುವುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುತ್ತಿದ್ದಾರೆ.

    ಪೊಲೀಸರಿಗೆ ತಲೆನೋವು: ಕರೊನಾ ವೈರಸ್ ಜಿಲ್ಲೆಯಲ್ಲಿ ಎರಡಂಕಿ ದಾಟಿದ್ದು, ಬೆಳಗಾವಿ ನಗರದಲ್ಲಿಯೇ ಮೂವರಲ್ಲಿ ಇರುವುದು ದೃಢಪಟ್ಟಿದೆ. ಕಳೆದ ಶುಕ್ರವಾರ ನಗರದಲ್ಲಿನ ಮೊದಲು ಸೋಂಕು ದೃಢಪಟ್ಟ ಪ್ರಕರಣದ ನಂತರದ ಒಂದೆರಡು ದಿನ ರಸ್ತೆಯಲ್ಲಿ ಯಾವುದೇ ವಾಹನ ಕಾಣಸಿಗುತ್ತಿರಲಿಲ್ಲ. ಆದರೆ, ಸದ್ಯ ಹೆದ್ದಾರಿ ಹಾಗೂ ಒಳ ರಸ್ತೆಗಳಲ್ಲೂ ವಾಹನಗಳ ಓಡಾಟ ಹೆಚ್ಚಾಗಿದೆ. ಹಳ್ಳಿಗಳಿಂದ ನಗರಕ್ಕೆ ಬಂದು ಹೋಗುವವರ ಸಂಖ್ಯೆಯೂ ಹೆಚ್ಚುತ್ತಲೇ ಇತ್ತು. ಲಾಠಿ ಬೀಸಿದ್ದಾಯ್ತು, ಕೇಸ್ ದಾಖಲಿಸಿದ್ದಾಯ್ತು. ಎಷ್ಟೇ ತಿಳಿವಳಿಕೆ ನೀಡಿದರೂ ಸುರಕ್ಷತೆ ವಹಿಸದಿರುವ ಜನತೆಯ ವರ್ತನೆ ಪೊಲೀಸರಿಗೆ ತಲೆನೋವು ತಂದಿದೆ.

    ಗಲ್ಲಿಗಲ್ಲಿಯಲ್ಲೂ ಅಲರ್ಟ್: ಅನಗತ್ಯವಾಗಿ ಸಂಚರಿಸುವ ಪ್ರತಿಯೊಬ್ಬರ ವಿರುದ್ಧವೂ ಕ್ರಮ ಜರುಗಿಸುವಷ್ಟು ಹಾಗೂ ನಗರದ ಎಲ್ಲ ಗಲ್ಲಿಗಲ್ಲಿಯಲ್ಲಿಯೂ ಖುದ್ದು ಹಾಜರಿದ್ದು ನಿಗಾ ವಹಿಸುವಷ್ಟು ಸಿಬ್ಬಂದಿ ಪೊಲೀಸ್ ಇಲಾಖೆಯಲ್ಲಿಲ್ಲ. ಆದರೆ, ಪ್ರತಿ ಬಡಾವಣೆಯಲ್ಲಿಯೂ ಸಾಮಾಜಿಕ ಅಂತರ ಉಲ್ಲಂಘಿಸುವವರ ವಿರುದ್ಧ ಕ್ರಮಕ್ಕಾಗಿ ದಿನದ 24 ಗಂಟೆಯೂ ನಿಗಾವಹಿಸಲು ನಗರದಲ್ಲಿ ಕಳೆದ ಎರಡ್ಮೂರು ದಿನಗಳಲ್ಲಿ ನೂತನವಾಗಿ 150 ಸಿಸಿ ಕ್ಯಾಮರಾ ಅಳವಡಿಸಲಾಗಿದೆ.

    ಕಾನೂನು ಕ್ರಮ: ಈಗಾಗಲೇ ನಗರದ ಪ್ರಮುಖ ಸ್ಥಳಗಳಲ್ಲಿ ಅಳವಡಿಸಿದ್ದ 100ಕ್ಕೂ ಅಧಿಕ ಕ್ಯಾಮರಾಗಳ ಜತೆಗೆ ನೂತನ 150 ಸಿಸಿ ಕ್ಯಾಮರಾಗಳ ದೃಶ್ಯಾವಳಿಗಳನ್ನು ಕಂಟ್ರೋಲ್ ರೂಂನಲ್ಲಿ ಸಿಬ್ಬಂದಿ ವೀಕ್ಷಿಸುತ್ತಾರೆ. ಅನುಮಾನಾಸ್ಪದ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳದ ಚಟುವಟಿಕೆ ನಡೆಯುತ್ತಿದ್ದರೆ ಆಯಾ ವ್ಯಾಪ್ತಿಯ ಠಾಣಾಧಿಕಾರಿಗಳ ಮೂಲಕ ಸಮೀಪದಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಗೆ ಮಾಹಿತಿ ನೀಡಿ ತಕ್ಷಣ ಕಾನೂನು ಕ್ರಮ ಕೈಗೊಳ್ಳುತ್ತಿದ್ದಾರೆ.

    ಮನೆಯಲ್ಲೂ ಗುಂಪು ಪ್ರಾರ್ಥನೆ!

    ಸೋಂಕು ಪತ್ತೆಯಾಗಿರುವ ಕಂಟೋನ್ಮೆಂಟ್ ವ್ಯಾಪ್ತಿಯ ಕಸಾಯಿಗಲ್ಲಿ ಹಾಗೂ ಸುತ್ತಲಿನ ಬಪರ್ ರೆನ್ ಪ್ರದೇಶ, ಖಂಜರ್ ಗಲ್ಲಿ, ನ್ಯೂ ಗಾಂಧಿ ನಗರ, ಅಜಂನಗರ, ವೈಭವ್ ನಗರ, ಅನಗೋಳ, ಖಡೇಬಜಾರ್, ದರ್ಬಾರ್ ಗಲ್ಲಿ, ಬೆಂಡಿ ಬಜಾರ್, ಪಿ.ಬಿ.ರಸ್ತೆ, ಘೀ ಗಲ್ಲಿ, ಚಾಂಧೂ ಗಲ್ಲಿ, ಕಾಕತಿವೇಸ್ ಹಾಗೂ ಕೇಂದ್ರ ಬಸ್ ನಿಲ್ದಾಣ ಸಮೀಪದ ಕಸಾಯಿಗಲ್ಲಿ ಸೇರಿ ಹಲವು ಪ್ರದೇಶಗಳಲ್ಲಿನ ಜನ ದಿನಕ್ಕೆ ಮೂರು ಬಾರಿ ನಮಾಜ್ ಸಮಯದಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳದೆ ಗುಂಪುಗೂಡಿ ಪ್ರಾರ್ಥನೆ ಮಾಡುತ್ತಿದ್ದಾರೆ. ಹೀಗಾಗಿ ಮುನ್ನೆಚ್ಚರಿಕೆಯಾಗಿ ಆಯಾ ಠಾಣಾ ವ್ಯಾಪ್ತಿಯ ಠಾಣಾಧಿಕಾರಿಗಳು ಡ್ರೋಣ್ ಕ್ಯಾಮರಾ ಮೂಲಕ ನಿವಾಸಿಗಳ ಚಟುವಟಿಕೆ ಮೇಲೆ ನಿಗಾ ವಹಿಸಲು ಮುಂದಾಗಿದ್ದಾರೆ. ನಗರದಲ್ಲಿ ಪ್ರಥಮವಾಗಿ ಮಾಳಮಾರುತಿ ಠಾಣೆಯ ಸಿಪಿಐ ಬಿ.ಆರ್. ಗಡ್ಡೇಕರ್ ಅವರು ಗುರುವಾರ ಮಧ್ಯಾಹ್ನ ಡ್ರೋಣ್ ಕ್ಯಾಮರಾ ಬಳಸಿ ಕಾರ್ಯಾಚರಣೆ ನಡೆಸಿದ್ದಾರೆ.

    ನಗರದಲ್ಲಿ ನೂತನವಾಗಿ 150 ಸಿಸಿ ಕ್ಯಾಮರಾ ಅಳವಡಿಸಿ, 24್ಡ7 ನಿಗಾ ಇಡಲಾಗಿದೆ. ಸ್ಥಳೀಯರು ಸುರಕ್ಷತೆಯ ಅಂತರ ಕಾಪಾಡುತ್ತಿಲ್ಲ ಎಂದು ಯಾವುದೇ ಬಡಾವಣೆಯ ಜನರು ನಮಗೆ ಮಾಹಿತಿ ನೀಡಿದರೆ, ಅಗತ್ಯವಾಗಿ ಆ ಪ್ರದೇಶಗಳಲ್ಲಿಯೂ ಕ್ಯಾಮರಾ ಅಳವಡಿಸಿ ಎಚ್ಚರವಹಿಸಲು ಸಿದ್ಧರಿದ್ದೇವೆ. ಸಿಬ್ಬಂದಿ ಕಣ್ತಪ್ಪಿಸಿ ಅಲೆದಾಡುವ ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳದವರನ್ನು ಗುರುತಿಸಿ ಕಠಿಣ ಕ್ರಮ ಜರುಗಿಸುತ್ತೇವೆ.
    | ಬಿ.ಎಸ್. ಲೋಕೇಶಕುಮಾರ್ ನಗರ ಪೊಲೀಸ್ ಆಯುಕ್ತ

    | ರವಿ ಗೋಸಾವಿ ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts