More

    ಎಡವಟ್ಟು ಮಾರ್ಗಸೂಚಿ ಫಜೀತಿ: ಪೊಲೀಸರಿಗೆ ಲಾಠಿ ಪ್ರಹಾರವಷ್ಟೇ ಪರಿಹಾರ, ಸ್ಪಷ್ಟತೆ ಸಿಗದ ವಿನಾಯಿತಿ

    | ಶ್ರೀಕಾಂತ್ ಶೇಷಾದ್ರಿ ಬೆಂಗಳೂರು

    ಕರೊನಾ ಸರಪಳಿ ತಂಡರಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಜಾರಿ ಮಾಡಿರುವ ಲಾಕ್​ಡೌನ್​ನ ಮೊದಲ ದಿನವೇ ರಾಜ್ಯದಲ್ಲಿ ಎಡವಟ್ಟುಗಳ ಸರಣಿ ಘಟನೆಗಳು ನಡೆದವು. ಮಾರ್ಗಸೂಚಿಯಲ್ಲಿ ಸ್ಪಷ್ಟತೆ ಇಲ್ಲದಿರುವ ಪರಿಣಾಮ ಪೊಲೀಸರು ಸೋಮವಾರ ಇಡೀ ದಿನ ಸಿಕ್ಕಸಿಕ್ಕವರ ಮೇಲೆ ಲಾಠಿ ಪ್ರಹಾರ ನಡೆಸಿದ್ದನ್ನು ಬಿಟ್ಟರೆ ಯಾರ್ಯಾರಿಗೆ ವಿನಾಯಿತಿ ನೀಡುತ್ತೇವೆಂದು ಹೇಳಲಾಗಿತ್ತೋ ಅವರಿಗೂ ರಸ್ತೆಗಿಳಿಯದ ಪರಿಸ್ಥಿತಿ ನಿರ್ವಣವಾಗಿತ್ತು. ಜನರಿಗೆ ಸುಲಭವಾಗಿ ತಿಳಿಹೇಳುವಂತೆ ಮಾರ್ಗಸೂಚಿ ಪ್ರಕಟಿಸುವಲ್ಲಿನ ಅಧಿಕಾರಿಗಳ ವೈಫಲ್ಯತೆಯಿಂದಾಗಿ ರಾಜ್ಯದ ಬಹುತೇಕ ಕಡೆ ಜನರು ತೀವ್ರ ಸಮಸ್ಯೆ ಎದುರಿಸುವಂತಾಗಿದೆ.

    ಸರಳವಿಲ್ಲ, ಗೊಂದಲವೇ ಎಲ್ಲ: ಪ್ರಮುಖವಾಗಿ ಮಾರ್ಗಸೂಚಿ ಕನ್ನಡದಲ್ಲಿ ಪ್ರಕಟಿಸುವುದೇ ಇಲ್ಲ. ತಾಂತ್ರಿಕ ಕಾರಣ ನೆಪವೊಡ್ಡಿ ಇಂಗ್ಲಿಷ್​ನಲ್ಲಿ ಹೊರತರಲಾಗುತ್ತದೆ. ಸರ್ಕಾರಿ ಭಾಷೆ ಅರ್ಥವಾಗುವಂತಿಲ್ಲ. ಗೊಂದಲ ಇದ್ದರೆ ಯಾರನ್ನು ಕೇಳುವುದೆಂಬ ಬಗ್ಗೆಯೂ ಸ್ಪಷ್ಟತೆ ಇಲ್ಲ. ಎಲ್ಲ ಊರುಗಳಲ್ಲಿ ಇ-ಕಾಮರ್ಸ್, ಡೋಂಜೋ, ಡೋರ್ ಡೆಲಿವರಿ ವ್ಯವಸ್ಥೆ ಇರುವುದಿಲ್ಲ. ಅಂತಹ ಕಡೆ ಪರ್ಯಾಯ ವ್ಯವಸ್ಥೆ ಏನೆಂಬ ಬಗ್ಗೆ ಮಾರ್ಗಸೂಚಿಯಲ್ಲಿ ಮಾಹಿತಿ ಇಲ್ಲ. ಪಾಸ್ ನೀಡುವುದರಿಂದ ದುರುಪಯೋಗವಾಗುತ್ತದೆ ಎಂದು ಸರ್ಕಾರ ಹೇಳುತ್ತದೆ, ಹಾಗಿದ್ದರೆ ಆಕಸ್ಮಿಕವಾಗಿ ಎದುರಾಗುವ ಸಮಸ್ಯೆಗೆ ಪರಿಹಾರ ಯಾರಲ್ಲಿ ಕಂಡು ಕೊಳ್ಳಬೇಕೆಂಬ ಸ್ಪಷ್ಟತೆಯನ್ನಾದರೂ ನೀಡಬೇಕಾಗುತ್ತದೆ. ಕೆಲ ಪ್ರಕರಣದಲ್ಲಿ ಪರ ಊರಿನಲ್ಲಿರುವ ಅನಾರೋಗ್ಯಪೀಡಿತ ವಯೋವೃದ್ಧ ಪಾಲಕರನ್ನು ಭೇಟಿ ಮಾಡುವ ಜರೂರತ್ತು ಎದುರಾದಾಗ ವಾಹನ ಸಂಚಾರ ಹೇಗೆ? ಯಾರಲ್ಲಿ ಅನುಮತಿ ಪಡೆಯಬೇಕು ಎಂದು ಕೇಳುವ ಅವಕಾಶವನ್ನೂ ಸರ್ಕಾರ ನೀಡಿಲ್ಲ.

    ವಾಹನ ಬಳಕೆಗೆ ಅವಕಾಶ: ದಿನಸಿ, ತರಕಾರಿ ಸೇರಿ ಅಗತ್ಯ ವಸ್ತು ಖರೀದಿಸಲು ವಾಹನಗಳ ಬಳಕೆ ಮೇಲೆ ವಿಧಿಸಿದ್ದ ನಿರ್ಬಂಧವನ್ನು ಪೊಲೀಸ್ ಇಲಾಖೆ ತೆರವುಗೊಳಿಸಿದೆ. ನಗರ ಪ್ರದೇಶದಲ್ಲಿ ನೆರೆಯ ಅಂಗಡಿಗಳಿಗೆ ತೆರಳಲು ಹಾಗೂ ಗ್ರಾಮೀಣ ಪ್ರದೇಶದಲ್ಲಿ ಸನಿಹದಲ್ಲಿ ವಸ್ತುಗಳು ಲಭ್ಯವಿರುವವರೆಗೆ ವಾಹನಗಳಲ್ಲಿ ತೆರಳಬಹುದು ಎಂದು ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ತಿಳಿಸಿದ್ದಾರೆ. ಇದೇ ವೇಳೆ, ಈ ಸೌಲಭ್ಯವನ್ನು ವಿವೇಚನೆಯಿಂದ ಬಳಸ ಬೇಕೆ ವಿನಹ ಎಲ್ಲೆಂದರಲ್ಲಿ ಓಡಾಡಲು ಪರವಾನಗಿ ಎಂದು ತಿಳಿಯಬಾರದು ಎಂಬ ಎಚ್ಚರಿಕೆಯನ್ನೂ ನೀಡಿದ್ದಾರೆ.

    ಹಾಸ್ಯಾಸ್ಪದವಾಯ್ತು ಆದೇಶ: ರಾಜ್ಯ ಸರ್ಕಾರದ ಮಾರ್ಗಸೂಚಿ ಕಳೆದ 2-3 ದಿನಗಳಿಂದಲೂ ಸಾಮಾಜಿಕ ಜಾಲತಾಣದಲ್ಲಿ ಗರಿಷ್ಠ ಮಟ್ಟದಲ್ಲಿ ಟ್ರೋಲ್ ಆಗಿದೆ. ಹಾಸ್ಯದ ವಿಷಯವಾಗಿ ಮಾರ್ಪಟ್ಟಿದ್ದು, ಅಧಿಕಾರಿಗಳ ಅಸ್ಪಷ್ಟ ತೀರ್ವನದಿಂದ ಮುಖ್ಯಮಂತ್ರಿ ಟೀಕೆಗೆ ಗುರಿಯಾಗಿದ್ದಾರೆ.

    ಸಹಕಾರ ಕೆಲವೆಡೆ ಪ್ರಹಾರ: ಸೋಮವಾರ ಆರಂಭಗೊಂಡ ಲಾಕ್​ಡೌನ್​ಗೆ ರಾಜ್ಯಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆದರೆ ಮಾರ್ಗಸೂಚಿಯಲ್ಲಿ ಹೇಳಿದ್ದೊಂದು ಮಾಡಿದ್ದೊಂದು ಎಂಬ ಆರೋಪ ಪೊಲೀಸರ ವಿರುದ್ಧ ವ್ಯಕ್ತವಾಗಿದೆ. 10 ಗಂಟೆಯವರೆಗೆ ಅಂಗಡಿಗಳಿಗೆ ತೆರಳಲು ಅವಕಾಶ ಇತ್ತಾದರೂ ಹಲವೆಡೆ ಪೊಲೀಸರು ತಡೆದಿದ್ದಾರೆ. ರೈತರು, ವರ್ತಕರಿಗೂ ಮನೆಯಿಂದ ಹೊರಹೋಗುವುದಕ್ಕೆ ಅವಕಾಶ ನೀಡಲಾಗಿಲ್ಲ. ಕೆಲವರಿಗೆ ಕಚೇರಿಗೆ ತೆರಳಲು ಅನುಮತಿ ಇದ್ದರೂ ಪೊಲೀಸರ ಲಾಠಿ ಏಟು ತಿಂದಿದ್ದಾರೆ. ಆಸ್ಪತ್ರೆಗೆ ಹೊರಟಿದ್ದ ವಾಹನಗಳನ್ನು ತಡೆದು ನಿಲ್ಲಿಸಿದ್ದರಿಂದ ತೊಂದರೆ ಆಗಿದೆ.

    ಲಾಠಿ ಬೀಸಬೇಡಿ ಎಂದ ಸಿಎಂ: ಜನರ ಮೇಲೆ ಲಾಠಿ ಪ್ರಯೋಗಿಸಬೇಡಿ. ಕೆಲವು ಕಡೆ ಪೊಲೀಸರು ಲಾಠಿ ಬೀಸಿದ್ದಾರೆ. ಮಾಧ್ಯಮಗಳಲ್ಲಿ ಇದೇ ದೊಡ್ಡ ಮಟ್ಟದ ಸುದ್ದಿಯಾಗುತ್ತಿದೆ. ಪುಂಡಪೋಕರಿಗಳ ಮೆಲೆ ಕೇಸು ಹಾಕಿ. ಆದರೆ, ಅನಗತ್ಯವಾಗಿ ಜನರ ಮೇಲೆ ಕೈಮಾಡಬೇಡಿ. ನೀವು ಯಾವ ಉದ್ದೇಶಕ್ಕೆ ಲಾಠಿ ಬೀಸಿದರೂ ಅದು ತಪ್ಪೇ. ನಿಮ್ಮ ಎಲ್ಲ ಅಧಿಕಾರಿಗಳಿಗೆ ಇದನ್ನು ತಿಳಿಸಿ ಎಂದು ಪೊಲೀಸ್ ಮಾಹಾ ನಿರ್ದೇಶಕರಿಗೆ ಸಿಎಂ ಯಡಿಯೂರಪ್ಪ ಸ್ಪಷ್ಟ ಸೂಚನೆ ನೀಡಿದ್ದಾರೆ.

    ಅಗತ್ಯ ವಸ್ತು ಮಾತ್ರ ಹೋಮ್ ಡೆಲಿವರಿ

    ಬೆಂಗಳೂರು: ಲಾಕ್​ಡೌನ್ ಸಮಯದಲ್ಲಿ ಇ-ಕಾಮರ್ಸ್ ಮತ್ತು ಹೋಂ ಡೆಲಿವರಿ ಮೂಲಕ ಅಗತ್ಯ ವಸ್ತು ಮಾತ್ರ ಪೂರೈಸಬಹುದೆಂಬ ಸರ್ಕಾರದ ಪರಿಷ್ಕೃತ ಆದೇಶ ಇ-ಕಾಮರ್ಸ್ ಉದ್ಯಮವನ್ನು ತಬ್ಬಿಬ್ಬು ಮಾಡಿದೆ. ಹೀಗಾಗಿ ಸರ್ಕಾರದ ಮೇಲೆ ಒತ್ತಡ ಹೇರಲು ಈ ಕ್ಷೇತ್ರದವರು ನಿರ್ಧರಿಸಿದ್ದಾರೆ. ಲಾಕ್​ಡೌನ್ ಮಾರ್ಗಸೂಚಿಯಲ್ಲಿ ಇ-ಕಾಮರ್ಸ್ ಮೂಲಕ ಯಾವುದೇ ವಸ್ತುವನ್ನು ಡೋರ್ ಡೆಲಿವರಿ ಮಾಡಲು ಅವಕಾಶ ನೀಡಲಾಗಿತ್ತು. ಆದರೆ, ಭಾನುವಾರ ತಡರಾತ್ರಿ ಹೊರಡಿಸಿದ ಮಾರ್ಗಸೂಚಿಯಲ್ಲಿ ಸರ್ಕಾರ ತನ್ನ ನಿರ್ಧಾರ ಬದಲಿಸಿದೆ. ಇಡೀ ಐಟಿ ಕ್ಷೇತ್ರ ಮನೆಯಿಂದ ಕೆಲಸ ಮಾಡುತ್ತಿದ್ದು, ಅವರಿಗೆ ಅಗತ್ಯವಾದ ಕೇಬಲ್, ಮೌಸ್, ಮಾನಿಟರ್ ಸೇರಿ ಯಾವುದೇ ವಸ್ತು ಕೆಟ್ಟರೂ ಸಿಗದಂತಾಗಲಿದೆ. ಮೊಬೈಲ್ ಕೆಟ್ಟಿತೆಂದರೂ ರಿಪೇರಿ ಮಾಡಿಕೊಳ್ಳಲು ಅವಕಾಶವಿಲ್ಲ. ಸರ್ಕಾರದ ಒಂದು ತೀರ್ವನದಿಂದ ಮನೆಯಲ್ಲಿ ಕೆಲಸ ಮಾಡುವ ಅನೇಕರಿಗೆ ಸಮಸ್ಯೆ ಎದುರಾಗಬಹುದು ಎಂದು ಹೇಳಲಾಗುತ್ತಿದೆ. ಹೀಗಾಗಿ ಕೈಗಾರಿಕಾ ಮತ್ತು ವಾಣಿಜ್ಯ ಒಕ್ಕೂಟದ ಮೂಲಕ ಸರ್ಕಾರದ ಗಮನಸೆಳೆಯುವ ಪ್ರಯತ್ನ ನಡೆದಿದೆ.

    ಹಿಂಸೆ ಕೊಡುವುದು ನಮ್ಮ ಉದ್ದೇಶವಲ್ಲ. ಲಾಠಿ ಪ್ರಯೋಗ ಬೇಡ ಎಂದು ಈಗಾಗಲೇ ಪೊಲೀಸ್ ಆಯುಕ್ತರು ಹೇಳಿದ್ದಾರೆ. ವಾಹನ ಮುಟ್ಟುಗೋಲು ಸೇರಿದಂತೆ ಬೇರೆ ಕಾನೂನಾತ್ಮಕ ಕ್ರಮ ತೆಗೆದುಕೊಂಡು ಅನಗತ್ಯವಾಗಿ ಓಡಾಡುವವರನ್ನು ನಿಯಂತ್ರಿಸಲಾಗುವುದು.

    | ಬಸವರಾಜ ಬೊಮ್ಮಾಯಿ ಗೃಹ ಸಚಿವ

    ವೈಫಲ್ಯತೆಗೆ ನಿದರ್ಶನ

    • ಗೊಬ್ಬರ ತರಲು ಹೊರಟ ರೈತನ ವಾಹನವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಅಷ್ಟೇ ಅಲ್ಲ ರೈತನಿಗೆ ಮೈತುಂಬಾ ಲಾಠಿ ಏಟಿನ ಬಳುವಳಿ ಸಿಕ್ಕಿದೆ. ರೈತನ ಪ್ರಕಾರ, ಕೃಷಿ ಚಟುವಟಿಕೆಗೆ ಮುಕ್ತ ಅವಕಾಶವಿದೆ, ಕೃಷಿ ಪರಿಕರ ಮಾರಾಟಕ್ಕೂ ಅವಕಾಶ ಇದೆ. ಪೊಲೀಸರಿಗೆ ಈ ವಿಷಯ ಅರ್ಥ ಮಾಡಿಸುವುದು ಯಾರು?
    • ಕಿರಾಣಿ ಅಂಗಡಿ ಮಾಲೀಕನೊಬ್ಬ ಅಗತ್ಯ ವಸ್ತು ತರಿಸಿಕೊಳ್ಳಲು ಬ್ಯಾಂಕ್​ಗೆ ತೆರಳಿ ಹಣ ಜಮೆ ಮಾಡಬೇಕು, ಆದರೆ ಪೊಲೀಸರು ಬ್ಯಾಂಕ್​ಗೆ ತೆರಳಲು ಅವಕಾಶ ಕೊಡಲ್ಲ. ಬ್ಯಾಂಕ್ ತೆರೆದಿರಬೇಕು ಎಂದು ಆದೇಶಿಸುವ ಸರ್ಕಾರ, ಬ್ಯಾಂಕ್​ಗೆ ತೆರಳುವವರಿಗೆ ಅವಕಾಶ ನೀಡದಿರುವುದು ಏಕೆ?
    • ನಗರ ಪ್ರದೇಶದಲ್ಲಿ ಅಗತ್ಯ ವಸ್ತು ಖರೀದಿಗೆ ವಾಹನ ಬಳಸುವಂತಿಲ್ಲ, ಮನೆ ಬಳಿಯಲ್ಲೇ ಖರೀದಿಸಬೇಕು ಎಂಬ ನಿಯಮ ಸರಿ. ಆದರೆ ಹೊರವಲಯದಲ್ಲಿರುವವರು, ಗ್ರಾಮೀಣ ಭಾಗದಲ್ಲಿರುವವರು ಕಿಲೋಮೀಟರ್ ಗಟ್ಟಲೆ ನಡೆದುಕೊಂಡು ಬರಬೇಕೆ ಎಂಬ ಪ್ರಶ್ನೆಗೆ ಅಧಿಕಾರಿಗಳಲ್ಲಿ ಉತ್ತರವಿಲ್ಲ.
    • ಆಹಾರ ಸಂಸ್ಕರಣಾ ಘಟಕ ನಡೆಸಲು ಮಾರ್ಗಸೂಚಿ ಪ್ರಕಾರ ಅವಕಾಶವಿದೆ. ಆದರೆ ಅಲ್ಲಿ ಕೆಲಸಗಾರರಿಗೆ ವಸತಿ ವ್ಯವಸ್ಥೆ ಮಾಡಲು ಸ್ಥಳಾವಕಾಶ ಇಲ್ಲ. ಅವರನ್ನು ಕರೆತರಲು ವಾಹನ ವ್ಯವಸ್ಥೆ ಮಾಡಿಕೊಳ್ಳಬಹುದೇ ಎಂಬುದಕ್ಕೆ ಯಾವ ಹಂತದ ಅಧಿಕಾರಿಗಳಲ್ಲೂ ಮಾಹಿತಿ ಇಲ್ಲ.
    • ವೃದ್ಧರು, ಅಶಕ್ತರು ಅಗತ್ಯ ವಸ್ತು ಖರೀದಿಗೆ ವಾಹನದಲ್ಲಿ ಹೋಗಿಬರಲು ರಿಯಾಯಿತಿ ಇದೆಯೇ ಎಂಬ ಬಗ್ಗೆಯೂ ಸ್ಪಷ್ಟತೆ ಇಲ್ಲ.
    • ಎಲ್ಲರ ಮನೆ ಪಕ್ಕದಲ್ಲೇ ಅಂಗಡಿ ಇರುವುದಿಲ್ಲ.
    • ಮನೆಗೆ ಅಗತ್ಯ ವಸ್ತು ಖರೀದಿಸಿ, ಅದನ್ನು ತೆಗೆದುಕೊಂಡು ಹೋಗುವುದು ಹೇಗೆ?
    • ಕಟ್ಟಡ ಕಾರ್ವಿುಕರಿಗೆ ನಿರ್ಮಾಣ ಸ್ಥಳದಲ್ಲಿ ಕೆಲಸ ಮಾಡಲು ಅವಕಾಶವಿದೆ. ಆದರೆ ಇಂಜಿನಿಯರ್​ಗಳು, ಮೇಸ್ತ್ರಿಗಳು, ಇತರ ಕೆಲಸ ಮಾಡುವವರು ಸ್ಥಳಕ್ಕೆ ಹೋಗುವುದು ಹೇಗೆ? ಸಾಮಗ್ರಿ ತರಲು ವಾಹನ ಬಿಡು ತ್ತಿಲ್ಲ. ಹೀಗಾದರೆ ಕೆಲಸ ಮುಂದುವರಿಸುವುದು ಹೇಗೆ?

    ಸೋಂಕಿತ ಹಿಂದು ವೃದ್ಧೆಯ ಶವಸಂಸ್ಕಾರಕ್ಕೆ ಹಿಂಜರಿದ ಸಂಬಂಧಿಕರು; ಕೊನೆಗೆ ಮುಸ್ಲಿಂ ಯುವಕರಿಂದ ಅಂತಿಮಸಂಸ್ಕಾರ

    ಕರೊನಾ ಸೋಂಕಿಗೆ ಹೆದರಿ ಇಬ್ಬರು ಮಹಿಳೆಯರು ಆತ್ಮಹತ್ಯೆ; ಒಬ್ಬರು ನೇಣು ಹಾಕಿಕೊಂಡರೆ, ಇನ್ನೊಬ್ಬರು ಗುಂಡಿಗೆ ಹಾರಿದ್ರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts