More

    ಸ್ನೇಹದೊಂದಿಗೆ ಪಕ್ಷ ಸಂಘಟನೆ ಸವಾಲು : ರಾಮನಗರ ಜಿಲ್ಲೆಯಲ್ಲಿ ಜೆಡಿಎಸ್ ಪ್ರಾಬಲ್ಯ ಮುರಿಯುವರೇ ಡಿ.ಕೆ.ಶಿವಕುಮಾರ್?

    ರಾಮನಗರ: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಎದುರಾಳಿ ಭಾರತೀಯ ಜನತಾ ಪಾರ್ಟಿ, ಆದರೆ ರಾಮನಗರ ಜಿಲ್ಲೆಯ ವಿಚಾರಕ್ಕೆ ಬಂದರೆ ಜೆಡಿಎಸ್ ಪ್ರಬಲ ಪೈಪೋಟಿ ನೀಡುವ ಪಕ್ಷ. ನೂತನ ಕೆಪಿಸಿಸಿ ಅಧ್ಯಕ್ಷ ಕನಕಪುರದ ಬಂಡೆಗೆ ಜಿಲ್ಲೆಯಲ್ಲಿ ಈಗ ಜೆಡಿಎಸ್ ಪ್ರಾಬಲ್ಯವನ್ನು ಮೆಟ್ಟಿನಿಂತು ಪಕ್ಷವನ್ನು ಸಂಘಟಿಸಬೇಕಾದ ಸವಾಲು ಎದುರಾಗಿದೆ.

    ಮೈತ್ರಿ ಮುಂದುವರಿಯುವುದೇ?: ಸದ್ಯದ ಮಟ್ಟಿಗೆ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಮೈತ್ರಿ ಮುರಿದು ಬಿದ್ದಿದೆ. ಆದರೆ ಡಿ.ಕೆ.ಶಿವಕುಮಾರ್ ಮತ್ತು ಎಚ್.ಡಿ.ಕುಮಾರಸ್ವಾಮಿ ಅವರ ನಡುವಿನ ಸ್ನೇಹ ಹಿಂದಿಗಿಂತಲೂ ಮತ್ತಷ್ಟು ದೊಡ್ಡದಾಗಿದೆ. ಆದರೆ, ಇದೇ ಸ್ನೇಹಸಂಬಂಧ ಡಿ.ಕೆ.ಶಿವಕುಮಾರ್ ಅವರ ಪಾಲಿಗೆ ದೊಡ್ಡ ಸವಾಲಾಗಲಿದೆ. ಜಿಲ್ಲೆಯಲ್ಲಿ ಮೈತ್ರಿ ಮಾಡಿಕೊಳ್ಳುವುದೇ ಆದರೆ ರಾಜಕಾರಣದಲ್ಲಿ ಹೋರಾಟ ಎನ್ನುವುದೇ ಇರುವುದಿಲ್ಲ. ಆದರೆ, ಪ್ರಸ್ತುತ ಸನ್ನಿವೇಶದಲ್ಲಿ ಜೆಡಿಎಸ್ ಮುಂದಿನ ಚುನಾವಣೆಯಲ್ಲಿ ಗೆಲುವು ಸಾಧಿಸಿ ಸ್ವತಂತ್ರವಾಗಿ ಅಧಿಕಾರಕ್ಕೆ ಏರುವ ಕನಸು ಕಂಡಿದ್ದು, ಇದಕ್ಕಾಗಿ ಸಿದ್ಧತೆಯನ್ನು ಮಾಡಿಕೊಂಡಿದೆ. ಇದು ಡಿ.ಕೆ.ಶಿವಕುಮಾರ್ ಅವರ ಪಾಲಿಗೆ ನುಂಗಲಾರದ ತುತ್ತಾಗುವುದು ಗ್ಯಾರಂಟಿ.

    ಸವಾಲಿನ ಪ್ರಶ್ನೆ: ರಾಮನಗರ ಜಿಲ್ಲೆಯಾದ ನಂತರ ನಡೆದ ಮೂರು ವಿಧಾನಸಭೆ ಚುನಾವಣೆಗಳಲ್ಲಿ ಕಾಂಗ್ರೆಸ್ ಹೇಳಿಕೊಳ್ಳುವಂತಹ ಸಾಧನೆ ಮಾಡಿಲ್ಲ. ಡಿ.ಕೆ.ಶಿವಕುಮಾರ್ ಕನಕಪುರದಲ್ಲಿ ಗೆಲುವು ಸಾಧಿಸುತ್ತಾ ಬಂದಿದ್ದರೆ, ಮತ್ತೊಂದೆಡೆ ಚನ್ನಪಟ್ಟಣದಲ್ಲಿ ಸಿ.ಪಿ. ಯೋಗೇಶ್ವರ್ ಕಾಂಗ್ರೆಸ್‌ನಿಂದ ಒಮ್ಮೆ ಮಾತ್ರ ಗೆಲುವು ಸಾಧಿಸಿದ್ದಾರೆ. ಉಳಿದಂತೆ ರಾಮನಗರ ಮತ್ತು ಮಾಗಡಿಯಲ್ಲಿ ಕಾಂಗ್ರೆಸ್ ಖಾತೆ ತೆರೆಯಲು ಸಾಧ್ಯವಾಗಲೇ ಇಲ್ಲ.

    ಚನ್ನಪಟ್ಟಣದಲ್ಲಿ ಯೋಗೇಶ್ವರ್ ತಮ್ಮ ಸ್ವಂತ ಬಲದ ಮೇಲೆ ರಾಜಕಾರಣ ಮಾಡುತ್ತಿದ್ದು, ಇದೀಗ ಬಿಜೆಪಿಯಲ್ಲಿ ಗುರ್ತಿಸಿಕೊಂಡಿದ್ದಾರೆ. ಆದರೆ ಡಿ.ಕೆ. ಶಿವಕುಮಾರ್ ಅವರು ಪ್ರಭಾವ ಬಳಸಿ ಪಕ್ಷದ ಅಭ್ಯರ್ಥಿಯನ್ನು ಜಿಲ್ಲೆಯಲ್ಲಿ ಗೆಲ್ಲಿಸಿಕೊಂಡು ಬಂದ ಉದಾಹರಣೆಗಳು ಇಲ್ಲ. ಇದು ಸಹ ಮುಂದಿನ ಚುನಾವಣೆಗಳಲ್ಲಿ ಡಿ.ಕೆ.ಶಿವಕುಮಾರ್ ಅವರಿಗೆ ಸವಾಲಿನ ಪ್ರಶ್ನೆಯಾಗಿದೆ.

    ರಾಮನಗರದಲ್ಲಿ ಎಚ್‌ಡಿಕೆ ಕುಟುಂಬ ಪ್ರಾಬಲ್ಯ ಮುಂದುವರಿದಿದ್ದು, ಚನ್ನಪಟ್ಟಣದಲ್ಲಿ ಯೋಗೇಶ್ವರ್ ಮತ್ತು ಎಚ್‌ಡಿಕೆ ನಡುವೆ ಕಾಂಗ್ರೆಸ್ ಸ್ಪರ್ಧೆ ಮಾಡಿ ಗೆಲ್ಲುವುದು ಕಷ್ಟ. ಒಂದು ವೇಳೆ ಮಾಗಡಿಯಲ್ಲಿ ಗೆಲ್ಲುವ ಅವಕಾಶಗಳು ಇದ್ದರೂ ದೇವೇಗೌಡರ ಕುಟುಂಬದ ಎದುರು ಡಿಕೆಶಿ ಪ್ರಾಬಲ್ಯ ಎಷ್ಟು ಕಾರ್ಯನಿರ್ವಹಿಸಲಿದೆ ಎನ್ನುವುದು ಮಿಲಿಯನ್ ಡಾಲರ್ ಪ್ರಶ್ನೆ.

    ಜಿಲ್ಲೆಯಲ್ಲಿ ಮತ್ತೊಬ್ಬ ಕಾಂಗ್ರೆಸ್ ಶಾಸಕನನ್ನು ಗೆಲ್ಲಿಸಿಕೊಂಡರೆ ಡಿ.ಕೆ. ಶಿವಕುಮಾರ್ ಅವರ ಪ್ರಾಬಲ್ಯ ಮತ್ತಷ್ಟು ಹೆಚ್ಚಲಿದೆ. ಇಲ್ಲವಾದರೆ ರಾಜ್ಯದಲ್ಲಿ ಏನೇ ಪ್ರಭಾವ ಮೆರೆದರೂ ಅದು ಲೆಕ್ಕಕ್ಕೆ ಸೇರುವುದಿಲ್ಲ. ಒಟ್ಟಾರೆಯಾಗಿ ಕುಮಾರಸ್ವಾಮಿ ಅವರ ಸ್ನೇಹ ಸಂಬಂಧ ಉಳಿಸಿಕೊಂಡೇ ಜೆಡಿಎಸ್ ವಿರುದ್ಧ ಪಕ್ಷವನ್ನು ಪ್ರಬಲವಾಗಿ ಕಟ್ಟಬೇಕಾಗಿದ್ದು, ಇದನ್ನು ಹೇಗೆ ನಿಭಾಯಿಸುತ್ತಾರೆ ಎನ್ನುವುದು ಬಂಡೆಯಷ್ಟೇ ಜಟಿಲವಾದ ಪ್ರಶ್ನೆಯಾಗಿದೆ.

    ಬೇಗುದಿಗೆ ಕಾರಣ: ಮತ್ತೊಂದೆಡೆ ಮೇಲ್ಮಟ್ಟದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಹೊಂದಾಣಿಕೆ ಸ್ಥಳೀಯ ಮಟ್ಟದಲ್ಲಿ ಬೇಗುದಿಗೆ ಕಾರಣವಾಗಿತ್ತು. ಅಲ್ಲದೆ, ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಜೆಡಿಎಸ್ – ಕಾಂಗ್ರೆಸ್ ಮೈತ್ರಿ ಮಾಡಿಕೊಳ್ಳುತ್ತವೆ ಎನ್ನುವ ವಿಚಾರ ಕಾರ್ಯಕರ್ತರಲ್ಲಿ ಅಸಮಾಧಾನಕ್ಕೆ ಕಾರಣವಾಗಿ, ಎರಡೂ ಪಕ್ಷಗಳ ಕಾರ್ಯಕರ್ತರು ತಮ್ಮ ದಾರಿ ನೋಡಿಕೊಳ್ಳುವ ಹಂತ ತಲುಪಿದ್ದರು. ಆದರೆ ಮೈತ್ರಿ ಮುಂದುವರಿದರೆ ಇದು ಪಕ್ಷಕ್ಕೆ ಲಾಭಕ್ಕಿಂತ ನಷ್ಟ ಉಂಟು ಮಾಡುವ ಸಾಧ್ಯತೆ ಹೆಚ್ಚಿರುವುದರಿಂದ ಜೆಡಿಎಸ್‌ನೊಂದಿಗಿನ ಮೈತ್ರಿ ಬಗೆಗೆ ಡಿ.ಕೆ.ಶಿವಕುಮಾರ್ ಎಚ್ಚರಿಕೆಯ ಹೆಜ್ಜೆ ಇರಿಸಬೇಕಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts