More

    ಕಳ್ಳಬಟ್ಟಿ ಸಾರಾಯಿ ಬಿಟ್ಟು ಮುಖ್ಯವಾಹಿನಿಗೆ ಬನ್ನಿ, ಹಕ್ಕಿಪ್ಪಿಕ್ಕಿ ಜನರಿಗೆ ಅಬಕಾರಿ ಉಪ ಆಯುಕ್ತ ಎ.ರವಿಶಂಕರ್ ಸಲಹೆ

    ಕಂಪ್ಲಿ: ಕಳ್ಳಬಟ್ಟಿ ಸಾರಾಯಿ ತಯಾರಿಕೆ ಮತ್ತು ಮಾರಾಟ ಶಿಕ್ಷಾರ್ಹ ಅಪರಾಧವಾಗಿದೆ ಎಂದು ಬಳ್ಳಾರಿಯ ಅಬಕಾರಿ ಉಪ ಆಯುಕ್ತ ಎ.ರವಿಶಂಕರ್ ಹೇಳಿದರು. ಪಟ್ಟಣದ ಹಕ್ಕಿಪಿಕ್ಕಿ ಕಾಲನಿಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಕಳ್ಳಬಟ್ಟಿ ಸಾರಾಯಿ ನಿರ್ಮೂಲನಾ ಜಾಗೃತಿ ಸಭೆಯಲ್ಲಿ ಮಾತನಾಡಿದರು.

    ಕರೊನಾ ಮುಂಜಾಗ್ರತೆಗೆ ರಾಜ್ಯದಲ್ಲಿ ಮದ್ಯ ನಿಷೇಧಿಸಿದ್ದು, ಪ್ರತಿಯೊಬ್ಬರೂ ಸಹಕರಿಸಬೇಕು. ಕೊಟ್ಟೂರಿನಲ್ಲಿ ನಿಯಮ ಮೀರಿ ತೆರೆದಿದ್ದ ಮದ್ಯದಂಗಡಿ ಪರವಾನಗಿ ರದ್ದುಪಡಿಸಲಾಗಿದೆ. ಜಿಲ್ಲಾದ್ಯಂತ 550 ದಾಳಿ ಮಾಡಿದ್ದು, 21 ಪ್ರಕರಣ ದಾಖಲಿಸಲಾಗಿದೆ. ಅಂದಾಜು 37 ಲಕ್ಷ ರೂ. ಮೊತ್ತದ 7715 ಲೀ.ಮದ್ಯ, 2230 ಲೀ. ಬಿಯರ್, 31ಲೀ. ಸೇಂದಿ, 12ಲೀ. ಕಳ್ಳಬಟ್ಟಿ ಸಾರಾಯಿ, 850 ಲೀ. ಬೆಲ್ಲದಕೊಳೆ ವಶಕ್ಕೆ ಪಡೆಯಲಾಗಿದೆ. ಕಂಪ್ಲಿಯ ಶಿಕಾರಿ ಕಾಲನಿ ಸೇರಿ ಜಿಲ್ಲೆಯಲ್ಲಿ ಕಳ್ಳಬಟ್ಟಿ ಸಾರಾಯಿ ತಯಾರಿಸುವ 92 ತಾಂಡಾಗಳನ್ನು ಗುರುತಿಸಿ ನಿಗಾ ವಹಿಸಲಾಗಿದೆ. ಹಕ್ಕಿಪಿಕ್ಕಿ ಸಮುದಾಯ ಜನರು ಕಳ್ಳಬಟ್ಟಿ ಸಾರಾಯಿ ತಯಾರಿಕೆ ಬಿಟ್ಟು ಸಮಾಜದ ಮುಖ್ಯವಾಹಿನಿಗೆ ಬರಬೇಕು. ಕರೊನಾ ಮುಂಜಾಗ್ರತಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಹೇಳಿದರು.

    ಅಬಕಾರಿ ಅಧೀಕ್ಷಕಿ ಆರ್.ಎಸ್.ಸ್ವಪ್ನಾ, ಹೊಸಪೇಟೆ ವಿಭಾಗದ ಅಬಕಾರಿ ನಿರೀಕ್ಷಕರಾದ ಎ.ಬಿ.ಮಠಪತಿ, ಭವಾನಿ, ತುಕರಾಮ್ ಮತ್ತು ಸಿಬ್ಬಂದಿ, ಹಕ್ಕಿಪಿಕ್ಕಿ ಕಾಲನಿ ಮುಖಂಡರಾದ ಶಿಕಾರಿ ರಾಮು, ಎಚ್.ಪಿ.ಶ್ರೀಕಾಂತ್ ಇತರರಿದ್ದರು.

    ಮೂರು ಮನೆಗಳ ಮೇಲೆ ದಾಳಿ: ಅಬಕಾರಿ ಅಧಿಕಾರಿಗಳು ಶುಕ್ರವಾರ ಪಟ್ಟಣದ ಹಕ್ಕಿಪಿಕ್ಕಿ ಕಾಲನಿ ಮನೆಗಳ ಮೇಲೆ ದಾಳಿ ಮಾಡಿ, ಕಳ್ಳಬಟ್ಟಿ ಸಾರಾಯಿ ವಶಕ್ಕೆ ಪಡೆದು, ಒಬ್ಬರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಕಾಲನಿಯ ಮೂರು ಮನೆಗಳಲ್ಲಿ ಒಟ್ಟು 6000 ರೂ.ಮೌಲ್ಯದ 150 ಲೀ. ಬೆಲ್ಲದ ಕೊಳೆ, 14 ಲೀ. ಕಳ್ಳಬಟ್ಟಿ ಸಾರಾಯಿ ಜಪ್ತಿ ಮಾಡಿದ್ದು, ಮಹಿಳೆ ವಿರುದ್ಧ ಕೇಸ್ ದಾಖಲಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts