More

    ಬೊಂಬೆನಗರಿಯಲ್ಲಿ ಸುಗಮ ಸಂಚಾರ ಅಯೋಮಯ

    • ಬೇಕಾಬಿಟ್ಟಿಯಾಗಿ ವಾಹನಗಳ ನಿಲುಗಡೆ
    • ಬಿಸಿ ಮುಟ್ಟಿಸುವಲ್ಲಿ ಮುಂದಾಗದ ಸಂಚಾರ ಪೊಲೀಸರು


    ಅಭಿಲಾಷ್ ತಿಟ್ಟಮಾರನಹಳ್ಳಿ ಚನ್ನಪಟ್ಟಣ


    ಬೊಂಬೆನಗರಿ ಚನ್ನಪಟ್ಟಣದಲ್ಲಿ ಸುಗಮ ಸಂಚಾರ ಎಂಬುದು ಅಯೋಮಯವಾಗಿದೆ. ಹೆದ್ದಾರಿ ಸೇರಿ ನಗರದ ಹಲವು ಕಡೆ ಸಂಚಾರ ಅವ್ಯವಸ್ಥೆ ತಾಂಡವವಾಡುತ್ತಿದೆ. 


    ಹೌದು.. ನಗರದ ಹೆದ್ದಾರಿ ಸೇರಿ ಹಲವು ಕಡೆ ಸಂಚಾರ ವ್ಯವಸ್ಥೆ ಸರಿಯಾಗಿಲ್ಲ. ಹೆದ್ದಾರಿಯುದ್ದಕ್ಕೂ ಹಲವು ಕಡೆ ಬೇಕಾಬಿಟ್ಟಿಯಾಗಿ ವಾಹನ ನಿಲುಗಡೆಯಾಗುತ್ತಿದ್ದು, ಇದನ್ನು ಹತೋಟಿಗೆ ತರಬೇಕಾದ ಸಂಚಾರಿ ಪೊಲೀಸರು ಈ ವಿಚಾರದಲ್ಲಿ ನಿರ್ಲಕ್ಷ್ಯವಹಿಸಿರುವ ಕಾರಣ ನಗರದಲ್ಲಿ ಸಂಚಾರ ಸಮಸ್ಯೆ ಸಾಮಾನ್ಯ ಎನಿಸಿದೆ. 


    ನಗರದ ಎಂ.ಜಿ. ರಸ್ತೆಯಲ್ಲಿ ಮಾತ್ರ ಸುಗಮ ಸಂಚಾರಕ್ಕಾಗಿ ಸಂಚಾರ ಪೊಲೀಸರು ಉತ್ತಮ ಕಾರ್ಯ ಹಮ್ಮಿಕೊಂಡಿದ್ದಾರೆ. ಈ ರಸ್ತೆಯಲ್ಲಿ ಒಂದು ದಿನ ಎಡ ಮತ್ತೊಂದು ದಿನ ಬಲಭಾಗದಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಇದನ್ನು ಹೊರತುಪಡಿಸಿದರೆ, ನಗರದ ಬಹುತೇಕ ಕಡೆ ಸುಗಮ ಸಂಚಾರಕ್ಕೆ ಪೊಲೀಸರು ನಿರ್ಲಕ್ಷ್ಯ ವಹಿಸಿದ್ದಾರೆ. ನಗರದ ಹೆದ್ದಾರಿಯಲ್ಲಿ ಬೇಕಾಬಿಟ್ಟಿಯಾಗಿ ನಿಲುಗಡೆಯಾಗುವ ವಾಹನಗಳಿಗೆ ಬಿಸಿ ಮುಟ್ಟಿಸುವ ಜತೆಗೆ ವಿರುದ್ಧ ದಿಕ್ಕಿನಲ್ಲಿ ಸಂಚರಿಸುವವರನ್ನು ತಡೆಗಟ್ಟುವಲ್ಲಿ ಸಂಚಾರ ಪೊಲೀಸರು ನಿಷ್ಕ್ರಿಯರಾಗಿದ್ದಾರೆ ಎನ್ನುವ ಆಕ್ರೋಶ ನಾಗರಿಕರಲ್ಲಿ ವ್ಯಕ್ತವಾಗುತ್ತಿದೆ.

    ನಿಲ್ಲದ ವಿರುದ್ಧ ದಿಕ್ಕಿನ ಸಂಚಾರ!


    ನಗರದಲ್ಲಿ ಹಾದು ಹೋಗಿರುವ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ವಿರುದ್ಧ ದಿಕ್ಕಿನ ಸಂಚಾರ ಹೆಚ್ಚಾಗಿದೆ. ರಸ್ತೆ ಸುರಕ್ಷತೆಗಾಗಿ ಈ ಹಿಂದೆ ಹೆದ್ದಾರಿಯಲ್ಲಿದ್ದ ಹಲವು ರಸ್ತೆ ವಿಭಜಕಗಳನ್ನು ಮುಚ್ಚಲಾಗಿದೆ. ಒಂದು ಬದಿಯಿಂದ ಮತ್ತೊಂದು ಬದಿಗೆ ತೆರಳುವವರು ರಸ್ತೆ ನಿಯಮ ಉಲ್ಲಂಘಿಸಿ ಬೇಕಾಬಿಟ್ಟಿಯಾಗಿ ಸಂಚರಿಸುತ್ತಿದ್ದಾರೆ. ಸಮಯ ಹಾಗೂ ಪೆಟ್ರೋಲ್ ಉಳಿತಾಯಕ್ಕಾಗಿ ರಸ್ತೆ ವಿಭಜಕ (ಡಿವೈಡರ್) ಬಳಸದೆ, ಹೆದ್ದಾರಿ ಎನ್ನುವುದನ್ನೂ ಲೆಕ್ಕಿಸದೆ ಅಡ್ಡಾದಿಡ್ಡಿಯಾಗಿ ಸಂಚಾರ ಮಾಡುವುದು ಸಾಮಾನ್ಯ ಎನಿಸಿದೆ.

    ನಗರದ ಸಿಪಿಟಿ ಗಾರ್ಡನ್ ಬಳಿ ನಡೆದಿರುವ ಬಹುತೇಕ ಅಪಘಾತ ಪ್ರಕರಣಗಳಿಗೆ ವಿರುದ್ಧ ದಿಕ್ಕಿನ ಸಂಚಾರ ಕಾರಣ ಎನ್ನಬಹುದಾಗಿದೆ. 3ನೇ ಅಡ್ಡರಸ್ತೆ, ಚರ್ಚ್ ರಸ್ತೆಯ ಬಳಿ ವಿರುದ್ಧ ದಿಕ್ಕಿನ ಸಂಚಾರ ಅತಿಯಾಗಿದೆ. ಮಂಗಳವಾರ ಪೇಟೆಯಿಂದ ಹಿಡಿದು ಶೇರ್ವಾ ಸರ್ಕಲ್‌ವರೆಗೂ ಹೆದ್ದಾರಿಯ ಎರಡು ಬದಿಯಲ್ಲಿ ವಿರುದ್ಧ ದಿಕ್ಕಿನ ಸಂಚಾರ ಮಾಮೂಲಿ ಎನಿಸಿದೆ. ಇದನ್ನು ತಡೆಗಟ್ಟಲು ಸಂಚಾರ ಪೊಲೀಸರು ವಿಫಲಗೊಂಡಿರುವ ಕಾರಣ, ಸಂಚಾರ ವ್ಯವಸ್ಥೆ ದುಸ್ತರ ಎನಿಸಿದೆ.

    ರಸ್ತೆಯಲ್ಲೇ ವಾಹನ ನಿಲುಗಡೆ!


    ನಗರದ ಬೆಂಗಳೂರು-ಮೈಸೂರು ಹೆದ್ದಾರಿ ಸೇರಿ ಇತರ ಪ್ರಮುಖ ರಸ್ತೆಗಳಲ್ಲಿ ವಾಹನಗಳನ್ನು ರಸ್ತೆ ಮಧ್ಯದಲ್ಲಿಯೇ ನಿಲ್ಲಿಸಲಾಗುತ್ತಿದೆ. ಇದರಿಂದಾಗಿ ಇತರ ವಾಹನಗಳು ಹಾಗೂ ಸಾರ್ವಜನಿಕರ ಸಂಚಾರಕ್ಕೆ ಸಾಕಷ್ಟು ಸಮಸ್ಯೆಯಾಗುತ್ತಿದೆ. ಬೆಂಗಳೂರು – ಮೈಸೂರು ಹೆದ್ದಾರಿಯಲ್ಲಂತೂ ಈ ಸಮಸ್ಯೆ ದೊಡ್ಡದಾಗಿದೆ. ಹೆದ್ದಾರಿ ಬದಿಯ ಅಂಗಡಿಗಳ ಎದುರು ವಾಹನಗಳನ್ನು ನಿಲ್ಲಿಸುತ್ತಿದ್ದು, ಕೆಲವು ಕಡೆ ರಸ್ತೆಯ ಮಧ್ಯ ಭಾಗವನ್ನು ಆಕ್ರಮಿಸುತ್ತಿವೆ.
    ಇದರಿಂದಾಗಿ ಹಲವು ಸಮಸ್ಯೆಗಳು ಉದ್ಭವಿಸಿವೆ. ನಗರದ ಅಂಚೆ ಕಚೇರಿ ಹಾಗೂ ಸಬ್ ರಿಜಿಸ್ಟರ್ ಕಚೇರಿ ರಸ್ತೆಯಲ್ಲಂತೂ ಸಂಚಾರ ಸಮಸ್ಯೆ ವಿಪರೀತವಾಗಿದೆ.

    ಸಿಗ್ನಲ್ ದೀಪಗಳು ಸಹ ಇಲ್ಲ!


    ಸುಗಮ ಸಂಚಾರಕ್ಕೆ ಸಹಕಾರಿ ಎನ್ನಲಾಗುವ ಟ್ರಾಫಿಕ್ ಸಿಗ್ನಲ್ ದೀಪಗಳು ಸಹ ನಗರದಲ್ಲಿ ಕೆಟ್ಟು ನಿಂತಿವೆ. ಸುಗಮ ಸಂಚಾರಕ್ಕೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಹೆದ್ದಾರಿಯ ಪ್ರಮುಖ ವೃತ್ತಗಳಲ್ಲಿ ಸಿಗ್ನಲ್ ದೀಪಗಳನ್ನು ಅಳವಡಿಸಲಾಗಿತ್ತು. ಆದರೆ, ಅವುಗಳು ಕೆಟ್ಟು ಹಲವಾರು ತಿಂಗಳುಗಳೇ ಕಳೆದರೂ ಅವುಗಳನ್ನು ಸರಿಪಡಿಸಲು ಸಂಬಂಧಿಸಿದವರು ನಿರ್ಲಕ್ಷ್ಯ ವಹಿಸಿದ್ದಾರೆ. ನಗರದ ಪ್ರಮುಖ ವೃತ್ತವಾದ ಸಾತನೂರು ಸರ್ಕಲ್ನಲ್ಲಿ ಅತಿಹೆಚ್ಚು ವಾಹನ ಸಂಚಾರವಿದ್ದು, ಈ ಜಾಗದಲ್ಲಿ ಸಿಗ್ನಲ್ ದೀಪ ಅತಿ ಅವಶ್ಯಕವಾಗಿದೆ. ಸಿಗ್ನಲ್ ದೀಪ ಇಲ್ಲದ ಕಾರಣ ಹಲವಾರು ಅಪಘಾತಗಳು ನಡೆದಿರುವ ನಿದರ್ಶನಗಳಿವೆ. ಆದರೂ, ಸಹ ಈ ಬಗ್ಗೆ ಸಂಬಂಧಿಸಿದ ಯಾರೊಬ್ಬರೂ ಆಸಕ್ತಿವಹಿಸದೇ ಇರುವುದು ದುರಂತ ಎನ್ನಬಹುದು.



    ಬೊಂಬೆನಗರಿಯಲ್ಲಿ ಸುಗಮ ಸಂಚಾರ ಅಯೋಮಯನಗರದ ಹೆದ್ದಾರಿಯಲ್ಲಿ ಬೇಕಾಬಿಟ್ಟಿಯಾಗಿ ವಾಹನ ನಿಲುಗಡೆ ಮಾಡಲಾಗುತ್ತಿದೆ. ಇದರೊಂದಿಗೆ, ವಿರುದ್ಧ ದಿಕ್ಕಿನ ಸಂಚಾರವೂ ಹೆಚ್ಚಾಗಿ ನಡೆಯುತ್ತಿದೆ. ಅಂಚೆಕಚೇರಿ ರಸ್ತೆಯಲ್ಲಂತೂ ಓಡಾಡುವುದೇ ದುಸ್ತರ ಎನಿಸಿದೆ. ಸುಗಮ ಸಂಚಾರಕ್ಕೆ ಅನುಕೂಲವಾಗಬೇಕಿದ್ದ ಸಿಗ್ನಲ್ ದೀಪಗಳು ಕೆಟ್ಟು ನಿಂತಿರುವುದು ಸಮಸ್ಯೆಯಾಗುತ್ತಿದೆ. ಸಂಚಾರ ಅವ್ಯವಸ್ಥೆಯನ್ನು ಸರಿಪಡಿಸಲು ಸಂಚಾರಿ ಪೊಲೀಸರು ವಿಫಲಗೊಂಡಿದ್ದಾರೆ.
    ಅರಸೇಗೌಡ, ಬ್ರಹ್ಮಣೀಪುರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts