More

    ಬಳ್ಳಾರಿ ನಗರದಲ್ಲಿ ಅಭಿವೃದ್ಧಿ ಕುಂಠಿತ, ಬಿಜೆಪಿಯಿಂದ ಪ್ರತಿಭಟನೆ

    ಬಳ್ಳಾರಿ: ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿಗಳ ವಿವರಗಳನ್ನು ನೀಡುವಂತೆ ಒತ್ತಾಯಿಸಿ ಬಿಜೆಪಿ ಕಾರ್ಯಕರ್ತರು ಶನಿವಾರ ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಅವರ ಮನೆ ಮುಂದೆ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.

    ಬಿಜೆಪಿ ಜಿಲ್ಲಾಧ್ಯಕ್ಷ ಅನಿಲ್‌ಕುಮಾರ್ ಮೋಕ ಮಾತನಾಡಿ, 2023ರ ಮೇ ತಿಂಗಳಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಭರತ್ ರೆಡ್ಡಿ ಆಯ್ಕೆ ಆಗಿದ್ದಾರೆ. ರಾಜ್ಯದಲ್ಲಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಸರ್ಕಾರ ಅಧಿಕಾರಕ್ಕೆ ಬಂದು ಒಂಭತ್ತು ತಿಂಗಳಾಗಿವೆ. ಕಳೆದ ಒಂಬತ್ತು ತಿಂಗಳಲ್ಲಿ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿಗಳು ನಡೆದಿಲ್ಲ. ಕೇವಲ ಗ್ಯಾರಂಟಿಗಳ ಪುಕ್ಕಟೆ ಪ್ರಚಾರದಲ್ಲಿ ಮುಳುಗಿದ್ದಾರೆ ಎಂದು ತಿಳಿಸಿದರು.

    ಶಾಸಕರ ಅನುದಾನ ಪಡೆಯುವಲ್ಲಿ ಅಥವಾ ಸರ್ಕಾರದಿಂಧ ವಿಶೇಷ ಅನುದಾನ ಪಡೆಯುವಲ್ಲಿ ಯಾವುದೇ ವಿಶೇಷ ಪ್ರಯತ್ನ ಮಾಡಿಲ್ಲ. ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರವನ್ನು ಕಾಡುತ್ತಿರುವ ಕುಡಿಯುವ ನೀರಿನ ಪೂರೈಕೆಯಲ್ಲಿನ ಅವ್ಯವಸ್ಥೆ, ದಶಕಗಳಷ್ಟು ಹಳೆಯದಾಗಿರುವ ಒಳಚರಂಡಿ ಅವ್ಯವಸ್ಥೆ, ಶಾಲಾ ಕೊಠಡಿಗಳು, ಆರೋಗ್ಯ, ನೈರ್ಮಲ್ಯ, ಮಹಾನಗರ ಪಾಲಿಕೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಸೇರಿ ಯಾವುದೇ ಕೆಲಸಗಳಲ್ಲಿ ತಾವು ಪ್ರಗತಿ ಸಾಧಿಸಿಲ್ಲ ಎನ್ನುವುದು ಮೇಲ್ನೋಟಕ್ಕೆ ಕಾಣುತ್ತಿದೆ. ಈ ಹಿಂದಿನ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರದ ಅವಧಿಯ ಘೋಷಿತ ಮತ್ತು ಅನುದಾನ ಬಿಡುಗಡೆ ಆಗಿರುವ ಕಾಮಗಾರಿಗಳನ್ನೇ ತಾವು, ತಮ್ಮವು ಎಂದು ಹೇಳಿಕೊಂಡು ನಾಟಕವಾಡುತ್ತಿದ್ದೀರಿ ಎಂದು ಹೇಳಿದರು.

    ರಾಜ್ಯದಲ್ಲಿ ಬರಗಾಲ ಬಂದಿದೆ. ರೈತರು ಎರಡನೇ ಬೆಳೆ ಇಲ್ಲದೆ ತತ್ತರಿಸುತ್ತಿದ್ದಾರೆ. ನಿರುದ್ಯೋಗ ಸಮಸ್ಯೆ ಹೆಚ್ಚುತ್ತಿದೆ. ಕೂಲಿಯಾಳು ವಲಸೆ ಹೋಗುತ್ತಿದ್ದಾರೆ. ಕ್ಷೇತ್ರದಲ್ಲಿ ಬರ ಪರಿಹಾರ ಕಾಮಗಾರಿಗಳು ಆರಂಭವಾಗಿಲ್ಲ. ಕೂಲಿ ಮಾಡುವ ಕುಟುಂಬಗಳು ವಲಸೆ ಹೋಗುವುದನ್ನು ತಡೆಯುವ ಪ್ರಯತ್ನವೂ ನಡೆದಿಲ್ಲ. ಈ ಅವಧಿಯಲ್ಲಿ ಅಭಿವೃದ್ಧಿ ಸಂಪೂರ್ಣ ಸ್ಥಗಿತಗೊಂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಬಾಪೂಜಿ ನಗರದಲ್ಲಿ ಶಾಲಾ ಕಟ್ಟಡ ನಿರ್ಮಾಣ ಮತ್ತು ರಸ್ತೆ ನಿರ್ಮಾಣ, ಮೊಮ್ಮನಹಾಳು ರಸ್ತೆ ಕಾಮಗಾರಿ ಇನ್ನು ಆರಂಭಿಸಿಲ್ಲ. ಕಮೇಲಾ ರಸ್ತೆ ನಿರ್ಮಾಣ ಕಾಮಗಾರಿ ಸ್ಥಗಿತಗೊಂಡಿದೆ. ಅಂದ್ರಾಳ್ ಸೇತುವೆ ನಿರ್ಮಾಣ ಕಾಮಗಾರಿ ಅಪೂರ್ಣಗೊಂಡಿದೆ. ತಿರುಮಲ ನಗರ ರಸ್ತೆಗಳ ನಿರ್ಮಾಣ ಪೂರ್ಣಗೊಂಡಿಲ್ಲ. ಬಳ್ಳಾರಿ ದುರ್ಗಮ್ಮ ಗುಡಿ ಸಮೀಪದ ರೈಲ್ವೆ ಅಂಡರ್‌ಪಾಸ್ ನಿರ್ಮಾಣಕ್ಕಾಗಿ ಕೇಂದ್ರ ಸರ್ಕಾರ ರೈಲ್ವೆಗೆ 8.50 ಕೋಟಿ ರೂ.ಪಾವತಿ ಮಾಡಿದ್ದರೂ, ರಾಜ್ಯ ಸರ್ಕಾರ ಇನ್ನು ಕಾಮಗಾರಿಯನ್ನು ಆರಂಭಿಸಿಲ್ಲ ಎಂದರು.

    ಸುಧಾಕ್ರಾಸ್ ಬಳಿ ರೈಲ್ವೆ ಓವರ್‌ಬ್ರಿಡ್ಜ್ ನಿರ್ಮಾಣ ಕಾಮಗಾರಿ ಇನ್ನು ಕಡತದಲ್ಲೇ ಉಳಿದುಕೊಂಡಿದೆ. ಅನಂತಪುರ ರಸ್ತೆಯ ತಾರಾನಾಥ್ ಕಾಲೇಜಿನ ಪಕ್ಕದ ಬೈಪಾಸ್ ಕಾಮಗಾರಿ ಅಪೂರ್ಣಗೊಂಡಿದೆ. ಹನುಮಾನ್ ನಗರ, ವಾಲ್ಮೀಕಿ ಭವನದಿಂದ ಕುರಿ ಕಮೇಲ ವರೆಗಿನ 1 ಕೋಟಿ ರೂ.ವೆಚ್ಚದ ರಸ್ತೆ ನಿರ್ಮಾಣ ಕಾಮಗಾರಿ ಇನ್ನು ಆರಂಭಿಸಿಲ್ಲ ಎಂದು ವಿವರಿಸಿದರು.

    ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷ ಗುರುಲಿಂಗನಗೌಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೋಮನಗೌಡ, ನಗರದ ಪ್ರಧಾನ ಕಾರ್ಯದರ್ಶಿ ರಾಮಾಂಜಿ, ಜಿಲ್ಲಾ ಖಜಾಂಚಿ ಮಾರುತಿ ಪ್ರಸಾದ್, ಪಾಲಿಕೆಯ ಸದಸ್ಯ ಹನುಮಂತಪ್ಪ, ಮುಖಂಡರಾದ ಅಮರನಾಥ್, ಅಶೋಕ್ ತಡೂರ್, ಹೇಮಂತ್, ಸಿದ್ದೇಶ್, ಕೆ.ಬಿ.ವೆಂಕಟೇಶ್ವರ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts