More

    ನಿದ್ದೆಗೆಡಿಸಿದ ಕುಂಭದ್ರೋಣ ಮಳೆ

    ಬೆಳಗಾವಿ: ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಹಲವಡೆ ಮನೆಗಳಿಗೆ ನೀರು ನುಗ್ಗಿದೆ. ಎಲ್ಲೆಂದರಲ್ಲಿ ನೀರು ನಿಂತು ಜನಜೀವನ ಅಸ್ತವ್ಯಸ್ತಗೊಂಡಿದೆ.

    ಜಿಲ್ಲೆಯಲ್ಲಿ ಕಳೆದ ನಾಲ್ಕೈದು ದಿನಗಳಿಂದ ಮಳೆ ಅಬ್ಬರಕ್ಕೆ ಮನೆಗಳು ಕುಸಿದು ಬೀಳುತ್ತಿದ್ದರೆ, ಕೃಷಿ ಭೂಮಿಯಲ್ಲಿ ಬೆಳೆದು ನಿಂತಿರುವ ಕಬ್ಬು, ಹತ್ತಿ, ಮೆಕ್ಕೆಜೋಳ ಬೆಳೆಗಳು ನೆಲಕ್ಕೆ ಉರುಳಿ ಸಾಕಷ್ಟು ಹಾನಿ ಉಂಟು ಮಾಡಿದೆ. ಮಂಗಳವಾರ ರಾತ್ರಿಯಿಂದ ಬುಧವಾರ ಮಧ್ಯಾಹ್ನದ ವೇಳೆಗೆ ಬರೋಬ್ಬರಿ 110 ಮಿ.ಮೀ. ಮಳೆ ಸುರಿದಿದೆ. ಆದರೆ, ಈ ನೀರು ಸರಾಗವಾಗಿ ಹರಿಯದೆ ಎಲ್ಲೆಂದರಲ್ಲಿ ಸಂಗ್ರಹವಾಗಿತ್ತು. ಇದರಿಂದಾಗಿ ಮನೆಗಳಿಗೆ ನುಗ್ಗಿದೆ. ನಿದ್ರೆಯ ಮಂಪರಿನಲ್ಲಿದ್ದ ಜನರು ತಮ್ಮ ಸಾಮಗ್ರಿ, ಸರಂಜಾಮು ರಕ್ಷಿಸಲು ಹರಸಾಹಸಪಟ್ಟರು. ಮತ್ತೊಂದೆಡೆ ರಸ್ತೆ ಬದಿ ನಿಲ್ಲಿಸಿದ ವಾಹನಗಳು ಸಂಪೂರ್ಣ ಜಲಾವೃತಗೊಂಡವು. ಇದರಿಂದ ದೈನಂದಿನ ಜನಜೀವನ ಅಸ್ತವ್ಯಸ್ತವಾಯಿತು.

    ಜಿಲ್ಲೆಯ ಹುಕ್ಕೇರಿ, ಮೂಡಲಗಿ, ಗೋಕಾಕ, ಅಥಣಿ, ಸವದತ್ತಿ, ಖಾನಾಪುರ, ಬೈಲಹೊಂಗಲ ತಾಲೂಕು ಸೇರಿ ವಿವಿಧ ಭಾಗಗಳಲ್ಲಿ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದ ವಿದ್ಯುತ್ ಕಂಬಗಳು ಬಿದ್ದು ವಿದ್ಯುತ್ ಸಂಪರ್ಕ ಇಲ್ಲ. ಮತ್ತೊಂದೆಡೆ ಮನೆಗಳ ಒಳ ಆವರಣದಲ್ಲೂ ಸಂಪೂರ್ಣ ನೀರು ಮಡುಗಟ್ಟಿ ನಿಂತಿದ್ದುಮ ಜನರ ನಿದ್ದೆಗೆಡಿಸಿದೆ.

    ಬೆಳಗಾವಿ ನಗರದಲ್ಲಿ ವೀರಭದ್ರ ನಗರ, ಶಿವಬಸವ ನಗರ, ಕಾಂಗ್ರೆಸ್ ರಸ್ತೆ, ಮರಾಠಾ ಕಾಲನಿ, ಶಾಸ್ತ್ರಿ ನಗರ, ಟಿಳಕವಾಡಿ, ಶಾಂತಿ ನಗರ, ಗಜಾನನ ನಗರ, ಕಪಿಲೇಶ್ವರ ಕಾಲನಿ, ನಾನಾವಾಡಿ ಸೇರಿ ಪ್ರಮುಖ ಸ್ಥಳಗಳಲ್ಲಿ ಚರಂಡಿಗಳು ಬ್ಲಾಕ್ ಆಗಿ ಮಳೆ ನೀರು ರಸ್ತೆಯ ಮೇಲೆ ನಿಂತಿತ್ತು. ರಸ್ತೆಗಳಲ್ಲಿ ನೀರು ನಿಂತಿದ್ದರಿಂದ ಬೈಕ್, ಕಾರು ಮುಳುಗಡೆಯಾಗಿದ್ದವು. ನಗರದಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿಗಳು ನಡೆಯುತ್ತಿದ್ದು, ಚರಂಡಿ ಮಾರ್ಗಗಳು ಬಂದ್ ಆಗಿವೆ. ಮತ್ತೊಂದೆಡೆ ಪ್ರಮುಖ ನಾಲಾ ಹಾಗೂ ಚರಂಡಿಗಳಲ್ಲಿ ಹೂಳು ಸಂಗ್ರಹವಾಗಿದ್ದರಿಂದ ನೀರು ಸರಾಗವಾಗಿ ಹರಿದು ಹೋಗುತ್ತಿಲ್ಲ. ಇದರಿಂದ ಸಂಚಾರಕ್ಕೂ ಸಮಸ್ಯೆಯಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts